ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

''ಮನಮೋಹನ್ ಸಿಂಗ್ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದಿದ್ದರುʼʼ: ಮಾಜಿ ಸಿಇಸಿ ಎಸ್.ವೈ. ಖುರೈಶಿ ಪುಸ್ತಕದಲ್ಲಿ ಅಚ್ಚರಿಯ ಮಾಹಿತಿ ಬಹಿರಂಗ

SY Quraishi: 2012ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ವೇಳೆ ಚುನಾವಣಾ ಆಯೋಗದ ವಿರುದ್ಧ ಕೆಲ ಸಚಿವರು ನೀಡಿದ್ದ ಹೇಳಿಕೆಗಳಿಂದ ಬೇಸರಗೊಂಡಿದ್ದ ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ. ಖುರೈಶಿ ಅವರನ್ನು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ತುರ್ತಾಗಿ ಭೇಟಿಗೆ ಕರೆಸಿಕೊಂಡಿದ್ದರು. ಈ ವೇಳೆ "ನೀವು ಹೀಗೆ ಭಾವಿಸಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ" ಎಂದು ಭಾವುಕರಾಗಿ ಹೇಳಿದ್ದಾಗಿ ಖುರೈಶಿ ತಮ್ಮ ಹೊಸ ಪುಸ್ತಕದಲ್ಲಿ ಬಹಿರಂಗಪಡಿಸಿದ್ದಾರೆ. ಚುನಾವಣಾ ಆಯೋಗವು ಭಾರತದ ಪ್ರಜಾಪ್ರಭುತ್ವದ ಆತ್ಮ ಎಂದು ಮನಮೋಹನ್ ಸಿಂಗ್ ಹೇಳಿದ್ದನ್ನೂ ಅವರು ಉಲ್ಲೇಖಿಸಿದ್ದಾರೆ.

ಡಾ. ಮನಮೋಹನ್ ಸಿಂಗ್ (ಸಂಗ್ರಹ ಚಿತ್ರ)

ನವದೆಹಲಿ, ಜು. 13: ಮಾಜಿ ಪ್ರಧಾನಮಂತ್ರಿ ದಿ. ಡಾ. ಮನಮೋಹನ್ ಸಿಂಗ್ ಅವರೊಂದಿಗೆ ನಡೆದ ಅಪರೂಪದ ಸಂಭಾಷಣೆಯೊಂದನ್ನು ಮಾಜಿ ಮುಖ್ಯ ಚುನಾವಣಾ ಆಯುಕ್ತ (Former Chief Election Commissioner - CEC) ಎಸ್.ವೈ. ಖುರೈಶಿ (SY Quraishi) ತಮ್ಮ ಹೊಸ ಪುಸ್ತಕ 'India and I: A Hundred Memories, Not a Memoirʼನಲ್ಲಿ ಬಹಿರಂಗಪಡಿಸಿದ್ದಾರೆ.

2012ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ವೇಳೆ ಚುನಾವಣಾ ಆಯೋಗದ ವಿರುದ್ಧ ಕೆಲ ಕೇಂದ್ರ ಸಚಿವರು ನೀಡಿದ್ದ ಹೇಳಿಕೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಖುರೈಶಿ ಅವರನ್ನು ಮನಮೋಹನ್ ಸಿಂಗ್ ತುರ್ತಾಗಿ ಪ್ರಧಾನಿ ನಿವಾಸಕ್ಕೆ ಕರೆಯಿಸಿಕೊಂಡಿದ್ದರು. ಈ ವೇಳೆ "ನೀವು ಹೀಗೆ ಭಾವಿಸಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ" ಎಂದು ಭಾವುಕರಾಗಿ ಹೇಳಿದ್ದಾಗಿ ಖುರೈಶಿ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

ಖುರೈಶಿ ಹೇಳುವ ಪ್ರಕಾರ, ವಿವಾದಕ್ಕೆ ಕಾರಣವಾಗಿದ್ದು ಆಗಿನ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಅವರ ಹೇಳಿಕೆ. ಉತ್ತರ ಪ್ರದೇಶ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಸ್ಲಿಮರ ಉದ್ಯೋಗ ಮೀಸಲಾತಿಯನ್ನು 4.5%ರಿಂದ 9%ಕ್ಕೆ ಹೆಚ್ಚಿಸಲಾಗುವುದು ಎಂದು ಅವರು ಘೋಷಿಸಿದ್ದರು. ಇದನ್ನು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಎಂದು ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.

