ಪ್ರಧಾನಿ ನಿವಾಸದ ಮುಂಭಾಗ ಕಾಂಗ್ರೆಸ್ ಪ್ರತಿಭಟನೆ: "ಅಪಾಯಕಾರಿ ನಡೆ" ಎಂದ ಕೇಂದ್ರ ಸರ್ಕಾರ
ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ನಿವಾಸದ ಎದುರು ಕಾಂಗ್ರೆಸ್ ನಾಯಕರು ನಡೆಸಿದ ಪ್ರತಿಭಟನೆಗೆ ಕೇಂದ್ರ ಸರ್ಕಾರಿ ಮೂಲಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇದನ್ನು ಅಪಾಯಕಾರಿ ನಡೆ ಎಂದು ಬಣ್ಣಿಸಿವೆ. ಪ್ರತಿಭಟನೆ ವೇಳೆ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಹಲವು ನಾಯಕರು ಪೊಲೀಸರ ವಶಕ್ಕೆ ಪಡೆದ ಘಟನೆ ರಾಜಕೀಯ ಚರ್ಚೆಗೆ ಕಾರಣವಾಗಿದೆ.
ರಾಹುಲ್ ಗಾಂಧಿಯನ್ನು ವಶಕ್ಕೆ ಪಡೆದ ಪೊಲೀಸರು -
ನವದೆಹಲಿ, ಜು. 21: ರಾಹುಲ್ ಗಾಂಧಿ (Rahul Gandhi) ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಸೇರಿ ಹಲವು ಹಿರಿಯ ಕಾಂಗ್ರೆಸ್ ನಾಯಕರು ನವದೆಹಲಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಅಧಿಕೃತ ನಿವಾಸದ ಮುಂಭಾಗ ಪ್ರತಿಭಟನೆ ನಡೆಸಿದ್ದಕ್ಕೆ ಕೇಂದ್ರ ಸರ್ಕಾರಿ ಮೂಲಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ವಿಪಕ್ಷದ ಈ ನಡೆಯನ್ನು 'ಅತ್ಯಂತ ತಪ್ಪು ಮತ್ತು ಅಪಾಯಕಾರಿ ಸಂಪ್ರದಾಯ' ಎಂದು ಹೇಳಿರುವ ಸರ್ಕಾರಿ ಮೂಲಗಳು, ಇದು ಗಂಭೀರ ಭದ್ರತಾ ಬೆದರಿಕೆಯನ್ನು ಒಡ್ಡುತ್ತದೆ ಎಂದು ಕಳವಳ ವ್ಯಕ್ತಪಡಿಸಿವೆ.
ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ರಾಜಕೀಯ ನಾಯಕರ ಖಾಸಗಿ ಅಥವಾ ಅಧಿಕೃತ ನಿವಾಸಗಳನ್ನು ಗುರಿಯಾಗಿಸಿಕೊಂಡು ಇಂತಹ ಪ್ರತಿಭಟನೆಗಳನ್ನು ನಡೆಸುವುದು ಕಂಡುಬರುವುದಿಲ್ಲ. ನೆರೆಹೊರೆಯ ಬಾಂಗ್ಲಾದೇಶ ಮತ್ತು ನೇಪಾಳದಲ್ಲಿ ರಾಜಕೀಯ ನಾಯಕರ ನಿವಾಸಗಳ ಮೇಲೆ ನಡೆದ ಹಿಂಸಾತ್ಮಕ ದಾಳಿಗಳನ್ನು ಉಲ್ಲೇಖಿಸಿದ ಮೂಲಗಳು, ಇಂತಹ ಘಟನೆಗಳು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕುಸಿಯುವಂತೆ ಮಾಡುತ್ತವೆ ಎಂದು ಎಚ್ಚರಿಸಿವೆ.
ಪ್ರಿಯಾಂಕಾ ಗಾಂಧಿ ಅವರನ್ನು ವಶಕ್ಕೆ ಪಡೆದ ಪೊಲೀಸರು:
Rahul Gandhi and Priyanka Gandhi Arrested today.. Priyanka was released later.#RahulGandhi #Congress #PriyankaGandhi pic.twitter.com/K77UwvBXSg
— Waseem Sajjad (@waseem_swaty) July 21, 2026
ಗಲಾಟೆಗೆ ಕಾರಣವೇನು?
