Shashidhara Halady Column: ಸೋಲೋ ಟ್ರಿಪ್ʼನಲ್ಲಿ ಕಂಡ ಮಳೆಕೋಂಗಿಲ !
ವಿಶಾಲ ಬಯಸೀಮೆಯ ಏಕಾಂಗಿ ಸ್ಥಳವೊಂದರಲ್ಲಿ ಥೆರೆಸಾಪುರ ಮತ್ತು ಅಲ್ಲಿನ ಚರ್ಚ್ ನಿಂತಿತ್ತು. ಅಲ್ಲಿಂದ ಮುಂದೆ ಸಿಗುವ ಮಣ್ಣುರಸ್ತೆಯಲ್ಲಿ ಒಂದೆರಡು ಕಿ.ಮೀ. ಸೈಕಲ್ ತುಳಿದೆ. ಆ ದಿನದ ಸೈಕಲ್ ಸವಾರಿಗೆ ಒಂದು ಸ್ಥೂಲ ಗುರಿಯಿತ್ತು: ಅದೇನೆಂದರೆ, ಆ ದಿಕ್ಕಿನಲ್ಲಿ ಸಾಗಿದರೆ, ಮುತ್ತಾನೆಗೆರೆ ಮತ್ತು ಆನೆಗೆರೆ ಎಂಬ ಎರಡು ದೊಡ್ಡ ಕೆರೆಗಳಿವೆ ಎಂದು ಸ್ಥಳೀಯ ಹುಡುಗರು ಹೇಳಿದ್ದರು.
-
ಶಶಾಂಕಣ
ಅದೇಕೋ ಗೊತ್ತಿಲ್ಲ, ಏಕಾಂಗಿಯಾಗಿ ಚಾರಣ, ಪ್ರವಾಸ ಮಾಡುವುದೆಂದರೆ ನನಗೆ ಎಲ್ಲಿಲ್ಲದ ಹುಚ್ಚು! ಗೊತ್ತಿಲ್ಲದ ದಾರಿಗಳಲ್ಲಿ ಏಕಾಂಗಿಯಾಗಿ ಸಾಗುತ್ತಾ, ಅನಿರೀಕ್ಷಿತವಾಗಿ ಎದುರಾಗುವ ಸನ್ನಿವೇಶಗಳನ್ನು, ದೃಶ್ಯಗಳನ್ನು ನೋಡುವ ಆ ಹಪಹಪಿಯನ್ನು ಹೇಗೆಂದು ಅರ್ಥೈಸಬೇಕೋ ಎಂದು ಇಂದಿಗೂ ಸ್ಪಷ್ಟವಿಲ್ಲ!
ಏಕೆಂದರೆ, ಒಂದು ಮುಂಜಾನೆ ಬಾಡಿಗೆ ಸೈಕಲ್ ಪಡೆದು, ‘ಇವತ್ತು ಸೋಲೋ ಟ್ರಿಪ್ ಹೋಗುವುದೇ ಸೈ’ ಎಂದಂದುಕೊಂಡು, 130 ಕಿ.ಮೀ. ದೂರದ ಸವಳಂಗದಲ್ಲಿದ್ದ ನನ್ನ ತಂಗಿಯ ಮನೆಯತ್ತ ಸೈಕಲ್ ಪೆಡಲ್ ತುಳಿಯಲಾರಂಭಿಸಿದ ಆ ಹುಚ್ಚು ಉತ್ಸಾಹವನ್ನು ಹೇಗೆಂದು ಸಮರ್ಥಿಸಿಕೊಳ್ಳಲಿ!
ಆದರೆ, 15 ಕಿ.ಮೀ. ಸಾಗುವಷ್ಟರಲ್ಲಿ, ಹೆದ್ದಾರಿ ಎದುರಾಗಿ, ಆ ವಾಹನಗಳ ಮಧ್ಯೆ ಸುಮಾರು 100 ಕಿ.ಮೀ.ಗೂ ಅಧಿಕ ದೂರ ಸೈಕಲ್ ತುಳಿಯುವ ಶ್ರಮಕ್ಕೆ ಬೆದರಿ, ಅದೇ ಸೈಕಲ್‌ನಲ್ಲಿ ವಾಪಸಾಗಿ, ಬಾಡಿಗೆ ಪಾವತಿಸಿ ಮನೆಗೆ ಬಂದು ವಿರಮಿಸಿದ್ದು ಬೇರೆ ವಿಚಾರ! ಈ ವಿಫಲ ಸಾಹಸಕ್ಕೆ ನಾನು ಕೈ ಹಾಕಿದ್ದು ಕೆಲವು ದಶಕಗಳ ಹಿಂದೆ.ಇನ್ನೊಂದು ಭಾನುವಾರ ಮುಂಜಾನೆ ಇದೇ ರೀತಿ ಬಾಡಿಗೆ ಸೈಕಲ್ ಪಡೆದು, ಟಾರು ರಸ್ತೆಯಲ್ಲಿ ನಾಲ್ಕಾರು ಕಿ.ಮೀ. ತುಳಿದು, ಬಲಕ್ಕೆ ಹೊರಳಿಕೊಂಡು, ಬಯಲು ಸೀಮೆಯ ಪುಟ್ಟ ಹಳ್ಳಿ ಥೆರೆಸಾಪುರ ಎಂಬಲ್ಲಿಗೆ ಹೊರಟೆ.