ಬಿಜೆಪಿ ಮತ್ತು ಕಾಂಗ್ರೆಸ್ ವಾದಗಳನ್ನು ನಾಲ್ಕು ದಿನಗಳ ಕಾಲ ಆಲಿಸಿದ ಚುನಾವಣಾ ಆಯೋಗ, ಖುರ್ಷಿದ್ ವಿರುದ್ಧ ಮಾದರಿ ನೀತಿ ಸಂಹಿತೆಯಡಿ ಸಾಧ್ಯವಿದ್ದ ಅತ್ಯಂತ ಕಠಿಣ ಕ್ರಮ ಕೈಗೊಂಡಿತ್ತು. ಬಳಿಕ ಕಾಂಗ್ರೆಸ್‌ನ ಕೆಲ ನಾಯಕರು ಚುನಾವಣಾ ಆಯೋಗವನ್ನು ʼಅಹಂಕಾರಿʼ ಮತ್ತು ʼಏಕಪಕ್ಷೀಯʼ ಎಂದು ಟೀಕಿಸಲು ಆರಂಭಿಸಿದ್ದರು.

ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣ: ಪ್ರತಿ ರೂಪಾಯಿಯನ್ನೂ ಟ್ರ್ಯಾಕ್ ಮಾಡಲು ಎಐ ವ್ಯವಸ್ಥೆ

ಈ ಬೆಳವಣಿಗೆಯಿಂದ ಬೇಸರಗೊಂಡ ಖುರೈಶಿ, ತಮ್ಮ ಆತಂಕವನ್ನು ಅಂದಿನ ಪ್ರಧಾನಮಂತ್ರಿಯ ಪತ್ರಿಕಾ ಕಾರ್ಯದರ್ಶಿ ಹರೀಶ್ ಖರೆ ಅವರಿಗೆ ತಿಳಿಸಿದ್ದರು. ಮರುದಿನವೇ ಮನಮೋಹನ್ ಸಿಂಗ್ ಅವರಿಂದ ತುರ್ತು ಭೇಟಿ ಕೋರಿ ಕರೆ ಬಂದಿತ್ತು.

ಪ್ರಧಾನಿ ನಿವಾಸದಲ್ಲಿ ನಡೆದ ಭೇಟಿಯಲ್ಲಿ ಭಾವುಕರಾದ ಮನಮೋಹನ್ ಸಿಂಗ್, "ನನಗೆ ಈ ವಿಷಯದ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ತಿಳಿದಿದ್ದರೆ ಸಂಬಂಧಪಟ್ಟ ಸಚಿವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳುತ್ತಿದ್ದೆ. ಮುಂದೆ ಇಂತಹ ವಿಷಯ ಇದ್ದರೆ ನೇರವಾಗಿ ನನಗೆ ಕರೆ ಮಾಡಿ" ಎಂದು ಹೇಳಿದ್ದಾಗಿ ಖುರೈಶಿ ಬರೆದಿದ್ದಾರೆ.

ಅಲ್ಲದೆ, "ಚುನಾವಣಾ ಆಯೋಗವು ಭಾರತದ ಹೆಮ್ಮೆ ಮಾತ್ರವಲ್ಲ, ಅದು ನಮ್ಮ ಪ್ರಜಾಪ್ರಭುತ್ವದ ಆತ್ಮ. ಅದನ್ನು ಕಳೆದುಕೊಂಡರೆ ಎಲ್ಲವನ್ನೂ ಕಳೆದುಕೊಂಡಂತಾಗುತ್ತದೆ" ಎಂದು ಮನಮೋಹನ್ ಸಿಂಗ್ ಹೇಳಿದ್ದಾಗಿ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ಈ ಭೇಟಿಯ ನಂತರ ಚುನಾವಣಾ ಆಯೋಗದ ವಿರುದ್ಧ ಸಚಿವರಿಂದ ಬರುತ್ತಿದ್ದ ಟೀಕೆಗಳು ನಿಂತುಹೋಗಿದ್ದವು ಎಂದು ಖುರೈಶಿ ಹೇಳಿದ್ದಾರೆ. ಅಧಿಕಾರದಲ್ಲಿದ್ದರೂ ಪ್ರಜಾಪ್ರಭುತ್ವದ ಸಂಸ್ಥೆಗಳ ಗೌರವವನ್ನು ಕಾಪಾಡಲು ಬದ್ಧರಾಗಿದ್ದ ನಾಯಕ ಮನಮೋಹನ್ ಸಿಂಗ್ ಎಂದು ಅವರು ತಮ್ಮ ಪುಸ್ತಕದಲ್ಲಿ ಪ್ರಶಂಸಿಸಿದ್ದಾರೆ.