ಮುಂಬೈ: ಉದ್ಧವ್ ಠಾಕ್ರೆ (Uddhav Thakre) ನೇತೃತ್ವದ ಶಿವಸೇನೆ (Shiv Sena) ಪಕ್ಷಕ್ಕೆ ಮತ್ತೆ ಭಾರೀ ಹೊಡೆತ ಬಿದ್ದಿದೆ. ಉದ್ಧವ್ ಬಣದ 9 ಸಂಸದರ ಪೈಕಿ 6 ಸಂಸದರು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದೀಗ ಪಕ್ಷದ ಸಂಸದ ಓಂಪ್ರಕಾಶ್ ರಾಜೇ ನಿಂಬಾಳ್ಕರ್ ( Omprakash Raje Nimbalkar) ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರುವುದಾಗಿ ಅವರು ಭಾನುವಾರ ಹೇಳಿದ್ದಾರೆ.
ನಿಂಬಾಳ್ಕರ್ ಮಧ್ಯಾಹ್ನ ಪುಣೆಯಿಂದ ಧರಾಶಿವ್‌ಗೆ ಆಗಮಿಸಿ ತಮ್ಮ ಬೆಂಬಲಿಗರೊಂದಿಗೆ ಸಂವಾದ ನಡೆಸಿದರು. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಶಿವಸೇನೆ (ಯುಬಿಟಿ) ಸೋಲು ಮತ್ತು ವಿರೋಧ ಪಕ್ಷದಲ್ಲಿರುವುದರಿಂದ ಜನರಿಗೆ ಏನು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದರು. "ನಾವು ಅಧಿಕಾರದಲ್ಲಿಲ್ಲದ ಕಾರಣ ಸೋತಿದ್ದೇವೆ. ನಾನು ಸರ್ಕಾರದ ಭಾಗವಾಗಿಲ್ಲದ ಕಾರಣ, ಕಳೆದ ಎರಡು ವರ್ಷಗಳಲ್ಲಿ ಜನರಿಗೆ ಏನನ್ನು ಮಾಡಲು ಸಾಧ್ಯವಾಗಲಿಲ್ಲ. ಈ ಅಂಶಗಳನ್ನು ಪರಿಗಣಿಸಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರಲು ನಿರ್ಧರಿಸಿದ್ದೇನೆ. ಅವರು ನಮ್ಮೊಂದಿಗೆ ನಿಂತರು. ಶಿಂಧೆ ಮತ್ತು ಸಿಎಂ ಫಡ್ನವೀಸ್ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದು ತಿಳಿಸಿದರು.
ಅವರು (ಶಿಂಧೆ ಮತ್ತು ಫಡ್ನವೀಸ್) ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾತನಾಡುವಂತೆ ಹೇಳಿದರು. ಹೀಗಾಗಿ ನ್ಯಾಯ ಒದಗಿಸುವಂತೆ ನಾನು ಅವರನ್ನು ವಿನಂತಿಸಿದೆ. ನಂತರ, ಶಿಂಧೆ ಕೂಡ ಸಿಬಿಐ ಮೇಲ್ಮನವಿ ಸಲ್ಲಿಸಲಿದೆ ಎಂದು ಹೇಳಿದರು. ಸತ್ಯದ ಆಧಾರದ ಮೇಲೆ ತೀರ್ಪು ಹೊರಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ ಎಂದು ಅವರು ಹೇಳಿದ್ದಾರೆ.
ಇನ್ನು ಮಹಾರಾಷ್ಟ್ರ ಪೊಲೀಸರು ಶಿವಸೇನೆಯ (ಯುಬಿಟಿ) ಆರು 'ಬಂಡಾಯ' ಸಂಸದರಿಗೆ 'ವೈ-ಪ್ಲಸ್' ಭದ್ರತೆಯನ್ನು ನೀಡಿದ್ದಾರೆ. ಸಂಜಯ್ ದಿನಾ ಪಾಟೀಲ್ (ಮುಂಬೈ-ಈಶಾನ್ಯ), ಸಂಜಯ್ ದೇಶ್‌ಮುಖ್ (ಯವತ್ಮಾಲ್-ವಾಶಿಂ), ಸಂಜಯ್ ಜಾಧವ್ (ಪರ್ಭಾನಿ), ಭೌಸಾಹೇಬ್ ವಾಕ್‌ಚೌರೆ (ಶಿರಡಿ), ನಾಗೇಶ್ ಪಾಟೀಲ್-ಅಶ್ತಿಕರ್ (ಹಿಂಗೋಲಿ) ಮತ್ತು ಓಂಪ್ರಕಾಶ ರಾಜೇ ನಿಂಬಾಳ್ಕರ್ (ಒಸ್ಮಾನಾಬಾದ್) ಅವರಿಗೆ ಭದ್ರತೆ ಒದಗಿಸಲಾಗಿದೆ ಎಂದು ಗುಪ್ತಚರ ಇಲಾಖೆಯ ಆಯುಕ್ತ ಶಿರೀಶ್ ಜೈನ್ ಸಹಿ ಮಾಡಿರುವ ಪತ್ರದಲ್ಲಿ ತಿಳಿಸಲಾಗಿದೆ.
ಕಾಂಗ್ರೆಸ್ ಜೊತೆ ವಿಲೀನವಾಗುತ್ತಾ ಶಿವಸೇನೆ? ದೆಹಲಿ ತಲುಪಿದ ಬಂಡಾಯ ಬಣ
ಅದರಂತೆ, ಈ ಸಂಸದರಿಗೆ ತಕ್ಷಣದಿಂದ ಜಾರಿಗೆ ಬರುವಂತೆ ವೈ ಪ್ಲಸ್ ಭದ್ರತೆಯನ್ನು ಒದಗಿಸಬೇಕು ಎಂದು ಜೂನ್ 17ರ ಪತ್ರದಲ್ಲಿ ತಿಳಿಸಲಾಗಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆಯ (ಯುಬಿಟಿ) ಬಣದಲ್ಲಿ ಮತ್ತೊಮ್ಮೆ ಭಿನ್ನಮತ ಸ್ಫೋಟಗೊಂಡಿರುವ ಬೆನ್ನಲ್ಲೇ, ಈ ಸಂಸದರು ಗುರುವಾರ ದೆಹಲಿಯಲ್ಲಿ ನಡೆದ ಉದ್ಧವ್ ಠಾಕ್ರೆ ನೇತೃತ್ವದ ಪಕ್ಷದ ನಿರ್ಣಾಯಕ ಪಕ್ಷದ ಸಂಸದೀಯ ಸಭೆಯಲ್ಲಿ ಭಾಗವಹಿಸಿಲ್ಲ.