ನವದೆಹಲಿ, ಏ. 28: ಬಿಜೆಪಿ (BJP) ಸೇರ್ಪಡೆಯಾದ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡ ರಾಘವ್ ಚಡ್ಡಾ (Raghav Chadha) ಅವರ ವಿರುದ್ಧ ಆಮ್ ಆದ್ಮಿ ಪಾರ್ಟಿ (Aam Aadmi Party) ಸೋಮವಾರ ತೀವ್ರ ವಾಗ್ದಾಳಿ ನಡೆಸಿದೆ. ಪಕ್ಷದ ಹಿರಿಯ ನಾಯಕ ಸೌರಭ್ ಭಾರದ್ವಾಜ್ ಮಾತನಾಡಿ, ಚಡ್ಡಾ ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ ಮತ್ತು ವೈಯಕ್ತಿಕ ಟೀಕೆಗಳಿಗೆ ಇಳಿದಿದ್ದಾರೆ ಎಂದು ಆರೋಪಿಸಿದ್ದಾರೆ.
“ಪಕ್ಷವು ನಿಮ್ಮನ್ನು ಸಂಸದರನ್ನಾಗಿ ಮಾಡಿದ್ದರಿಂದಲೇ ನೀವು ಮದುವೆಯಾಗಲು ಸಾಧ್ಯವಾಯಿತು. ಇಲ್ಲದಿದ್ದರೆ ಯಾರೂ ನಿಮ್ಮನ್ನು ಕೇಳುತ್ತಿರಲಿಲ್ಲ” ಎಂದು ಭಾರದ್ವಾಜ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ರಾಜಕೀಯವನ್ನು ಉದ್ಯೋಗ ಬದಲಾವಣೆಗೆ ಹೋಲಿಸಿದ ಚಡ್ಡಾ ವಾದವನ್ನು ತಳ್ಳಿ ಹಾಕಿದ ಅವರು, ಕಂಪನಿ ಬದಲಾಯಿಸುವುದು ಮತ್ತು ಸಿದ್ಧಾಂತದ ಆಧಾರದ ಮೇಲೆ ಪಕ್ಷ ಬದಲಿಸುವುದು ಒಂದೇ ಅಲ್ಲ ಎಂದು ಗುಡುಗಿದ್ದಾರೆ. ಚಡ್ಡಾ ಕಳೆದ ಒಂದು ವರ್ಷದಿಂದ ಬಿಜೆಪಿಯೊಂದಿಗೆ ಸೇರಿ ಪಕ್ಷದ ವಿರುದ್ಧ ಪಿತೂರಿ ನಡೆಸುತ್ತಿದ್ದರು ಎಂದು ಭಾರದ್ವಾಜ್ ಆರೋಪಿಸಿದರು. ವಿಮಾನ ನಿಲ್ದಾಣದ ಮಾರಾಟಗಾರರು ಮತ್ತು ಗಿಗ್ ವರ್ಕರ್ಸ್‌ನಂತಹ ಮಧ್ಯಮ ವರ್ಗದ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಎತ್ತಿ ಜನಪ್ರಿಯತೆ ಗಳಿಸಲು ಕೇಂದ್ರ ಸರ್ಕಾರವೇ ಅವರಿಗೆ ಸಹಾಯ ಮಾಡಿತ್ತು ಎಂದು ಅವರು ಪ್ರತಿಪಾದಿಸಿದ್ದಾರೆ.
ಬಿಜೆಪಿ ಸೇರಿದ ಮೇಲೆ 10 ಲಕ್ಷ ಫಾಲೋವರ್ಸ್ಗಳನ್ನು ಕಳೆದುಕೊಂಡ ರಾಘವ್ ಚಡ್ಡಾ
ಇತ್ತ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡ ರಾಘವ್ ಚಡ್ಡಾ, “ನಾನು ನನ್ನ ಯೌವನದ 15 ವರ್ಷಗಳನ್ನು ಬೆವರು ಮತ್ತು ರಕ್ತ ಸುರಿಸಿ ಈ ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ. ಆದರೆ ಈಗ ನಾನು ಸರಿಯಾದ ವ್ಯಕ್ತಿ, ತಪ್ಪು ಪಕ್ಷದಲ್ಲಿದ್ದೇನೆ ಎಂದು ಅನಿಸುತ್ತಿದೆ” ಎಂದಿದ್ದರು. ಕೇವಲ ಒಬ್ಬ ಸಂಸದನಲ್ಲ, ಬದಲಿಗೆ ಏಳು ಸಂಸದರು ಪಕ್ಷ ತೊರೆಯಲು ನಿರ್ಧರಿಸಿದ್ದಾರೆ ಎಂದರೆ ಒಬ್ಬರು ತಪ್ಪಿರಬಹುದು, ಆದರೆ ಎಲ್ಲರೂ ತಪ್ಪು ಮಾಡಲು ಸಾಧ್ಯವಿಲ್ಲ ಎಂದು ಅವರು ಮಾರ್ಮಿಕವಾಗಿ ನುಡಿದಿದ್ದರು.
ಭಯದಿಂದಲ್ಲ, ಬದಲಿಗೆ ಪಕ್ಷದ ಮೇಲಿನ ಅಸಮಾಧಾನ ಮತ್ತು ಬೇಸರದಿಂದ ಹೊರ ಬಂದಿರುವುದಾಗಿ ಚಡ್ಡಾ ತಿಳಿಸಿದ್ದಾರೆ. ಈ ರಾಜಕೀಯ ಕಿತ್ತಾಟ ಈಗ ಸಾಮಾಜಿಕ ಜಾಲತಾಣಗಳಲ್ಲೂ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ಚಡ್ಡಾ ಅವರ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆಯಲ್ಲಿ ಭಾರಿ ಕುಸಿತ ಕಂಡುಬಂದಿದೆ. ಬಿಜೆಪಿ ಮತ್ತು ಆಪ್ ನಡುವಿನ ಈ ಸಂಘರ್ಷ ಈಗ ದೆಹಲಿ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದೆ.