Rekha Gupta: ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ ನಡೆಸಿದ್ದು ಶ್ವಾನ ಪ್ರೇಮಿ; ಆತನ ಹಿನ್ನೆಲೆ ಏನು?
Attack on Delhi CM: ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮೇಲೆ ಹಲ್ಲೆ ನಡೆಸಿರುವ ವ್ಯಕ್ತಿ ಶ್ವಾನ ಪ್ರೇಮಿ. ಬೀದಿ ನಾಯಿಗಳ ಮೇಲೆ ಅಪಾರ ಪ್ರೀತಿ ಹೊಂದಿದ್ದ ಆತ ಇತ್ತೀಚಿನ ಸುಪ್ರೀಂ ಕೋರ್ಟ್ ಆದೇಶದಿಂದ ತೀವ್ರ ಕೋಪಗೊಂಡಿದ್ದ. ದೆಹಲಿಗೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿ ಹೋಗಿದ್ದ ಎಂದು ಆತನ ತಾಯಿ ತಿಳಿಸಿದ್ದಾರೆ.


ನವದೆಹಲಿ: ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ (Delhi Chief Minister Rekha Gupta) ಅವರ ಮೇಲೆ ಹಲ್ಲೆ (Attack on Delhi CM) ನಡೆಸಿದ ಗುಜರಾತ್‌ನ (Gujarat) ರಾಜೇಶ್ ಸಕ್ರಿಯಾ ನಾಯಿ ಪ್ರಿಯನಾಗಿದ್ದ (Dog lover). ಈತ ರಾಜ್‌ಕೋಟ್ ನಿವಾಸಿಯಾಗಿದ್ದು, ಆತ ಸಿಎಂ ಮೇಲೆ ಹಲ್ಲೆ ನಡೆಸಿದ ಅನಂತರ ದೆಹಲಿ ಪೊಲೀಸರು (Delhi police) ಆತನ ಕುಟುಂಬವನ್ನು ಸಂಪರ್ಕಿಸಿದರು ಎನ್ನಲಾಗಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಆತನ ತಾಯಿ ಭಾನು, ರಾಜೇಶ್ ಶ್ವಾನ ಪ್ರೇಮಿಯಾಗಿದ್ದು, ಇತ್ತೀಚಿನ ಸುಪ್ರೀಂ ಕೋರ್ಟ್ ಆದೇಶದಿಂದ ತೀವ್ರ ಕೋಪಗೊಂಡಿದ್ದ. ದೆಹಲಿಗೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿ ಹೋಗಿದ್ದ ಎಂದು ತಿಳಿಸಿದ್ದಾರೆ.
ದೆಹಲಿಯ ಎನ್‌ಸಿಆರ್‌ನಲ್ಲಿ ಇರುವ ಬೀದಿ ನಾಯಿಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸುವ ಸುಪ್ರೀಂ ಕೋರ್ಟ್‌ನ ತೀರ್ಪಿನಿಂದ ಅಸಮಾಧಾನಗೊಂಡಿದ್ದ ಎಂದಿರುವ ಭಾನು, ʼʼನನ್ನ ಮಗ ನಾಯಿಗಳನ್ನು ಪ್ರೀತಿಸುತ್ತಾನೆ. ಬೀದಿ ನಾಯಿಗಳ ವಿರುದ್ಧ ಸುಪ್ರೀಂ ಕೋರ್ಟ್‌ನ ಆದೇಶದ ಅನಂತರ ಅವನು ಕೋಪಗೊಂಡಿದ್ದ. ಶೀಘ್ರದಲ್ಲೇ ದೆಹಲಿಗೆ ತೆರಳಿದನು. ನಮಗೆ ಬೇರೇನೂ ತಿಳಿದಿಲ್ಲʼʼ ಎಂದು ಹೇಳಿದ್ದಾರೆ.
ಕೆಲವು ದಾಖಲೆಗಳೊಂದಿಗೆ ದೆಹಲಿ ಮುಖ್ಯಮಂತ್ರಿಯನ್ನು ಭೇಟಿಯಾದ ರಾಜೇಶ್ ಸಕ್ರಿಯಾ, ಮಾತುಕತೆಯ ವೇಳೆ ಜೋರಾಗಿ ಮಾತನಾಡಲು ಪ್ರಾರಂಭಿಸಿದ್ದಾನೆ. ಬಳಿಕ ಸಿಎಂ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ವಿವರಿಸಿದ್ದಾರೆ.
Mother of the accused who attacked CM Rekha Gupta said :
— Spirit of Hindu Women (@SpiritHindWomen) August 20, 2025
"My son is an animal lover, he was upset about the dog issue"
Mentally Zombie Dog lovers 🤡#RekhaGupta pic.twitter.com/0nr4EH26S8
ಮುಖ್ಯಮಂತ್ರಿಯ ಮೇಲೆ ದಾಳಿ ಮಾಡಿದ ತಕ್ಷಣವೇ ಭದ್ರತಾ ಸಿಬ್ಬಂದಿ ಆತನನ್ನು ಬಂಧಿಸಿದ್ದಾರೆ ಮತ್ತು ದಾಳಿಗೆ ಕಾರಣವೇನು ಎಂಬುದರ ಕುರಿತು ದೆಹಲಿ ಪೊಲೀಸರು ಆತನನ್ನು ವಿಚಾರಣೆ ನಡೆಸುತ್ತಿದ್ದಾರೆ.
ಮುಖ್ಯಮಂತ್ರಿ ಗುಪ್ತಾ ಅವರ ನಿವಾಸದಲ್ಲಿ ಮಂಗಳವಾರ ನಡೆದ ಸಾರ್ವಜನಿಕ ಅಹವಾಲು ಸ್ವೀಕಾರ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಈ ದಾಳಿಯ ಹಿಂದೆ ರಾಜಕೀಯ ಪಿತೂರಿ ಇದೆ ಎಂದು ಶಂಕಿಸಲಾಗಿದೆ. ಮುಖ್ಯಮಂತ್ರಿಯ ಕಾರ್ಯವೈಖರಿಯನ್ನು ಸಹಿಸಲಾರದೆ ಈ ರೀತಿ ಮಾಡಲಾಗಿದೆ. ದಾಳಿಯ ಹಿಂದೆ ಯಾರಿದ್ದಾರೆ ಎನ್ನುವ ತನಿಖೆ ನಡೆಸಲಾಗುತ್ತಿದೆ ದೆಹಲಿ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕಿ ಅತಿಶಿ ಕೂಡ ಈ ದಾಳಿಯನ್ನು ಖಂಡಿಸಿದ್ದು, ಪ್ರಜಾಪ್ರಭುತ್ವದಲ್ಲಿ ಹಿಂಸಾಚಾರಕ್ಕೆ ಅವಕಾಶವಿಲ್ಲ ಎಂದಿದ್ದಾರೆ. ಭದ್ರತಾ ಉಲ್ಲಂಘನೆಗೆ ಕಾರಣವೇನು ಎನ್ನುವುದರ ಕುರಿತು ತನಿಖೆ ನಡೆಸುತ್ತಿರುವುದಾಗಿ ದೆಹಲಿ ಪೊಲೀಸ್ ಆಯುಕ್ತ ಎಸ್.ಬಿ.ಕೆ. ಸಿಂಗ್ ತಿಳಿಸಿದ್ದಾರೆ.