ದೆಹಲಿ, ನ. 12: ದೇಶವನ್ನೇ ನಡುಗಿಸಿದ ದೆಹಲಿ ಕೆಂಪು ಕೋಟೆ ಸಮೀಪ ನಡೆದ ಕಾರು ಬಾಂಬ್ ಸ್ಫೋಟ (Delhi Blast) ಪ್ರಕರಣದ ತನಿಖೆ ವೇಳೆ ಹಲವು ಮಹತ್ವದ ವಿಚಾರ ಬೆಳಕಿಗೆ ಬರುತ್ತಿದೆ. ಜಮ್ಮು ಕಾಶ್ಮೀರ ಮೂಲದ, ಜೈಶೆ-ಎ-ಮೊಹಮ್ಮದ್ ಉಗ್ರ ಸಂಘಟನೆಯ ಸದಸ್ಯ ಡಾ. ಉಮರ್ ಮೊಹಮ್ಮದ್ ಚಲಾಯಿಸುತ್ತಿದ್ದ ಬಿಳಿ ಬಣ್ಣದ ಹ್ಯುಂಡೈ ಐ20 ಕಾರು ಸ್ಫೋಟಗೊಂಡಿರುವುದು ಸಿಸಿ ಟಿವಿ ದೃಶ್ಯಗಳ ಮೂಲಕ ಗೊತ್ತಾಗಿದೆ. ಇದೀಗ ಮತ್ತೊಂದು ಮಹತ್ವದ ಸುಳಿವು ಲಭ್ಯವಾಗಿದ್ದು, ಕೃತ್ಯದಲ್ಲಿ ಭಾಗಿಯಾಗಿದ್ದ ಕೆಂಪು ಫೋರ್ಡ್ ಇಕೋಸ್ಪೋರ್ಟ್ ಕಾರು (Red Ford EcoSport Car) ಕೂಡ ಪತ್ತೆಯಾಗಿದೆ.
ಸ್ಫೋಟಗೊಳ್ಳುತ್ತಿದ್ದಂತೆ ಉಗ್ರರು ಇಕೋಸ್ಪೋರ್ಟ್ ಕಾರಿನಲ್ಲಿ ಪರಾರಿಯಾಗಿರುವ ಸಂದೇಹ ವ್ಯಕ್ತವಾಗಿದ್ದು, ಇದರ ಪತ್ತೆಗಾಗಿ ಪೊಲೀಸರು ವ್ಯಾಪಕ ಶೋಧ ಕಾರ್ಯ ನಡೆಸಿದ್ದರು. ದೆಹಲಿ ನೋಂದಣಿಯ DL 10 CK 0458 ಕಾರು ಹರಿಯಾಣದ ಫರಿದಾಬಾದ್‌ನ ಖಂಡಾವಲಿ ಗ್ರಾಮದ ನಿರ್ಜನ ಮನೆಯೊಂದರ ಬಳಿ ಪತ್ತೆಯಾಗಿದೆ.
ಫರಿದಾಬಾದ್‌ನಲ್ಲಿ ಪತ್ತೆಯಾದ ಫೋರ್ಡ್ ಇಕೋಸ್ಪೋರ್ಟ್ ಕಾರು:
ಬಾಂಬರ್ ಡಾ. ಉಮರ್ ಮೊಹಮ್ಮದ್ ಈ ಇಕೋಸ್ಪೋರ್ಟ್ ಕಾರನ್ನು 2017ರಲ್ಲಿ ದೆಹಲಿಯ ರಜೌರಿ ಗಾರ್ಡನ್ ಆರ್‌ಟಿಒದಲ್ಲಿ ನೋಂದಣಿ ಮಾಡಿಸಿದ್ದ ಎನ್ನಲಾಗಿದೆ. ಫರಿದಾಬಾದ್‌ನ ಅಲ್ ಫಲಾಹ್ ವಿಶ್ವ ವಿದ್ಯಾನಿಲಯದಿಂದ ಕೇವಲ 12 ಕಿ.ಮೀ. ಅಂತರದಲ್ಲಿ ಈ ಕಾರು ಪತ್ತೆಯಾಗಿದೆ. ಈಗಾಗಲೇ ಪ್ರಕರಣದಲ್ಲಿ ವಿವಿಯ ಹೆಸರು ಥಳುಕು ಹಾಕಿಕೊಂಡಿದ್ದು, ಇದೀಗ ಅನುಮಾನ ಮತ್ತಷ್ಟು ಹೆಚ್ಚಿಸಿದೆ.
