ನವದೆಹಲಿ, ಜು. 29: ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಸಂಬಂಧಿಸಿದ ಹೊಸ ಕಾನೂನು ಕುರಿತು ಲೋಕಸಭೆ (Lok Sabha)ಯಲ್ಲಿ ನಡೆದ ಚರ್ಚೆ ವೇಳೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಬಳಸಿದ ಅಸಂಸದೀಯ ಪದ ಭಾರಿ ವಿವಾದಕ್ಕೆ ಕಾರಣವಾಯಿತು. ಅವರ ಹೇಳಿಕೆಗೆ ಆಡಳಿತ ಪಕ್ಷದ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಸದನದಲ್ಲಿ ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಯಿತು.
ಭಾಷಣ ಆರಂಭಿಸಿದ ರಾಹುಲ್ ಗಾಂಧಿ, ʼವಿದ್ಯಾರ್ಥಿಗಳುʼ ಮತ್ತು ʼಇತರರುʼ ಎಂಬ ಎರಡು ವರ್ಗಗಳ ಬಗ್ಗೆ ಮಾತನಾಡಿದರು. ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದವನ್ನು ಉಲ್ಲೇಖಿಸಿದ ಅವರು, ಸತ್ಯ ಮತ್ತು ಜ್ಞಾನವನ್ನು ಹುಡುಕುವವರು ನಿಜವಾದ ವಿದ್ಯಾರ್ಥಿಗಳಾಗಿದ್ದರೆ, ತಮಗೆ ಎಲ್ಲವೂ ಗೊತ್ತಿದೆ ಎಂದು ಭಾವಿಸುವವರು ಮತ್ತೊಂದು ವರ್ಗ ಎಂದು ಹೇಳಿ, ಆ ವರ್ಗವನ್ನು ಉಲ್ಲೇಖಿಸಲು ಅಸಂಸದೀಯ ಪದವೊಂದನ್ನು ಬಳಸಿದರು. ಈ ಪದವನ್ನು ಅವರು ಪದೇ ಪದೆ ಬಳಸುತ್ತಿದ್ದಂತೆ ಆಡಳಿತ ಪಕ್ಷದ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು.
ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮಧ್ಯಪ್ರವೇಶಿಸಿ, ಆ ಪದದ ಬಳಕೆಯನ್ನು ತಕ್ಷಣ ನಿಲ್ಲಿಸುವಂತೆ ರಾಹುಲ್ ಗಾಂಧಿ ಅವರಿಗೆ ಸೂಚಿಸಿದರು. ಎನ್‌ಡಿಎ ಸದಸ್ಯರೂ ಪ್ರತಿಭಟನೆ ನಡೆಸಿದ್ದು, ಬಳಿಕ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಆ ಪದವನ್ನು ಬಳಸಬಾರದು ಎಂದು ಮನವಿ ಮಾಡಿದರು. ನಂತರ ಲೋಕಸಭಾಧ್ಯಕ್ಷ ಓಂ ಬಿರ್ಲಾ ಆ ಪದವನ್ನು ಸದನದ ಕಲಾಪದ ದಾಖಲೆಗಳಿಂದ ತೆಗೆದುಹಾಕುವಂತೆ ಆದೇಶಿಸಿದರು.
ಬಳಿಕ ರಾಹುಲ್ ಗಾಂಧಿ, ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ಆರ್‌ಎಸ್‌ಎಸ್ ಹಾಳು ಮಾಡುತ್ತಿದೆ ಎಂದು ಆರೋಪಿಸಿದರು. "ಶಿಕ್ಷಣ ಸಚಿವಾಲಯವನ್ನು ಸಚಿವರು ನಡೆಸುತ್ತಿಲ್ಲ, ಆರ್‌ಎಸ್‌ಎಸ್ ನಡೆಸುತ್ತಿದೆ. ವಿದ್ಯಾರ್ಥಿಗಳು ಜ್ಞಾನ ಮತ್ತು ಸತ್ಯವನ್ನು ಅರಿಯದಂತೆ ತಡೆಯಲಾಗುತ್ತಿದೆ. ತಮ್ಮದೇ ಇತಿಹಾಸದ ಕಲ್ಪನೆಗಳನ್ನು ವಿದ್ಯಾರ್ಥಿಗಳ ಮೇಲೆ ಹೇರಲಾಗುತ್ತಿದೆ" ಎಂದು ಅವರು ಹೇಳಿದರು. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕೇವಲ ಸಂಕೇತ ಮಾತ್ರ, ವಿದ್ಯಾರ್ಥಿಗಳ ನಿಜವಾದ ಶತ್ರು ಆರ್‌ಎಸ್‌ಎಸ್ ಎಂದು ಆರೋಪಿಸಿದರು.
10 ವರ್ಷ ಜೈಲು, 10 ಕೋಟಿ ರುಪಾಯಿ ದಂಡ; ಕೇಂದ್ರ ಮಂಡಿಸಿದ ಪ್ರಶ್ನೆಪತ್ರಿಕೆ ಸೋರಿಕೆ ತಡೆ ಮಸೂದೆಯಲ್ಲಿ ಏನಿದೆ?
ಇದೇ ವೇಳೆ ಜುಲೈ 20ರಂದು ವಿದ್ಯಾರ್ಥಿಗಳ ಪ್ರತಿಭಟನೆಯ ವೇಳೆ ನಡೆದ ಪೊಲೀಸ್ ಕ್ರಮವನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧವೂ ಆರೋಪ ಮಾಡಿದರು. ವಿದ್ಯಾರ್ಥಿಗಳ ಮೇಲಿನ ಬಲಪ್ರಯೋಗಕ್ಕೆ ಅಮಿತ್ ಶಾ ಆದೇಶ ನೀಡಿದ್ದರು ಎಂದು ಅವರು ಹೇಳಿದ್ದು, ಇದಕ್ಕೂ ಆಡಳಿತ ಪಕ್ಷದ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಈ ಆರೋಪಗಳಿಗೆ ತಕ್ಷಣ ಪ್ರತಿಕ್ರಿಯಿಸಿದ ಕಿರಣ್ ರಿಜಿಜು, "ಅಮಿತ್ ಶಾ ದಾಳಿ ನಡೆಸಲು ಆದೇಶ ನೀಡಿದ್ದಾರೆ ಎಂಬುದಕ್ಕೆ ನಿಮ್ಮ ಬಳಿ ಯಾವ ಸಾಕ್ಷಿಯಿದೆ? ಪ್ರತಿಪಕ್ಷ ನಾಯಕರು ಯಾವುದೇ ದಾಖಲೆಗಳಿಲ್ಲದೆ ಇಂತಹ ಗಂಭೀರ ಆರೋಪಗಳನ್ನು ಮಾಡಬಾರದು. ತಮ್ಮ ಹೇಳಿಕೆಯನ್ನು ಹಿಂಪಡೆದು ಕ್ಷಮೆಯಾಚಿಸಬೇಕು" ಎಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ವಿದ್ಯಾರ್ಥಿಗಳ ಮೇಲೆ ನಡೆದ ಬಲಪ್ರಯೋಗಕ್ಕೆ ಅನುಮತಿ ನೀಡುವ ಅಧಿಕಾರ ಗೃಹ ಸಚಿವರಿಗಷ್ಟೇ ಇದೆ ಎಂದು ಪುನರುಚ್ಚರಿಸಿದರು. ಈ ಹೇಳಿಕೆಯಿಂದ ಸದನದಲ್ಲಿ ಮತ್ತೆ ಗದ್ದಲ ಉಂಟಾಯಿತು.
ಈ ವೇಳೆ ಲೋಕಸಭಾಧ್ಯಕ್ಷ ಓಂ ಬಿರ್ಲಾ ಮಧ್ಯಪ್ರವೇಶಿಸಿ, ಯಾವುದೇ ಸಚಿವರ ವಿರುದ್ಧ ದಾಖಲೆ ಅಥವಾ ಸಾಕ್ಷ್ಯಾಧಾರಗಳಿಲ್ಲದೆ ಆರೋಪಗಳನ್ನು ಮಾಡಬಾರದು ಎಂದು ರಾಹುಲ್ ಗಾಂಧಿಗೆ ಮತ್ತೊಮ್ಮೆ ಸೂಚನೆ ನೀಡಿದರು. ಸದನದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ವಾಗ್ವಾದ ಮುಂದುವರಿದಿದ್ದು, ಪ್ರಶ್ನೆಪತ್ರಿಕೆ ಸೋರಿಕೆ ಕುರಿತ ಚರ್ಚೆ ರಾಜಕೀಯ ಆರೋಪ-ಪ್ರತ್ಯಾರೋಪಗಳ ಕೇಂದ್ರಬಿಂದುವಾಯಿತು.