ಜೈಪುರ: ಆಪರೇಷನ್ ಸಿಂದೂರದ ಬಳಿಕ ದೇಶದ ಒಳಗೆ ಇರುವ ದ್ರೋಹಿಗಳನ್ನು (Spying for Pakistan) ಹುಡುಕಿ ಸೆರೆ ಹಿಡಿಯಲಾಗುತ್ತಿದೆ. ಪಾಕಿಸ್ತಾನದ ಐಎಸ್‌ಐ ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ರಾಜಸ್ಥಾನ ಸರ್ಕಾರಿ ಉದ್ಯೋಗಿಯೊಬ್ಬರನ್ನು ಜೈಸಲ್ಮೇರ್‌ನಲ್ಲಿ ಬಂಧಿಸಲಾಗಿದೆ. ಬಂಧಿತ ಉದ್ಯೋಗಿಯನ್ನು ಶಕುರ್ ಖಾನ್ ಮಂಗನಿಯಾರ್ ಎಂದು ಗುರುತಿಸಲಾಗಿದ್ದು, ಬಂಧಿತ ವ್ಯಕ್ತಿಯು ಜೈಸಲ್ಮೇರ್‌ನಲ್ಲಿರುವ ಆತನ ಕಚೇರಿಯಿಂದ ಮಾಹಿತಿ ಸೋರಿಕೆ ಮಾಡಿದ್ದ. ಸದ್ಯ ಆತನನ್ನು ಸಿಐಡಿ ಮತ್ತು ಗುಪ್ತಚರ ಸಂಸ್ಥೆಗಳ ಜಂಟಿ ತಂಡವು ವಶಕ್ಕೆ ಪಡೆದುಕೊಂಡಿದೆ. ರಾಜ್ಯದ ಉದ್ಯೋಗ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದ ಖಾನ್‌ನನ್ನು ಹೆಚ್ಚಿನ ವಿಚಾರಣೆಗಾಗಿ ಜೈಪುರಕ್ಕೆ ಸ್ಥಳಾಂತರಿಸುವ ಸಾಧ್ಯತೆ ಇದೆ.
ಗುಪ್ತಚರ ಮತ್ತು ಭದ್ರತಾ ಸಂಸ್ಥೆಗಳು ಜಂಟಿ ವಿಚಾರಣೆ ನಡೆಸಲಿವೆ. ಪ್ರಾಥಮಿಕ ತನಿಖೆಯಲ್ಲಿ ಪಾಕಿಸ್ತಾನಿ ಹೈಕಮಿಷನ್ ಜೊತೆ ಆತನ ಸಂಪರ್ಕವಿದೆ ಎಂದು ತಿಳಿದುಬಂದಿದೆ. ಆ ಉದ್ಯೋಗಿ ಪಾಕಿಸ್ತಾನ ಗಡಿಯ ಬಳಿಯ ಬರೋಡಾ ಗ್ರಾಮದ ಧನಿ ಮೂಲದವನಾಗಿದ್ದಾನೆ ಎಂದು ತಿಳಿದು ಬಂದಿದೆ. ವರದಿಗಳ ಪ್ರಕಾರ, ಅಧಿಕಾರಿಗಳು ಪಾಕಿಸ್ತಾನಕ್ಕೆ ಸಂಬಂಧಿಸಿದ ಹಲವಾರು ಫೋನ್ ಸಂಖ್ಯೆಗಳನ್ನು (+92 ರಿಂದ ಪ್ರಾರಂಭವಾಗುವ ಮೊಬೈಲ್ ಸಂಖ್ಯೆಗಳು) ಪತ್ತೆಹಚ್ಚಿದರು. ವಿಚಾರಣೆಯ ಸಮಯದಲ್ಲಿ ಖಾನ್ ಯಾವುದೇ ವಿಷಯಗಳನ್ನು ಹೇಳಿಲ್ಲ ಎಂದು ತಿಳಿದು ಬಂದಿದೆ. ಇತ್ತೀಚಿನ ವರ್ಷಗಳಲ್ಲಿ ಕನಿಷ್ಠ ಏಳು ಬಾರಿ ಪಾಕಿಸ್ತಾನಕ್ಕೆ ಪ್ರಯಾಣಿಸಿರುವುದಾಗಿ ಉದ್ಯೋಗಿ ಒಪ್ಪಿಕೊಂಡಿದ್ದಾನೆ.
ಆತನ ಅನುಮಾನಾಸ್ಪದ ಚಲನವಲನಗಳ ಬಗ್ಗೆ "ಉನ್ನತ ಪ್ರಧಾನ ಕಚೇರಿ"ಯಿಂದ ಮಾಹಿತಿ ಪಡೆದ ನಂತರ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆತನ ಫೋನ್‌ನಿಂದ ಸೇನೆಗೆ ಸಂಬಂಧಿಸಿದ ಯಾವುದೇ ನೇರ ಫೋಟೋಗಳು ಅಥವಾ ವೀಡಿಯೊಗಳು ಪತ್ತೆಯಾಗಿಲ್ಲವಾದರೂ, ಆ ವ್ಯಕ್ತಿ ತನ್ನ ಸಾಧನದಿಂದ ಹಲವಾರು ಫೈಲ್‌ಗಳನ್ನು ಅಳಿಸಿಹಾಕಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆತನ ಎರಡು ಬ್ಯಾಂಕ್ ಖಾತೆಗಳ ಮೇಲೂ ನಿಗಾ ಇಡಲಾಗಿದೆ.
ಈ ಸುದ್ದಿಯನ್ನೂ ಓದಿ: Pak Spy: ಪಾಕ್ ಪರ ಬೇಹುಗಾರಿಕೆ ನಡೆಸುತ್ತಿದ್ದ CRPF ಸಿಬ್ಬಂದಿ ಅರೆಸ್ಟ್; ಹಲವು ಶಾಕಿಂಗ್ ಸಂಗತಿ ಬಯಲು
ಹರಿಯಾಣಾದ ಹಿಸಾರ್‌ನ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಎಂಬುವವಳನ್ನು ಬಂಧಿಸಲಾಗಿತ್ತು. ಆಕೆ ಪಾಕ್ ಏಜೆಂಟ್‌ಗಳ ಜೊತೆಗೆ ನೇರ ಸಂಬಂಧವನ್ನು ಹೊಂದಿದ್ದಳು. ಇತ್ತೀಚೆಗೆ ಆಕೆಯ ಕೆಲ ವಿಡಿಯೋಗಳು ವೈರಲ್ ಆಗಿದ್ದು, ಆಕೆ ಹಲವು ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಳು ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಆಕೆಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.