ಬೆಂಗಳೂರು, ಏ. 18: ರಾಜ್ಯಸಭೆಯ ಕಾರ್ಯದರ್ಶಿಯಾಗಿ ಕನ್ನಡಿಗ ಡಾ. ಕೆ.ಎಸ್. ಸೋಮಶೇಖರ್ (Dr. K. S. Somashekhar) ಆಯ್ಕೆಯಾಗಿದ್ದಾರೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಮೂಲದ ಸೋಮಶೇಖರ್ ರಾಜ್ಯಸಭೆಯ ಇಂಟರ್‌ಪ್ರಿಟರ್ ಆಗಿ 1993ರಲ್ಲಿ ಸೇವೆ ಆರಂಭಿಸಿದ್ದರು. ಅದಾದ ಬಳಿಕ ಹೆಚ್ಚುವರಿ ಕಾರ್ಯದರ್ಶಿಯಾಗಿದ್ದರು. ಈ ಹುದ್ದೆಗೆ ಏರಿದ ಮೊದಲ ಕನ್ನಡಿಗ ಅಧಿಕಾರಿ ಎನ್ನುವ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಅಲ್ಲದೆ ಈ ಮೊದಲು ರಾಜ್ಯಸಭೆಯ ನಿರ್ದೇಶಕರಾಗಿದ್ದರು. ಇದೀಗ ಸೋಮಶೇಖರ್ ಅವರನ್ನು ರಾಜ್ಯಸಭೆಯ ಕಾರ್ಯದರ್ಶಿಯನ್ನಾಗಿ ನೇಮಿಸಿ ರಾಜ್ಯಸಭಾ ಅಧ್ಯಕ್ಷ ಸಿ.ಪಿ. ರಾಧಾಕೃಷ್ಣನ್ (C.P. Radhakrishnan) ಆದೇಶ ಹೊರಡಿಸಿದ್ದಾರೆ.
ಸೋಮಶೇಖರ್ ಕರ್ನಾಟಕ ಸರ್ಕಾರದಲ್ಲಿ ಹಲವು ಆಡಳಿತಾತ್ಮಕ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ ಮತ್ತು ಅಂತಾರಾಷ್ಟ್ರೀಯ ಸಂಸದೀಯ ವೇದಿಕೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಇಂಗ್ಲೆಂಡ್ ಮತ್ತು ಯುರೋಪಿಯನ್ ಒಕ್ಕೂಟದ ಸಂಸದೀಯ ವಿಶೇಷ ತರಬೇತಿಯನ್ನೂ ಪಡೆದಿದ್ದಾರೆ. ಅಲ್ಲದೆ ಜಿನೀವಾದಲ್ಲಿ ನಡೆದ ಅಂತರ್-ಸಂಸದೀಯ ಒಕ್ಕೂಟ (IPU) ಸಭೆಗಳಲ್ಲಿ ಭಾಗವಹಿಸಿದ್ದಾರೆ.
ಮಹಿಳಾ ಮೀಸಲಾತಿ ಮಸೂದೆಗೆ ನಮ್ಮ ವಿರೋಧವಿಲ್ಲ ಎಂದ ಸಿಎಂ ಸಿದ್ದರಾಮಯ್ಯ
ವಿವಿಧ ಭಾಷೆಗಳಲ್ಲಿ ಪ್ರಾವಿಣ್ಯ
ಡಾ. ಸೋಮಶೇಖರ್ ಸಾಹಿತ್ಯದಲ್ಲಿ ಡಾಕ್ಟರೇಟ್ ಪಡೆದಿದ್ದು, ಕನ್ನಡ ಜತೆಗೆ ಹಿಂದಿ, ಇಂಗ್ಲಿಷ್ ತೆಲುಗು ಮತ್ತು ತಮಿಳಿನಲ್ಲಿ ಪ್ರಾವಿಣ್ಯ ಹೊಂದಿದ್ದಾರೆ. ಸದ್ಯ ಅವರು ಕಾರ್ಯದರ್ಶಿ ಹುದ್ದೆಗೆ ಆಯ್ಕೆಯಾಗಿದ್ದು, ತಮ್ಮ ಅಪಾರ ಆಡಳಿತಾತ್ಮಕ ಮತ್ತು ಶೈಕ್ಷಣಿಕ ಅನುಭವ ಧಾರೆ ಎರೆಯಲಿದ್ದಾರೆ.
ರಾಜ್ಯಸಭೆಯ ಪ್ರಕಟಣೆ ಹೇಳಿದ್ದೇನು?
ರಾಜ್ಯಸಭೆಯ ಪ್ರಕಟಣೆ ಪ್ರಕಾರ, ಡಾ. ಸೋಮಶೇಖರ್ ಸಂಸದೀಯ ಕಾರ್ಯವಿಧಾನಗಳು, ಆಡಳಿತ ನಿರ್ವಹಣೆ ಮತ್ತು ವಿವಿಧ ಸಂಸದೀಯ ಸಮಿತಿಗಳ ಕಾರ್ಯನಿರ್ವಹಣೆಯಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಹೆಚ್ಚುವರಿಯಾಗಿ, ಅವರು ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಹಿರಿಯ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ ಮತ್ತು ಗಮನಾರ್ಹ ಅಂತಾರಾಷ್ಟ್ರೀಯ ಅನುಭವವನ್ನು ಹೊಂದಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.