ಚಂಡೀಗಢ, ಡಿ. 2: ಸದ್ಯ ಚಿಕ್ಕ ಮಕ್ಕಳು-ಹಿರಿಯ ನಾಗರಿಕರು ಎನ್ನುವ ಬೇಧವಿಲ್ಲದೆ ಎಲ್ಲರೂ ಮೊಬೈಲ್‌ಗೆ ದಾಸರಾಗಿದ್ದಾರೆ. ದೈಹಿಕ ಚಟುವಟಿಕೆ ಮರೆತು ಮೊಬೈಲ್ ನೋಡುತ್ತ ಮೈ ಮರೆಯುತ್ತಿದ್ದಾರೆ. ಹಿಂದೆಲ್ಲ ಸ್ವಲ್ಪ ಸಮಯ ಸಿಕ್ಕರೂ ಸಾಕು ಮಕ್ಕಳು ಮನೆಯಿಂದ ಹೊರಗೆ ಹೋಗಿ ಆಟ ಆಡಲು ಆರಂಭಿಸುತ್ತಿದ್ದರು. ಆದರೆ ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಮನೆಯೊಳಗೆ ಕುಳಿತು ಮೊಬೈಲ್ ಕೈಯಲ್ಲಿ ಹಿಡಿದು ಸ್ವೈಪ್ ಮಾಡ ತೊಡಗುತ್ತಾರೆ. ಹೀಗೆ ಪ್ರತಿಯೊಂದು ಮನೆಯಲ್ಲೂ ಹಾಸು ಹೊಕ್ಕಿರುವ ಮೊಬೈಲ್ ಚಟದಿಂದ ಜನರನ್ನು ಹೊರ ತರಲು ಪಂಜಾಬ್‌ನ ಹಳ್ಳಿಯೊಂದು ವಿನೂತನ ಪ್ರಯೋಗ ನಡೆಸಿದೆ. ಗ್ರಾಮಸ್ಥರಿಗೆ ಸ್ಪರ್ಧೆಯೊಂದು ಆಯೋಜಿಸಿ ಅವರಿಗೆ ಸವಾಲು ಒಡ್ಡಿದೆ. ಸುಮ್ಮನೆ ಕುಳಿತುಕೊಳ್ಳಿ (Sit-Still Challenge) ಹೆಸರಿನ ಈ ಸ್ಪರ್ಧೆ ಇದೀಗ ದೇಶದ ಗಮನ ಸೆಳೆದಿದೆ. ಹಾಗಾದರೆ ಏನಿದು ಸ್ಪರ್ಧೆ? ಇಲ್ಲಿದೆ ವಿವರ.
ಪಂಜಾಬ್‌ನ ಘೋಲಿಯ ಖುರ್ಡ್ ಗ್ರಾಮದಲ್ಲಿ ಈ ಸಿಟ್-ಸ್ಟಿಲ್ ಮ್ಯಾರಥಾನ್ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಭಾಗವಹಿಸುವವರು ಒಂದು ನಿರ್ದಿಷ್ಟ ಸಮಯದವರೆಗೆ ಒಂದೇ ಕಡೆ ಕುಳಿತಿರಬೇಕು. ಈ ವೇಳೆ ಅವರು ಮೊಬೈಲ್ ಫೋನ್ ಬಳಸುವಂತಿಲ್ಲ. ಅಲ್ಲದೆ ಮಲಗುವಂತಿಲ್ಲ, ಎದ್ದು ನಿಲ್ಲುವಂತಿಲ್ಲ ಮತ್ತು ಚಲಿಸುವಂತಿಲ್ಲ.
ಸಿಟ್-ಸ್ಟಿಲ್ ಸ್ಪರ್ಧೆಯ ವಿವರ:
ಈ ಸ್ಪರ್ಧೆಯ ಷರತ್ತುಗಳು
ಈ ಚಾಲೆಂಜ್ ಸ್ವೀಕರಿಸುವ ಸ್ಪರ್ಧಿಗಳು ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ:
ಮೊಬೈಲ್ ಬಳಸುವಂತಿಲ್ಲ: ಸ್ಪರ್ಧಿಗಳು ಮೊಬೈಲ್ ಸೇರಿದಂತೆ ಯಾವ ಎಲೆಕ್ಟ್ರಾನಿಕ್ ವಸ್ತುಗಳನ್ನು ಬಳಸುವಂತಿಲ್ಲ.
ನಿಂತುಕೊಳ್ಳುವಂತಿಲ್ಲ: ಸ್ಪರ್ಧಿಗಳು ತಮಗೆ ನಿಗದಿ ಪಡಿಸಿದ ಸ್ಥಳದಲ್ಲೇ ಕುಳಿತಿರಬೇಕು. ಬಾತ್ ರೂಮ್‌ಗೆ ಹೋಗಲೂ ಎದ್ದು ನಿಲ್ಲುವಂತಿಲ್ಲ.
ನೀರು, ಆಹಾರ ಪೂರೈಕೆ: ಸ್ಪರ್ಧಿಗಳಿಗೆ ನೀರು ಮತ್ತು ಆಹಾರವನ್ನು ನೀಡಲಾಗುತ್ತದೆ. ಇದನ್ನು ಪ್ರತಿಯೊಬ್ಬ ಸ್ಪರ್ಧಿಯೂ ಸೇವಿಸಲೇಬೇಕು.
ಯಾರು ಕೊನೆಯ ತನಕ ಕುಳಿತಿರುತ್ತಾರೋ ಅವರು ಜಯಶಾಲಿಗಳಾಗುತ್ತಾರೆ. ಮೊದಲ ಬಹುಮಾನವಾಗಿ ಹೊಸ ಸೈಕಲ್ ಮತ್ತು 4,500 ರೂ. ನಗದು, ದ್ವಿತೀಯ ಬಹುಮಾನವಾಗಿ 2,500 ರೂ. ನಗದು ಮತ್ತು ತೃತೀಯ ಬಹುಮಾನವಾಗಿ 1,500 ರೂ. ನಗದು ನೀಡಲಾಗುತ್ತದೆ.
ಚಂಡೀಗಢಕ್ಕೆ ಲೆಫ್ಟಿನೆಂಟ್ ಗವರ್ನರ್ ನೇಮಕಕ್ಕೆ ಕೇಂದ್ರದ ಅಸ್ತು ; ಪಂಜಾಬ್ ಸರ್ಕಾರ ವಿರೋಧ
ಉತ್ಸಾಹದಿಂದ ಪಾಲ್ಗೊಂಡ ಸ್ಪರ್ಧಿಗಳು
ಇತ್ತೀಚೆಗೆ ಆಯೋಜಿಸಿದ್ದ ಈ ವಿಶಿಷ್ಟ ಸ್ಪರ್ಧೆಯಲ್ಲಿ ಸುಮಾರು 55 ಸ್ಪರ್ಧಿಗಳು ಪಾಲ್ಗೊಂಡಿದ್ದರು. ಮಕ್ಕಳು, ಯುವ ಜನತೆ, ಹಿರಿಯ ನಾಗರಿಕರು ಸೇರಿದಂತರ ವಿವಿಧ ವಯೋಮಾನದವರು ಈ ಸವಾಲು ಸ್ವೀಕರಿಸಿದರು. ಈ ಸ್ಪರ್ಧೆಯ ಬಗ್ಗೆ ತಿಳಿದು ಜಿಲ್ಲೆ ವಿವಿಧ ಭಾಗಗಳಿಂದ, ದೂರ ದೂರದ ಊರುಗಳಿಂದ ಸ್ಪರ್ಧಿಗಳು ಘೋಲಿಯ ಖುರ್ಡ್ ಗ್ರಾಮ ಧಾವಿಸಿದ್ದು ವಿಶೇಷ. ಸೋಶಿಯಲ್ ಮೀಡಿಯಾದಲ್ಲಿ ಸ್ಪರ್ಧೆಯ ಬಗ್ಗೆ ವ್ಯಾಪಕ ಪ್ರಚಾರ ಮಾಡಲಾಗಿತ್ತು.
ಆಯೋಜಕರು ಹೇಳಿದ್ದೇನು?
ಸ್ಪರ್ಧೆಯ ಬಗ್ಗೆ ಮಾಹಿತಿ ನೀಡಿದ ಆಯೋಜಕರು ಜನರ ಗಮನವನ್ನು ಮೊಬೈಲ್‌ಯಿಂದ ಬೇರೆಡೆ ಸೆಳೆಯಲು ಇದನ್ನು ಆಯೋಜಿಸಿದ್ದಾಗಿ ತಿಳಿಸಿದ್ದಾರೆ. ʼʼಮೊಬೈಲ್ ಫೋನ್‌ನಿಂದ ನೀವು ದೂರವಿದ್ದಷ್ಟು ನೆಮ್ಮದಿಯ ಬದುಕು ನಿಮ್ಮದಾಗುತ್ತದೆ ಎನ್ನುವುದನ್ನು ಸಾರುವುದು ನಮ್ಮ ಮುಖ್ಯ ಉದ್ದೇಶ. ಮೊಬೈಲ್ ದೂರವಿಟ್ಟರೆ ನೀವು ಮನೆಯವರೊಂದಿಗೆ ಸಮಯ ಕಳೆಯಬಹುದು, ಪ್ರೀತಿಪಾತ್ರರೊಂದಿಗೆ ಚೆನ್ನಾಗಿ ಹರಟಬಹುದು. ಇದನ್ನು ತಿಳಿಯಪಡಿಸಲು ಸ್ಪರ್ಧೆ ಆಯೋಜಿಸಿದ್ದೇವೆʼʼ ಎಂದಿದ್ದಾರೆ.