ಲಖನೌ: ಉತ್ತರಪ್ರದೇಶದ (Uttar Pradesh) ಗೋರಖ್‌ಪುರದಲ್ಲಿ ದನವೊಂದು ರೇಬಿಸ್ (Rabies) ಸೋಂಕಿಗೆ ಒಳಗಾಗಿ ಸಾವನ್ನಪ್ಪುವುದರೊಂದಿಗೆ ಆ ಭಾಗದ ಜನರಲ್ಲಿ ತೀವ್ರವಾದ ಆತಂಕ ಮನೆ ಮಾಡಿತ್ತು. ಇಷ್ಟು ಮಾತ್ರವಲ್ಲದೆ ಆ ದನಕ್ಕೆ ರೇಬಿಸ್ ಸೋಂಕು ತಗಲಿರುವುದರ ಅರಿವಿಲ್ಲದೇ ಆ ದನದ ಹಾಲನ್ನು ಅಲ್ಲಿನ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಪಂಚಾಮೃತ ತಯಾರಿಸಲು ಬಳಸಲಾಗಿತ್ತು, ಇದು ಅಲ್ಲಿನವರ ಆತಂಕ ಇನ್ನಷ್ಟು ಹೆಚ್ಚಲು ಕಾರಣವಾಗಿತ್ತು. ಸುಮಾರು 200 ಜನರು ಈ ಹಾಲಿನಿಂದ ತಯಾರಿಸಿದ ಪಂಚಾಮೃತವನ್ನು ಸೇವಿಸಿದ್ದರು. ಈ ದನ ರೇಬಿಸ್ ಸೋಂಕಿಗೆ ಒಳಗಾಗಿ ಮೃತಪಟ್ಟ ಕೂಡಲೇ ಅಲ್ಲಿನ ಆರೋಗ್ಯ ಅಧಿಕಾರಿಗಳು, ಆ ದನದ ಹಾಲಿನಿಂದ ತಯಾರಿಸಿದ ಪಂಚಾಮೃತ ಸೇವಿಸಿದವರೆಲ್ಲರೂ ರೇಬಿಸ್ ನಿರೋಧಕ ಲಸಿಕೆ ಪಡೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ.
ಹಸುವಿಗೆ ಮೂರು ತಿಂಗಳ ಹಿಂದೆ ರೇಬಿಸ್ ಸೋಂಕು ತಗುಲಿತ್ತು. ನಾಯಿಯೊಂದು ಕಚ್ಚಿದ್ದ ವಿಚಾರವೂ ಇದೀಗ ಬೆಳಕಿಗೆ ಬಂದಿದೆ. ವರದಿಗಳ ಪ್ರಕಾರ ಈ ಎಲ್ಲ ಬೆಳವಣಿಗೆಗಳ ಬಳಿಕ ಸುಮಾರು 170 ಜನ ಗ್ರಾಮಸ್ಥರು ಈಗಾಗಲೇ ರೇಬಿಸ್ ಲಸಿಕೆಯ ಮೊದಲ ಡೋಸನ್ನು ಪಡೆದುಕೊಂಡಿದ್ದಾರೆ.
