ನವದೆಹಲಿ: ಪ್ರಧಾನ ಮಂತ್ರಿ ಪ್ಯಾಕೇಜ್ ಅಡಿಯಲ್ಲಿ (Kashmiri Pandit employees) ನೇಮಕಗೊಂಡ ಕಾಶ್ಮೀರಿ ಪಂಡಿತರು (kashmiri Pandits) ಉದ್ಯೋಗ ತ್ಯಜಿಸುವಂತೆ ಲಷ್ಕರ್-ಎ-ತೈಬಾ ಜೊತೆ ನಂಟು ಹೊಂದಿರುವ ಯುನೈಟೆಡ್ ಲಿಬರೇಶನ್ ಕೌನ್ಸಿಲ್ (ಯುಎಲ್‌ಸಿ/ಯುಎಲ್‌ಎಫ್) ( LeT proxy ULC) ಬೆದರಿಕೆಯನ್ನೊಡ್ಡಿದೆ. ಜಮ್ಮು ಮತ್ತು ಕಾಶ್ಮೀರದ (Jammu and kashmir) ಶ್ರೀನಗರದಲ್ಲಿ ವಾಸವಾಗಿರುವ ಮುಂಬೈ ಮೂಲದ ಕಾಶ್ಮೀರಿ ಪಂಡಿತರೊಬ್ಬರು ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಎಲ್‌ಇಟಿ ಬೆದರಿಕೆಯಿಂದ ಜಮ್ಮು ಮತ್ತು ಕಾಶ್ಮೀರದಲ್ಲಿರುವ ಸುಮಾರು 7,000 ಕಾಶ್ಮೀರಿ ಪಂಡಿತರು ಆತಂಕಿತರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಲಷ್ಕರ್-ಎ-ತೈಬಾ ಜೊತೆ ನಂಟು ಹೊಂದಿರುವ ಯುನೈಟೆಡ್ ಲಿಬರೇಶನ್ ಕೌನ್ಸಿಲ್ (ಯುಎಲ್‌ಸಿ/ಯುಎಲ್‌ಎಫ್) ನೀಡಿರುವ ಬೆದರಿಕೆ ಪತ್ರಗಳಿಂದ ಕಣಿವೆ ಭಾಗದಲ್ಲಿ ವಾಸಿಸುತ್ತಿರುವ ಸುಮಾರು 7,000 ಕಾಶ್ಮೀರಿ ಪಂಡಿತರು ಆತಂಕಿತರಾಗಿದ್ದಾರೆ. ಪ್ರಧಾನ ಮಂತ್ರಿ ಪ್ಯಾಕೇಜ್ ಅಡಿಯಲ್ಲಿ ಉದ್ಯೋಗ ನೇಮಕಾತಿ ನಡೆದ ಬಳಿಕ ಈ ಬೆದರಿಕೆ ಬಂದಿದೆ.
ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡಿದ್ದಕ್ಕೆ ಆಕ್ಷೇಪ: ವ್ಯಕ್ತಿ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ ಕಿಡಿಗೇಡಿಗಳು
ಹೊಸದಾಗಿ ನೇಮಕಗೊಂಡಿರುವ ಉದ್ಯೋಗಿಗಳ ಖಾಸಗಿ ಫೋನ್ ಸಂಖ್ಯೆ, ಮನೆ ವಿಳಾಸ ಮತ್ತು ವಾಹನ ನೋಂದಣಿ ವಿವರಗಳು ಸೇರಿದಂತೆ ವೈಯಕ್ತಿಕ ವಿವರಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿದ್ದರಿಂದ ಒಂದು ತಿಂಗಳ ಅವಧಿಯಲ್ಲಿ ಕನಿಷ್ಠ ಐದು ಬಾರಿ ಈ ರೀತಿಯ ಬೆದರಿಕೆಗಳು ಬಂದಿವೆ ಎಂದು ಅವರು ಹೇಳಿದ್ದಾರೆ.
