ನವದೆಹಲಿ: ದೇಶದಲ್ಲಿ ಹೊಸ ಅಭಿವೃದ್ಧಿ ಕೆಲಸಗಳು ಕೈಗೂಡಲು, ಶಾಂತಿ , ಸುವ್ಯವಸ್ಥೆ ಬಹ ಳಷ್ಟು ಮುಖ್ಯ. ಹೀಗಾಗಿ ಇದನ್ನು ವೃದ್ಧಿಯಾಗುವ ಸಲುವಾಗಿ ಇತರ ರಾಷ್ಟ್ರಗಳ ಜೊತೆಗೆ ಹೊಸ ಒಪ್ಪಂದ ಒಡಂಬಡಿಕೆ ಮಾಡಿಕೊಳ್ಳುವ ಸಲುವಾಗಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಇತರ ರಾಷ್ಟ್ರಕ್ಕೆ ಆಗಾಗ ಭೇಟಿ ನೀಡುತ್ತಲೇ ಇರುತ್ತಾರೆ. ಅಂತೆಯೇ ಇತರ ರಾಷ್ಟ್ರದ ಪ್ರಖ್ಯಾತ ನಾಯಕರೂ ನಮ್ಮ ದೇಶಕ್ಕೆ ಬಂದಾಗ ಅವರಿಗೆ ಬೇಕಾದ ವ್ಯವಸ್ಥಿತ ಸೌಕರ್ಯ , ಭದ್ರತಾ ವ್ಯವಸ್ಥೆ ಎಲ್ಲಕ್ಕು ಹೆಚ್ಚಿನ ನಿಗ ಇಟ್ಟಿರಲಾಗುತ್ತದೆ. ಅಂತೆಯೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಪ್ರಧಾನಿ ನರೇಂದ್ರ ಮೋದಿ (Narendra Modi) ಆಹ್ವಾನದ ಮೇರೆಗೆ ದೆಹಲಿಗೆ ಬಂದಿದ್ದು ಅವರಿಗೆ ವಿಶೇಷ ಭದ್ರತಾ ವ್ಯವಸ್ಥೆ ಮಾಡಲಾಗಿದೆ.ಅಂತೆಯೇ ಭಾರತದ ಪ್ರವಾಸದ ವೇಳೆ ಅವರಿಗೆ ಇರುವ ಭದ್ರತಾ ವ್ಯವಸ್ಥೆ ಹೇಗಿರಲಿದೆ ಎಂಬಿತ್ಯಾದಿ ಮಾಹಿತಿಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
ರಷ್ಯಾದ ಅಧ್ಯಕ್ಷ ಪುಟಿನ್ ಅವರು ಭಾರತದಲ್ಲಿ ರಾಜ್ ಘಾಟ್‌ನಲ್ಲಿರುವ ಮಹಾತ್ಮ ಗಾಂಧಿಯವರ ಸಮಾಧಿಗೆ ಭೇಟಿ ನೀಡಿ ಬಳಿಕ ಶೃಂಗಸಭೆಯಲ್ಲಿ ಭಾಗಿಯಾಗಲಿದ್ದಾರೆ. ಅಲ್ಲಿ ಹಲವು ರಾಷ್ಟ್ರೀಯ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆದು ಆ ಬಳಿಕ ರಾಷ್ಟ್ರಪತಿ ಭವನದ ಔತಣಕೂಟದಲ್ಲಿ ಕೂಡ ಇವರು ಭಾಗವಹಿಸಲಿದ್ದಾರೆ. ಈ ಅವಧಿಯಲ್ಲಿ ಅವರಿಗೆ ಹೆಚ್ಚಿನ ರಕ್ಷಣಾ ವ್ಯವಸ್ಥೆ ಅಗತ್ಯವಿದ್ದು ಪುಟಿನ್ ಅವರಿಗೆ 5ಹಂತದ ಭದ್ರತಾ ವ್ಯವಸ್ಥೆ ನೀಡಲಾಗುತ್ತಿದ್ದು ಈಗಾಗಲೇ ರಷ್ಯಾದಿಂದ ಉನ್ನತ ಭದ್ರತಾ ಅಧಿಕಾರಿಗಳು ದೆಹಲಿಗೆ ಆಗಮಿಸಿದ್ದಾರೆ ಎಂದು ಸಹ ಹೇಳಲಾಗುತ್ತಿದೆ.