ವಿಶಾಲ ಬಯಸೀಮೆಯ ಏಕಾಂಗಿ ಸ್ಥಳವೊಂದರಲ್ಲಿ ಥೆರೆಸಾಪುರ ಮತ್ತು ಅಲ್ಲಿನ ಚರ್ಚ್ ನಿಂತಿತ್ತು. ಅಲ್ಲಿಂದ ಮುಂದೆ ಸಿಗುವ ಮಣ್ಣುರಸ್ತೆಯಲ್ಲಿ ಒಂದೆರಡು ಕಿ.ಮೀ. ಸೈಕಲ್ ತುಳಿದೆ. ಆ ದಿನದ ಸೈಕಲ್ ಸವಾರಿಗೆ ಒಂದು ಸ್ಥೂಲ ಗುರಿಯಿತ್ತು: ಅದೇನೆಂದರೆ, ಆ ದಿಕ್ಕಿನಲ್ಲಿ ಸಾಗಿದರೆ, ಮುತ್ತಾನೆಗೆರೆ ಮತ್ತು ಆನೆಗೆರೆ ಎಂಬ ಎರಡು ದೊಡ್ಡ ಕೆರೆಗಳಿವೆ ಎಂದು ಸ್ಥಳೀಯ ಹುಡುಗರು ಹೇಳಿದ್ದರು.
ಅವರಿಗೆಲ್ಲಾ ಆ ರೀತಿಯ ಕೆರೆಗಳ ನೋಟ ತೀರಾ ಸಾಮಾನ್ಯ. ಆದರೆ, ದೂರದ ಕರಾವಳಿಯಿಂದ ಬಂದಿದ್ದ ನನಗೆ, ಬಯಲುಸೀಮೆಯಲ್ಲಿ ಅಲ್ಲಲ್ಲಿ ಹರಡಿದ್ದ ಕೆರೆಗಳೆಂದರೆ ಒಂದು ರೀತಿಯ ಬೆರೆಗು. ಆದ್ದರಿಂದ, ಕೆರೆಗಳನ್ನು ನೋಡುವ, ಅದರ ಮೇಲಿನಿಂದ ಬೀಸಿ ಬರುವ ತಂಗಾಳಿಗೆ ಮೈಒಡ್ಡುವ ಆಸೆಯಿಂದ, ಸೈಕಲ್ ತುಳಿಯುತ್ತಾ, ಮುತ್ತಾನೆಗೆರೆ ಕೆರೆಯ ಬಳಿ ಸಾರಿದೆ.
ವಿಶಾಲವಾಗಿ ಹರಡಿದ್ದ ಕೆರೆ ನೀರನ್ನು, ಆ ನೀರು ನೀಲಾಗಸದ ಬಣ್ಣವನ್ನು ಪ್ರತಿಫಲಿಸುವುದನ್ನು ನೋಡಲು ಬಂದಿದ್ದ ನನಗೆ, ಒಂದು ಬೋನಸ್ ದೃಶ್ಯ ಎದುರಾಯ್ತು! ಕೆರೆಯ ಹತ್ತಿರ ಸಾಗಿದಂತೆ, ಕೆರೆಯ ಹಿನ್ನೀರಿನಲ್ಲಿ ನೂರಾರು ಹಕ್ಕಿಗಳು ಕಂಡವು. ಅವು ‘ರಾಜಹಂಸ’ಗಳು ಅಥವಾ ಲೆಸ್ಸರ್ ಫ್ಲಾಮಿಂಗೋಗಳು. ಚಳಿಗಾಲದ ವಲಸೆಯ ಭಾಗವಾಗಿ ಆ ಕೆರೆಗೆ ಅವು ಬಂದಿದ್ದವು. ನಮ್ಮ ದೇಶ ದಲ್ಲಿ ಈ ಫ್ಲಾಮಿಂಗೋಗಳು
ಚಳಿಗಾಲದಲ್ಲಿ ಬಹು ದೂರದ ತನಕ ವಲಸೆ ಹೋಗುವುದುಂಟು. ಪಕ್ಷಿವೀಕ್ಷಣೆಯ ವಿಪರೀತ ಹವ್ಯಾಸವನ್ನು ಕಾಲೇಜು ದಿನಗಳಲ್ಲೇ ಅಂಟಿಸಿಕೊಂಡಿದ್ದ ನನಗೆ, ಆ ನಡುಮಧ್ಯಾಹ್ನ ನೂರಾರು ಫ್ಲಾಮಿಂಗೋಗಳನ್ನು ಕಂಡಾಗ ಆದ ಸಂತಸ ಅಷ್ಟಿಷ್ಟಲ್ಲ. ನನ್ನ ಪಕ್ಷಿವೀಕ್ಷಣೆಯ ದಿನಗಳಲ್ಲಿ, ಅದೇ ಮೊದಲ ಬಾರಿ ಫ್ಲಾಮಿಂಗೋಗಳನ್ನು ನೋಡಿದ್ದು.
