ಅಮರಾವತಿ, ಜು. 16: ಆಂಧ್ರ ಪ್ರದೇಶದ ಪ್ರಸಿದ್ಧ ತಿರುಪತಿ ತಿರುಮಲದ ಬಾಲಾಜಿ ದೇವಸ್ಥಾನಕ್ಕೆ (Tirupati-Tirumala temple) ಮಂಗಳವಾರ (ಜುಲೈ 14) ದಾಖಲೆ ಪ್ರಮಾಣದಲ್ಲಿ ದೇಣಿಗೆ ಹರಿದು ಬಂದಿದೆ. ದೇವಸ್ಥಾನ ಮಂಡಳಿಯು (TTD) 24 ಗಂಟೆಗಳಲ್ಲಿ ದಾಖಲೆಯ 96.98 ಕೋಟಿ ರುಪಾಯಿ ಸಂಗ್ರಹಿಸಿದೆ. ಆದರೆ ಈ ಏರಿಕೆ ಕಾಕತಾಳೀಯವಾಗಿರಲಿಲ್ಲ. ಜುಲೈ 15ರ ಮಧ್ಯ ರಾತ್ರಿಯಿಂದ ಜಾರಿಗೆ ಬಂದ ಹೊಸ ದಾನಿ (Donor) ನೀತಿಗೂ ಮೊದಲು ದೇಣಿಗೆ ಸಲ್ಲಿಸಲು ಭಕ್ತರು ಮುಗಿಬಿದ್ದಿದ್ದರಿಂದ ಈ ದಾಖಲೆ ಪ್ರಮಾಣದ ಕಾಣಿಕೆ ಸಂಗ್ರಹವಾಗಿದೆ.
ತಿದ್ದುಪಡಿ ಮಾಡಲಾದ ಹೊಸ ನೀತಿಯು ದಾನಿಗಳಿಗೆ ನೀಡಲಾಗುತ್ತಿದ್ದ ಸೌಲಭ್ಯಗಳು ಮತ್ತು ಸವಲತ್ತುಗಳಲ್ಲಿ ವ್ಯಾಪಕ ಬದಲಾವಣೆಗಳನ್ನು ತಂದಿರುವುದಷ್ಟೇ ಅಲ್ಲದೆ, ಇದುವರೆಗೆ ದಾನಿಗಳು ಅನುಭವಿಸುತ್ತಿದ್ದ ಜೀವಮಾನದ ಪ್ರಯೋಜನಗಳನ್ನು ಸಹ ರದ್ದುಗೊಳಿಸಿದೆ. ಆದರೆ ಜುಲೈ 15ಕ್ಕೂ ಮೊದಲು ದೇಣಿಗೆ ನೀಡಿದ ದಾನಿಗಳು ತಮ್ಮ ಜೀವಮಾನದ ಸೌಲಭ್ಯಗಳನ್ನು ಮುಂದುವರಿಸಿಕೊಂಡು ಹೋಗಲಿದ್ದಾರೆ. ಇದೇ ಕಾರಣದಿಂದ ಮಂಗಳವಾರ (ಜು. 15) ಮಧ್ಯ ರಾತ್ರಿ 12 ಗಂಟೆ ಹೊಡೆಯುವ ಮುನ್ನವೇ ದಾಖಲೆಯ ಪ್ರಮಾಣದಲ್ಲಿ ದೇಣಿಗೆ ಹರಿದು ಬಂತು.
ತಿರುಪತಿಗೆ 97 ಕೋಟಿ ರುಪಾಯಿ ದೇಣಿಗೆ
ವರದಿಯ ಪ್ರಕಾರ, ಮಂಗಳವಾರ 2,460 ದಾನಿಗಳು ದೇಣಿಗೆ ನೀಡಿದ್ದಾರೆ. 1,212 ದಾನಿಗಳು 1-10 ಲಕ್ಷ ರುಪಾಯಿಗಳ ನಡುವೆ ಕಾಣಿಕೆ ನೀಡಿದ್ದರೆ, 1,246 ದಾನಿಗಳು 10-25 ಲಕ್ಷ ರುಪಾಯಿ ನಡುವೆ ದೇಣಿಗೆ ನೀಡಿದ್ದಾರೆ. ಇಬ್ಬರು ಭಕ್ತರು 1 ಕೋಟಿ ರುಪಾಯಿಗೂ ಹೆಚ್ಚು ದೇಣಿಗೆ ನೀಡಿದ್ದಾರೆ.
ತಿರುಪತಿ ತಿಮ್ಮಪ್ಪನ ನಿತ್ಯದ ಮೊದಲ ಆರತಿ ಪಡೆಯಲು ಕರ್ನಾಟಕದ ಜನಪ್ರತಿನಿಧಿಗಳು, ಗಣ್ಯರಿಗೆ ಅವಕಾಶ: ಸಿಎಂ ಡಿಕೆಶಿ
ವಿಶ್ವದ ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿ ಒಂದು ಎನಿಸಿಕೊಂಡಿರುವ ತಿರುಪತಿಗೆ ಭೇಟಿ ನೀಡುವ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ದೇಗುಲದ ನಿವ್ವಳ ಮೌಲ್ಯ ಸುಮಾರು 3.38 ಲಕ್ಷ ಕೋಟಿ ರುಪಾಯಿಯಾಗಿದ್ದು, ಇದು ಹಲವು ಸಣ್ಣ ರಾಷ್ಟ್ರಗಳ ಜಿಡಿಪಿಗಿಂತೂ ಹೆಚ್ಚು. 2025-26ರಲ್ಲಿ ಇದರ ಹುಂಡಿ ಕೊಡುಗೆಗಳು 1,738 ಕೋಟಿ ರುಪಾಯಿ ದಾಟಿದ್ದು, ದಿನಕ್ಕೆ ಸರಾಸರಿ 4.75 ಕೋಟಿ ರುಪಾಯಿ ಇತ್ತು.
ಇತ್ತೀಚಿನ ಸಂಖ್ಯೆಗಳ ಪ್ರಕಾರ, 1,97,888 ನೋಂದಾಯಿತ ದಾನಿಗಳಿದ್ದಾರೆ. ಅವರಲ್ಲಿ ಸುಮಾರು 1.5 ಲಕ್ಷ ಜನರು 1 ಲಕ್ಷ ರುಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ದೇಣಿಗೆ ನೀಡಿದ್ದಾರೆ. ಸುಮಾರು 22,000 ಜನರು 10 ಲಕ್ಷ ರುಪಾಯಿಗಿಂತ ಅಧಿಕ ಹಣ ಸಲ್ಲಿಸಿದ್ದಾರೆ.
ದೇವಾಲಯವನ್ನು ನಿರ್ವಹಿಸುವ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಮಂಡಳಿಯು, ದೇಣಿಗೆ ನೀಡುವವರ ಸಂಖ್ಯೆಯಲ್ಲಿನ ಹೆಚ್ಚಳವು ಸವಲತ್ತು ನೀತಿಯನ್ನು ಪರಿಷ್ಕರಿಸುವ ಅಗತ್ಯವನ್ನುಂಟು ಮಾಡಿದೆ ಎಂದು ಹೇಳಿದೆ. ಕಳೆದ ನಾಲ್ಕು ತಿಂಗಳಲ್ಲಿ 10 ಲಕ್ಷ ರುಪಾಯಿ ದೇಣಿಗೆ ನೀಡಿದ ದಾನಿಗಳ ಸಂಖ್ಯೆ ಸುಮಾರು 3,000ದಷ್ಟು ಹೆಚ್ಚಾಗಿದೆ. ದೇಣಿಗೆಗಳ ನಿರ್ವಹಣೆಯಲ್ಲಿ ಹೆಚ್ಚಿನ ಪಾರದರ್ಶಕತೆ ಮತ್ತು ಏಕರೂಪತೆ ತರಲು ಈ ಬದಲಾವಣೆ ಜಾರಿಗೆ ತರಲಾಗಿದೆ ಎಂದು ಟಿಟಿಡಿ ಅಧ್ಯಕ್ಷ ಬಿ.ಆರ್; ನಾಯ್ಡು ತಿಳಿಸಿದ್ದಾರೆ.