ಅದೇ ರೀತಿ ಪುಟಿನ್ ಅವರ ಪ್ರಯಾಣದ ಅವಧಿಯಲ್ಲಿ ಅವರ ಮಲವನ್ನು ನಿತ್ಯ ಸಂಗ್ರಹಿಸಲಾ ಗುತ್ತದೆಯಂತೆ. ಅದನ್ನು ಸೂಟ್ ಕೇಸ್ ನಲ್ಲಿ ಸೀಲ್ ಮಾಡಿ ಬಳಿಕ ರಷ್ಯಾಗೆ ಹಿಂದಿರುಗಿಸಲಾಗುತ್ತದೆ ಎಂಬ ಮಾಹಿತಿ ಕೂಡ ವೈರಲ್ ಆಗಿದೆ. ಇದಕ್ಕಾಗಿಯೂ ಅಂಗ ರಕ್ಷಕರು ಇದ್ದು ಅವರು ಪುಟಿನ್ ಅವರ ಮಲವನ್ನು ಸಂಗ್ರಹಿಸುವ ಕೆಲಸವನ್ನು ಸಹ ನಿರ್ವಹಿಸಿ ಬಳಿಕ ಬ್ರೀಫ್‌ಕೇಸ್‌ನಲ್ಲಿ ಇರಿಸಿ ಮಾಸ್ಕೋಗೆ ಹಿಂತಿರುಗುತ್ತಾರೆ. ಈ ರೀತಿ ಮಾಡುವುದು ಇದೆ ಮೊದಲೇನಲ್ಲ ಈ ಹಿಂದೆ ಅವರು ಫ್ರಾನ್ಸ್ , ಸೌದಿ ಅರೇಬಿಯಾ ಪ್ರವಾಸ, ಅಮೆರಿಕದಲ್ಲಿ ನಡೆದ ಅಲಾಸ್ಕಾ ಶೃಂಗಸಭೆಯಲ್ಲಿಯೂ ಈ ಪದ್ಧತಿಯನ್ನು ಅನುಸರಿಸಿದ್ದಾರೆ.
ಕಾರಣ ಏನು?
ರಷ್ಯಾದ ಅಧ್ಯಕ್ಷ ಪುಟಿನ್ ಅವರ ಮಲವನ್ನು ಸಹ ವಿಶೇಷ ಸೂಟ್‌ಕೇಸ್‌ನಲ್ಲಿ ಪ್ಯಾಕ್ ಮಾಡಲು ಕೂಡ ಕಾರಣ ಇದೆ. ಯಾವುದೇ ವಿದೇಶಿ ಗುಪ್ತಚರ ಸಂಸ್ಥೆ ಅವರ ಆರೋಗ್ಯವನ್ನು ಪತ್ತೆಹಚ್ಚಿ ಅದನ್ನು ಇಟ್ಟುಕೊಂಡು ಯಾವುದೆ ತರನಾಗಿ ದುರುಪಯೋಗ, ಬೆದರಿಕೆ ಇತ್ಯಾದಿ ಮಾಡಬಾರದು ಎಂಬ ಕಾರಣಕ್ಕೆ ಅಧ್ಯಕ್ಷರಿಗೆ ಸಂಬಂಧ ಪಟ್ಟ ಎಲ್ಲವನ್ನು ರಷ್ಯಾಕ್ಕೆ ಪುನಃ ಹಿಂತಿರುಗಿಸಲಾಗುತ್ತದೆ. ಹೀಗಾಗಿ ಈ ಮಲ ಸಂಗ್ರಹಣೆಯ ವಿಧಾನ ಕೂಡ ಅವರ ಭದ್ರತಾ ಕ್ರಮಗಳ ಒಂದು ಭಾಗವಾಗಿದೆ.
