ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಹಣದುಬ್ಬರದ ಬಿಸಿ ನಡುವೆ ಬಡ್ಡಿದರ ಏರಿಕೆ: ರೆಪೊ ದರ ಶೇ. 5.5ಕ್ಕೆ ಹೆಚ್ಚಿಸಿದ ಭಾರತೀಯ ರಿಸರ್ವ್ ಬ್ಯಾಂಕ್

RBI Hikes Repo Rate: ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಅಂದರೆ ಶೇ.0.25ರಷ್ಟು ಹೆಚ್ಚಿಸಿದೆ. ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ನೇತೃತ್ವದ ಹಣಕಾಸು ನೀತಿ ಸಮಿತಿಯು ರೆಪೊ ದರವನ್ನು ಶೇ.5.25 ರಿಂದ ಶೇ.5.5 ಕ್ಕೆ ಹೆಚ್ಚಿಸುವ ನಿರ್ಧಾರವನ್ನು ಸರ್ವಾನುಮತದಿಂದ ತೆಗೆದುಕೊಂಡಿದೆ.

ರೆಪೊ ದರ ಹೆಚ್ಚಳ

ನವದೆಹಲಿ, ಅ.7: ಮಾರುಕಟ್ಟೆ ನಿರೀಕ್ಷೆಯಂತೆಯೇ ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India) ಬುಧವಾರ (ಅ.7) ರೆಪೊ ದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಅಂದರೆ ಶೇ.0.25ರಷ್ಟು ಹೆಚ್ಚಿಸಿದೆ. ಈ ಬಾರಿ ಫೆಬ್ರವರಿ 2023ರ ನಂತರ ಇದೇ ಮೊದಲ ಬಾರಿಗೆ ಆರ್‌ಬಿಐ ರೆಪೊ ದರವನ್ನು ಹೆಚ್ಚಿಸಲಾಗಿದೆ (repo rate hike). ಅಂದರೆ, ಫೆಬ್ರವರಿ 2023ರ ಬಳಿಕ ಮೊದಲ ಬಾರಿಗೆ ಆರ್‌ಬಿಐ ಬ್ಯಾಂಕ್‌ಗಳಿಗೆ ನೀಡುವ ಸಾಲದ ಬಡ್ಡಿದರವನ್ನು ಹೆಚ್ಚಿಸಿದೆ. ರೆಪೊ ದರ ಎಂದರೆ, ಆರ್‌ಬಿಐ ಇತರ ಬ್ಯಾಂಕ್‌ಗಳಿಗೆ ಸಾಲ ನೀಡುವಾಗ ವಿಧಿಸುವ ಬಡ್ಡಿದರ.

ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ನೇತೃತ್ವದ ಹಣಕಾಸು ನೀತಿ ಸಮಿತಿಯು ರೆಪೊ ದರವನ್ನು ಶೇ.5.25 ರಿಂದ ಶೇ.5.5 ಕ್ಕೆ ಹೆಚ್ಚಿಸುವ ನಿರ್ಧಾರವನ್ನು ಸರ್ವಾನುಮತದಿಂದ ತೆಗೆದುಕೊಂಡಿದೆ. ದೇಶದಲ್ಲಿ ಹಣದುಬ್ಬರ ಹೆಚ್ಚುತ್ತಿರುವುದು, ಕಚ್ಚಾ ತೈಲದ ಬೆಲೆ ಏರಿಕೆಯಾಗಿರುವುದು ಹಾಗೂ ರೂಪಾಯಿ ಮೌಲ್ಯ ಕುಸಿದಿರುವುದರ ಮಧ್ಯೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಜಾಗತಿಕ ಮಟ್ಟದಲ್ಲಿ ಹಣದುಬ್ಬರ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ. ಜೊತೆಗೆ, ವ್ಯಾಪಾರಕ್ಕೆ ಸಂಬಂಧಿಸಿದ ಅನಿಶ್ಚಿತತೆ ಮುಂದುವರಿದಿದೆ. ಜಾಗತಿಕ ಆರ್ಥಿಕ ಪರಿಸ್ಥಿತಿಯ ಮೇಲಿನ ವಿಶ್ವಾಸವೂ ದುರ್ಬಲವಾಗಿದೆ ಎಂದು ತಿಳಿಸಿದ್ದಾರೆ. ಇರಾನ್ ಯುದ್ಧದ ಪರಿಣಾಮದಿಂದ ಜಾಗತಿಕ ವ್ಯಾಪಾರ ಮತ್ತು ಸರಬರಾಜು ಸರಪಳಿಗೆ ಅಡ್ಡಿಯಾಗುವ ಸಾಧ್ಯತೆಯಿದೆ. ಇದರಿಂದ ತೈಲ ಸೇರಿದಂತೆ ಹಲವು ವಸ್ತುಗಳ ಬೆಲೆ ಮತ್ತು ಪೂರೈಕೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದೂ ಅವರು ಹೇಳಿದ್ದಾರೆ.