ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

CP Radhakrishnan: ಉಪರಾಷ್ಟ್ರಪತಿ ಹುದ್ದೆಗೆ ರಾಧಾಕೃಷ್ಣನ್ ನಾಮಪತ್ರ ಸಲ್ಲಿಕೆ; ಪ್ರಧಾನಿ ಮೋದಿ, ಸಚಿವ ಪ್ರಲ್ಹಾದ ಜೋಶಿ ಸಾಥ್

V-P Polls: ಉಪರಾಷ್ಟ್ರಪತಿ ಹುದ್ದೆಯ ಚುನಾವಣಾ ಕಣ ರಂಗೇರಿದೆ. ಎನ್‌ಡಿಎ ಅಭ್ಯರ್ಥಿಯಾಗಿ ಸಿ.ಪಿ. ರಾಧಾಕೃಷ್ಣನ್ ಸ್ಪರ್ಧಿಸುತ್ತಿದ್ದು, ನಾಮಪತ್ರ ಸಲ್ಲಿಸಿದ್ದಾರೆ. ಸಿ.ಪಿ. ರಾಧಾಕೃಷ್ಣನ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಪ್ರಮುಖ ಸಚಿವರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದರು.

ಉಪರಾಷ್ಟ್ರಪತಿ ಹುದ್ದೆಗೆ ರಾಧಾಕೃಷ್ಣನ್ ನಾಮಪತ್ರ ಸಲ್ಲಿಕೆ

Ramesh B Ramesh B Aug 20, 2025 3:18 PM

ದೆಹಲಿ: ಸಂವಿಧಾನಿಕ ಉಪರಾಷ್ಟ್ರಪತಿ ಚುನಾವಣೆಗೆ ಬುಧವಾರ (ಆಗಸ್ಟ್‌ 20) ಎನ್‌ಡಿಎ (NDA) ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್ (C.P. Radhakrishnan) ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಪ್ರಮುಖ ಸಚಿವರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸೇರಿದಂತೆ ಅನೇಕ ಪ್ರಮುಖರು ರಾಧಾಕೃಷ್ಣನ್ ಅವರಿಗೆ ಸಾಥ್ ನೀಡಿದರು. ಇದಕ್ಕೂ ಮುನ್ನ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಅವರ ಗೃಹಕಚೇರಿಯಲ್ಲೇ ನಾಮಪತ್ರ ಸಲ್ಲಿಕೆಯ ಅಂತಿಮ ಸಿದ್ಧತೆ ನಡೆಸಿ, ಬಳಿಕ ಎನ್‌ಡಿಎ ಆಪ್ತರೊಂದಿಗೆ ತೆರಳಿದರು.

ಉಪರಾಷ್ಟ್ರಪತಿ ಹುದ್ದೆಗೆ ರಾಧಾಕೃಷ್ಣನ್ ಅವರ ಹೆಸರು ಘೋಷಿಸಿದ ದಿನದಿಂದಲೇ ಬಿಜೆಪಿ ಮತ್ತು ಎನ್‌ಡಿಎ ಮೈತ್ರಿಕೂಟದಲ್ಲಿ ಪ್ರಕ್ರಿಯೆ ಚುರುಕುಗೊಂಡಿದ್ದು, ಕಳೆದ ಎರಡು ದಿನಗಳಿಂದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ನವದೆಹಲಿಯ ಗೃಹ ಕಚೇರಿ ಎನ್‌ಡಿಎ ಕೇಂದ್ರಬಿಂದುವಾಗಿ ಗಮನ ಸೆಳೆಯಿತು.

ಉಪರಾಷ್ಟ್ರಪತಿ ಅಭ್ಯರ್ಥಿ ರಾಧಾಕೃಷ್ಣನ್ ತಮ್ಮ ಆಪ್ತರಾಗಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಗೃಹದಲ್ಲೇ ತಂಗಿದ್ದರಿಂದ ಬಿಜೆಪಿ ಮತ್ತು ಮಿತ್ರ ಪಕ್ಷಗಳ ಸಂಸದರು ಹಾಗೂ ಕೇಂದ್ರ ಸರ್ಕಾರದ ಪ್ರಮುಖ ಸಚಿವರು ಆಗಮಿಸಿ ಬೆಂಬಲ ಸೂಚಿಸುವ ಜತೆ ಶುಭ ಹಾರೈಸಿದರು. ಸಚಿವರಾದ ಕಿರಣ್‌ ರಿಜಿಜು, ಅರ್ಜುನ್ ರಾಮ್ ಮೇಘವಾಲ್ ಸೇರಿದಂತೆ ಪ್ರಮುಖರು ಜತೆಗಿದ್ದರು.