ಇದನ್ನೂ ಓದಿ: Shashidhara Halady Column: ವಾಂಟರ್ಕ ಎಂಬ ಜೀವಿ ಗೊತ್ತೇ ನಿಮಗೆ !
ಉದ್ದ ಕಾಲಿನ ಆ ಚಂದದ ಹಕ್ಕಿಗಳು, ನೀರಿನಲ್ಲಿ ನಡೆಯುತ್ತಾ, ತಮ್ಮ ಕೊಕ್ಕನ್ನು ಕೆಸರಿನಲ್ಲಿ ಮುಳು ಗಿಸಿ, ಆಹಾರವನ್ನು ಹುಡುಕುವ ಶೈಲಿಯೇ ಮೋಹಕ. ಕೆರೆಯ ಹಿನ್ನೀರಿನ ಆ ಭಾಗವು ಮುತ್ತಾನೆಗೆರೆ ಹಳ್ಳಿಯಿಂದ ಸಾಕಷ್ಟು ದೂರವಿದ್ದುದರಿಂದ ನಿರ್ಜನವೂ ಆಗಿತ್ತು. ಹಕ್ಕಿಗಳ ದಿನಚರಿ ಗೆ ಸೂಕ್ತವೂ ಎನಿಸಿತ್ತು.
ಸುಮಾರು ಅರ್ಧಗಂಟೆಯಷ್ಟು ಕಾಲ ಅವುಗಳನ್ನು ನೋಡಿ, ಸೈಕಲನ್ನು ವಾಪಸು ತಿರುಗಿಸಿದೆ. ಆ ದಿನ ನನ್ನ ಪುಟ್ಟ ಕ್ಯಾಮೆರಾವನ್ನು ಕೊಂಡೊಯ್ದಿರಲಿಲ್ಲವಾದ್ದರಿಂದ, ಅವುಗಳ ಫೋಟೋ ತೆಗೆಯಲು ಸಾಧ್ಯವಾಗಲಿಲ್ಲ. ಹಳ್ಳಿಗೆ ವಾಪಸಾಗಿ, ಬಾಡಿಗೆ ಸೈಕಲನ್ನು ಬಾಡಿಗೆಯವರಿಗೆ ಹಿಂತಿರುಗಿ ಸುವುದರೊಂದಿಗೆ, ಆ ದಿನದ ಸೋಲೋಟ್ರಿಪ್ ಮುಗಿಯಿತು.
ಇದೇ ರೀತಿ, ನಮ್ಮ ಹಳ್ಳಿಯಲ್ಲಿ ಹಕ್ಕಿಗಳನ್ನು ಹುಡುಕಿಕೊಂಡು, ಅದೆಷ್ಟೋ ಬಾರಿ ಏಕಾಂಗಿಯಾಗಿ ಹಾಡಿ, ಹಕ್ಕಲು, ಗುಡ್ಡಗಳನ್ನು ಸುತ್ತಿದ್ದ ನೆನಪುಗಳು ನಿಜಕ್ಕೂ ಆಪ್ಯಾಯಮಾನ. ಕೆಲವು ಬಾರಿ ವಿಶೇಷ ಹಕ್ಕಿಗಳು ಕಾಣಸಿಗುತ್ತಿದ್ದವು. ಅಂಥ ಒಂದು ಏಕಾಂಗಿ ತಿರುಗಾಟದಲ್ಲಿ, ನಮ್ಮ ಹಳ್ಳಿ ಮನೆ ಯಿಂದ 2 ಕಿ.ಮೀ. ದೂರದಲ್ಲಿದ್ದ ಬಳ್ಳಿಹರವೆಂಬ ದೊಡ್ಡ ಬೆಟ್ಟದಲ್ಲಿ ಕಾಣ ಸಿಕ್ಕ ಹಾರ್ನ್ ಬಿಲ್‌ಗಳ ನೋಟ, ಅಂಥ ಒಂದು ವಿಶೇಷ ಸಂದರ್ಭ.
