ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʼʼಭಗವಂತನಿಗೆ ಅರ್ಪಿಸಿದ ಪ್ರತಿ ಅಮೂಲ್ಯ ವಸ್ತುವೂ ಸುರಕ್ಷಿತʼʼ: ಸಾಕ್ಷಿ ಸಮೇತ ಸ್ಪಷ್ಟನೆ ಕೊಟ್ಟ ರಾಮ ಮಂದಿರ ಟ್ರಸ್ಟ್‌

ರಾಮ ಮಂದಿರಕ್ಕೆ ದೇಣಿಗೆಯಾಗಿ ಬಂದ ಅಮೂಲ್ಯ ವಸ್ತುಗಳು ನಾಪತ್ತೆಯಾಗಿವೆ ಎಂಬ ಆರೋಪಗಳ ಬೆನ್ನಲ್ಲೇ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸುದ್ದಿಗೋಷ್ಠಿ ನಡೆಸಿ ಚಿನ್ನದ ರಾಮಾಯಣ, ಪಾದುಕೆಗಳು ಸೇರಿ ಭಕ್ತರು ನೀಡಿದ ಹಲವು ವಸ್ತುಗಳನ್ನು ಪ್ರದರ್ಶಿಸಿತು. ಸುಮಾರು 2,800 ದೇಣಿಗೆ ವಸ್ತುಗಳ ದಾಖಲೆ ತಮ್ಮ ಬಳಿ ಇದ್ದು, ಎಲ್ಲವೂ ಸುರಕ್ಷಿತವಾಗಿವೆ ಎಂದು ಟ್ರಸ್ಟ್ ಸ್ಪಷ್ಟಪಡಿಸಿದೆ. ದೇವಾಲಯದ ಹುಂಡಿ ಹಣ ಕಳವು ಪ್ರಕರಣದ ತನಿಖೆ ಮುಂದುವರಿದಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಟ್ರಸ್ಟ್ ಆಗ್ರಹಿಸಿದೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಅಯೋಧ್ಯೆ ರಾಮ ಮಂದಿರಕ್ಕೆ ಬಂದ ಅಮೂಲ್ಯ ದೇಣಿಗೆ

ಲಖನೌ, ಜು. 7: ಅಯೋಧ್ಯೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ (Shri Ram Janmabhoomi Teerth Kshetra Trust) ದೇಣಿಗೆಯಾಗಿ ಬಂದ ಅಮೂಲ್ಯ ವಸ್ತುಗಳು ನಾಪತ್ತೆಯಾಗಿವೆ ಎಂಬ ಆರೋಪಗಳ ನಡುವೆ, ಟ್ರಸ್ಟ್ ಸೋಮವಾರ ಸುದ್ದಿಗೋಷ್ಠಿ ನಡೆಸಿ ಹಲವು ಅಮೂಲ್ಯ ವಸ್ತುಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಿ ಎಲ್ಲ ದೇಣಿಗೆ ವಸ್ತುಗಳು ಸುರಕ್ಷಿತವಾಗಿವೆ ಎಂದು ಸ್ಪಷ್ಟಪಡಿಸಿದೆ. ಟ್ರಸ್ಟ್ ಖಜಾಂಚಿ ಸ್ವಾಮಿ ಗೋವಿಂದ ದೇವ್ ಗಿರಿ ಮಾತನಾಡಿ, ಚಿನ್ನದ ರಾಮಾಯಣ, ಶ್ರೀರಾಮನ ಪಾದುಕೆಗಳು, ಚಿನ್ನದ ಹಾರ ಹಾಗೂ ಕಾಕಭುಷುಂಡಿ ಮೂರ್ತಿ ಸೇರಿ ಐದು ಅಮೂಲ್ಯ ವಸ್ತುಗಳನ್ನು ಪ್ರದರ್ಶಿಸಿದರು. ಈ ಮೂಲಕ ಹಲವು ಭಕ್ತರು ಕಾಣಿಕೆಯಾಗಿ ನೀಡಿದ ಹಲವು ವಸ್ತುಗಳು ನಾಪತ್ತೆಯಾಗಿವೆ ಎಂಬ ಆರೋಪಗಳು ಸುಳ್ಳು ಎನ್ನುವುದನ್ನು ಸಾಬೀತು ಪಡಿಸಿದರು.