ಜು.15ರಂದು ಜಾರಿಗೆ ಬಂದಿರುವ ಹೊಸ ನೀತಿಯು, ದಾನಿಗಳ ಹಿತಾಸಕ್ತಿಗಳನ್ನು ಸಾಮಾನ್ಯ ಭಕ್ತರ ಹಿತಾಸಕ್ತಿಗಳೊಂದಿಗೆ ಸಮತೋಲನಗೊಳಿಸುತ್ತದೆ. ಸಾಮಾನ್ಯ ಯಾತ್ರಿಕರಿಗೆ ದರ್ಶನ ಅವಕಾಶಗಳನ್ನು ಸುಧಾರಿಸಲು ಕೆಲವು ದಾನಿಗಳ ಸವಲತ್ತುಗಳನ್ನು ಕಡಿಮೆ ಮಾಡುವುದಾಗಿ ಟಿಟಿಡಿ ಹೇಳಿದೆ.
ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಡಿಸಿಎಂ ಡಿ.ಕೆ.ಶಿವಕುಮಾರ್; ದೇಶದ ಆರ್ಥಿಕ ಬಿಕ್ಕಟ್ಟು ನಿವಾರಣೆಗೆ ಪ್ರಾರ್ಥನೆ
ಹೊಸ ದೇಣಿಗೆ ನೀತಿ ಏನು?
ಇದುವರೆಗೆ ಜಾರಿಯಲ್ಲಿದ್ದ ಶ್ರೇಣಿ ಆಧಾರಿತ ದೇಣಿಗೆ ವರ್ಗೀಕರಣವನ್ನು ಟಿಟಿಡಿ ರದ್ದುಗೊಳಿಸಿದೆ. ಅದರ ಬದಲಿಗೆ, ಇನ್ನು ಮುಂದೆ ದೇಣಿಗೆಯ ಮೊತ್ತದ ಆಧಾರದ ಮೇಲೆ ದಾನಿಗಳನ್ನು ನಾಲ್ಕು ವಿಭಾಗಗಳಾಗಿ ವರ್ಗೀಕರಿಸಲಾಗುತ್ತದೆ. ವೈಯಕ್ತಿಕ ದಾನಿಗಳು ಮತ್ತು ಸಂಸ್ಥೆಗಳು ಅಥವಾ ಟ್ರಸ್ಟ್‌ಗಳಿಗೆ ಹೊಸ ನೀತಿಯಲ್ಲಿ ಪ್ರತ್ಯೇಕ ನಿಬಂಧನೆಗಳನ್ನು ಸೇರಿಸಲಾಗಿದೆ.
ಹಿಂದೆ ದಾನಿಗಳು ಜೀವಮಾನದ ಸವಲತ್ತುಗಳನ್ನು ಅನುಭವಿಸುತ್ತಿದ್ದರು. ಇವುಗಳಲ್ಲಿ ವಿಶೇಷ ಪ್ರವೇಶ ದರ್ಶನ, ಗರ್ಭಗುಡಿಗೆ ಪ್ರವೇಶ, ಸುಪ್ರಭಾತ ಸೇವೆ (ಬೆಳಗ್ಗೆ ಆಚರಣೆಗಳಿಗೆ ಪ್ರವೇಶ), ಕಲ್ಯಾಣೋತ್ಸವದಲ್ಲಿ ಭಾಗಿ (ಪ್ರತಿದಿನ ನಡೆಯುವ ವೆಂಕಟೇಶ್ವರ ದೇವರ ಸಾಂಕೇತಿಕ ವೈದಿಕ ವಿವಾಹ), ವಸತಿ ಸೌಲಭ್ಯಗಳು ಮತ್ತು ಲಡ್ಡು, ರೇಷ್ಮೆ ವಸ್ತ್ರಗಳು, ಚಿನ್ನ ಮತ್ತು ಬೆಳ್ಳಿ ನಾಣ್ಯಗಳಂತಹ ಉಡುಗೊರೆಗಳು ಸೇರಿದ್ದವು.
ಹೊಸ ನೀತಿಯಡಿ ದಾನಿಗಳ ಸವಲತ್ತುಗಳು ವ್ಯಕ್ತಿಗಳಿಗೆ 20 ವರ್ಷಗಳವರೆಗೆ ಮತ್ತು ಸಂಸ್ಥೆಗಳು ಅಥವಾ ಟ್ರಸ್ಟ್‌ಗಳಿಗೆ 15 ವರ್ಷಗಳವರೆಗೆ ಮಾನ್ಯವಾಗಿರುತ್ತವೆ.