ನಮ್ಮ ಮನೆಯ ಪಶ್ಚಿಮ, ದಕ್ಷಿಣ ಭಾಗದಲ್ಲಿ ನಾನಾ ಹೆಸರಿನ ಗುಡ್ಡೆ, ಹಾಡಿಗಳಿವೆ. ಪಶ್ಚಿಮ ದಿಕ್ಕಿ ನಲ್ಲಿ, ದಟ್ಟ ಮರಗಳಿಂದ ತುಂಬಿದ ಸೊಪ್ಪಿನ ಅಣೆಯಿದೆ. ದಕ್ಷಿಣ ದಿಕ್ಕಿನಲ್ಲಿ, ಮನೆ ಹಿಂದಿನ ಸೇಡಿಮಣ್ಣಿನ ದರೆಯನ್ನು ಏರಿಹೋದರೆ, ಮೊದಲಿಗೆ ಹಕ್ಕಲು, ನಂತರ ನಾಲ್ಕೆಂಟು ಎತ್ತರವಾದ ಮರಗಳಿದ್ದ ಸರಕಾರಿ ಕಾಡು.
ಅದರಾಚೆ ಗಾಣದಡಿಯವರ ಹಕ್ಕಲು. ಆ ಹಕ್ಕಲಿನಲ್ಲಿ ದಟ್ಟವಾದ ಮರಗಿಡಗಳಿದ್ದು, ಅಲ್ಲಿನ ನೆಲದ ಮೇಲೆ ಗುಡ್ಡೆ ವಾಂಟರ್ಕಗಳನ್ನು (ಆಮೆ) ಹಿಂದೊಮ್ಮೆ ಕಂಡಿದ್ದೆ (ಆ ಹಕ್ಕಲನ್ನು ಈಗ ಬಾಳೆತೋಟ ಮಾಡಿದ್ದಾರಂತೆ!). ಗಾಣದಡಿಯ ಹಕ್ಕಲು ದಾಟಿದರೆ, ಬೋಳುಗುಡ್ಡ. ಹೆಸರಿಗೆ ತಕ್ಕಂತೆ ಬೋಳು ಬೋಳಾಗಿದ್ದ ಬೋಳುಗುಡ್ಡವು, ದಟ್ಟ ಹಸಿರಿನ ಆ ಪರಿಸರದಲ್ಲಿ ತೀರಾ ಬೋಳಾಗಿ ಕಾಣಿಸುತ್ತಿತ್ತು.
ಅದು ಬೋಳಾಗಿದ್ದುದರ ಹಿಂದೆ ಒಂದು ಸಣ್ಣ ದುರಂತ ಕಥೆಯಿದೆ. ಸುತ್ತಲಿನ ಎಲ್ಲಾ ಬೆಟ್ಟಗಳಲ್ಲಿ ಮರಗಿಡಗಳಿದ್ದರೆ, ಬೋಳುಗುಡ್ಡ ಮಾತ್ರ, ಜನರ ನಿರಂತರ ಚಟುವಟಿಕೆಯಿಂದಾಗಿ ಬೋಳಾಗಿ ಬಿಟ್ಟಿತ್ತು. ಹಸಿರು ತುಂಬಿದ ಪರಿಸರದ ನಡುವೆ ಪೂರ್ತಿ ಬರಡಾಗಿಬಿಟ್ಟಿರುವುದೇ ಆ ಗುಡ್ಡದ ದುರಂತ!
ಅದಕ್ಕೂ ಒಂದು ಕಾರಣವಿದೆ. ‘ಬೋಳುಗುಡ್ಡದ ವಿಶಾಲ ಜಾಗದಲ್ಲಿ ಯಾರು ಬೇಕಾದರೂ ಸೊಪ್ಪು ಸಂಗ್ರಹಿಸಬಹುದು, ಗಿಡ ಕಡಿಯಬಹುದು, ಕೊನೆಗೆ ಗಿಡದ ಬೇರನ್ನು ಸಹ ಕೀಳಬಹುದು’ ಎಂಬ ವಿನಾಯಿತಿ ಇತ್ತು. ಸುತ್ತಲಿನ ಪರಿಸರದಲ್ಲಿ ಅಂಥ ವಿನಾಯಿತಿ ಇರಲಿಲ್ಲ. ಅದರ ಪಕ್ಕದಲ್ಲಿ, ತುಸು ದೂರದಲ್ಲಿದ್ದ ಸೊಪ್ಪಿನ ಅಣೆಯಲ್ಲಿ ಮರ ಕಡಿಯುವಂತಿರಲಿಲ್ಲ.
ಸೊಪ್ಪನ್ನು ಮಾತ್ರ ಸಂಗ್ರಹಿಸಬಹುದಾಗಿದ್ದ ಕಾಡು ಅದು. ಆದ್ದರಿಂದಲೇ ಏನೋ, ಸೊಪ್ಪಿನ ಅಣೆ ಪ್ರದೇಶವು ಸರಕಾರಿ ಒಡೆತನದ್ದಾಗಿದ್ದರೂ, ಅಲ್ಲಿ ದಟ್ಟವಾದ ಮರಗಿಡಗಳು ಉಳಿದುಕೊಂಡಿದ್ದವು. ಈಚಿನ ವರ್ಷಗಳಲ್ಲಿ ಅಲ್ಲಿನ ಮರಗಿಡಗಳ ರಕ್ಷಣೆಯು ಕುಂದಿದ್ದರೂ, ಈಗಲೂ ಸಾಕಷ್ಟು ಸಂಖ್ಯೆಯ ದೊಡ್ಡ ದೊಡ್ಡ ಬೋಗಿ ಮರಗಳು ಸೊಪ್ಪಿನಅಣೆಯಲ್ಲಿದ್ದು, ಹಸಿರನ್ನು ಚೆಲ್ಲಿವೆ.
ಆದರೆ, ಪಕ್ಕದ ಬೋಳುಗುಡ್ಡದಲ್ಲಿ, ಸೊಪ್ಪು ಕತ್ತರಿಸುವ, ಗಿಡ, ಮರ ಕಡಿಯುವ ಅನುಮತಿ ಇದ್ದು ದರಿಂದ, ರೈತರು ಅಲ್ಲಿನ ಮರ, ಗಿಡ ಬಳ್ಳಿಗಳನ್ನೆಲ್ಲಾ ಪೂರ್ತಿಯಾಗಿ ಕತ್ತರಿಸಿ ಹಾಕಿದ್ದರು, ತಮ್ಮ ಕೃಷಿಗೆ ಬಳಸಿಕೊಂಡಿದ್ದರು. ಹಲವು ದಶಕಗಳ ಕಾಲ ನಡೆದ ನಿರಂತರ ಪರಿಸರ ನಾಶ ದಿಂದಾಗಿ, ಆ ಗುಡ್ಡವು ಬೋಳಾಗಿ ಬಿಟ್ಟಿತ್ತು!
ತಾವೇ ಬೋಳು ಮಾಡಿದ ಆ ಗುಡ್ಡವನ್ನು, ಸ್ಥಳೀಯರು ‘ಬೋಳುಗುಡ್ಡ’ ಎಂದೇ ಕರೆಯ ತೊಡಗಿ ದರು. ನಾನು ಏಕಾಂಗಿಯಾಗಿ ನಡೆದು ಸಾಗಿದ ಆ ದಿನ ಬೋಳುಗುಡ್ಡವು ನಿರ್ಜನ ಪ್ರದೇಶವಾಗಿತ್ತು (ನಂತರದ ವರ್ಷಗಳಲ್ಲಿ, ಭೂರಹಿತ ಕೃಷಿ ಕಾಯಕರು ಅಲ್ಲಿ ಮನೆ ಕಟ್ಟಿಕೊಂಡು ನೆಲೆಸಿದರು).
ಬೋಳುಗುಡ್ಡದ ಸನಿಹದಲ್ಲಿದ್ದ ಒಂದೆರಡು ಮರಗಳಲ್ಲಿ ಬ್ಲೂ ಜೇ ಪಕ್ಷಿಗಳು (ಉರುಳಿಗ, ನೀಲ ಕಂಠ) ಆಟವಾಡುತ್ತಿದ್ದವು. ನೀಲಕಂಠ ಅಥವಾ ಬ್ಲೂಜೇ ಪಕ್ಷಿಗಳ ಸಂಖ್ಯೆ ಸಾಕಷ್ಟು ಕಡಿಮೆ ಯಾಗಿದೆ ಎಂಬ ಕಳವಳವನ್ನು ವ್ಯಕ್ತಪಡಿಸುವ ಪತ್ರಿಕಾ ವರದಿಗಳು ಈಗ ಒಂದೆರಡು ತಿಂಗಳು ಗಳಿಂದ ಹರಿದಾಡುತ್ತಿವೆ.
ಬೋಳುಗುಡ್ಡವನ್ನು ದಾಟಿ, ಒಂದು ಕಣಿವೆಯನ್ನು ಇಳಿದು, ಮತ್ತೊಂದಿಷ್ಟು ದೂರ ನಡೆದರೆ, ಬಳ್ಳಿ ಹರ ಬೆಟ್ಟ ಸಿಗುತ್ತದೆ. ನಮ್ಮ ಹಳ್ಳಿಯ ಮಾನದಂಡದಲ್ಲಿ ಬಳ್ಳಿಹರವು ಬಹುದೊಡ್ಡ ಬೆಟ್ಟ ಮತ್ತು ಅಲ್ಲಿಂದಾಚೆ ದಟ್ಟವಾದ ಕಾಡಿದ್ದು, ಅದರ ಮೇಲೆಯೇ ನಡೆದು ಪೂರ್ವ ದಿಕ್ಕಿಗೆ ಸಾಗಿದರೆ, ಹರನ ಗುಡ್ಡವನ್ನು ತಲುಪಬಹುದು. ಈ ಎರಡೂ ಬೆಟ್ಟಗಳ ಹೆಸರಿನಲ್ಲಿ ಕಾಣಿಸುವ ‘ಹರ’ ಎಂದರೆ, ವಿಶಾಲವಾದ ಬೆಟ್ಟ ಎಂಬರ್ಥ.
ನಮ್ಮ ಹಳ್ಳಿ ಮನೆಯಿಂದ ಸಾಕಷ್ಟು ದೂರವಿರುವ, ಒಂದೆರಡು ಗುಡ್ಡಗಳನ್ನು ಹತ್ತಿ ಇಳಿದು ಸಾಗಬೇಕಾದ ಬಳ್ಳಿಹರ ನೋಡಲು ಹೊರಟಾಗ, ನಮ್ಮ ಗ್ರಾಮೀಣ ಕೌಟುಂಬಿಕ ಸನ್ನಿವೇಶದಲ್ಲಿ ತುಸು ಎಚ್ಚರಿಕೆ ವಹಿಸಬೇಕಿತ್ತು. ಈ ರೀತಿ ಗುಡ್ಡಗಳಲ್ಲಿ ನಾನು ಒಬ್ಬನೇ ಓಡಾಡುವುದನ್ನು ನಮ್ಮ ಅಮ್ಮಮ್ಮ ಗಮನಿಸಿದ್ದರೂ, ಒಂದೆರಡು ಬಾರಿ ‘ಏಕೆ, ಏನು?’ ಎಂದು ತಕರಾರು ಮಾಡಿದ್ದರೂ, ಕಾಲೇಜು ಪರೀಕ್ಷೆಯ ಸಮಯದಲ್ಲಾದರೆ ನನಗೊಂದು ವಿನಾಯತಿ ನೀಡುತ್ತಿದ್ದರು.
ಕಾಡು ಮೇಡುಗಳಲ್ಲಿ ಸುತ್ತಾಡುತ್ತಾ, ತಮ್ಮ ಮನೆಯ ಹುಡುಗ ಪೋಲಿ ಅಲೆಯಬಾರದು ಎಂಬುದೇ ಅವರ ಕಾಳಜಿ. ಆದ್ದರಿಂದ, ಬೆಟ್ಟಗುಡ್ಡಗಳಲ್ಲಿ ಅಲೆದಾಡಲು ಹೋಗುವಾಗ, ಕೈಯಲ್ಲಿ ಒಂದು ಪುಸ್ತಕವನ್ನು ಹಿಡಿದಿರುತ್ತಿದ್ದೆ. ಕೈಲೊಂದು ದಪ್ಪನೆಯ ಇಂಗ್ಲಿಷ್ ಪುಸ್ತಕ ಹಿಡಿದು, ಮನೆ ಹಿಂದಿನ ದರೆಯನ್ನು ನಾನು ಏರಿ ಹೊರಟೆನೆಂದರೆ, ಪರೀಕ್ಷೆಗಾಗಿ ಓದಲು ಹೊರಟಿದ್ದಾನೆ ಎಂದು ಅವರು ತಿಳಿಯುತ್ತಿದ್ದರು. ನನ್ನ ಕೈಲಿರುವ ಇಂಗ್ಲಿಷ್ ಪುಸ್ತಕವು ಪಠ್ಯವೋ, ಪಠ್ಯೇತರವೋ ಎಂದು ಗುರುತಿ ಸಲು, ಅವರಿಗೆ ಇಂಗ್ಲಿಷ್ ಭಾಷೆಯ ಪರಿಚಯವಿರಲಿಲ್ಲ!
ಅವರ ಅಮಾಯಕತನವನ್ನು ಹೀಗೆ ಬಳಸಿಕೊಂಡು, ಆಗಾಗ ಕಾಡು-ಮೇಡು ಸುತ್ತುತ್ತಾ, ಪಕ್ಷಿ ವೀಕ್ಷಣೆಯನ್ನೋ, ಮರಗಳ ಸಾಂಗತ್ಯವನ್ನೋ ಅರಸುತ್ತಿದ್ದ ನನಗೆ, ದೂರದ ಬಳ್ಳಿಹರಕ್ಕೆ ಹೋಗಲು ಅದೇ ಮೊದಲ ಬಾರಿ ಅವಕಾಶ ಸಿಕ್ಕಿತ್ತು.
ಹಿಂದೆ ಹೇಳಿದ ಹಕ್ಕಲು, ಬೋಳುಗುಡ್ಡ ಗಾಣದಡಿಯ ಹಕ್ಕಲು, ಎಲ್ಲವನ್ನೂ ದಾಟಿ ಬಳ್ಳಿಹರ ತಲುಪಲು ಒಂದು ಗಂಟೆಯೇ ಬೇಕಾಯ್ತು. ಸ್ವಲ್ಪ ಕಡಿದಾದ, ಗಿಡಗಂಟೆ ಬೆಳೆದಿದ್ದ ಕೊನೆಯ ಏರನ್ನು ಏರಿದ ನಂತರ, ವಿಶಾಲವಾದ ಮಟ್ಟಸ ಜಾಗ. ಅಲ್ಲೆಲ್ಲಾ ಸಾಕಷ್ಟು ಗಿಡಮರಗಳು ಬೆಳೆದಿದ್ದವು. ತುಸು ಮುಂದೆ ಸಾಗಿದರೆ ದಟ್ಟವಾದ ಹಾಡಿಯೂ ಇತ್ತು.
ಒಮ್ಮೆಗೇ ಆಗಸದಲ್ಲಿ ಬರಬರ ಸದ್ದು! ಮರಗಳ ದಟ್ಟವಾದ ಎಲೆಗಳ ಹಿಂದೆ ‘ಕೇಂ ಕೇಂ’ ಎಂಬ ಕರ್ಕಶ ಕೂಟು! ಕಾಡಿನ ಆ ನಿಶ್ಶಬ್ದ ವಾತಾವರಣದಲ್ಲಿ ತುಸು ಬೆಚ್ಚಿ ಬೀಳಿಸುವಂಥ ಸನ್ನಿವೇಶ! ಆದರೆ ಭಯಪಡುವಂಥದ್ದೇನಿಲ್ಲ! ದೊಡ್ಡ ಗಾತ್ರದ ನಾಲ್ಕಾರು ಫೈಡ್ ಹಾರ್ನ್‌ಬಿಲ್ ಹಕ್ಕಿಗಳು, ಕೂಗುತ್ತಾ, ಹಾರುವಾಗ ಸದ್ದು ಮಾಡುತ್ತಾ ಒಂದು ಮರದಿಂದ ಇನ್ನೊಂದು ಮರಕ್ಕೆ ಕುಪ್ಪಳಿಸಿ ಹಾರುತ್ತಿದ್ದವು, ಗದ್ದಲ ಮಾಡುತ್ತಿದ್ದವು!
ಅವು ಮಲಬಾರ್ ಫೈಡ್ ಹಾರ್ನ್‌ಬಿಲ್ ಅನಿಸುತ್ತೆ- ಕಪ್ಪು ಬಿಳಿಬಣ್ಣ, ದೊಡ್ಡ ಗಾತ್ರ, ಉದ್ದನೆಯ ಕೊಕ್ಕು ದೊಡ್ಡ ಕೊಂಬಿನ ಗಾತ್ರ! ಅಷ್ಟು ದೊಡ್ಡ ಕೊಕ್ಕನ್ನು ಹೊತ್ತು ಅವು ಹಾರುವುದಾದರೂ ಹೇಗೆ ಎಂಬ ವಿಸ್ಮಯ ಮೂಡಿಸುವಂಥ ಹಕ್ಕಿಗಳು! ಆ ಪ್ರಭೇದದ ಬಾನಾಡಿಗಳ ವಿಶೇಷವೆಂದರೆ, ಮರದ ಪೊಟರೆಯಲ್ಲಿ ವಾರಗಟ್ಟಲೆ ಬಂದಿಯಾಗಿ ತಾಯಿ ಹಕ್ಕಿಯು ಮರಿಯನ್ನು ಪೋಷಿಸುವುದು, ಅಷ್ಟು ದಿನ ಪೊಟರೆಯಲ್ಲಿ ಕುಳಿತ ತಾಯಿ, ಮರಿಗೆ ಹಣ್ಣು ಮೊದಲಾದ ಆಹಾರ ತಂದುಕೊಡುವ ತಂದೆ ಹಕ್ಕಿಯ ಶ್ರಮ ಇವೆಲ್ಲಾ ಪಕ್ಷಿಲೋಕದ ವಿಸ್ಮಯಗಳಲ್ಲೊಂದಾಗಿ ದಾಖಲಾಗಿವೆ.
