ದೆಹಲಿ, ಜ. 26: ಭಾರತವು ಪ್ರತಿವರ್ಷ ಜನವರಿ 26ರಂದು ಗಣರಾಜ್ಯೋತ್ಸವ ದಿನ (Republic Day)ವನ್ನು ಆಚರಿಸುತ್ತದೆ. 1950ರಲ್ಲಿ ಈ ದಿನ ಸಂವಿಧಾನ ಜಾರಿಯಾಯಿತು ಮತ್ತು ಭಾರತವು ಅಧಿಕೃತವಾಗಿ ಸ್ವತಂತ್ರ, ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ರೂಪುಗೊಂಡಿತು. ಈ ದಿನವನ್ನು ನೆನಪಿಸುವ ಸಲುವಾಗಿ ಹಾಗೂ ಇದರ ಮಹತ್ವವನ್ನು ದೇಶದೆಲ್ಲೆಡೆ ಪಸರಿಸುವ ಉದ್ದೇಶದಿಂದ ಈ ದಿನವನ್ನು ಗಣರಾಜ್ಯೋತ್ಸವ ದಿನವಾಗಿ ಭಾರತದಾದ್ಯಂತ ಆಚರಿಸಲಾಗುತ್ತದೆ. ಆ ದಿನ ದೆಹಲಿಯಲ್ಲಿ ನಡೆಯುವ ಭವ್ಯ ಪರೇಡ್‌ಗಳೇ ಕಣ್ಮುಂದೆ ಬರುತ್ತವೆ. ಆದರೆ ಮೊದಲಿನ ಗಣರಾಜ್ಯೋತ್ಸವವನ್ನು ದೆಹಲಿಯ ಗವರ್ನ್‌ಮೆಂಟ್ ಹೌಸ್ (Government House) ಹಾಗೂ ಇರ್ವಿನ್ ಆಂಪಿಥಿಯೇಟರ್ (Irwin Amphitheatre) ಸುತ್ತ ಕೇಂದ್ರೀಕೃತವಾಗಿ ವಿಭಿನ್ನವಾಗಿ ಆಚರಿಸಲಾಗುತ್ತಿತ್ತು.
ವಸಾಹತುಶಾಹಿ ಆಡಳಿತ ಅಂತ್ಯ
1950ರ ಜನವರಿ 26ರಂದು ಡಾ. ಬಿ.ಆರ್. ಅಂಬೇಡ್ಕರ್ (Dr BR Ambedkar) ಅವರ ನೇತೃತ್ವದಲ್ಲಿ ರೂಪುಗೊಂಡ ಭಾರತದ ಸಂವಿಧಾನ ಜಾರಿಗೊಳಿಸುವ ಮೂಲಕ, ಭಾರತವು ಬ್ರಿಟಿಷ್ ಸಾಮ್ರಾಜ್ಯದೊಂದಿಗೆ ಇದ್ದ ಅಂತಿಮ ಸಂವಿಧಾನಾತ್ಮಕ ಸಂಬಂಧಗಳನ್ನು ಕಡಿದುಕೊಂಡಿತು. 1930ರ ಪೂರ್ಣ ಸ್ವರಾಜ್ಯ ಘೋಷಣೆಯ ಸ್ಮರಣಾರ್ಥವಾಗಿ ಈ ದಿನಾಂಕವನ್ನು ಆಯ್ಕೆ ಮಾಡಲಾಗಿತ್ತು. ಆ ದಿನ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ವಸಾಹತು ಆಡಳಿತದಿಂದ ಸಂಪೂರ್ಣ ಸ್ವಾತಂತ್ರ್ಯವನ್ನು ಘೋಷಿಸಿತ್ತು.
ಸಂವಿಧಾನ ಜಾರಿಯಾದ ನಂತರ, ಭಾರತವು ಬ್ರಿಟಿಷ್ ಕ್ರೌನ್ ಅಡಿಯಲ್ಲಿ ಇದ್ದ ಡೊಮಿನಿಯನ್ ಸ್ಥಾನಮಾನವನ್ನು ತ್ಯಜಿಸಿ, ತನ್ನದೇ ಆಯ್ಕೆಯಾದ ರಾಷ್ಟ್ರಾಧ್ಯಕ್ಷನೊಂದಿಗೆ ಸ್ವತಂತ್ರ ಗಣರಾಜ್ಯವಾಗಿ ಹೊರಹೊಮ್ಮಿತು. ಇದು ರಾಷ್ಟ್ರದ ರಾಜಕೀಯ ಪಯಣದಲ್ಲಿ ನಿರ್ಣಾಯಕ ತಿರುವಾಗಿತ್ತು.
ಗವರ್ನ್‌ಮೆಂಟ್ ಹೌಸ್‌ನಲ್ಲಿ ಸಮಾರಂಭ
ಗಣರಾಜ್ಯ ಘೋಷಣೆಯ ಅಧಿಕೃತ ಸಮಾರಂಭವು ಗವರ್ನ್‌ಮೆಂಟ್ ಹೌಸ್‌ನ ಭವ್ಯ ದರ್ಬಾರ್ ಹಾಲ್‌ನಲ್ಲಿ ನಡೆಯಿತು. ಈ ಕಟ್ಟಡವೇ ಇಂದಿನ ರಾಷ್ಟ್ರಪತಿ ಭವನ. 1950ರ ಫೆಬ್ರವರಿ 4ರ ವರದಿ ಪ್ರಕಾರ, ಬೆಳಗ್ಗೆ ಸರಿಯಾಗಿ 10 ಗಂಟೆ 18 ನಿಮಿಷಕ್ಕೆ ಭಾರತವನ್ನು ಸ್ವತಂತ್ರ ಪ್ರಜಾಸತ್ತಾತ್ಮಕ ಗಣರಾಜ್ಯವೆಂದು ಘೋಷಿಸಲಾಯಿತು.
ಆರು ನಿಮಿಷಗಳ ಬಳಿಕ, ಡಾ. ರಾಜೇಂದ್ರ ಪ್ರಸಾದ್ ದೇಶದ ಮೊದಲ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಬೆಳಗ್ಗೆ 10.30ರ ನಂತರ, 31 ತೋಪುಗಳ ಗೌರವ ವಂದನೆಯೊಂದಿಗೆ ಗಣರಾಜ್ಯದ ಜನನ ಮತ್ತು ರಾಷ್ಟ್ರಪತಿಯ ನೇಮಕ ಘೋಷಿಸಲಾಯಿತು. ಪ್ರಮಾಣ ವಚನ ಸಮಾರಂಭದಲ್ಲಿ ನಿವೃತ್ತ ಗವರ್ನರ್ ಜನರಲ್ ಸಿ. ರಾಜಗೋಪಾಲಾಚಾರಿ ಗಣರಾಜ್ಯ ಘೋಷಣೆಯನ್ನು ಓದಿದರು. ನಂತರ ಡಾ. ರಾಜೇಂದ್ರ ಪ್ರಸಾದ್ ಪ್ರಮಾಣ ವಚನ ಸ್ವೀಕರಿಸಿ, ಮೊದಲು ಹಿಂದಿಯಲ್ಲಿ ಮತ್ತು ನಂತರ ಇಂಗ್ಲಿಷ್‌ನಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಸಂಕ್ಷಿಪ್ತ ಭಾಷಣ ಮಾಡಿದರು.
ಗಣರಾಜ್ಯೋತ್ಸವದ ಸ್ಟೈಲಿಂಗ್‌ಗೆ ಇಲ್ಲಿವೆ 5 ಟಿಪ್ಸ್
ರಾಷ್ಟ್ರಕ್ಕೆ ಮೊದಲ ರಾಷ್ಟ್ರಪತಿಯ ಸಂದೇಶ
ಡಾ. ರಾಜೇಂದ್ರ ಪ್ರಸಾದ್ ತಮ್ಮ ಭಾಷಣದಲ್ಲಿ ಆ ಕ್ಷಣದ ಮಹತ್ವವನ್ನು ವಿವರಿಸಿ, ಒಂದೇ ಸಂವಿಧಾನದ ಅಡಿಯಲ್ಲಿ ದೇಶ ಏಕೀಕೃತಗೊಂಡಿರುವುದನ್ನು ವಿವರಿಸಿದರು. “ಇಂದು ನಮ್ಮ ದೀರ್ಘ ಮತ್ತು ವೈವಿಧ್ಯ ಇತಿಹಾಸದಲ್ಲಿ ಮೊದಲ ಬಾರಿಗೆ, ಉತ್ತರದಲ್ಲಿ ಕಾಶ್ಮೀರದಿಂದ ದಕ್ಷಿಣದಲ್ಲಿ ಕೇಪ್ ಕೋಮರಿನ್‌ವರೆಗೆ, ಪಶ್ಚಿಮದಲ್ಲಿ ಕಥಿಯಾವಾಡ್ ಮತ್ತು ಕಚ್‌ನಿಂದ ಪೂರ್ವದಲ್ಲಿ ಕೋಕನಾದಾ ಮತ್ತು ಕಾಮರೂಪದವರೆಗೆ ವ್ಯಾಪಿಸಿರುವ ಈ ವಿಶಾಲ ಭೂಭಾಗ ಒಂದೇ ಸಂವಿಧಾನ ಮತ್ತು ಒಂದೇ ಒಕ್ಕೂಟದ ಅಧೀನದಲ್ಲಿ ಏಕೀಕೃತವಾಗಿದೆ” ಎಂದು ಅವರು ಹೇಳಿದರು.
ಮೊದಲ ಗಣರಾಜ್ಯ ದಿನ ಪರೇಡ್
ಸಮಾರಂಭದ ನಂತರ ದೆಹಲಿಯ ಬೀದಿಗಳಲ್ಲಿ ರಾಷ್ಟ್ರಪತಿ ಅವರ ಮೆರವಣಿಗೆ ಸಾಗಿತು. ಜನರು ಮನೆಗಳ ಛಾವಣಿ ಮತ್ತು ಮರಗಳ ಮೇಲೆ ಹತ್ತಿ ಮೆರವಣಿಗೆಯನ್ನು ವೀಕ್ಷಿಸುತ್ತ, ದೇಶದ ಮೊದಲ ರಾಷ್ಟ್ರಪತಿಗೆ ಕೈಮುಗಿದು ವಂದಿಸಿದರು. ಅಪರಾಹ್ನ 3.45ಕ್ಕೆ ಮೆರವಣಿಗೆ ಇರ್ವಿನ್ ಆಂಪಿಥಿಯೇಟರ್‌ನಲ್ಲಿ ಅಂತ್ಯವಾಯಿತು. ನಂತರ ಈ ಸ್ಥಳಕ್ಕೆ ನ್ಯಾಷನಲ್ ಸ್ಟೇಡಿಯಂ ಎಂದು ಹೆಸರು ಇಡಲಾಯಿತು. ಮೆರವಣಿಗೆಯಲ್ಲಿ ಸಶಸ್ತ್ರ ಪಡೆಗಳು ಮತ್ತು ಪೊಲೀಸ್ ಇಲಾಖೆಯ ಸುಮಾರು 3,000 ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು. ಸುಮಾರು 15,000 ಜನರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.
ಯಾವುದೇ ಭದ್ರತೆ ಇಲ್ಲದೇ ಡಾ. ರಾಜೇಂದ್ರ ಪ್ರಸಾದ್ ಗ್ರೇಟ್ ಪ್ಲೇಸ್ (ಇಂದಿನ ವಿಜಯ್ ಚೌಕ್)ನಲ್ಲಿ ಆಚರಣಾತ್ಮಕ ಸವಾರಿ ಮಾಡಿದ ಕ್ಷಣಗಳು ಹಾಗೂ ಸೇನಾಪಡೆಗಳು ಪರೇಡ್ ನಡೆಸಿದ ದೃಶ್ಯಗಳು, ಆ ದಿನದ ಅಮರ ಚಿತ್ರಗಳಾಗಿ ಉಳಿದಿವೆ. ನಂತರದ ವರ್ಷದಿಂದ ಗಣರಾಜ್ಯೋತ್ಸವ ಆಚರಣೆಗಳು ರಾಜಪಥ್‌ಗೆ ಸ್ಥಳಾಂತರಗೊಂಡವು. ಅದು ನಂತರ ದೇಶದ ವಾರ್ಷಿಕ ರಾಷ್ಟ್ರೀಯ ಪರೇಡ್‌ನ ಪ್ರತೀಕವಾಗಿ ರೂಪುಗೊಂಡಿತು.