ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪ್ರಣಾಳಿಕೆಯಲ್ಲಿ ಮಾತ್ರ, ಕಾರ್ಯರೂಪದಲ್ಲಿ ಇಲ್ಲ; ರಾಮ ಸೇತುವನ್ನು ರಾಷ್ಟ್ರೀಯ ಪಾರಂಪರಿಕ ಸ್ಮಾರಕವನ್ನಾಗಿಸಲು ಪಕ್ಷಗಳಿಗೆ ನಿರಾಸಕ್ತಿ

Ram Setu: ಪೌರಾಣಿಕ ಕೃತಿ ʼರಾಮಾಯಣʼದಲ್ಲಿ ಬರುವ ರಾಮ ಸೇತುವನ್ನು ರಾಷ್ಟ್ರೀಯ ಪಾರಂಪರಿಕ ಸ್ಮಾರಕವನ್ನಾಗಿ ಘೋಷಿಸುವುದಾಗಿ ಚುನಾವಣೆ ವೇಳೆ ವಿವಿಧ ಪಕ್ಷಗಳು ಪ್ರಣಾಳಿಕೆಯಲ್ಲಿ ಹೇಳುತ್ತಿದ್ದರೂ, ಇದುವರೆಗೆ ಅಂತಹ ಯಾವುದೇ ಪ್ರಯತ್ನ ನಡೆದಿಲ್ಲ ಎನ್ನುವ ಸತ್ಯ ಇದೀಗ ಬಯಲಾಗಿದೆ. ಆರ್‌ಟಿಐ ಮೂಲಕ ಹೊರಬಿದ್ದ ಮಾಹಿತಿಯಲ್ಲಿ ರಾಮ ಸೇತು ಭಾರತೀಯ ಪುರಾತತ್ವ ಸಮೀಕ್ಷೆ ಅಡಿಯಲ್ಲಿ ರಕ್ಷಿಸ್ಪಟ್ಟಿಲ್ಲ ಎನ್ನುವುದು ಗೊತ್ತಾಗಿದೆ.

ರಾಮ ಸೇತು (ಸಂಗ್ರಹ ಚಿತ್ರ)

ದೆಹಲಿ, ಮಾ. 23: ಐತಿಹಾಸಿಕ, ಭಾರತೀಯ ಭವ್ಯ ಪರಂಪರೆಯ ಕೊಂಡಿ ರಾಮ ಸೇತುವನ್ನು (Ram Setu) ರಾಷ್ಟ್ರೀಯ ಪಾರಂಪರಿಕ ಸ್ಮಾರಕವನ್ನಾಗಿ (National Heritage) ಘೋಷಿಸುವುದಾಗಿ ಚುನಾವಣೆ ವೇಳೆ ವಿವಿಧ ಪಕ್ಷಗಳು ಪ್ರಣಾಳಿಕೆಯಲ್ಲಿ ಹೇಳುತ್ತಿದ್ದರೂ, ಇದುವರೆಗೆ ಅಂತಹ ಯಾವುದೇ ಪ್ರಯತ್ನ ನಡೆದಿಲ್ಲ ಎನ್ನುವ ಸತ್ಯ ಇದೀಗ ಬಯಲಾಗಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಆರ್‌ಟಿಐ ಮೂಲಕ ಹೊರಬಿದ್ದ ಮಾಹಿತಿಯಲ್ಲಿ ರಾಮ ಸೇತು ಭಾರತೀಯ ಪುರಾತತ್ವ ಸಮೀಕ್ಷೆ (ASI) ಅಡಿಯಲ್ಲಿ ರಕ್ಷಿಸ್ಪಟ್ಟಿಲ್ಲ ಎನ್ನುವುದು ಗೊತ್ತಾಗಿದೆ. ಅಲ್ಲದೆ ಅದನ್ನು ರಾಷ್ಟ್ರೀಯ ಪಾರಂಪರಿಕ ಸ್ಮಾರಕವನ್ನಾಗಿಸುವ ನಿಟ್ಟಿನಲ್ಲಿ ಯಾವುದೇ ಪ್ರಯತ್ನ ನಡೆಯುತ್ತಿಲ್ಲ ಎನ್ನುವ ಅಂಶವೂ ತಿಳಿದು ಬಂದಿದೆ. ಆ ಮೂಲಕ ಪಕ್ಷಗಳೆಲ್ಲ ರಾಮ ಸೇತುವನ್ನು ಕೇವಲ ಪ್ರಚಾರದ ವಸ್ತುವನ್ನಾಗಿ ನೋಡುತ್ತಿದೆ ಎನ್ನುವುದು ಸ್ಪಷ್ಟವಾದಂತಾಗಿದೆ.