ಇದರ ಬೆನ್ನಲ್ಲೇ ಗ್ರೇಟರ್ ನೋಯ್ಡಾದಲ್ಲಿ ಮಹಿಳೆಯೊಬ್ಬರು ರೇಬಿಸ್ ಸೋಂಕು ಪೀಡಿತ ದನದ ಹಾಲನ್ನು ಸೇವಿಸಿದ ಬಳಿಕ ಕಳೆದ ಮಾರ್ಚ್‌ನಲ್ಲಿ ಸಾವಿಗೀಡಾದ ವಿಚಾರವೂ ಇದೀಗ ಬೆಳಕಿಗ ಬಂದಿದೆ. ಆದರೆ ಆ ಮಹಿಳೆ ಆ ಸೋಂಕಿತ ದನದ ಹಸಿ ಹಾಲನ್ನೇ ಸೇವಿಸಿದ್ದರೋ ಅಥವಾ ಪಾಶ್ಚರೀಕರಿಸಿದ ಹಾಲನ್ನು ಸೇವಿಸಿದ್ದರೋ ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಈ ಮಹಿಳೆಗೆ ರೇಬಿಸ್ ಸೋಂಕು ಆ ಹಾಲಿನ ಮೂಲಕವೇ ಹರಡಿತ್ತೇ ಎಂಬುದಕ್ಕೆ ಯಾವುದೇ ಅಧಿಕೃತ ಖಚಿತೆಯಾಗಲಿ ಅಥವಾ ವೈದ್ಯಕೀಯ ಪರೀಕ್ಷೆಗಳಾಗಲಿ ದೃಢಪಡಿಸಿಲ್ಲ.
ಆದರೆ ರೇಬಿಸ್ ಸೋಂಕು ಪೀಡಿತ ಹಸುವಿನ ಹಸಿ ಹಾಲನ್ನು ಸೇವಿಸಿ ಮೃತಪಟ್ಟ ಕೆಲವೊಂದು ಪ್ರಕರಣಗಳು ಈ ಹಿಂದೆ ನಡೆದಿರುವದನ್ನು ವರದಿಗಳು ಖಚಿತಪಡಿಸಿವೆ. ಯುಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಆಂಡ್ ಪ್ರಿವೆನ್ಷನ್ (ಸಿಡಿಸಿ)ಯ ಅಧಿಕೃತ ವೆಬ್ ಸೈಟ್ ನಲ್ಲಿ 1999ರ ಮಾರ್ಚ್ ನಲ್ಲಿ ಪ್ರಕಟಗೊಂಡಿರುವ ವರದಿಗಳ ಪ್ರಕಾರ, ಮ್ಯಾಶುಚೇಟ್‌ನಲ್ಲಿ ವರದಿಯಾಗಿರುವ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ, 1996ರಲ್ಲಿ ಮತ್ತು 1998ರಲ್ಲಿ ರೇಬಿಸ್ ಸೋಂಕು ಪೀಡಿತ ದನದ ಹಾಲನ್ನು ಹಲವರು ಸೇವಿಸಿದ್ದರು. ಅದರಲ್ಲಿ 1996ರ ಘಟನೆಯಲ್ಲಿ ಪಾಶ್ಚರೀಕರಿಸದ ಹಾಲನ್ನು ಸೇವಿಸಿದ 66 ಜನ ಮತ್ತು 1998ರಲ್ಲಿ ಇದೇ ರೀತಿಯ ಹಾಲನ್ನು ಸೇವಿಸಿದ್ದ 14 ಜನರು ಸಾವನ್ನಪ್ಪಿದ್ದರು.
1999ರಲ್ಲಿ ಈ ವರದಿ ಪ್ರಕಟಗೊಳ್ಳುವ ಸಂದರ್ಭದಲ್ಲಿ, 1990ರಿಂದ ಸರಾಸರಿ 150 ರೇಬಿಸ್ ಪೀಡಿತ ಹಸುಗಳು ಅಮೆರಿಕಾದಲ್ಲಿ ಸಿಡಿಸಿಯಲ್ಲಿ ವಾರ್ಷಿಕವಾಗಿ ವರದಿಯಾಗುತ್ತಿದ್ದವು. ಆದರೆ ಈ ಎರಡೂ ಪ್ರಕರಣಗಳ ವರದಿಯಲ್ಲಿ ಸೋಂಕುಪೀಡಿತ ದನಗಳ ಹಾಲು ಮತ್ತು ಸ್ತನ ಭಾಗದ ಕೋಶಗಳನ್ನು ಪರೀಕ್ಷೆಗೆ ಒಳಪಡಿಸಲಾಗಿರಲಿಲ್ಲ. ಆದರೆ, ‘ಪಾಶ್ಚರೀಕರಿಸದ ಹಾಲಿನ ಮೂಲಕ ರೇಬಿಸ್ ಸೋಂಕು ಹರಡುವ ಸಾಧ್ಯತೆಗಳಿವೆ’ ಎಂದು ಆ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.