ಎಲ್‌ಇಟಿ ಪ್ರಾಕ್ಸಿ ಸಂಘಟನೆಯಾದ ಯುಎಲ್‌ಸಿಯಿಂದ ಬಂದಿರುವ ಹೊಸ ಬೆದರಿಕೆ ಪತ್ರಗಳು ಜಮ್ಮು ಮತ್ತು ಕಾಶ್ಮೀರದಾದ್ಯಂತ ವಿವಿಧೆಡೆ ವಾಸಿಸುತ್ತಿರುವ, ಕೆಲಸ ಮಾಡುತ್ತಿರುವ ಕಾಶ್ಮೀರಿ ಪಂಡಿತರ ಉದ್ಯೋಗಿಗಳಿಗೆ ಭದ್ರತೆ ಕಳವಳವನ್ನು ಉಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ಬಲವಾದ ಸುರಕ್ಷತೆಗೆ ಬೇಡಿಕೆ ಕೇಳಿ ಬಂದಿದ್ದು, ಕೆಲವರು ಎಫ್ ಐಆರ್ ದಾಖಲಿಸಿದ್ದಾರೆ.
ಕಳೆದ ಸೆಪ್ಟೆಂಬರ್ 1ರಂದು ಯುಎಲ್‌ಸಿಯಿಂದ ಬೆದರಿಕೆ ಬಂದ ಮೇಲೆ ಇತ್ತೀಚೆಗೆ ಇಂತಹ ಬೆದರಿಕೆಗಳು ಹೆಚ್ಚಾಗಿವೆ ಎಂದು ಕಾಶ್ಮೀರಿ ಪಂಡಿತ ಸಮುದಾಯದ ಸದಸ್ಯರು ಹೇಳಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ದೆಹಲಿಯಲ್ಲಿ ವಾಸಿಸುತ್ತಿರುವ ಕಾಶ್ಮೀರಿ ಪಂಡಿತ ವಕೀಲರೊಬ್ಬರು, ನನ್ನ ಕುಟುಂಬವು ಸರ್ಕಾರಿ ನೌಕರಿಯಲ್ಲಿಲ್ಲ. ನಾವು ವ್ಯಾಪಾರಿಗಳು. ಸರ್ಕಾರಿ ನೌಕರರಿಗೆ ಈ ಬಾರಿ ಬೆದರಿಕೆ ಬಂದಿದೆ. ಕಾಶ್ಮೀರದಲ್ಲಿರುವ ಕಾಶ್ಮೀರಿ ಪಂಡಿತರು ಸುರಕ್ಷಿತವಾಗಿಲ್ಲ. ಈ ಬೆದರಿಕೆಗಳು ಕಣಿವೆಯಲ್ಲಿ ಬಹಳ ಸಾಮಾನ್ಯ ಎಂದು ಹೇಳಿದರು.
ಕಾಶ್ಮೀರಿ ಪಂಡಿತ ಸಮುದಾಯದ ಸಬಾ ಕೌಲ್ ಅವರು ಸೆಪ್ಟೆಂಬರ್ 7ರಂದು ಸಾಮಾಜಿಕ ಮಾಧ್ಯಮದ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ ಖಾಸಗಿ ಫೋನ್ ಸಂಖ್ಯೆಗಳು, ಮನೆ ವಿಳಾಸಗಳು ಮತ್ತು ವಾಹನ ನೋಂದಣಿ ವಿವರಗಳನ್ನು ಆನ್‌ಲೈನ್‌ನಲ್ಲಿ ಸೋರಿಕೆಯಾಗಿದ್ದರಿಂದ ನೌಕರರು ರಾಜೀನಾಮೆ ನೀಡಬೇಕು ಅಥವಾ ಮಾರಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂಬ ಬೆದರಿಕೆ ಬಂದಿರುವುದಾಗಿ ತಿಳಿಸಿದ್ದಾರೆ.
ಈ ಕುರಿತು ತನಿಖೆ ನಡೆಸಬೇಕು. ಇಲ್ಲಿನ ಉದ್ಯೋಗಿಗಳಿಗೆ ಭದ್ರತೆಯನ್ನು ಖಚಿತಪಡಿಸಿಕೊಳ್ಳಬೇಕೆಂದು ಅವರು ಕೇಂದ್ರ ಗೃಹ ಸಚಿವಾಲಯ ಮತ್ತು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಅವರನ್ನು ಒತ್ತಾಯಿಸಿದ್ದಾರೆ.
ಯುಎಲ್‌ಸಿಯಿಂದ ಬಂದಿರುವ ಬೆದರಿಕೆಗೆ ಸಂಬಂಧಿಸಿ ಪ್ರಧಾನ ಮಂತ್ರಿ ಪ್ಯಾಕೇಜ್ ಅಡಿಯಲ್ಲಿ ಉದ್ಯೋಗ ಪಡೆದಿರುವ ಸಾಮಾಜಿಕ ಕಾರ್ಯಕರ್ತ ರಾಕೇಶ್ ಹಂಡೂ ಅವರು ಸೆಪ್ಟೆಂಬರ್ 6 ರಂದು ಪ್ರಧಾನಿ ನರೇಂದ್ರ ಮೋದಿ, ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರ ಸೈಬರ್ ಕ್ರೈಮ್ ವಿಂಗ್ ಅವರಿಗೆ ದೂರು ನೀಡಿದ್ದಾರೆ. ಬೆದರಿಕೆ ಪತ್ರದಲ್ಲಿ ಸ್ಥಳೀಯರಲ್ಲದ ಉದ್ಯೋಗಿಗಳಿಗೆ ಬೆದರಿಕೆ ಹಾಕಲಾಗಿದೆ. ಲಿಂಗ ಅಥವಾ ಸ್ಥಾನಮಾನವನ್ನು ಲೆಕ್ಕಿಸದೆ ಎಲ್ಲರನ್ನೂ ಗುರಿಯಾಗಿಸಲಾಗುವುದು ಎಂದು ಹೇಳಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕಾಶ್ಮೀರದಲ್ಲಿ ನೆಲೆಸುವ ವಲಸಿಗರಿಗೆ ಪ್ರಧಾನ ಮಂತ್ರಿ ಪ್ಯಾಕೇಜ್ ಉದ್ಯೋಗ ಯೋಜನೆಯು 2008ಕ್ಕಿಂತಲೂ ಹಿಂದಿನದು. ಆಗ ಕೇಂದ್ರ ಸರ್ಕಾರವು 3,000 ರಾಜ್ಯ ಸರ್ಕಾರಿ ಉದ್ಯೋಗಗಳನ್ನು ಒಳಗೊಂಡ ರಿಟರ್ನ್ ಮತ್ತು ಪುನರ್ವಸತಿ ಪ್ಯಾಕೇಜ್ ಅನ್ನು ಘೋಷಿಸಿತು. ಬಳಿಕ 2015ರಲ್ಲಿ ಕೇಂದ್ರವು ಪ್ರಧಾನ ಮಂತ್ರಿ ಅಭಿವೃದ್ಧಿ ಪ್ಯಾಕೇಜ್ ಅಡಿಯಲ್ಲಿ ಮತ್ತೊಮ್ಮೆ 3,000 ರಾಜ್ಯ ಸರ್ಕಾರಿ ಉದ್ಯೋಗಗಳನ್ನು ಅನುಮೋದಿಸಿತು, ಇದರಿಂದ ಎರಡು ಯೋಜನೆಗಳ ಅಡಿಯಲ್ಲಿ ಕೇಂದ್ರದಿಂದ ಅನುದಾನಿತ ಹುದ್ದೆಗಳ ಒಟ್ಟು ಸಂಖ್ಯೆಯನ್ನು 6,000ಕ್ಕೆ ಏರಿಸಿತ್ತು. ಆದರೆ ಭಯೋತ್ಪಾದಕರು 7,000 ಕಾಶ್ಮೀರಿ ಪಂಡಿತರಿಗೆ ಬೆದರಿಕೆ ಹಾಕಿದ್ದಾರೆ. ಬೆದರಿಕೆ ಪತ್ರಗಳನ್ನು ಶ್ರೀನಗರದಲ್ಲಿ ನೆಲೆಸಿರುವ ಹಿರಿಯ ಪತ್ರಕರ್ತರೊಬ್ಬರು ವಾಟ್ಸಾಪ್ ಮತ್ತು ಟೆಲಿಗ್ರಾಮ್ ಮೂಲಕ ಹಂಚಿರುವುದಾಗಿ ತಿಳಿಸಿದ್ದಾರೆ.