ಎಎಸ್‌ಐಯ ಸ್ಮಾರಕ ವಿಭಾಗವು ನೀಡಿದ ಪ್ರತಿಕ್ರಿಯೆಯಲ್ಲಿ, ರಾಮಸೇತುವನ್ನು ರಾಷ್ಟ್ರೀಯ ಪಾರಂಪರಿಕ ಸ್ಮಾರಕವನ್ನಾಗಿ ರಕ್ಷಿಸಲಾಗುತ್ತಿಲ್ಲ ಮತ್ತು ಅಂತಹ ಯಾವುದೇ ಪ್ರಸ್ತಾವ ಬಾಕಿ ಇಲ್ಲ ಎಂದು ಹೇಳಿದೆ.

ಪೌರಾಣಿಕ ಮಹತ್ವ

ರಾಮ ಸೇತು ಭಾರತದ ಪವಿತ್ರ ಪುರಾಣ ಗ್ರಂಥ ʼರಾಮಾಯಣʼದೊಂದಿಗೆ ಸಂಬಂಧ ಹೊಂದಿದೆ. ವನವಾಸದಲ್ಲಿದ್ದ ರಾಮ ಮತ್ತು ಲಕ್ಷ್ಣಣರ ಕಣ್ತಪ್ಪಿಸಿ ರಾವಣ ಸೀತೆಯನ್ನು ಅಪಹರಿಸಿ ಶ್ರೀಲಂಕಾದಲ್ಲಿ ಬಚ್ಚಿಟ್ಟುಕೊಂಡಿದ್ದ. ಬಳಿಕ ರಾಮ ತನ್ನ ಸಹಚರರ ನೆರವಿನಿಂದ ಶ್ರೀಲಂಕಾಕ್ಕೆ ಸೇತುವೆ ನಿರ್ಮಿಸಿ ರಾವಣನನ್ನು ಕೊಂದು ಸೀತೆಯನ್ನು ಕರೆದುಕೊಂಡು ಬಂದ ಎನ್ನುತ್ತದೆ ʼರಾಮಾಯಣʼ. ಇಂತಹ ಪ್ರಮುಖ ಇತಿಹಾಸದ ಕೊಂಡಿಯನ್ನು ಸಂರಕ್ಷಿಸುವುದು ಅತ್ಯಗತ್ಯವಾಗಿದ್ದು, ರಾಜಕಾರಣಿಗಳು ಈ ನಿಟ್ಟಿನಲ್ಲಿ ಗಂಭೀರ ಪ್ರಯತ್ನವನ್ನೇ ನಡೆಸುತ್ತಿಲ್ಲ ಎನ್ನುವುದು ಇದೀಗ ಬೆಳಕಿಗೆ ಬಂದಿದೆ.

