ಲಖನೌ, ಜು. 6: ವಿವಾದಗಳ ಮೂಲಕ ಸದ್ದು ಮಾಡಿದ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ (Champat Rai) ಅವರ ರಾಜೀನಾಮೆಯನ್ನು ಅಂಗೀಕಾರಗೊಂಡಿದೆ. ವಿಶ್ವ ಹಿಂದೂ ಪರಿಷತ್ (VHP) ಅಂತಾರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಜರಂಗ್ ಬಾಗ್ರಾ (Bajrang Bagra) ಅವರನ್ನು ಉತ್ತರಾಧಿಕಾರಿಯಾಗಿ ನೇಮಿಸಲಾಗಿದೆ. ಪವಿತ್ರ ದೇಗುಲದಲ್ಲಿ ದೇಣಿಗೆ ದುರುಪಯೋಗದ ಆರೋಪದ ಕುರಿತು ನಡೆಯುತ್ತಿರುವ ವಿವಾದದ ಮಧ್ಯೆ ಅಯೋಧ್ಯೆಯಲ್ಲಿ (Ayodhya) ನಡೆದ ಟ್ರಸ್ಟ್‌ನ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಪ್ರಸ್ತುತ ವಿಎಚ್‌ಪಿಯ ಅಂತಾರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಬಾಗ್ರಾ ಅವರನ್ನು ಈ ಹುದ್ದೆಗೆ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ದೇವಾಲಯ ದೇಣಿಗೆಗಳಲ್ಲಿನ ಅಕ್ರಮಗಳ ಹಿನ್ನೆಲೆಯಲ್ಲಿ ಟ್ರಸ್ಟ್ ಅನ್ನು ತನಿಖೆಗೆ ಒಳಪಡಿಸುತ್ತಿರುವ ಸಮಯದಲ್ಲಿ ನಾಯಕತ್ವ ಬದಲಾವಣೆಯಾಗಿದೆ. ಪೊಲೀಸರು ಮತ್ತು ವಿಶೇಷ ತನಿಖಾ ತಂಡ (SIT) ತನಿಖೆ ಮುಂದುವರಿಸಿದೆ.
ಬಜರಂಗ್ ಬಾಗ್ರಾ ಯಾರು?
ಬಾಗ್ರಾ ವಿಶ್ವ ಹಿಂದೂ ಪರಿಷತ್‌ನಲ್ಲಿ ಕಾರ್ಪೊರೇಟ್ ನಿರ್ವಹಣೆ ಮತ್ತು ಸಾಂಸ್ಥಿಕ ನಾಯಕತ್ವದಲ್ಲಿ ದಶಕಗಳ ಅನುಭವ ಹೊಂದಿದ್ದಾರೆ. ಬಾಗ್ರಾ ಪ್ರಸ್ತುತ ವಿಎಚ್‌ಪಿಯ ಅಂತಾರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಅಯೋಧ್ಯೆಯಲ್ಲಿ ನಡೆದ ಸಂಸ್ಥೆಯ ಪ್ರಣಾಸಿ ಮಂಡಲ ಮತ್ತು ನಿರ್ವಹಣಾ ಸಮಿತಿ ಸಭೆಯಲ್ಲಿ ಆಯ್ಕೆಯಾದ ನಂತರ ಅವರು 2024ರ ಫೆಬ್ರವರಿಯಲ್ಲಿ ಈ ಹುದ್ದೆಯನ್ನು ಅಲಂಕರಿಸಿದರು.
ಅಯೋಧ್ಯೆ ರಾಮ ಮಂದಿರದ ದೇಣಿಗೆಯಿಂದ ಪ್ರತಿ ನಿತ್ಯ 6- 8 ಲಕ್ಷ ರೂ. ಕಳವು
ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಬಾಗ್ರಾ ರಾಜಸ್ಥಾನದ ಸಿಕರ್ ಜಿಲ್ಲೆಯವರು. ಪೂರ್ಣಾವಧಿ ಸಂಘಟನಾ ಜವಾಬ್ದಾರಿಗಳನ್ನು ವಹಿಸಿಕೊಳ್ಳುವ ಮೊದಲು, ಅವರು ಸಾರ್ವಜನಿಕ ವಲಯದಲ್ಲಿ ವಿಶಿಷ್ಟ ವೃತ್ತಿ ಜೀವನ ನಡೆಸಿದ್ದರು.
ಅವರು ಈ ಹಿಂದೆ ಕೇಂದ್ರ ಗಣಿ ಸಚಿವಾಲಯದ ಅಡಿಯಲ್ಲಿ ಬರುವ ನವರತ್ನ ಸಾರ್ವಜನಿಕ ವಲಯದ ಉದ್ಯಮ ನ್ಯಾಷನಲ್ ಅಲ್ಯೂಮಿನಿಯಂ ಕಂಪನಿ ಲಿಮಿಟೆಡ್‌ನ ಅಧ್ಯಕ್ಷ (NALCO) ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಇದಕ್ಕೂ ಮೊದಲು ಅವರು ನ್ಯಾಷನಲ್ ಅಲ್ಯೂಮಿನಿಯಂ ಕಂಪನಿ ಲಿಮಿಟೆಡ್‌ನ ಮತ್ತು RITES ಲಿಮಿಟೆಡ್‌ನಲ್ಲಿ ನಿರ್ದೇಶಕ ಮತ್ತು ಮುಖ್ಯ ಹಣಕಾಸು ಅಧಿಕಾರಿ ಹುದ್ದೆ ಅಲಂಕರಿಸಿದ್ದರು.
ನ್ಯಾಷನಲ್ ಅಲ್ಯೂಮಿನಿಯಂ ಕಂಪನಿ ಲಿಮಿಟೆಡ್‌ನಿಂದ ಸ್ವಯಂಪ್ರೇರಿತ ನಿವೃತ್ತಿಯನ್ನು ಆಯ್ಕೆ ಮಾಡಿಕೊಂಡ ನಂತರ, ಬಾಗ್ರಾ ವಿಎಚ್‌ಪಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ಕೆಲವೇ ವರ್ಷಗಳಲ್ಲಿ ಅವರು, ಜಂಟಿ ಪ್ರಧಾನ ಕಾರ್ಯದರ್ಶಿ ಸೇರಿ ಸಂಸ್ಥೆಯಲ್ಲಿ ಹಲವು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದರು. ಏಕಲ್ ಅಭಿಯಾನದ ಅಧ್ಯಕ್ಷ ಮತ್ತು ಸಿಇಒ ಆಗಿಯೂ ಕಾರ್ಯ ನಿರ್ವಹಿಸಿದರು.
ಹಿಂದೂ ಸಮಾಜ, ದೇವಾಲಯ, ಧಾರ್ಮಿಕ ವ್ಯವಹಾರ ಮತ್ತು ಧಾರ್ಮಿಕ ಮತಾಂತರಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ಸಂಸ್ಥೆಯ ಅಭಿಪ್ರಾಯಗಳನ್ನು ವ್ಯಕ್ತಪಡಿಸುವಲ್ಲಿ ಜನಪ್ರಿಯರಾದ ಬಾಗ್ರಾ ಅವರನ್ನು ಸಂಘಟನಾ ಕೌಶಲ್ಯ ಹೊಂದಿರುವ ಅನುಭವಿ ಆಡಳಿತಗಾರ ಎಂದು ಪರಿಗಣಿಸಲಾಗಿದೆ.