ಯಾವೆಲ್ಲ ವಿಶೇಷ ಭದ್ರತೆ ಇರಲಿದೆ?
ರಷ್ಯಾದ ಅಧ್ಯಕ್ಷ ಪುಟಿನ್ ಅವರ ರಕ್ಷಣಾ ಜವಾಬ್ದಾರಿಯನ್ನು ರಷ್ಯಾದ ರಹಸ್ಯ ಭದ್ರತಾ ಸಂಸ್ಥೆಯಾದ ಫೆಡರಲ್ ಸೆಕ್ಯುರಿಟಿ ಸರ್ವಿಸ್ (FSO) ವಹಿಸಿಕೊಂಡಿದೆ. ಈ ಮೂಲಕ ಪ್ರತಿಯೊಂದು ಹಂತದಲ್ಲಿಯೂ ಹೆಚ್ಚಿನ ಭದ್ರತೆಯನ್ನು ನೀಡುವ ಸಂಪೂರ್ಣ ವ್ಯವಸ್ಥೆ ಈಗಾಗಲೇ ಸಿದ್ಧಗೊಂಡಿದೆ.
*ರಷ್ಯಾದ ಅಧ್ಯಕ್ಷರಿಗೆ ಆಹಾರ ತಯಾರಿಸಲೆಂದೆ ಪ್ರತ್ಯೇಕ ಅಡುಗೆ ತಯಾರಕರನ್ನು ನೇಮಿಸಲಾಗಿದೆ. ಅವರು ಕೈ ಗವಸು ಧರಿಸುವುದು ಮತ್ತು ಆಗಾಗ ಸಮವಸ್ತ್ರ ಬದಲಿಸುವುದು ಇತರೆ ನೈರ್ಮಲ್ಯದ ನಿಯಮಗಳು ಅಡುಗೆತಯಾರಕರಿಗೆ ಇರಲಿದೆ. ಪ್ರತಿ ಪದಾರ್ಥಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ ಅಡುಗೆ ಮಾಡಿದ್ದ ಬಳಿಕ ಅದನ್ನು ಅಂಗರಕ್ಷಕರು ಸವಿದ ಮೇಲೆ ಅದರಲ್ಲಿ ಯಾವುದೆ ವಿಷಾಂಶಗಳಿಲ್ಲ ಎಂದು ಖಾತರಿ ಆದ ಮೇಲೆ ಅಧ್ಯಕ್ಷರಿಗೆ ನೀಡಲಾಗುತ್ತದೆ. ಪುಟಿನ್ ಯಾವುದೆ ಸಭೆ, ಸಮಾರಂಭ, ರಜೆ ಎಂದು ತೆರಳುವಾಗಲೂ ಈ ಅಡುಗೆ ತಯಾರಕರು ಮತ್ತು ಅಂಗರಕ್ಷಕರು ಸದಾ ಇರುತ್ತಾರೆ.