ನಳ ನೀಲರ ಸ್ಪರ್ಶದಿಂದ ತೇಲಿದ ರಾಮಸೇತುವಿನ ಕಲ್ಲುಗಳು

ಆಡಮ್ ಸೇತುವೆ ಎಂದೂ ಕರೆಯಲ್ಪಡುವ ರಾಮ ಸೇತು, ಭಾರತದ ರಾಮೇಶ್ವರಂ ಮತ್ತು ಶ್ರೀಲಂಕಾದ ಮನ್ನಾರ್ ದ್ವೀಪದ ನಡುವಿನ 48 ಕಿ.ಮೀ. ಉದ್ದದ ಸುಣ್ಣದ ಕಲ್ಲಿನ ಸರಪಳಿ. ಇದು ಮನ್ನಾರ್ ಕೊಲ್ಲಿಯನ್ನು ಪಾಕ್ ಕೊಲ್ಲಿಯಿಂದ ಬೇರ್ಪಡಿಸುತ್ತದೆ. ಹವಾಮಾನ ನಿಯಂತ್ರಿಸುವಲ್ಲಿಯೂ ಮುಖ್ಯ ಪಾತ್ರ ನಿರ್ವಹಿಸುತ್ತದೆ ಎನ್ನುವುದು ಸಂಶೋಧನೆಯಿಂದ ದೃಢಪಟ್ಟಿದೆ.

ಪ್ರಾಚೀನ ಸ್ಮಾರಕಗಳು, ಪುರಾತತ್ವ ತಾಣಗಳು ಮತ್ತು ಅವಶೇಷಗಳ ಕಾಯ್ದೆಯಡಿ ರಾಮಸೇತುವನ್ನು ಕೇಂದ್ರೀಯ ಸಂರಕ್ಷಿತ ಸ್ಮಾರಕವೆಂದು ಪರಿಗಣಿಸಲಾಗಿದೆಯೇ? ಈ ಬಗ್ಗೆ ಯಾವುದೇ ಗೆಜೆಟ್ ಅಧಿಸೂಚನೆ ಅಸ್ತಿತ್ವದಲ್ಲಿದೆಯೇ? ಮತ್ತು ಸೇತುವೆ ರಚನೆಯ ಕುರಿತು ಸಮೀಕ್ಷೆ, ತಜ್ಞರ ಸಮಿತಿಯ ಶಿಫಾರಸು ಅಥವಾ ವೈಜ್ಞಾನಿಕ ಅಧ್ಯಯನಗಳು ನಡೆದಿವೆಯೇ? ಎಂದು ಆರ್‌ಟಿಐ ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.

ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಲಭಿಸಿದ್ದು, ರಾಮ ಸೇತು ಸಂರಕ್ಷಿತ ಸ್ಮಾರಕವಾಗಿ ತನ್ನ ವ್ಯಾಪ್ತಿಗೆ ಬರುವುದಿಲ್ಲ ಮತ್ತು ಅಂತಹ ಸ್ಥಾನಮಾನವನ್ನು ನೀಡಲು ಯಾವುದೇ ಪ್ರಕ್ರಿಯೆ ನಡೆಯುತ್ತಿಲ್ಲ ಎಂದು ಎಎಸ್‌ಐ ಸ್ಪಷ್ಟಪಡಿಸಿದೆ.

ಪ್ರಣಾಳಿಕೆಯಲ್ಲಿ ಉಲ್ಲೇಖ

2009ರ ಲೋಕಸಭಾ ಚುನಾವಣೆ ವೇಳೆ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ರಾಮ ಸೇತುವನ್ನು ʼನಮ್ಮ ರಾಷ್ಟ್ರೀಯ ಪರಂಪರೆʼ ಎಂದು ಬಣ್ಣಿಸಿತ್ತು. ಅದರ ಧಾರ್ಮಿಕ ಮಹತ್ವವನ್ನು ಎತ್ತಿ ತೋರಿಸುವ ಜತೆಗೆ ಥೋರಿಯಂ ನಿಕ್ಷೇಪಗಳು ಮತ್ತು ಇಂಧನ ಸುರಕ್ಷತೆಯಂತಹ ವಿಚಾರವನ್ನು ಪ್ರಸ್ತಾವಿಸಿತ್ತು. ಸೇತುವನ್ನು ಸಂರಕ್ಷಿಸಲು ಯೋಜನೆ ರೂಪಿಸುವುದಾಗಿಯೂ ಹೇಳಿತ್ತು.

ರಾಮ ಸೇತು ಭಾರತದ ಸಾಂಸ್ಕೃತಿಕ ಪರಂಪರೆಯ ಭಾಗ ಎಂದು ಪಕ್ಷ 2014ರ ತನ್ನ ಪ್ರಣಾಳಿಕೆಯಲ್ಲಿ ಪುನರುಚ್ಚರಿಸಿತ್ತು. ಆದರೆ ಇದುವರೆಗೆ ಈ ನಿಟ್ಟಿನಲ್ಲಿ ಪ್ರಯತ್ನ ನಡೆದಿರುವ ಬಗ್ಗೆ ಯಾವುದೇ ಸೂಚನೆ ಸಿಕ್ಕಿಲ್ಲ ಎಂದು ವರದಿ ತಿಳಿಸಿದೆ. ಅದಾಗ್ಯೂ ಈ ವಿಚಾರವನ್ನು ಸಂಸತ್ತಿನಲ್ಲಿಯೂ ಚರ್ಚಿಸಲಾಗಿದೆ. 2022ರ ಡಿಸೆಂಬರ್ 23ರಂದು ರಾಜ್ಯಸಭೆಯ ಸ್ವತಂತ್ರ ಸಂಸದ ಕಾರ್ತಿಕೇಯ ಶರ್ಮಾ ರಾಮಸೇತುವಿಗೆ ಸಂಬಂಧಿಸಿದ ವೈಜ್ಞಾನಿಕ ಸಂಶೋಧನೆಯ ಕುರಿತು ಮತ್ತು ಅದನ್ನು ಭಾರತದ ಐತಿಹಾಸಿಕ ಪರಂಪರೆಯ ಭಾಗವಾಗಿ ಅಧ್ಯಯನ ಮಾಡಲು ಪ್ರಯತ್ನಗಳು ನಡೆಯುತ್ತಿವೆಯೇ ಎಂಬ ಬಗ್ಗೆ ವಿವರ ಕೋರಿದ್ದರು.

ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಜಿತೇಂದ್ರ ಸಿಂಗ್, ರಾಮ ಸೇತು ರಚನೆಯ ನಿಖರ ಸ್ವರೂಪ ಮತ್ತು ಮೂಲವನ್ನು ನಿರ್ಧರಿಸುವಲ್ಲಿ ಮಿತಿಗಳಿವೆ ಎಂದು ಉತ್ತರಿಸಿದ್ದರು.

ಮೋದಿ ಸರ್ಕಾರದಿಂದ ನಾರಿಯರಿಗೆ ಬಂಪರ್‌ ಆಫರ್‌; ಶೀಘ್ರದಲ್ಲೇ ಮಹಿಳಾ ಮೀಸಲಾತಿ ಕಾಯ್ದೆ ಜಾರಿಗೆ ನಿರ್ಧಾರ

ಸುಪ್ರೀಂ ಕೋರ್ಟ್‌ ಅಂಗಳದಲ್ಲಿ...

ಪ್ರಾಚೀನ ಸ್ಮಾರಕ ಮತ್ತು ಪುರಾತತ್ತ್ವ ಸ್ಥಳಗಳು ಹಾಗೂ ಅವಶೇಷಗಳ ಕಾಯಿದೆ- 1958ರ ಅಡಿ ರಾಷ್ಟ್ರೀಯ ಮಹತ್ವದ ಸ್ಮಾರಕವೆಂದು ರಾಮ ಸೇತುವನ್ನು ಘೋಷಿಸಬೇಕು ಎಂಬ ಕುರಿತು ನಿರ್ಧಾರ ತೆಗೆದುಕೊಳ್ಳುವಂತೆ ಕೋರಿ ಬಿಜೆಪಿ ನಾಯಕ ಮಾಜಿ ಸಂಸದ ಸುಬ್ರಮಣಿಯನ್‌ ಸ್ವಾಮಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕಳೆದ ವರ್ಷ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿತ್ತು.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author