ಆದರೆ, ಪೊಟರೆಯಿರುವ ಹಳೆಯ ಮರಗಳ ಸಂಖ್ಯೆ ಈಚಿನ ದಶಕಗಳಲ್ಲಿ ಕಡಿಮೆಯಾಗಿರುವು ದರಿಂದ, ಅವು ಗೂಡು ಕಟ್ಟುವ ಅವಕಾಶಕ್ಕೇ ಕುಂದು ಬಂದಿದ್ದು, ನಿಧಾನವಾಗಿ ಈ ವಿಶಿಷ್ಟ ದೊಡ್ಡ ಗಾತ್ರದ ಹಕ್ಕಿಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಒಂದು ದುರಂತ. ಕಳೆದ ಕೆಲವು ದಶಕಗಳಿಂದ ವಿವೇಚನಾರಹಿತವಾಗಿ ಮಾನವನು ಕಾಡನ್ನು ನಾಶ ಮಾಡಿದ್ದರ ಫಲವನ್ನು, ಹಾರ್ನ್ಬಿಲ್‌ನಂಥ ಅಮಾಯಕ ಹಕ್ಕಿಗಳೂ ಉಣ್ಣಬೇಕಾಗಿರುವುದು ಈ ಭೂಮಿಯ ಇನ್ನೊಂದು ದುರಂತ.
ಕಪ್ಪು-ಬಿಳಿ ಬಣ್ಣದ, ದೊಡ್ಡ ಗಾತ್ರದ, ದೊಡ್ಡ ಕೊಂಬಿನ ಆ ಹಕ್ಕಿಗಳನ್ನು ನಮ್ಮ ಹಳ್ಳಿಯವರು ‘ಮಳೆ ಕೋಂಗಿಲ’ ಎಂದು ಹೆಸರಿಸಿದ್ದರು! ಬಳ್ಳಿಹರದ ನನ್ನ ಏಕಾಂಗಿ ಪಯಣವನ್ನು ಮುಗಿಸಿ ಮನೆಗೆ ಬಂದಾಗ, ಅಮ್ಮಮ್ಮ ಅಧಿಕಾರವಾಣಿಯಿಂದ ಕೇಳಿದರು
‘ಎಲ್ಲಿಗೆ ಹೋಗಿತ್ತು ಸವಾರಿ?’ ‘ಓದೋದಿಕ್ಕೆ ಹೋಗಿದ್ದೆ’ ‘ಹಕ್ಕಲಿನಲ್ಲಿ ನೀನು ದಿನಾ ಕುಳಿತುಕೊಳ್ಳುವ ಮರದ ಹತ್ತಿರ ನಾನೂ ಬಂದಿದ್ದೆ; ಗ್ವಾಯ್ ಬೀಜ ಕೊಯ್ಯಲು. ಆದರೆ ನೀನು ಮರದ ಮೇಲೆ ಕುಳಿತದ್ದು ಕಾಣಲಿಲ್ಲವಲ್ಲ? ಬೇರೆಲ್ಲಿಗೆ ಹೋಗಿದ್ದೆ?’‘ಹಾಂ ಹಾಗೇ ಸ್ವಲ್ಪ ಮುಂದೆ ಹೋಗಿದ್ದೆ. ಬಳ್ಳಿಹರದ ತನಕ ಹೋಗಿದ್ದೆ.
ಮಳೆಕೋಂಗಿಲ ಹಕ್ಕಿಗಳು ಅಲ್ಲಿದ್ದವು; ಆರೇಳು ಒಟ್ಟಿಗೇ ಹಾರ‍್ತಾ ಇದ್ದವು’ ಎಂದೆ. ಅವರ ಮುಖದಲ್ಲಿ ಅಚ್ಚರಿ, ಸಂತಸ ಎರಡೂ ಮೂಡಿದವು! ‘ಮಳೆ ಕೋಂಗಿಲ ಕಂಡ್ಯಾ. ಹಾಗಿದ್ದರೆ, ಇನ್ನೊಂದು ವಾರದಲ್ಲಿ ಮಳೆ ಬರಬಹುದು’ ಎಂದರು ಅಮ್ಮಮ್ಮ. ನನಗೆ ಏಕಾಂಗಿ ಚಾರಣದ ಹುಚ್ಚು, ಸೋಲೋ ಟ್ರಿಪ್‌ನ ಬಯಕೆಯಾದರೆ, ಅಮ್ಮಮ್ಮನಿಗೆ ಕಾಲಕಾಲಕ್ಕೆ ಮಳೆ ಬೀಳಲಿ, ಬೆಳೆ ಚೆನ್ನಾಗಿ ಬರಲಿ ಎಂಬ ಕಾಳಜಿ!
(ಇದು, 27.12.2025ರಂದು ಬಿಡುಗಡೆಯಾಗಲಿರುವ ‘ನನ್ನ ಸೋಲೋ ಟ್ರಿಪ್’ ಪುಸ್ತಕದ ಆಯ್ದ ಭಾಗ: ಸಪ್ನ ಬುಕ್ ಹೌಸ್ ಪ್ರಕಟಣೆ)