ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

''ಬಿಜೆಪಿ ಸರ್ಕಾರವನ್ನು ಕಿತ್ತು ಹಾಕುವಂತೆ ಪೊಲೀಸ್‌ ಅಧಿಕಾರಿ ನನ್ನ ಕಿವಿಯಲ್ಲಿ ಪಿಸುಗುಟ್ಟಿದರುʼʼ: ಸಂಚಲನ ಮೂಡಿಸಿದ ರಾಹುಲ್‌ ಗಾಂಧಿ ಹೇಳಿಕೆ

Rahul Gandhi: ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯನ್ನು ಪೊಲೀಸರು ಬಲವಂತದಿಂದ ಕರೆದೊಯ್ದ ಘಟನೆ ಮಂಗಳವಾರ ನಡೆದಿದೆ. ಈ ವೇಳೆ ಪೊಲೀಸ್‌ ಅಧಿಕಾರಿ ಗುಟ್ಟಾಗಿ ಕೇಂದ್ರ ಸರ್ಕಾರವನ್ನು ಕಿತ್ತೊಗೆಯುವಂತೆ ಹೇಳಿದ್ದಾಗಿ ಇದೀಗ ರಾಹುಲ್‌ ಗಾಂಧಿ ಬಾಂಬ್‌ ಸಿಡಿಸಿದ್ದಾರೆ.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ವಶಕ್ಕೆ ಪಡೆದ ಪೊಲೀಸರು

ದೆಹಲಿ, ಜು. 22: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಡಳಿತರೂಢ ಬಿಜೆಪಿ ಮತ್ತು ವಿಪಕ್ಷಗಳ ನಡುವಿನ ಸಂಘರ್ಷ ತಾರಕಕ್ಕೇರಿದೆ. ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮದ ವಿರುದ್ಧ ಕಾಕ್ರೋಚ್‌ ಜನತಾ ಪಾರ್ಟಿ (CJP) ಆಯೋಜಿಸಿರುವ ಹೋರಾಟ ಮತ್ತಷ್ಟು ಶಕ್ತವಾಗಿದ್ದು, ಕಾಂಗ್ರೆಸ್‌ ಅಧಿಕೃತವಾಗಿ ಬೆಂಬಲ ಘೋಷಿಸಿ ರಂಗಕ್ಕಿಳಿದಿದೆ. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ (Dharmendra Pradhan) ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ರಾಹುಲ್‌ ಗಾಂಧಿ (Rahul Gandhi) ನೇತೃತ್ವದಲ್ಲಿ ಮಂಗಳವಾರ (ಜುಲೈ 21) ಲೋಕಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ನಿವಾಸದೆದುರು ಧರಣಿ ನಡೆಸಲಾಯಿತು. ಸುರಕ್ಷತೆಯ ಕಾರಣದಿಂದ ಪೊಲೀಸರು ಧರಣಿನಿರತ ರಾಹುಲ್‌ ಗಾಂಧಿ ಅವರನ್ನು ವಶಕ್ಕೆ ಪಡೆದು ಸಂಜೆ ಅಲ್ಲಿಂದ ಕರೆದೊಯ್ಯುವ ಮೂಲಕ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಯಿತು. ತಮ್ಮನ್ನು ಬಲವಂತದಿಂದ ಕರೆದೊಯ್ಯುವ ವೇಳೆ ಪೊಲೀಸ್‌ ಅದಿಕಾರಿಯೊಬ್ಬರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಕಿತ್ತೊಗೆಯಿರಿ ಎಂದು ಕಿವಿಯಲ್ಲಿ ಪಿಸುಗುಟ್ಟಿದ್ದಾಗಿ ರಾಹುಲ್‌ ಗಾಂಧಿ ಹೇಳಿದ್ದಾರೆ.

ಸದ್ಯ ರಾಹುಲ್‌ ಗಾಂಧಿ ಅವರ ಈ ಹೇಳಿಕೆ ಭಾರಿ ಸಂಚಲ ಮೂಡಿಸಿದೆ. ʼʼನನ್ನನ್ನು ಪೊಲೀಸರು ಕರೆದೊಯ್ಯುವಾಗ ಅಪರೂಪದ ಪ್ರಸಂಗ ನಡೆಯಿತು. ನನ್ನನ್ನು ಹಿಡಿದುಕೊಂಡಿದ್ದ ಪೊಲೀಸ್‌ ಅಧಿಕಾರಿ ಈ ಸರ್ಕಾರವನ್ನು ಕಿತ್ತು ಹಾಕಿ ಎಂದು ಕಿವಿಯಲ್ಲಿ ಪಿಸುಗುಟ್ಟಿದರುʼʼ ಎಂದು ರಾಹುಲ್‌ ಗಾಂಧಿ ಬಾಂಬ್‌ ಸಿಡಿಸಿದ್ದಾರೆ.

ರಾಹುಲ್‌ ಗಾಂಧಿ ಅವರ ಹೇಳಿಕೆ:



ರಾಹುಲ್‌ ಗಾಂಧಿ ಹೇಳಿದ್ದೇನು?

ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಇದೇ ವೇಳೆ ಅವರು ದೇಶದ ಶಿಕ್ಷಣ ವ್ಯವಸ್ಥೆ ಹದಗೆಟ್ಟಿದೆ ಎಂದು ದೂರಿದ್ದಾರೆ. ʼʼಸರ್ಕಾರದ ಆಜ್ಞೆಯನ್ನು ಪೊಲೀಸರು ಪಾಲಿಸುತ್ತಾರೆ. ಆದರೆ ಈ ಬಗ್ಗೆ ಅವರೂ ಅಸಮಾಧಾನಗೊಂಡಿದ್ದಾರೆ. ಅಪರಾಧ ನಡೆದಿದೆ ಎಂದು ಅವರಿಗೆ ತಿಳಿಸಿದೆ. ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳಲ್ಲಿ ಅವರು ತಮ್ಮದೇ ಮಕ್ಕಳನ್ನು ನೋಡುತ್ತಿದ್ದಾರೆʼʼ ಎಂದು ಹೇಳಿದ್ದಾರೆ.

ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಕಾಂಗ್ರೆಸ್‌ ನಾಯಕರು ಪೊಲೀಸ್‌ ವಶಕ್ಕೆ; ಪ್ರಧಾನಿ ನಿವಾಸದ ಮುಂದೆ ಹೈಡ್ರಾಮ

ʼʼನನ್ನನ್ನು ತಳ್ಳಿದರು, ದೂಡಿದರು. ಆದರೆ ಇದರಿಂದ ನನಗೇನೂ ಸಮಸ್ಯೆ ಇಲ್ಲ. ವಿರೋಧ ಪಕ್ಷದ ನಾಯಕನಾಗಿ ನನ್ನ ಕರ್ತವ್ಯ ನಿರ್ವಹಿಸಿದೆ. ಯುವಜನತೆಗೆ ಆಗುತ್ತಿರುವ ನೋವನ್ನು ಜಗತ್ತಿನೆದುರು ತೆರೆದಿಟ್ಟೆ. ಇದಕ್ಕಿಂತಲೂ ಹೆಚ್ಚಿನದನ್ನು ಅನುಭವಿಸಲು ನಾನು ಸಿದ್ಧʼʼ ಎಂದು ತಿಳಿಸಿದ್ದಾರೆ.

152 ಪ್ರಶ್ನೆಪತ್ರಿಕೆ ಸೋರಿಕೆ

ಪ್ರತಿಭಟನೆಯ ಸೂಚಕವಾಗಿ ರಾಹುಲ್‌ ಕಪ್ಪು ಬ್ಯಾಂಡ್‌ ಕಟ್ಟಿಕೊಂಡು ಆಗಮಿಸಿದರು. ಇತ್ತ ವಿಪಕ್ಷಗಳ ಸದಸ್ಯರು ಕಪ್ಪು ಬಟ್ಟೆ ಧರಿಸಿ ಬುಧವಾರ ಸಂಸತ್‌ ಕಲಾಪಕ್ಕೆ ಹಾಜರಾಗಿದ್ದರು. ಈ ವೇಳೆಯೂ ರಾಹುಲ್‌ ಗಾಂಧಿ ಮೋದಿ ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದರು. ʼʼದಶಕದಿಂದೀಚೆಗೆ ಸುಮಾರು 152 ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದು, ಯಾರಿಗೂ ಶಿಕ್ಷೆಯಾಗಿಲ್ಲ. ಪ್ರತಿ ತಿಂಗಳಿಗೊಂದರಂತೆ ಪ್ರಶ್ನೆಪತ್ರಿಕೆ ಅಕ್ರಮ ನಡೆದಿದ್ದು, ಇದು ದೇಶದ ಶಿಕ್ಷಣ ವ್ಯವಸ್ಥೆಯನ್ನು ದುರ್ಬಲಗೊಳಿಸಿದೆʼʼ ಎಂದು ಆರೋಪಿಸಿದ್ದರು.

ಪ್ರಧಾನಿ ನಿವಾಸದ ಮುಂಭಾಗ ಕಾಂಗ್ರೆಸ್ ಪ್ರತಿಭಟನೆ: "ಅಪಾಯಕಾರಿ ನಡೆ" ಎಂದ ಕೇಂದ್ರ ಸರ್ಕಾರ

ʼʼಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸುತ್ತಿರುವ ವಿದ್ಯಾರ್ಥಿಗಳ ಬೇಡಿಕೆ ನ್ಯಾಯಸಮ್ಮತವಾಗಿದೆ. ಪ್ರಧಾನ್ ಭ್ರಷ್ಟ ಮತ್ತು ಅಸಮರ್ಥ ವ್ಯಕ್ತಿ. ಅವರನ್ನು ತೆಗೆದುಹಾಕಬೇಕು" ಎಂದು ರಾಹುಲ್ ಆಗ್ರಹಿಸಿದ್ದರು.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author