ಈ ಸುದ್ದಿಯನ್ನೂ ಓದಿ: CP Radhakrishnan: ಉಪರಾಷ್ಟ್ರಪತಿ ಹುದ್ದೆಯ ಎನ್‌ಡಿಎ ಅಭ್ಯರ್ಥಿಯಾಗಿ ಸಿ.ಪಿ. ರಾಧಾಕೃಷ್ಣನ್‌ ಆಯ್ಕೆ

ಉಪರಾಷ್ಟ್ರಪತಿ ಚುನಾವಣೆಯಲ್ಲಿ ರಾಧಾಕೃಷ್ಣನ್‌ ಅವರನ್ನು ಹೆಚ್ಚಿನ ಮತಗಳೊಂದಿಗೆ ಆಯ್ಕೆ ಮಾಡಿಕೊಳ್ಳಲು ಎನ್‌ಡಿಎ ಪ್ರಮುಖರು ನಿರ್ಧರಿಸಿದ್ದು, ಅದಕ್ಕೆ ತಕ್ಕಂತೆ ಪೂರ್ವ ಸಿದ್ಧತೆಯಲ್ಲಿ ತೊಡಗಿದ್ದಾರೆ. ಈ ಹಿಂದಿನ ಅವಧಿಯಲ್ಲಿ ಸಂಸದೀಯ ವ್ಯವಹಾರಗಳ ಖಾತೆ ನಿರ್ವಹಿಸಿದ್ದ ಸಚಿವ ಪ್ರಲ್ಹಾದ್‌ ಜೋಶಿ ಅವರ ಹೆಗಲಿಗೆ ತುಸು ಹೆಚ್ಚಿನ ಜವಾಬ್ದಾರಿ ವಹಿಸಲಾಗಿದೆ. ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ, ರಕ್ಷಣಾ ಸಚಿವ ರಾಜನಾಥ ಸಿಂಗ್‌ ಹೀಗೆ ಬಿಜೆಪಿ ಮತ್ತು ಮಿತ್ರಪಕ್ಷಗಳ ಪ್ರಮುಖರೊಂದಿಗೆ ಸಚಿವ ಪ್ರಲ್ಹಾದ್‌ ಜೋಶಿ ಅನ್ಯೋನ್ಯತೆ ಹೊಂದಿದ್ದರಿಂದ ಅವರ ನೇತೃತ್ವದಲ್ಲೀಗ ಎನ್‌ಡಿಎ ಪಾಳೆಯದಲ್ಲಿ ಉಪರಾಷ್ಟ್ರಪತಿ ಹುದ್ದೆ ಆಯ್ಕೆ ಪ್ರಕ್ರಿಯೆ ಗರಿಗೆದರಿದೆ. ಪರಿಣಾಮ ಪ್ರಲ್ಹಾದ್‌ ಜೋಶಿ ಅವರ ದೆಹಲಿಯ ಗೃಹ ಕಚೇರಿ ರಾಜಕೀಯ ಶಕ್ತಿ ಕೇಂದ್ರವಾಗಿ ಗಮನ ಸೆಳೆಯುತ್ತಿದೆ.

ಸಚಿವ ಜೋಶಿ ಅವರ ಸಾರಥ್ಯದಲ್ಲಿ ಗೃಹಕಚೇರಿಯಲ್ಲಿ ಸೋಮವಾರ ಸಂಜೆ ಉಪರಾಷ್ಟ್ರಪತಿ ಅಭ್ಯರ್ಥಿ ರಾಧಾಕೃಷ್ಣನ್‌ ಅವರ ಸಮ್ಮುಖದಲ್ಲೇ ಎನ್‌ಡಿಎ ಪ್ರಮುಖರ ಮಹತ್ವದ ಸಭೆ ಸಹ ನಡೆಯಿತು. ಚುನಾವಣೆ ಬಗ್ಗೆ ಪರಸ್ಪರ ಚರ್ಚೆ, ಸಮಾಲೋಚನೆ ನಡೆಯಿತು. ಎನ್‌ಡಿಎ ಸಂಪುಟದ ಸಚಿವರು ಹಾಗೂ ಮೈತ್ರಿಕೂಟದ ಸಂಸದರನೇಕರು ಆಗಮಿಸಿ ಅಭ್ಯರ್ಥಿ ರಾಧಾಕೃಷ್ಣನ್‌ ಅವರಿಗೆ ಅಭಿನಂದನೆ ಸಲ್ಲಿಸಿದರು.

ಸಿ.ಪಿ. ರಾಧಾಕೃಷ್ಣನ್‌ ಹಿನ್ನೆಲೆ

1957ರ ಅಕ್ಟೋಬರ್‌ 20ರಂದು ತಮಿಳುನಾಡಿನ ತಿರುಪ್ಪೂರ್‌ನಲ್ಲಿ ಜನಿಸಿದ ರಾಧಾಕೃಷ್ಣನ್‌ 16 ವರ್ಷದಿಂದಲೇ ಆರ್‌ಎಸ್‌ಎಸ್‌ನಲ್ಲಿ ತೊಡಗಿಸಿಕೊಂಡಿದ್ದರು. ಕಳೆದ ವರ್ಷ ಜುಲೈಯಿಂದ ಮಹಾರಾಷ್ಟ್ರದ ರಾಜ್ಯಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಅವರು 2023ರ ಫೆಬ್ರವರಿಯಿಂದ 2024 ಜುಲೈ ತನಕ ಜಾರ್ಖಂಡ್‌ ರಾಜ್ಯಪಾಲರಾಗಿದ್ದರು. ಜತೆಗೆ 2024ರ ಮಾರ್ಚ್‌ನಿಂದ ಜುಲೈ ತನಕ ತೆಲಂಗಾಣದ ರಾಜ್ಯಪಾಲರಾಗಿ ಮತ್ತು ಪುದುಚೇರಿಯ ಲೆಫ್ಟಿನೆಂಟ್‌ ಗವರ್ನರ್‌ ಆಗಿಯೂ ಸೇವೆ ಸಲ್ಲಿಸಿದ್ದರು. ಈ ಹಿಂದೆ ಬಿಜೆಪಿಯ ರಾಜ್ಯಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು.