ದೆಹಲಿ, ಆ. 12: ಆನ್‌ಲೈನ್‌ನಲ್ಲಿ ಆದಾಯ ತೆರಿಗೆ ಇಲಾಖೆಯ (Income Tax Department) ಹೆಸರಿನಲ್ಲಿ ನಕಲಿ ನೋಟೀಸ್ ವ್ಯಾಪಕವಾಗಿ ಹರಿದಾಡುತ್ತಿದ್ದು, ಸಾರ್ವಜನಿಕರು ತಕ್ಷಣವೇ ಎಚ್ಚೆತ್ತುಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಪಾವತಿಸಬೇಕಾದ ತೆರಿಗೆಯ ಭಾಗವಾಗಿ 6,000 ರುಪಾಯಿ ತಕ್ಷಣವೇ ಪಾವತಿಸುವಂತೆ ಈ ನಕಲಿ ನೋಟಿಸ್‌ನಲ್ಲಿ ಸೂಚಿಸಲಾಗಿದೆ. ಈ ಕುರಿತು ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (PIB Fact Check) ಸ್ಪಷ್ಟನೆ ನೀಡಿದ್ದು, ಈ ನೋಟಿಸ್ ಸಂಪೂರ್ಣ ನಕಲಿ ಹಾಗೂ ಸೈಬರ್ ವಂಚನೆಯ ಯತ್ನ ಎಂದು ತಿಳಿಸಿದೆ. ಆದಾಯ ತೆರಿಗೆ ಇಲಾಖೆಯು ಇಂತಹ ಯಾವುದೇ ನೋಟಿಸ್‌ಗಳನ್ನು ಸಾರ್ವಜನಿಕರಿಗೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಫಿಶಿಂಗ್ ಮತ್ತು ಇ-ಮೇಲ್ ವಂಚನೆ ಜಾಲ
ಸೈಬರ್ ಅಪರಾಧಿಗಳು 'ಫಿಶಿಂಗ್' ಎಂಬ ತಂತ್ರಜ್ಞಾನದ ಮೂಲಕ ಸಾರ್ವಜನಿಕರನ್ನು ವಂಚಿಸುತ್ತಿದ್ದಾರೆ. ನೈಜ ಸಂಸ್ಥೆ ಅಥವಾ ಇಲಾಖೆಯಂತೆಯೇ ಕಾಣುವ ನಕಲಿ ಇ-ಮೇಲ್ ಅಥವಾ ಸಂದೇಶಗಳನ್ನು ಕಳುಹಿಸಿ, ಬಳಕೆದಾರರ ಹೆಸರು, ಪಾಸ್‌ವರ್ಡ್, ಬ್ಯಾಂಕ್ ಖಾತೆ ವಿವರ ಹಾಗೂ ಕ್ರೆಡಿಟ್ ಕಾರ್ಡ್ ಪಿನ್‌ನಂತಹ ಸೂಕ್ಷ್ಮ ಮಾಹಿತಿಯನ್ನು ಕದಿಯುವುದು ಇವರ ಮುಖ್ಯ ಉದ್ದೇಶ. ಅಧಿಕೃತ ವೆಬ್‌ಸೈಟ್‌ನಂತೆಯೇ ಕಾಣುವ ನಕಲಿ ಲಿಂಕ್‌ಗಳನ್ನು ಸೃಷ್ಟಿಸಿ ಜನರನ್ನು ನಂಬಿಸಲಾಗುತ್ತಿದೆ ಎಂದು ಪಿಐಬಿ ತಿಳಿಸಿದೆ.
ಪ್ರೆಸ್ ಇನ್ಫರ್ಮೇಷನ್ ಬ್ಯೂರೋ ಫ್ಯಾಕ್ಟ್ ಚೆಕ್:
ಆದಾಯ ತೆರಿಗೆ ಇಲಾಖೆಯ ಸ್ಪಷ್ಟನೆ
ಎಂದಿಗೂ ಇ-ಮೇಲ್ ಮೂಲಕ ನಿಮ್ಮ ವೈಯಕ್ತಿಕ ವಿವರಗಳು ಅಥವಾ ಬ್ಯಾಂಕಿಂಗ್ ವಿವರಗಳನ್ನು ಕೇಳುವುದಿಲ್ಲ ಹಾಗೂ ಕ್ರೆಡಿಟ್ ಕಾರ್ಡ್, ಬ್ಯಾಂಕ್ ಖಾತೆಗಳ ಪಿನ್ ಸಂಖ್ಯೆಗಳು ಅಥವಾ ಪಾಸ್‌ವರ್ಡ್‌ಗಳನ್ನು ಇ-ಮೇಲ್ ಮೂಲಕ ಹಂಚಿಕೊಳ್ಳಲು ಎಂದಿಗೂ ಕೋರುವುದಿಲ್ಲ ಎಂದು ಆದಾಯ ತೆರಿಗೆ ಇಲಾಖೆಯ ಸ್ಪಷ್ಟಪಡಿಸಿದೆ.
