ನವದೆಹಲಿ, ಜು. 22: ವಿದ್ಯಾರ್ಥಿಗಳ ಪ್ರತಿಭಟನೆ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ತಮ್ಮ ವಾಗ್ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi), "ವಿದ್ಯಾರ್ಥಿಗಳು ನ್ಯಾಯಯುತ ಕಾರಣಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದರೆ, ಸರ್ಕಾರ ಅವರ ಮೇಲೆ ದೌರ್ಜನ್ಯ ಎಸಗುತ್ತಿದೆ" ಎಂದು ಬುಧವಾರ ಕಿಡಿಕಾರಿದ್ದಾರೆ. ದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಸ್ತುತ ಆಡಳಿತಾವಧಿಯಲ್ಲಿ ದೇಶದ ಶಿಕ್ಷಣ ವ್ಯವಸ್ಥೆಯು ಸಂಪೂರ್ಣವಾಗಿ ಅಕ್ರಮ ಮತ್ತು ದುರುಪಯೋಗಕ್ಕೆ ಒಳಗಾಗಿದೆ ಎಂದು ಆರೋಪಿಸಿದರು.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಭ್ರಷ್ಟ ಮತ್ತು ಅಸಮರ್ಥ ಎಂದು ಕರೆದ ರಾಹುಲ್ ಗಾಂಧಿ, ಅವರು ತಕ್ಷಣವೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ಪುನರುಚ್ಚರಿಸಿದರು.
ರಾಹುಲ್ ಗಾಂಧಿ ಮಾತು:
"ವಿದ್ಯಾರ್ಥಿಗಳು ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ಇದು ಅತ್ಯಂತ ನ್ಯಾಯಯುತ ಬೇಡಿಕೆ. ಪ್ರಧಾನ್ ಈ ಎಲ್ಲ ಗೊಂದಲಗಳಿಗೆ ಕಾರಣವಾಗಿದ್ದು, ದೇಶದ ಅತಿದೊಡ್ಡ ಆಸ್ತಿಯಾಗಿದ್ದ ಶಿಕ್ಷಣ ವ್ಯವಸ್ಥೆಯನ್ನು ನಾಶಪಡಿಸಿದ್ದಾರೆ. ಅವರನ್ನು ತಕ್ಷಣ ಹುದ್ದೆಯಿಂದ ವಜಾಗೊಳಿಸಬೇಕು," ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯ ಪ್ರಮುಖ ಅಂಶಗಳು
10 ವರ್ಷಗಳಲ್ಲಿ 152 ಪಶ್ನೆಪತ್ರಿಕೆ ಸೋರಿಕೆ: ''ಕಳೆದ 10 ವರ್ಷಗಳಲ್ಲಿ ಕನಿಷ್ಠ 152 ಪಶ್ನೆಪತ್ರಿಕೆಗಳು ಸೋರಿಕೆಯಾಗಿವೆ. ಅಂದರೆ ಸರಾಸರಿ ತಿಂಗಳಿಗೆ ಒಂದರಂತೆ ಸೋರಿಕೆಯಾಗಿದೆ. ಇದರಿಂದ ಕೋಟ್ಯಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗಿದೆ. ಇಷ್ಟೆಲ್ಲ ಪಶ್ನೆಪತ್ರಿಕೆಗಳು ಸೋರಿಕೆಯಾಗಿದ್ದರೂ, ಕಳೆದ 10 ವರ್ಷಗಳಲ್ಲಿ ಪೇಪರ್ ಲೀಕ್ ಪ್ರಕರಣಗಳಲ್ಲಿ ಭಾಗಿಯಾದ ಒಬ್ಬರಿಗೂ ಶಿಕ್ಷೆಯಾಗಿಲ್ಲ'' ಎಂದು ರಾಹುಲ್ ಕಿಡಿಕಾರಿದರು.
ಖಾಸಗಿ ಕೋಚಿಂಗ್ ಮಾಫಿಯಾ: ''ನೀಟ್ ಪರೀಕ್ಷೆಗೆ ಸಿದ್ಧತೆಯಾಗುವ ವಿದ್ಯಾರ್ಥಿಗಳ ವಾರ್ಷಿಕ ಕೋಚಿಂಗ್ ವೆಚ್ಚ ಸುಮಾರು ₹1.32 ಲಕ್ಷ ಕೋಟಿಯಷ್ಟಿದೆ. ಇದು ದೇಶದ ಒಟ್ಟು ಶಿಕ್ಷಣ ಬಜೆಟ್ ಆದ ₹1.4 ಲಕ್ಷ ಕೋಟಿಗೆ ಸರಿಸಮನಾಗಿದೆ. ಈ ವ್ಯವಸ್ಥೆಯು ಬಡವರು ಮತ್ತು ಮಧ್ಯಮ ವರ್ಗದವರನ್ನು ಶಿಕ್ಷಣದಿಂದ ಹೊರಗಿಟ್ಟು, ಕೇವಲ ಶ್ರೀಮಂತರಿಗೆ ಮಾತ್ರವೇ ಸೀಮಿತವಾಗಿದೆ'' ಎಂದರು.
ನೀಟ್ ಪರೀಕ್ಷಾ ಅಕ್ರಮ ಆಧರಿಸಿ ಜೀ5ನಲ್ಲಿ ಹೊಸ ವೆಬ್ ಸರಣಿ
ಪ್ರಧಾನಿ ಕ್ಷಮೆಯಾಚನೆಗೆ ಆಗ್ರಹ: ʼʼಸೋಮವಾರ ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಈ ದೌರ್ಜನ್ಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳ ಕ್ಷಮೆಯಾಚಿಸಬೇಕುʼʼ ಎಂದು ಆಗ್ರಹಿಸಿದರು.
ನನ್ನ ಮೇಲಿನ ದಾಳಿಗೆ ಹೆದರುವುದಿಲ್ಲ
ಪ್ರಧಾನಿ ನಿವಾಸದ ಮುಂಭಾಗ ನಡೆದ ಧರಣಿಯ ವೇಳೆ ಪೊಲೀಸರು ತಮ್ಮನ್ನು ಬಲವಂತವಾಗಿ ತೆರವುಗೊಳಿಸಿದ ಘಟನೆಯ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಹುಲ್ ಗಾಂಧಿ, "ಕೆಲವು ಏಟುಗಳು ಅಥವಾ ನನ್ನನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದು ನನಗೆ ಮುಖ್ಯವಲ್ಲ. ವಿದ್ಯಾರ್ಥಿಗಳ ಧ್ವನಿಯಾಗಲು ಸಿಕ್ಕ ಅವಕಾಶವೇ ನನಗೆ ಗೌರವ. ನನ್ನ ವೈಯಕ್ತಿಕ ವಿಚಾರಗಳಿಗಿಂತ ವಿದ್ಯಾರ್ಥಿಗಳ ಬೇಡಿಕೆಗಳು ಮತ್ತು ಅವರ ಭವಿಷ್ಯವೇ ಮುಖ್ಯ" ಎಂದು ಹೇಳಿದರು.