ನವದೆಹಲಿ: ಶುದ್ದೀಕರಣ ವಿವಾದಕ್ಕೆ (Purification controversy) ಸಂಬಂಧಿಸಿ ಪಕ್ಷದ ಹಿರಿಯ ನಾಯಕರು ಮೌನವಹಿಸಿರುವುದಕ್ಕೆ ಕಾಂಗ್ರೆಸ್ ಅಧ್ಯಕ್ಷ (Congress president) ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಬೇಸರ ವ್ಯಕ್ತಪಡಿಸಿದರು. ಉತ್ತರಾಖಂಡದ (Uttarakhand) ಹಲ್ದವಾನಿಯ (Haldwani) ರಾಮಲೀಲಾ ಮೈದಾನದಲ್ಲಿ ಆಗಸ್ಟ್ 8ರಂದು ನಡೆದ ವಿಜಯ್ ಶಂಖನಾದ ರ‍್ಯಾಲಿಯನ್ನು ಉದ್ದೇಶಿಸಿ ಅವರು ಮಾತನಾಡಿದ್ದರು. ಇದರ ಎರಡು ದಿನಗಳ ಬಳಿಕ ಶ್ರೀ ರಾಮ ಸೇನೆ ನಾಯಕರು ಸ್ಥಳದಲ್ಲಿ ಶುದ್ಧೀಕರಣ ನಡೆಸಿದ್ದು, ಈ ಕುರಿತು ಪಕ್ಷದ ಹಿರಿಯ ನಾಯಕರು ಮೌನವಹಿಸಿರುವುದಕ್ಕೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ನವದೆಹಲಿಯಲ್ಲಿ ಬುಧವಾರ ನಡೆದ ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಕುರಿತು ಅವರು ಮಾತನಾಡಿದ್ದು, ಶುದ್ಧೀಕರಣ ವಿಷಯದಲ್ಲಿ ಅನೇಕ ಸಿಡಬ್ಲ್ಯೂಸಿ ಸದಸ್ಯರು ಬಹಿರಂಗವಾಗಿ ತಮ್ಮನ್ನು ಬೆಂಬಲಿಸದಿರುವುದು ತಮಗೆ ನೋವು ತಂದಿದೆ ಎಂದು ಹೇಳಿದ್ದಾರೆ.
ಶಿಲ್ಲಾಂಗ್‌ನಲ್ಲಿ ಬೈಕ್ ರ್‍ಯಾಲಿ ವೇಳೆ ಹಿಂಸಾಚಾರ: ಮೂವರು ವಿದ್ಯಾರ್ಥಿ ಸಂಘದ ನಾಯಕರ ಬಂಧನ
ಉತ್ತರಾಖಂಡದ ಹಲ್ದವಾನಿಯ ರಾಮಲೀಲಾ ಮೈದಾನದಲ್ಲಿ ನಡೆದ ಘಟನೆಯನ್ನು ಉಲ್ಲೇಖಿಸಿ ಮಾತನಾಡಿದ ಅವರು ನಿರ್ದಿಷ್ಟವಾಗಿ ಯಾವುದೇ ನಾಯಕರನ್ನು ಹೆಸರಿಸದಿದ್ದರೂ ಕೆಲವು ಹಿರಿಯ ನಾಯಕರ ಬೆಂಬಲದ ಕೊರತೆಯಿಂದ ಅವರು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.
ಹಲ್ದವಾನಿಯ ರಾಮಲೀಲಾ ಮೈದಾನದಲ್ಲಿ ಆಗಸ್ಟ್ 8 ರಂದು ವಿಜಯ್ ಶಂಖನಾದ ರ‍್ಯಾಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಪಾಲ್ಗೊಂಡು ಮಾತನಾಡಿದರು. ಇದಾಗಿ ಎರಡು ದಿನಗಳ ಬಳಿಕ ಅಂದರೆ ಆಗಸ್ಟ್ 10ರಂದು ಶ್ರೀ ರಾಮ ಸೇನಾ ನಾಯಕರು ಸ್ಥಳದಲ್ಲಿ ಶುದ್ಧೀಕರಣ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿದ್ದರು.
ಘಟನೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದ ಕಾಂಗ್ರೆಸ್ ನಾಯಕ ವೇಣುಗೋಪಾಲ್, ಶುದ್ಧೀಕರಣ ಘಟನೆ ಸ್ವೀಕಾರಾರ್ಹವಲ್ಲ. ಇದು ಖಂಡನೀಯ. ಅದು ಬಿಜೆಪಿಯ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
ಈ ಆಚರಣೆಯನ್ನು ಮಾಡಿದವರು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನೊಂದಿಗೆ ನೇರವಾಗಿ ಸಂಪರ್ಕ ಹೊಂದಿದ್ದಾರೆ. ಇದು ಅವರ ದಲಿತ ವಿರೋಧಿ ಮನಸ್ಥಿತಿಯನ್ನು ಬಹಿರಂಗಪಡಿಸಿದೆ ಎಂದು ತಿಳಿಸಿದೆ.
ಬಿಜೆಪಿ ಕೂಡ ಶುದ್ಧೀಕರಣವನ್ನು ಖಂಡಿಸಿದೆ. ಈ ಕುರಿತು ಮಳೆಗಾಲದ ಅಧಿವೇಶನದ ಕೊನೆಯ ದಿನವಾದ ಗುರುವಾರ ಸಂಸತ್ತಿನಲ್ಲಿ ಭಾರಿ ಚರ್ಚೆ ನಡೆದಿದ್ದು, ಖರ್ಗೆ ಅವರು ಇದನ್ನು ನಾನು ರಾಜಕೀಯ ವಿಷಯವನ್ನಾಗಿ ಪರಿವರ್ತಿಸಲು ಬಯಸುವುದಿಲ್ಲ. ನಾನು ದಲಿತ ಎಂದು ಯಾರಿಗೂ ಹೇಳಿಲ್ಲ. ನನ್ನನ್ನು ರಕ್ಷಿಸಿ ಎಂದು ಯಾರ ಮುಂದೆಯೂ ಬೇಡಿಕೊಂಡಿಲ್ಲ. ನನಗೆ ಹೋರಾಡುವ ಶಕ್ತಿ ಇದೆ ಮತ್ತು ಹೋರಾಡುತ್ತೇನೆ. ಆದರೆ ಆ ಘಟನೆಯು ನನಗೆ ಅಸ್ಪೃಶ್ಯತೆಯನ್ನು ಅನುಭವಿಸುವಂತೆ ಮಾಡಿತ್ತು. ಇದರಲ್ಲಿ ಭಾಗಿಯಾದವರ ವಿರುದ್ಧ ಅಸ್ಪೃಶ್ಯತಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಮತ್ತು ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಬೇಕು ಎಂದು ಆಗ್ರಹಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರು ಈ ಕುರಿತು ತನಿಖೆ ನಡೆಸಲಾಗುವುದು ಎಂದು ಭರವಸೆ ನೀಡಿದ್ದರು.