ಮಾತ್ರವಲ್ಲದೇ ಹಾಲಿನಲ್ಲಿರಬಹುದಾದ ವೈವಿಧ್ಯಮಯ ರೇಬಿಸ್ ವೈರಸ್ ಗಳ ಸಂಖ್ಯೆಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ, ಇಂತಹ ಸೋಂಕಿತ ದನಗಳ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸರಿಯಾದ ರೀತಿಯಲ್ಲಿ ಪಾಶ್ಚರೀಕರಿಸಿದರೆ ಈ ರೀತಿಯಾಗಿ ಸೋಂಕು ಹರಡುವಿಕೆಯ ಸಂಭವನೀಯತೆಯನ್ನು ತಪ್ಪಿಸಬಹುದು’ ಎಂದು ಆ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.
ಈ ಸುದ್ದಿಯನ್ನು ಓದಿ; Viral News: ಗಾಯಗೊಂಡ ಮಗುವಿಗೆ ಫೆವಿಕ್ವಿಕ್ ಬಳಸಿ ಚಿಕಿತ್ಸೆ: ವೈದ್ಯರ ವಿರುದ್ಧ ದೂರು ದಾಖಲು
ಇದೇ ಮಾತನ್ನು ಇಂಟರ್ನಲ್ ಮೆಡಿಸಿನ್ ಸ್ಪೆಷಲಿಸ್ಟ್ ಡಾ. ಅನುಜ್ ತಿವಾರಿ ಇಂಡಿಯಾ ಟುಡೇ ಡಿಜಿಟಲ್ ಗೆ ಹೇಳಿದ್ದು, ‘ಪಾಶ್ಚರೀಕರಿಸಿದ ಹಾಲಿನಿಂದ ರೇಬಿಸ್ ಸೋಂಕು ಹರಡುವುದಿಲ್ಲ..’ ಎಂದು ಖಚಿತವಾಗಿ ಹೇಳಿದ್ದಾರೆ.
ಅದಾಗ್ಯೂ, ತೀವ್ರ ಮುನ್ನೆಚ್ಚರಿಕೆ ಕ್ರಮವಾಗಿ 1999ರ ಪ್ರಕರಣದಲ್ಲಿ ಆರೋಗ್ಯಾಧಿಕಾರಿಗಳು ಸೋಂಕಿತ ಹಸುಗಳ ಹಾಲನ್ನು ಸೇವಿಸಿದ್ದ ಎಲ್ಲರಿಗೂ ಪಿಇಪಿ ವ್ಯಾಕ್ಸಿನ್ ನೀಡಿದ್ದರು. ಮತ್ತು ಅದೇ ವಿಧಾನವನ್ನು ಗೋರಖ್‌ಪುರ ಪ್ರಕರಣದಲ್ಲೂ ಅನುಸರಿಸಲಾಗಿದೆ. 1999ರ ಸಿಡಿಸಿ ವರದಿಗಳ ಪ್ರಕಾರ, ಪಾಶ್ಚರೀಕರಿಸದ ಹಾಲಿನ ಮೂಲಕ ರೇಬಿಸ್ ವೈರಸ್ ಹರಡುವ ಸಾಧ್ಯತೆಗಳು ಇರುವುದು ಹೌದಾದರೂ ಇದುವರೆಗೆ ಯಾವುದೇ ಪ್ರಕರಣಗಳು ಸಾಬೀತಾಗಿಲ್ಲ ಎಂದು ಉಲ್ಲೇಖಿಸಲಾಗಿದೆ.