ಸುಮಾರು 2,800 ದೇಣಿಗೆ ವಸ್ತುಗಳ ದಾಖಲೆ ಟ್ರಸ್ಟ್‌ನ ನೋಂದಣಿ ಪುಸ್ತಕದಲ್ಲಿ ಲಭ್ಯವಿದ್ದು, ಪ್ರತಿಯೊಂದು ವಸ್ತುವನ್ನೂ ದಾಖಲಿಸಲಾಗಿದೆ. ಎಲ್ಲ ದೇಣಿಗೆ ವಸ್ತುಗಳು ಸುರಕ್ಷಿತವಾಗಿವೆ ಎಂದು ಟ್ರಸ್ಟ್ ಪುನರುಚ್ಚರಿಸಿದೆ.

ರಾಮ ಮಂದಿರ ಹುಂಡಿ ಕಳವು ಆರೋಪಿ ಅನುಕಲ್ಪ್ ಮಿಶ್ರಾಗೆ ಮತ್ತೊಂದು ಸಂಕಷ್ಟ; ಚಿಕ್ಕಮ್ಮನ ಮೇಲೆಯೇ ಹಲ್ಲೆ ನಡೆಸಿದ್ದ ಪಾಪಿ

ʼʼಮುಂದೆ ಇಂತಹ ಆರೋಪಗಳಿಗೆ ಅವಕಾಶ ನೀಡದಂತೆ ದೇಣಿಗೆ ನಿರ್ವಹಣಾ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲಾಗುವುದು. ಈ ಉದ್ದೇಶಕ್ಕಾಗಿ ವಿಶೇಷ ಸಮಿತಿಯನ್ನು ರಚಿಸಿ ಮೇಲ್ವಿಚಾರಣೆಯನ್ನು ಹೆಚ್ಚಿಸಲಾಗುವುದುʼʼ ಎಂದು ಗೋವಿಂದ ದೇವ್ ಗಿರಿ ಹೇಳಿದರು.

ಇದೇ ವೇಳೆ, ದೇವಾಲಯದ ಹುಂಡಿಯಿಂದ ಹಣ ಕಳುವಾದ ಪ್ರಕರಣದ ಬಗ್ಗೆ ಮಾತನಾಡಿದ ಅವರು, "ಕಳ್ಳತನ ಎಂದರೆ ಕಳ್ಳತನವೇ" ಎಂದು ಹೇಳಿ, ʼʼವಿಶೇಷ ತನಿಖಾ ತಂಡ (SIT) ತನಿಖೆ ನಡೆಸುತ್ತಿದ್ದು, ತಪ್ಪಿತಸ್ಥರೆಲ್ಲರನ್ನೂ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕುʼʼ ಎಂದು ಆಗ್ರಹಿಸಿದರು.

ಜುಲೈ 22ರಂದು ಟ್ರಸ್ಟ್‌ನ ಮುಂದಿನ ಸಭೆ ನಡೆಯಲಿದ್ದು, ಎಸ್‌ಐಟಿ ಅಂತಿಮ ವರದಿಯನ್ನು ಪರಿಶೀಲಿಸುವ ಜತೆಗೆ ಹೊಸ ಟ್ರಸ್ಟಿಗಳ ನೇಮಕ ಹಾಗೂ ಆಡಳಿತಾತ್ಮಕ ಸುಧಾರಣೆಗಳ ಕುರಿತು ಚರ್ಚೆ ನಡೆಯಲಿದೆ. ಇದೇ ವೇಳೆ, ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್‌ ಹಾಗೂ ಟ್ರಸ್ಟಿ ಅನಿಲ್ ಮಿಶ್ರಾ ಅವರ ರಾಜೀನಾಮೆಗಳನ್ನು ಸ್ವೀಕರಿಸಲಾಗಿದೆ. ಶಾಶ್ವತ ನೇಮಕವಾಗುವವರೆಗೆ ಕೃಷ್ಣ ಮೋಹನ್ ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಟ್ರಸ್ಟ್ ತಿಳಿಸಿದೆ.