ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Renewable Energy: ನವೀಕರಿಸಬಹುದಾದ ಇಂಧನದಲ್ಲಿ ಭಾರತ ಹೊಸ ಮೈಲಿಗಲ್ಲು; ಒಂದೇ ದಶಕದಲ್ಲಿ ಬರೋಬ್ಬರಿ 500.89 GWಗೆ ದಾಪುಗಾಲು

Pralhad Joshi: ಭಾರತದ ನವೀಕರಿಸಬಹುದಾದ ಇಂಧನ ವಲಯದ ಸಾಧನೆ-ಯಶಸ್ಸಿನಲ್ಲಿ ಎಲ್ಲಾ ವಿದ್ಯುತ್ ಉತ್ಪಾದನಾ ಕಂಪನಿಗಳು, ಪ್ರಸರಣ ವ್ಯವಸ್ಥೆ ನಿರ್ವಾಹಕರು ಮತ್ತು ರಾಜ್ಯ ಸಂಸ್ಥೆಗಳ ಸಾಮೂಹಿಕ ಪ್ರಯತ್ನ ಅಡಕವಾಗಿದ್ದು, ಇದಕ್ಕಾಗಿ ಕೇಂದ್ರ ವಿದ್ಯುತ್ ಸಚಿವಾಲಯ ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ (MNRE) ಅಭಿನಂದಿಸುತ್ತಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.

ನವೀಕರಿಸಬಹುದಾದ ಇಂಧನದಲ್ಲಿ ಭಾರತ ಹೊಸ ಮೈಲಿಗಲ್ಲು

-

Profile Siddalinga Swamy Oct 30, 2025 11:33 PM

ನವದೆಹಲಿ,ಅ. 30: ಕಳೆದೊಂದು ದಶಕದಿಂದ ವಿದ್ಯುತ್‌ ವಲಯದಲ್ಲಿ ಭಾರತ ಐತಿಹಾಸಿಕ ಮೈಲಿಗಲ್ಲು ಸಾಧಿಸುತ್ತಿದ್ದು, ಸ್ವಚ್ಛ-ಸುರಕ್ಷಿತ ಮತ್ತು ಸ್ವಾವಲಂಬಿ ಇಂಧನ ಉತ್ಪಾದಕ ರಾಷ್ಟ್ರವಾಗಿ ಹೊರ ಹೊಮ್ಮಿದೆ. ದೇಶದ ಒಟ್ಟಾರೆ ವಿದ್ಯುತ್‌ ಬಳಕೆಯ ಶೇ.50ಕ್ಕಿಂತ ಹೆಚ್ಚು ವಿದ್ಯುತ್‌ನ್ನು ನವೀಕರಿಸಬಹುದಾದ ಇಂಧನ ಮೂಲಗಳಿಂದಲೇ (Renewable Energy) ಸೃಜಿಸಿಕೊಳ್ಳುತ್ತ ದೇಶದ ಸುಸ್ಥಿರತೆಗೆ ಅಭೂತಪೂರ್ವ ಕೊಡುಗೆ ಕೊಡಮಾಡುತ್ತಿದೆ. ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಭಾರತ ಅದಾಗಲೇ 500 GW ದಾಟಿದ್ದು, ಇದು ಬೇಡಿಕೆಯ ಶೇ.50 ಅನ್ನು ಮೀರಿ ಗುರಿ ಸಾಧಿಸಿದೆ. 2025ರ ಸೆಪ್ಟೆಂಬರ್ 30ರ ವೇಳೆಗಾಗಲೇ ದೇಶದ ಒಟ್ಟು ಸ್ಥಾಪಿತ ವಿದ್ಯುತ್ ಸಾಮರ್ಥ್ಯ 500 GW ದಾಟಿದೆ. ಅಂದರೆ 2014ರ ಮಾರ್ಚ್‌ ವೇಳೆಗೆ 249GW ಇದ್ದ ಸ್ಥಾಪಿತ ವಿದ್ಯುತ್‌ ಸಾಮರ್ಥ್ಯ ಇದೀಗ 500.89 GW ತಲುಪಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಈ ಸಾಧನೆ ಇಂಧನ ವಲಯದಾದ್ಯಂತ ಸರ್ಕಾರದ ಬಲವಾದ ನೀತಿ, ಬೆಂಬಲ ಮತ್ತು ಹೂಡಿಕೆಗೆ ಉತ್ತೇಜನ ನೀಡುತ್ತಿರುವುದನ್ನು ಪ್ರತಿಬಿಂಬಿಸುತ್ತದೆ.

ನವೀಕರಿಸಬಹುದಾದ ಇಂಧನ ಉತ್ಪಾದನೆ ದಾಖಲೆ

2025ರ ಜುಲೈ 29ರಂದು ಭಾರತ ವಿದ್ಯುತ್ ಉತ್ಪಾದನೆಯಲ್ಲಿ ಇದುವರೆಗಿನ ಅತ್ಯಧಿಕ ನವೀಕರಿಸಬಹುದಾದ ಇಂಧನ ಪಾಲನ್ನು ತಲುಪಿದೆ. ನವೀಕರಿಸಬಹುದಾದ ಇಂಧನ ಮೂಲಗಳಿಂದ ದೇಶದ ಒಟ್ಟು ವಿದ್ಯುತ್ ಬೇಡಿಕೆಯಾದ 203 GWನಲ್ಲಿ ಶೇ.51.5ರಷ್ಟು ವಿದ್ಯುತ್ ಪೂರೈಸಲ್ಪಟ್ಟು ಐತಿಹಾಸಿಕ ದಾಖಲೆ ನಿರ್ಮಿಸಿದೆ ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಅಧ್ಯಕ್ಷ ಸ್ಥಾನದಲ್ಲಿರುವ ಭಾರತ.

ಭಾರತದ ವಿದ್ಯುತ್ ಸಾಮರ್ಥ್ಯ

ನವೀಕರಿಸಬಹುದಾದ ಶಕ್ತಿ, ಜಲ ಮತ್ತು ಪರಮಾಣು ವಿದ್ಯುತ್‌ ಸೇರಿದಂತೆ ಪಳೆಯುಳಿಕೆಯೇತರ ಇಂಧನ ಮೂಲಗಳಿಂದ ಇದೀಗ ಶೇ.51ಕ್ಕಿಂತ ಹೆಚ್ಚು ಅಂದರೆ 256.09 GW ವಿದ್ಯುತ್‌ ಉತ್ಪಾದನಾ ಸಾಮರ್ಥ್ಯದಲ್ಲಿ ಸಾಗಿದೆ. ಪಳೆಯುಳಿಕೆ ಇಂಧನ ಆಧಾರಿತ ಮೂಲಗಳಿಂದ ಶೇ.49ರಷ್ಟು ಅಂದರೆ 244.80 GW ಸಾಮರ್ಥ್ಯ ಹೊಂದಿದೆ.

ನವೀಕರಿಸಬಹುದಾದ ಇಂಧನ ವಲಯದಲ್ಲಿ ಸೌರಶಕ್ತಿಯೇ ಅಗ್ರ ಸ್ಥಾನದಲ್ಲಿದೆ. ಬರೋಬ್ಬರಿ 127.33 GW ವಿದ್ಯುತ್‌ ಅನ್ನು ಸೌರ ಉತ್ಪಾದನೆಯಿಂದ ಪಡೆಯುತ್ತಿದ್ದರೆ, ಪವನ ಶಕ್ತಿಯಿಂದ 53.12 GW ವಿದ್ಯುತ್‌ ಉತ್ಪಾದಿಸುತ್ತಿದೆ. 2025–26ರ ಹಣಕಾಸು ವರ್ಷದಲ್ಲಿ (ಏಪ್ರಿಲ್–ಸೆಪ್ಟೆಂಬರ್ 2025) ಭಾರತ 28 GW ಪಳೆಯುಳಿಕೆಯೇತರ ಸಾಮರ್ಥ್ಯವನ್ನು ಮತ್ತು 5.1 GW ಪಳೆಯುಳಿಕೆ ಇಂಧನ ಸಾಮರ್ಥ್ಯವನ್ನು ಸಾಧಿಸಿದೆ. ಇದು ಭಾರತ ಶುದ್ಧ ಇಂಧನ ಉತ್ಪಾದನೆಯ ವೇಗಕ್ಕೆ ಸಾಕ್ಷಿಯಾಗಿದೆ.

ಸೌರಶಕ್ತಿ ಉತ್ಪಾದನೆ 44.50 GW, ಪವನ ಉತ್ಪಾದನೆ 29.89 GW ಮತ್ತು ಜಲವಿದ್ಯುತ್ ಉತ್ಪಾದನೆ 30.29 GW ಆಗಿದ್ದು, ಇದೇ ಮೊದಲ ಬಾರಿಗೆ ಭಾರತದ ಅರ್ಧಕ್ಕಿಂತ ಹೆಚ್ಚು ವಿದ್ಯುತ್ ಜುಲೈ 29ರಂದು ಒಂದೇ ದಿನದಲ್ಲಿ ಹಸಿರು ಮೂಲಗಳಿಂದ ಬಂದಿದೆ. ಇದು ಶುದ್ಧ ಇಂಧನ ವಲಯದಲ್ಲಿ ಭಾರತದ ಗಮನಾರ್ಹ ಬದಲಾವಣೆಯ ಸಂಕೇತವಾಗಿದೆ.

2030ಕ್ಕೂ ಮೊದಲೇ ರಾಷ್ಟ್ರೀಯ ಗುರಿ ಸಾಧನೆ

ಭಾರತ ಈಗಾಗಲೇ ತನ್ನ ಪ್ರಮುಖ COP26 ಪಂಚಾಮೃತ ಗುರಿಗಳಲ್ಲಿ ಒಂದನ್ನು ಸಾಧಿಸಿದೆ. 2030ರ ವೇಳೆಗೆ ಶೇ.50ರಷ್ಟು ಸ್ಥಾಪಿತ ವಿದ್ಯುತ್ ಸಾಮರ್ಥ್ಯವನ್ನು ಪಳೆಯುಳಿಕೆಯೇತರ ಇಂಧನ ಮೂಲಗಳಿಂದ ಹೊಂದಿದ್ದು, ಐದು ವರ್ಷಗಳ ಮೊದಲೇ ನಿಗದಿತ ಗುರಿ ಸಾಧಿಸಿ ಜಾಗತಿಕ ಮುನ್ನಡೆಯಲ್ಲಿದೆ. ಈ ಯಶಸ್ಸು ವಿದ್ಯುತ್ ಗ್ರಿಡ್ ಮತ್ತು ಶುದ್ಧ ಇಂಧನ ಪರಿವರ್ತನೆಯಲ್ಲಿ ಭಾರತದ ನಾಯಕತ್ವವನ್ನು ಎತ್ತಿ ತೋರಿಸುತ್ತದೆ.

ಹೊಸ ಉದ್ಯೋಗ ಸೃಜನೆ

ನವೀಕರಿಸಬಹುದಾದ ಇಂಧನ ವಲಯದಲ್ಲಿ ಭಾರತ ಇಟ್ಟಿರುವ ದೃಢ ಹೆಜ್ಜೆ ಹೊಸ ಉದ್ಯೋಗಾವಕಾಶಗಳನ್ನು ಸಹ ಸೃಷ್ಟಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್‌ ಜೋಶಿ ಅವರ ಇಚ್ಛಾಶಕ್ತಿಯ ಪರಿಣಾಮ ನವೀಕರಿಸಬಹುದಾದ ಇಂಧನ ವಲಯ ಉತ್ತೇಜಿತಗೊಳ್ಳುತ್ತಿದೆ. ಅಲ್ಲದೇ, ವಿದ್ಯುತ್‌ ಉತ್ಪಾದನೆ, ಸೌರ ಘಟಕಗಳ ಸ್ಥಾಪನೆ, ನಿರ್ವಹಣೆ ಮತ್ತು ನಾವೀನ್ಯತೆಗಳಲ್ಲಿ ಹೊಸ ಆವಿಷ್ಕಾರಕ್ಕೆ ನಾಂದಿ ಹಾಡಿದೆ. ಗ್ರಾಮೀಣ ಮತ್ತು ನಗರ ಯುವಕರಿಗೆ ಔದ್ಯೋಗಿಕ ಪ್ರಯೋಜನ ಲಭಿಸಿದೆ.

ಈ ಸುದ್ದಿಯನ್ನೂ ಓದಿ | ISA 8th Session: ಭಾರತದ ಸೌರ ಸಾಧನೆಗೆ ತಲೆದೂಗಿವೆ 125 ರಾಷ್ಟ್ರಗಳು

ಸಾಮೂಹಿಕ ಪ್ರಯತ್ನದ ಯಶಸ್ಸು

ಭಾರತದ ನವೀಕರಿಸಬಹುದಾದ ಇಂಧನ ವಲಯದ ಸಾಧನೆ-ಯಶಸ್ಸಿನಲ್ಲಿ ಎಲ್ಲಾ ವಿದ್ಯುತ್ ಉತ್ಪಾದನಾ ಕಂಪನಿಗಳು, ಪ್ರಸರಣ ವ್ಯವಸ್ಥೆ ನಿರ್ವಾಹಕರು ಮತ್ತು ರಾಜ್ಯ ಸಂಸ್ಥೆಗಳ ಸಾಮೂಹಿಕ ಪ್ರಯತ್ನ ಅಡಕವಾಗಿದ್ದು, ಇದಕ್ಕಾಗಿ ಕೇಂದ್ರ ವಿದ್ಯುತ್ ಸಚಿವಾಲಯ ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ (MNRE) ಅಭಿನಂದಿಸುತ್ತಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.