ಈ ಸುದ್ದಿಯನ್ನೂ ಓದಿ: 70 ಎಕ್ರೆ ಕ್ಯಾಂಪಸ್, 75 ಲಕ್ಷ ರೂ. ಎಂಬಿಬಿಎಸ್ ಫೀಸ್; ಫರಿದಾಬಾದ್‌ನ ಅಲ್ ಫಲಾಹ್ ವಿಶ್ವ ವಿದ್ಯಾನಿಲಯ ಉಗ್ರ ನೆಲೆಯಾಗಿದ್ದು ಹೇಗೆ?
ಕಾರು ಪತ್ತೆಯಾದ ಮನೆ ಉಮರ್‌ನ ಸ್ನೇಹಿತನಿಗೆ ಸೇರಿದ್ದು ಎನ್ನಲಾಗಿದೆ. ಅಲ್ಲದೆ ಉಮರ್ ನಕಲಿ ವಿಳಾಸ ನೀಡಿ ಈ ಕಾರು ಖರೀದಿಸಿರುವ ವಿಚಾರವೂ ಬೆಳಕಿಗೆ ಬಂದಿದೆ. ಸದ್ಯ ಕಾರನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ.
ಆಳವಾಗಿ ವಿಸ್ತರಿಸಿದ ಉಗ್ರ ಜಾಲ
ಸದ್ಯ ಬಗೆದಷ್ಟೂ ಉಗ್ರ ಜಾಲದ ಬೇರು ಹೊರಗೆ ಬರುತ್ತಿದೆ. ದೆಹಲಿಯ ಕೆಂಪು ಕೋಟೆ ಬಳಿ 9 ಜನರನ್ನು ಬಲಿ ಪಡೆದ ಈ ಕೃತ್ಯಕ್ಕೆ ಬಳಸಲಾದ 2ನೇ ಕಾರು ಪತ್ತೆಯಾಗುವುದರೊಂದಿಗೆ ಈ ಜಾಲ ಆಳಕ್ಕೆ ವ್ಯಾಪಿಸಿರುವ ಸೂಚನೆ ಸಿಕ್ಕಿದೆ. ತನಿಖಾಧಿಕಾರಿಗಳ ಪ್ರಕಾರ, ʼಸ್ಫೋಟಕ್ಕೆ ಹ್ಯುಂಡೈ ಐ20 ಮತ್ತು ಇಕೋಸ್ಪೋರ್ಟ್ ಕಾರನ್ನು ಬಳಸಲಾಗಿದೆ. ಸ್ಫೋಟದ ನಂತರ ಇಕೋಸ್ಪೋರ್ಟ್ ಮೂಲಕ ಉಗ್ರರು ಪರಾರಿಯಾಗಿದ್ದಾರೆ. ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತನಿಖೆ ಕೈಗೆತ್ತಿಕೊಂಡಿದ್ದು, ದೆಹಲಿ, ಜಮ್ಮು ಮತ್ತು ಕಾಶ್ಮೀರ, ಹರಿಯಾಣ ಹಾಗೂ ಉತ್ತರ ಪ್ರದೇಶ ಪೊಲೀಸರು ನೆರವಾಗುತ್ತಿದ್ದಾರೆ. ಸದ್ಯ ಇಕೋಸ್ಪೋರ್ಟ್ ಕಾರು ಪತ್ತೆಯಾಗಿರುವುದರೊಂದಿಗೆ ಸಂಚಿನ ಬಗ್ಗೆ, ಭಯೋತ್ಪಾದಕ ನೆಟ್‌ವರ್ಕ್ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗುವ ಸಾಧ್ಯತೆ ಇದೆ.
ಅಲ್ ಫಲಾಹ್ ವಿಶ್ವ ವಿದ್ಯಾನಿಲಯದಲ್ಲಿ ಸಹಾಯಕ ಪ್ರಾಧ್ಯಾಪಕನಾಗಿದ್ದ ಉಮರ್ ಮೊಹಮ್ಮದ್ ಆಲಿಯಾಸ್ ಉಮರ್ ನಬಿ ನವೆಂಬರ್ 10ರಂದು ಜನನಿಬಿಡ ದೆಹಲಿಯ ಕೆಂಪು ಕೋಟೆ ಸಮೀಪದ ಮೆಟ್ರೋ ಸ್ಟೇಷನ್ ಬಳಿ ಕಾರು ಚಲಾಯಿಸಿಕೊಂಡು ಹೋಗಿ ಸ್ಫೋಟಿಸಿದ್ದ.