ಬ್ಯಾಂಕ್ ಆಫ್ ಇಂಡಿಯಾ ಹೆಸರಿನಲ್ಲಿ ಹರಿದಾಡುತ್ತಿದೆ ನಕಲಿ ಸಂದೇಶ
ಸಾರ್ವಜನಿಕರು ವಹಿಸಬೇಕಾದ ಪ್ರಮುಖ ಮುನ್ನೆಚ್ಚರಿಕೆಗಳು
- ಸಂದೇಶಗಳಿಗೆ ಉತ್ತರಿಸಬೇಡಿ: ಶಂಕಿತ ಇ-ಮೇಲ್ ಅಥವಾ ಮೆಸೇಜ್‌ಗಳಿಗೆ ಯಾವುದೇ ಕಾರಣಕ್ಕೂ ಪ್ರತ್ಯುತ್ತರ ನೀಡಬೇಡಿ.
- ಅನುಮಾನಾಸ್ಪದ ಲಿಂಕ್ ಕ್ಲಿಕ್ ಮಾಡಬೇಡಿ: ಇ-ಮೇಲ್‌ನಲ್ಲಿ ಬರುವ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ ಹಾಗೂ ಅಟ್ಯಾಚ್‌ಮೆಂಟ್‌ಗಳನ್ನು ತೆರೆಯಬೇಡಿ. ಇವುಗಳಲ್ಲಿ ಕಂಪ್ಯೂಟರ್ ಅಥವಾ ಮೊಬೈಲ್ ಹ್ಯಾಕ್ ಮಾಡುವ ಸಾಮರ್ಥ್ಯವಿರುವ ವೈರಸ್‌ಗಳಿರಬಹುದು.
- ಆ್ಯಂಟಿ-ವೈರಸ್ ತಂತ್ರಜ್ಞಾನ ಬಳಸಿ: ನಿಮ್ಮ ಗೆಜೆಟ್‌ಗಳಿಗೆ ಅಪ್‌ಡೇಟ್ ಆದ ಆ್ಯಂಟಿ-ವೈರಸ್, ಆ್ಯಂಟಿ-ಸ್ಪೈವೇರ್ ಮತ್ತು ಫೈರ್‌ವಾಲ್ ಬಳಸಿ.
ದೂರು ಹಾಗೂ ವರದಿ ಸಲ್ಲಿಕೆ ಹೇಗೆ?
ಆದಾಯ ತೆರಿಗೆ ಇಲಾಖೆಯ ಹೆಸರಿನಲ್ಲಿ ನಕಲಿ ಇ-ಮೇಲ್ ಅಥವಾ ವೆಬ್‌ಸೈಟ್‌ಗಳು ಕಂಡುಬಂದಲ್ಲಿ, ತಕ್ಷಣವೇ ಆ ಇ-ಮೇಲ್ ಅಥವಾ ವೆಬ್‌ಸೈಟ್ ಯುಆರ್‌ಎಲ್ (URL) ಅನ್ನು webmanager@incometax.gov.in ಅಥವಾ incident@cert-in.org.in ಇ-ಮೇಲ್ ವಿಳಾಸಕ್ಕೆ ಫಾರ್ವರ್ಡ್ ಮಾಡಿ ದೂರು ನೀಡಬಹುದು. ದೂರು ನೀಡಿದ ನಂತರ ಆ ಇ-ಮೇಲ್ ಅನ್ನು ನಿಮ್ಮ ಇನ್‌ಬಾಕ್ಸ್‌ನಿಂದ ಸಂಪೂರ್ಣವಾಗಿ ಅಳಿಸಿಹಾಕುವಂತೆ ಇಲಾಖೆಯು ಸೂಚಿಸಿದೆ.