ಲಖನೌ, ಜು. 2: ಅಯೋಧ್ಯೆ ರಾಮ ಮಂದಿರದ (Ram Mandir) ದೇಣಿಗೆ ಕಳವು ಪ್ರಕರಣದಲ್ಲಿ (Donation Theft Case) ಪ್ರತಿದಿನ ಹೊಸ ಮಾಹಿತಿಗಳು ಹೊರಬರುತ್ತಿವೆ. ಮೂಲಗಳ ಪ್ರಕಾರ, ರಾಮಮಂದಿರ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿರುವ ಚಂಪತ್ ರಾಯ್ ತಮ್ಮ ಆಪ್ತರೊಂದಿಗೆ ಮಾತನಾಡುವ ವೇಳೆ, ರಾಮಶಂಕರ್ ಯಾದವ್ ಅಲಿಯಾಸ್ ಟಿನ್ನು ಯಾದವ್ ಈ ಪ್ರಕರಣದಪ್ರಮುಖ ಸೂತ್ರಧಾರ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ, ಟಿನ್ನು ಯಾದವ್ ತನ್ನ ಮೇಲಿಟ್ಟಿದ್ದ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡು ದೇಣಿಗೆ ದುರ್ಬಳಕೆ ನಡೆಸಿದ್ದಾನೆ ಎಂದು ಚಂಪತ್ ರಾಯ್ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಂಧನದ ಭೀತಿ ಎದುರಾದಾಗ ಪ್ರಕರಣದ ಮಾಹಿತಿಯನ್ನು ಸಮಾಜವಾದಿ ಪಕ್ಷದ ನಾಯಕರೊಬ್ಬರಿಗೆ ಟಿನ್ನು ಯಾದವ್ ಸೋರಿಕೆ ಮಾಡಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.
ಟಿನ್ನು ಯಾದವ್ ಈ ಪ್ರಕರಣದಲ್ಲಿ ಬಂಧಿತನಾಗಿರುವ ಎಂಟು ಆರೋಪಿಗಳಲ್ಲಿ ಒಬ್ಬ ಉಳಿದ ಆರೋಪಿಗಳೆಂದರೆ ಅವಿನಾಶ್ ಶುಕ್ಲಾ, ಅನುಕಲ್ಪ್ ಮಿಶ್ರಾ, ಲವ್ ಕುಶ್ ಮಿಶ್ರಾ, ಮನೀಶ್ ಕುಮಾರ್ ಯಾದವ್, ಕರುಣೇಶ್ ಪಾಂಡೆ, ರಾಮಾಶಂಕರ್ ಮಿಶ್ರಾ ಹಾಗೂ ಸುಭಾಷ್ ಶ್ರೀವಾಸ್ತವ.
ಇತ್ತೀಚೆಗೆ ಪೊಲೀಸರು ಚಂಪತ್ ರಾಯ್ ಅವರ ಹೇಳಿಕೆಯನ್ನೂ ದಾಖಲಿಸಿಕೊಂಡಿದ್ದಾರೆ. ಅವರನ್ನು ಯಾವಾಗ, ಎಲ್ಲಿ ಹಾಗೂ ಎಷ್ಟು ಸಮಯ ವಿಚಾರಣೆ ನಡೆಸಲಾಗಿದೆ ಎಂಬ ಮಾಹಿತಿ ಬಹಿರಂಗವಾಗಿಲ್ಲ. ಆದರೆ ದೇಣಿಗೆ ದುರ್ಬಳಕೆಗೆ ಸಂಬಂಧಿಸಿದ ದಾಖಲೆಗಳು ಹಾಗೂ ಮಾಹಿತಿಯನ್ನು ಒದಗಿಸುವಂತೆ ಕೇಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣ ಭಾರಿ ಚರ್ಚೆಗೆ ಗ್ರಾಸವಾದ ನಂತರ ಜೂನ್ 27ರಂದು ಚಂಪತ್ ರೈ ರಾಮ ಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಟ್ರಸ್ಟ್ ಸದಸ್ಯ ಅನಿಲ್ ಮಿಶ್ರಾ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ಟಿನ್ನು ಯಾದವ್ ಮನೆಯಲ್ಲಿ ನಗದು ವಶ
ಮೂರು ದಿನಗಳ ಹಿಂದೆ ಪೊಲೀಸರು ಎಲ್ಲ ಆರೋಪಿಗಳ ನಿವಾಸಗಳಿಗೆ ಭೇಟಿ ನೀಡಿ ತನಿಖೆ ನಡೆಸಿದ್ದರು. ಈ ವೇಳೆ ಟಿನ್ನು ಯಾದವ್ ನಿವಾಸದಿಂದ ನಗದು ವಶಪಡಿಸಿಕೊಳ್ಳಲಾಗಿದೆ. ಟಿನ್ನು ಯಾದವ್‌ಗೆ ಭಕ್ತರು ಹುಂಡಿಗೆ ಹಾಕಿದ ದೇಣಿಗೆಯನ್ನು ಎಣಿಕೆ ಕೊಠಡಿಗೆ ಸಾಗಿಸುವ ಜವಾಬ್ದಾರಿ ನೀಡಲಾಗಿತ್ತು. ಇದೇ ಜವಾಬ್ದಾರಿಯನ್ನು ದುರುಪಯೋಗಪಡಿಸಿಕೊಂಡು ಬೆಲೆಬಾಳುವ ಕಾಣಿಕೆ ಹಾಗೂ ಹಣವನ್ನು