ಯುಎಲ್‌ಸಿಯಿಂದ ಸೆಪ್ಟೆಂಬರ್ 1ರಂದು ಕಾಶ್ಮೀರಿ ಪಂಡಿತರಿಗೆ ಬೆದರಿಕೆ ಬಂದ ಬಳಿಕ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರ ಅಧ್ಯಕ್ಷತೆಯಲ್ಲಿ ನಡೆದ ಭದ್ರತಾ ಸಭೆಯಲ್ಲಿ ವಲಸೆ ಪಂಡಿತ ನೌಕರರಿಗೆ ಲಘು ಶಸ್ತ್ರಾಸ್ತ್ರಗಳನ್ನು ನೀಡುವ ಬಗ್ಗೆ ಚರ್ಚೆ ನಡೆಸಲಾಯಿತು ಎನ್ನಲಾಗಿದೆ.
ಬೆದರಿಕೆಗೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ, ಜಮ್ಮು ಮತ್ತು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ಹಿಂದೂ ಅಧಿಕಾರಿಗಳಿಗೆ ಬೆದರಿಕೆಗಳು ಬರುತ್ತಿಲ್ಲ. ಆದರೆ ಕಾಶ್ಮೀರಿ ಪಂಡಿತ್ ನೌಕರರಿಗೆ ಬೆದರಿಕೆಗಳು ಏಕೆ ಬರುತ್ತಿವೆ ಎಂದು ಪ್ರಶ್ನಿಸಿದ್ದಾರೆ.
ಲೆಫ್ಟಿನೆಂಟ್ ಗವರ್ನರ್ ನೇತೃತ್ವದ ಆಡಳಿತವು ಕಾಶ್ಮೀರಿ ಪಂಡಿತರಲ್ಲಿ ಭಯವನ್ನು ಸೃಷ್ಟಿಸಲು ಮತ್ತು ರಾಜ್ಯ ಸ್ಥಾನಮಾನದ ಪುನಃಸ್ಥಾಪನೆಯನ್ನು ವಿಳಂಬಗೊಳಿಸಲು ಪಿತೂರಿ ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಆದರೆ ಬಿಜೆಪಿ ಆ ವಾದವನ್ನು ತಿರಸ್ಕರಿಸಿದೆ.
ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಬೆದರಿಕೆಯನ್ನು ಹಗುರವಾಗಿ ಪರಿಗಣಿಸಬಾರದು. ಜವಾಬ್ದಾರಿಯುತರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮತ್ತು ಕಾಶ್ಮೀರಿ ಪಂಡಿತ್ ನೌಕರರಿಗೆ ಭದ್ರತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿರುವ ಅವರು ಬೆದರಿಕೆಗಳು ಎಲ್ಲಿಂದ ಬರುತ್ತಿವೆ ಎಂಬುದನ್ನು ಭದ್ರತಾ ಮತ್ತು ಗುಪ್ತಚರ ಸಂಸ್ಥೆಗಳು ತನಿಖೆ ನಡೆಸಬೇಕು ಎಂದು ಹೇಳಿದ್ದಾರೆ.