Putin India Visit: ರಾಜ್‌ಘಾಟ್‌ಗೆ ಪುಟಿನ್ ಭೇಟಿ; ಮಹಾತ್ಮ ಗಾಂಧಿ ಪ್ರತಿಮೆಗೆ ಪುಷ್ಪನಮನ ಸಲ್ಲಿಕೆ
ಪುಟಿನ್ ಪ್ರವಾಸದ ವೇಳೆ ಬಳಸುವ ವಾಹನ, ವಿಮಾನಗಳೆಲ್ಲದರಲ್ಲೂ ಹೆಚ್ಚಿನ ಭದ್ರತಾ ವ್ಯವಸ್ಥೆ ಇರಲಿದೆ. ಎಮರ್ಜೆನ್ಸಿ ಆಕ್ಸಿಜನ್, ಫೈರ್ ಸಪ್ರೆಷನ್, ಬುಲೆಟ್ ಪ್ರೂಫ್ ವ್ಯವಸ್ಥೆ ಇರುವ ವಾಹನದಲ್ಲಿ ಮಾತ್ರವೇ ಅವರು ಪ್ರಯಾಣ ಮಾಡುತ್ತಾರೆ. ಇವರು ಬಳಸುವ ವಿಮಾನದಲ್ಲಿ ಜಿಮ್, ವೈದ್ಯಕೀಯ ಸೌಲಭ್ಯ, ಇತರೆ ಕೊಠಡಿಗಳನ್ನು ಹೊಂದಿರುತ್ತದೆ. ಇವರ ವಿಮಾನಕ್ಕೆ ಫ್ಲೈಯಿಂಗ್ ಪ್ಲುಟನ್ ಎಂಬ ಹೆಸರಿನಿಂದ ಸಹ ಕರೆಯಲಾಗುತ್ತದೆ.
ಪುಟಿನ್ ಅವರು ಬಳಸುವ ಕಾರು ಕೂಡ ತುಂಬಾ ಭದ್ರತಾ ವ್ಯವಸ್ಥೆಯಿಂದ ಕೂಡಿದೆ. ರಷ್ಯಾದ NAMI ಇನ್ ಸ್ಟಿಟ್ಯೂಟ್ ವಿನ್ಯಾಸಗೊಳಿಸಿದ ಸರ್ಕಾರಿ ಕಾರು ಔರಸ್ ಸೆನಾಟ್‌ನಲ್ಲಿ ಅವರು ಬಹುತೇಕ ಸಂದರ್ಭದಲ್ಲಿ ಪ್ರಯಾಣಿಸುತ್ತಾರೆ. ಈ ವಾಹನದಲ್ಲಿ ಬುಲೆಟ್ ಪ್ರುಫ್ ವ್ಯವಸ್ಥೆ ಇದೆ. ಬೆಂಕಿ ನಿಗ್ರಹ ವ್ಯವಸ್ಥೆ, ತುರ್ತು ಆಮ್ಲಜನಕ ಪೂರೈಕೆ ಕೂಡ ಇದೆ. ಅದರ ಜೊತೆಗೆ ಈ ಕಾರಿನ ನಾಲ್ಕು ಟೈರ್‌ಗಳನ್ನು ಪಂಕ್ಚರ್ ಆಗಿದ್ದರೂ ಪ್ರಯಾಣಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಅಷ್ಟರ ಮಟ್ಟಿಗೆ ಅನುಕೂಲ ವ್ಯವಸ್ಥೆ ಇದರಲ್ಲಿದೆ.
ಇದೆಲ್ಲದರ ಜೊತೆಗೆ ಅಂಗ ರಕ್ಷಕ ಪಡೆಯೇ ನೆಮಕವಾಗಿದ್ದು ಪುಟಿನ್ ಎಲ್ಲಿ ಹೋದರು ಅವರಿಗೆ ಕಾವಲು ನೀಡಲಾಗುತ್ತದೆ. ಅವರು ಬಳಸುವ ವಸ್ತುಗಳನ್ನು ಪ್ರಯೋಗಾಲಯದಲ್ಲಿ ಪರಿಶೀಲಿಸಿ ಸುರಕ್ಷಿತ ಎನಿಸಿದಾಗ ಅವರಿಗೆ ಅದನ್ನು ನೀಡುವ ವ್ಯವಸ್ಥೆಯಿಂದ ಹಿಡಿದು ಅವರು ಬಳಸಿದ್ದ ಟಿಶ್ಯೂ , ಗ್ಲಾಸ್ ಎಲ್ಲವನ್ನು ರಷ್ಯಾಕ್ಕೆ ವಾಪಾಸು ಕಳಿಸುವ ವ್ಯವಸ್ಥೆ ಕೂಡ ಇದೆ.