ಅಕ್ರಮವಾಗಿ ಕಬಳಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ತನಿಖೆಯಲ್ಲಿ ಎಣಿಕೆ ಕೊಠಡಿಯ ಒಂದು ಕೀಲಿ ಟಿನ್ನು ಯಾದವ್ ಬಳಿ ಇದ್ದರೆ, ಮತ್ತೊಂದು ಕೀಲಿ ಬ್ಯಾಂಕ್ ಸಿಬ್ಬಂದಿ ಬಳಿ ಇತ್ತು ಎಂಬ ಮಾಹಿತಿ ಲಭ್ಯವಾಗಿದೆ. ಬ್ಯಾಂಕ್ ಸಿಬ್ಬಂದಿಯೊಂದಿಗೆ ಸೇರಿ ಹಣವನ್ನು ದುರ್ಬಳಕೆ ಮಾಡಿಕೊಂಡು ಪರಸ್ಪರ ಹಂಚಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ರಾಮಮಂದಿರ ದೇಣಿಗೆ ವಂಚನೆ: ಆರೋಪಿಗಳ ಬಹಿಷ್ಕಾರಕ್ಕೆ ವಕೀಲರ ನಿರ್ಧಾರ; ನೈತಿಕತೆ vs ಕಾನೂನು ಚರ್ಚೆ
ನೋಟಿನ ಕಂತೆಗಳೊಂದಿಗೆ ವೈರಲ್ ಆದ ಫೋಟೊ
ಈ ನಡುವೆ ಆರೋಪಿ ಅವಿನಾಶ್ ಶುಕ್ಲಾನ ಸಹೋದರ ಅಮಿತ್ ಶುಕ್ಲಾ ಕೈಯಲ್ಲಿ ನೋಟಿನ ಕಂತೆಗಳನ್ನು ಹಿಡಿದಿರುವ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಫೋಟೊದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಪೊಲೀಸರು ಮುಂದಾಗಿದ್ದು, ಅಗತ್ಯವಿದ್ದರೆ ಅಮಿತ್ ಶುಕ್ಲಾನನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ. ಈ ಫೋಟೊ ಕಳೆದ ವರ್ಷದ ಆಗಸ್ಟ್ ತಿಂಗಳದ್ದು ಎಂದು ಹೇಳಲಾಗುತ್ತಿದೆ.
₹ 89 ಲಕ್ಷ ನಗದು ವಶ
ಪೊಲೀಸರ ಪ್ರಕಾರ, ಆರೋಪಿ ಅವಿನಾಶ್ ಶುಕ್ಲಾ ನೀಡಿದ ಮಾಹಿತಿಯ ಆಧಾರದಲ್ಲಿ ಗರಿಷ್ಠ ₹ 89 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ಕೌಶಲ್ಪುರಿಯಲ್ಲಿರುವ ಅಡಗುತಾಣದಿಂದಲೂ ಹೆಚ್ಚಿನ ಪ್ರಮಾಣದ ನಗದು ಪತ್ತೆಯಾಗಿದೆ. ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯೋಗ ಕೇಂದ್ರದ ನಿರ್ವಾಹಕಿ ಸೀಮಾ ತಿವಾರಿ ಅವರ ಹೇಳಿಕೆಯಂತೆ, ಜೂನ್ 5ರಂದು ಪೊಲೀಸರು ದಾಳಿ ನಡೆಸಿ ನಾಲ್ಕು ಪೆಟ್ಟಿಗೆಗಳಿಂದ ದೊಡ್ಡ ಪ್ರಮಾಣದ ಹಣ ವಶಪಡಿಸಿಕೊಂಡಿದ್ದರು. ಈ ಪೆಟ್ಟಿಗೆಗಳು ಅವಿನಾಶ್ ಅವರ ಸಹೋದರ ಅಭಿಷೇಕ್‌ಗೆ ಸೇರಿದ್ದು ಎನ್ನಲಾಗಿದೆ. ಹಣವನ್ನು ಕಂಬಳಿಗಳೊಳಗೆ ಅಡಗಿಸಿಡಲಾಗಿದ್ದು, ಒಂದು ಪೆಟ್ಟಿಗೆಯ ಮೇಲೆ 'ರಾಮ ರಾಜ್ಯ ಕೋಶ' ಎಂದು ಬರೆಯಲಾಗಿತ್ತು.
ಸೀಮಾ ತಿವಾರಿ ಅವರ ಪ್ರಕಾರ, ಈ ಬಗ್ಗೆ ಪ್ರಶ್ನಿಸಿದಾಗ ಅಭಿಷೇಕ್, ತನ್ನ ಸಹೋದರ ಅವಿನಾಶ್ ಶುಕ್ಲಾ ಮಾದಕ ವಸ್ತುಗಳ ಅಕ್ರಮ ವ್ಯವಹಾರದಲ್ಲಿ ತೊಡಗಿದ್ದ ಕಾರಣದಿಂದಲೇ ಪೊಲೀಸರು ದಾಳಿ ನಡೆಸಿದ್ದಾರೆ ಎಂದು ಹೇಳಿದ್ದಾನೆ ಎನ್ನಲಾಗಿದೆ.
ಈ ಪ್ರಕರಣದ ತನಿಖೆ ಇನ್ನೂ ಮುಂದುವರಿದಿದ್ದು, ಆರೋಪಗಳು ತನಿಖೆಯ ಹಂತದಲ್ಲಿವೆ. ನ್ಯಾಯಾಲಯದಲ್ಲಿ ಆರೋಪ ಸಾಬೀತಾಗುವವರೆಗೆ ಎಲ್ಲ ಆರೋಪಿಗಳನ್ನೂ ಕಾನೂನು ಪ್ರಕಾರ ನಿರ್ದೋಷಿಗಳೆಂದು ಪರಿಗಣಿಸಲಾಗುತ್ತದೆ.