ನೀಟ್ (NEET-UG 2026) ಪರೀಕ್ಷಾ ಅಕ್ರಮಗಳನ್ನು ಖಂಡಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಹಾಗೂ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯವನ್ನು ವಿರೋಧಿಸಿ ಕಾಂಗ್ರೆಸ್ ನಾಯಕರು ಲೋಕ್ ಕಲ್ಯಾಣ್ ಮಾರ್ಗದಲ್ಲಿರುವ ಪ್ರಧಾನಿ ನಿವಾಸಕ್ಕೆ ಮೆರವಣಿಗೆ ನಡೆಸಿದ್ದರು.
ರಾಹುಲ್, ಪ್ರಿಯಾಂಕಾ ವಶಕ್ಕೆ
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ, ಸಮಾಜವಾದಿ ಪಾರ್ಟಿ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿ ಹಲವು ಪ್ರಮುಖ ನಾಯಕರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರಧಾನಿ ನರೇಂದ್ರ ಮೋದಿ ನಿವಾಸದ ಹೊರಗೆ ರಾಹುಲ್ ಗಾಂಧಿ ಧರಣಿ: ಆಪ್ ಟೀಕೆ, ಸಿಜೆಪಿ ಬೆಂಬಲ
ದೆಹಲಿ ಪೊಲೀಸರು ಪ್ರತಿಭಟನಾಕಾರರನ್ನು ತಡೆದು ಬಲವಂತವಾಗಿ ವಶಕ್ಕೆ ಪಡೆದರು. ರಸ್ತೆಯಲ್ಲಿ ಧರಣಿ ಕುಳಿತಿದ್ದ ರಾಹುಲ್ ಗಾಂಧಿ ಅವರನ್ನು ಪೊಲೀಸರು ಎತ್ತಿಕೊಂಡು ಹೋದರು. ಈ ವೇಳೆ ರಾಹುಲ್ ಅವರ ಕಣ್ಣಿನ ಕೆಳಭಾಗಕ್ಕೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಮತ್ತೊಂದೆಡೆ, ಪೊಲೀಸರು ವಶಕ್ಕೆ ಪಡೆದಾಗ ಪ್ರಿಯಾಂಕಾ ಗಾಂಧಿ ಬಸ್‌ನ ಬಾಗಿಲನ್ನು ಹಿಡಿದುಕೊಂಡು ನಿಂತ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಪೋಲೀಸ್ ಕ್ರಮದ ಬಗ್ಗೆ ಕಿಡಿಕಾರಿದ ಪ್ರಿಯಾಂಕಾ ಗಾಂಧಿ, "ಕೇಂದ್ರ ಸರ್ಕಾರವು ಭಯಪಟ್ಟಿದೆ ಮತ್ತು ಹೇಡಿತನ ಪ್ರದರ್ಶಿಸುತ್ತಿದೆ. ಆದರೆ ನಾವು ಅವರಿಗೆ ಹೆದರುವುದಿಲ್ಲ" ಎಂದು ವಾಗ್ದಾಳಿ ನಡೆಸಿದರು.
ಅಲ್ಲದೆ, "ನಿನ್ನೆ ಅಮಾಯಕ ವಿದ್ಯಾರ್ಥಿಗಳ ಮೇಲೆ ನಡೆದ ದೌರ್ಜನ್ಯಕ್ಕೆ ಪ್ರಧಾನಿ ಮೋದಿಯವರಿಂದ ಉತ್ತರ ಕೇಳಲು ನಾವು ಅವರ ಮನೆಗೆ ಮೆರವಣಿಗೆ ನಡೆಸಿದ್ದೇವೆ" ಎಂದು ರಾಹುಲ್ ಗಾಂಧಿ ತಮ್ಮ 'ಎಕ್ಸ್' ಖಾತೆಯಲ್ಲಿ ಬರೆದುಕೊಂಡಿದ್ದಾರೆ.