ಲಖನೌ: ಉತ್ತರ ಪ್ರದೇಶದ ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇಯಲ್ಲಿ ಸೋಮವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರ ಬೆಂಗಾವಲು ವಾಹನ (Road Accident) ಅಪಘಾತಕ್ಕೀಡಾಗಿದೆ. ರಾಹುಲ್ ಗಾಂಧಿ ಅವರ ಬೆಂಗಾವಲು ಪಡೆಯ ಕೆಲವು ವಾಹನಗಳು ಪರಸ್ಪರ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ಬೆಂಗಾವಲು ಪಡೆಯ ವಾಹನಗಳು ತೀವ್ರವಾಗಿ ಹಾನಿಗೊಳಗಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಅದೃಷ್ಟವಶಾತ್, ಈ ಅಪಘಾತದಲ್ಲಿ ರಾಹುಲ್ ಗಾಂಧಿ ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ.
ಅಪಘಾತಕ್ಕೀಡಾದ ವಾಹನಗಳಲ್ಲಿದ್ದ ಕೆಲವೇ ಕೆಲವು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಭದ್ರತಾ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಡೆದ ನಂತರ ರಾಹುಲ್ ಗಾಂಧಿ ಅವರು ತಮ್ಮ ಪ್ರಯಾಣವನ್ನು ಮುಂದುವರಿಸಿದ್ದಾರೆ. 2018ರಲ್ಲಿ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯೊಂದರ ತೀರ್ಪು ಪ್ರಕಟವಾಗಲಿದ್ದ ಹಿನ್ನೆಲೆಯಲ್ಲಿ, ರಾಹುಲ್ ಗಾಂಧಿ ಅವರು ಸುಲ್ತಾನ್‌ಪುರದ ವಿಶೇಷ ಎಂಪಿ-ಎಮ್‌ಎಲ್‌ಎ ನ್ಯಾಯಾಲಯಕ್ಕೆ ಹಾಜರಾಗಲು ತೆರಳುತ್ತಿದ್ದರು.
ಏನಿದು ಪ್ರಕರಣ?
2018ರ ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ನಡೆದ ರ್ಯಾಲಿಯೊಂದರಲ್ಲಿ ರಾಹುಲ್ ಗಾಂಧಿ ಅವರು ಅಂದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ (ಪ್ರಸ್ತುತ ಕೇಂದ್ರ ಗೃಹ ಸಚಿವ) ಅಮಿತ್ ಶಾ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರು ಎಂದು ಆರೋಪಿಸಲಾಗಿತ್ತು. ಈ ಹೇಳಿಕೆ ಬಳಿಕ ಸುಲ್ತಾನ್‌ಪುರದ ಸ್ಥಳೀಯ ಬಿಜೆಪಿ ನಾಯಕ ಹಾಗೂ ಜಿಲ್ಲಾ ಸಹಕಾರಿ ಬ್ಯಾಂಕ್ ಮಾಜಿ ಅಧ್ಯಕ್ಷ ವಿಜಯ್ ಮಿಶ್ರಾ ಅವರು 2018ರ ಆಗಸ್ಟ್ 4 ರಂದು ರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ 2024ರ ಫೆಬ್ರವರಿಯಲ್ಲಿ ತಮ್ಮ 'ಭಾರತ್ ಜೋಡೋ ನ್ಯಾಯ್ ಯಾತ್ರೆ'ಯನ್ನು ಮಧ್ಯದಲ್ಲೇ ನಿಲ್ಲಿಸಿ ರಾಹುಲ್ ಗಾಂಧಿ ಅವರು ಸುಲ್ತಾನ್‌ಪುರ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದಿದ್ದರು. ವಿಶೇಷ ಎಂಪಿ-ಎಮ್‌ಎಲ್‌ಎ ನ್ಯಾಯಾಲಯದಲ್ಲಿ ಉಭಯ ಪಕ್ಷಗಳ ವಾದ-ಪ್ರತಿವಾದಗಳು ಅಕ್ಟೋಬರ್ 13ರಂದೇ ಪೂರ್ಣಗೊಂಡಿದ್ದವು. ವಿಶೇಷ ಮ್ಯಾಜಿಸ್ಟ್ರೇಟ್ ಶುಭಂ ವರ್ಮಾ ಅವರ ನ್ಯಾಯಾಲಯವು ಅಕ್ಟೋಬರ್ 26ರಂದು ಅಂತಿಮ ತೀರ್ಪು ಪ್ರಕಟಿಸಲು ದಿನಾಂಕ ನಿಗದಿಪಡಿಸಿತ್ತು. ಇದೇ ಕಾರಣಕ್ಕಾಗಿ ರಾಹುಲ್ ಗಾಂಧಿ ಅವರು ದೆಹಲಿಯಿಂದ ಲಕ್ನೋಗೆ ಬಂದು, ಅಲ್ಲಿಂದ ರಸ್ತೆ ಮಾರ್ಗವಾಗಿ ಸುಲ್ತಾನ್‌ಪುರ ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗಲು ತೆರಳುತ್ತಿದ್ದರು.