Crime News: ಪ್ರೀತಿ ನಿರಾಕರಿಸಿದ ಶಿಕ್ಷಕಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ವಿದ್ಯಾರ್ಥಿ
ಪ್ರೀತಿಸಲು ನಿರಾಕರಿಸಿದ ಕಾಲೇಜು ಉಪನ್ಯಾಸಕಿ ಮೇಲೆ ವಿದ್ಯಾರ್ಥಿಯೊಬ್ಬ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಘಟನೆಯು ಮಧ್ಯಪ್ರದೇಶದ ನರಸಿಂಗ್‌ಪುರ ಜಿಲ್ಲೆಯ ನಡೆದಿದೆ. ಶಿಕ್ಷಕಿಗೆ ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿ ಸೂರ್ಯಾಂಶ್

ಭೋಪಾಲ್: ಒನ್‌ಸೈಡ್ ಲವ್ (One Sided Love) ಮತ್ತು ವೈಯಕ್ತಿಕ ದ್ವೇಷದಿಂದ (Personal Hatred) ಮಧ್ಯಪ್ರದೇಶದ (Madhya Pradesh) ನರಸಿಂಗ್‌ಪುರ ಜಿಲ್ಲೆಯ ಕೊತ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯ ಎಕ್ಸಲೆನ್ಸ್ ಸ್ಕೂಲ್‌ನ ವಿದ್ಯಾರ್ಥಿ (Student) ತನ್ನ ಶಿಕ್ಷಕಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಆಘಾತಕಾರಿ ಘಟನೆ ನಡೆದಿದೆ. 18 ವರ್ಷದ ಸೂರ್ಯಾಂಶ್ ಕೊಚಾರ್ 26 ವರ್ಷದ ಅತಿಥಿ ಶಿಕ್ಷಕಿಗೆ ಸೋಮವಾರ ಬೆಂಕಿ ಹಚ್ಚಿದ್ದಾನೆ. ಶಿಕ್ಷಕಿಯು ಆತನ ವಿರುದ್ಧ ದೂರು ನೀಡಿದ್ದರ ಪ್ರತೀಕಾರವಾಗಿ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಗಸ್ಟ್ 18ರಂದು ಅಪರಾಹ್ನ 3:30ರ ಸುಮಾರಿಗೆ, ಸೂರ್ಯಾಂಶ್ ಶಿಕ್ಷಕಿಯ ನಿವಾಸಕ್ಕೆ ಪೆಟ್ರೋಲ್ ತುಂಬಿದ ಬಾಟಲಿಯೊಂದಿಗೆ ತೆರಳಿದ್ದಾನೆ. ಏಕಾಏಕಿ ಶಿಕ್ಷಕಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ, ಸ್ಥಳದಿಂದ ಪರಾರಿಯಾಗಿದ್ದಾನೆ. ಶೇ. 10-15ರಷ್ಟು ಸುಟ್ಟ ಗಾಯಗಳಾಗಿದ್ದ ಶಿಕ್ಷಕಿಯನ್ನು ತಕ್ಷಣ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಾಯಗಳು ಗಂಭೀರವಾದರೂ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ದೃಢಪಡಿಸಿದ್ದಾರೆ.
ಸೂರ್ಯಾಂಶ್ ಮತ್ತು ಶಿಕ್ಷಕಿಯು ಎರಡು ವರ್ಷಗಳಿಂದ ಪರಿಚಿತರಾಗಿದ್ದರು. ಯುವಕ ಶಿಕ್ಷಕಿಯ ಮೇಲೆ ಒನ್‌ಸೈಡ್ ಲವ್ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಎರಡು ವರ್ಷಗಳ ಹಿಂದೆ ಆತನನ್ನು ಶಾಲೆಯಿಂದ ಉಚ್ಛಾಟಿಸಲಾಗಿತ್ತು. ಈಗ ಆಯುವಕ ಬೇರೊಂದು ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಶಿಕ್ಷಕಿಯ ಸೀರೆಯ ಬಗ್ಗೆ ಸೂರ್ಯಾಂಶ್ ಅಶ್ಲೀಲವಾಗಿ ಕಾಮೆಂಟ್ ಮಾಡಿದ್ದು, ಈ ಬಗ್ಗೆ ಶಿಕ್ಷಕಿ ದೂರು ನೀಡಿದ್ದರು. ಇದು ಅವನ ಕೋಪಕ್ಕೆ ಕಾರಣವಾಯಿತು ಎಂದು ಉಪ ವಿಭಾಗೀಯ ಪೊಲೀಸ್ ಅಧಿಕಾರಿ (SDOP) ಮನೋಜ್ ಗುಪ್ತಾ ಹೇಳಿದ್ದಾರೆ.
ಈ ಸುದ್ದಿಯನ್ನು ಓದಿ: Viral Video: ಕುಡಿದ ಮತ್ತಿನಲ್ಲಿ ವೇಗವಾಗಿ ಬಂದು ಪೊಲೀಸ್ ಪೇದೆಗೆ ಡಿಕ್ಕಿ ಹೊಡೆದ ಸ್ಕೂಟರ್ ಸವಾರ; ಆಘಾತಕಾರಿ ವಿಡಿಯೊ ವೈರಲ್
ಇದು ಒನ್‌ಸೈಡ್ ಲವ್ ಮತ್ತು ವೈಯಕ್ತಿಕ ದ್ವೇಷದ ಪ್ರಕರಣ ಎಂದು SDOP ಗುಪ್ತಾ ತಿಳಿಸಿದ್ದಾರೆ. ಘಟನೆಯ ಕೆಲವೇ ಗಂಟೆಗಳಲ್ಲಿ ಕೊತ್ವಾಲಿ ಪೊಲೀಸರು ಸೂರ್ಯಾಂಶ್‌ನನ್ನು ಡೊಂಗರಗಾಂವ್ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಯಾಣ್‌ಪುರ ಗ್ರಾಮದಲ್ಲಿ ಬಂಧಿಸಿದ್ದಾರೆ. ಆತನ ವಿರುದ್ಧ ಐಪಿಸಿ ಕಲಂ 124A ಮತ್ತು ಇತರ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಶಿಕ್ಷಕಿಯ ಸಂಪೂರ್ಣ ಹೇಳಿಕೆಯನ್ನು ದಾಖಲಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಸೂರ್ಯಾಂಶ್ ಈಗ ಪೊಲೀಸ್ ವಶದಲ್ಲಿದ್ದಾನೆ ಮತ್ತು ವಿವರವಾದ ತನಿಖೆ ನಡೆಯುತ್ತಿದೆ. ಈ ಘಟನೆಯು ಶಾಲೆಯ ಸುರಕ್ಷತೆ, ವಿದ್ಯಾರ್ಥಿ-ಶಿಕ್ಷಕ ಸಂಬಂಧ, ಮತ್ತು ವೈಯಕ್ತಿಕ ದ್ವೇಷದಿಂದ ಉಂಟಾಗುವ ಗಂಭೀರ ಪರಿಣಾಮಗಳ ಬಗ್ಗೆ ಚರ್ಚೆಗೆ ದಾರಿ ಮಾಡಿದೆ.