ಲಖನೌ, ಸೆ. 2: ಉತ್ತರ ಪ್ರದೇಶದ ಅಯೋಧ್ಯೆ ರಾಮ ಮಂದಿರದ (Ayodhya Ram temple) ನೂತನ ಸಿಇಒ ಆಗಿ ನಿವೃತ್ತ ಏರ್ ಮಾರ್ಷಲ್ ಜಿತೇಂದ್ರ ಮಿಶ್ರಾ (Jeetendra Mishra) ಆಯ್ಕೆಯಾಗಿದ್ದಾರೆ. ರಾಮ ಮಂದಿರದಲ್ಲಿ ಕೋಟಿಗಟ್ಟಲೆ ರೂಪಾಯಿ ಕಾಣಿಕೆ ಕಳವು ನಡೆದಿರುವುದು ಬೆಳಕಿಗೆ ಬಂದ ಬಳಿಕ ದೇಗುಲಕ್ಕೆ ಹೊಸ ಆಡಳಿತಾಧಿಕಾರಿಯ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿತ್ತು. ಬುಧವಾರ (ಸೆಪ್ಟೆಂಬರ್ 2) ಉನ್ನತ ಮಟ್ಟದ ಸಭೆ ನಡೆಸಿದ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ (Shri Ram Janmabhoomi Teerth Kshetra Trust) ಜಿತೇಂದ್ರ ಮಿಶ್ರಾ ಅವರನ್ನು ಆಯ್ಕೆ ಮಾಡಿದೆ.
ಸಿಇಒ ಹುದ್ದೆಗೆ 5,000ಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದರು. ಆ ಪೈಕಿ ಅರ್ಜಿದಾರರ ಸಮಗ್ರ ಪಟ್ಟಿಯಿಂದ ಜಿತೇಂದ್ರ ಮಿಶ್ರಾ ಅವರನ್ನು ರಾಮ ಮಂದಿರ ಟ್ರಸ್ಟ್‌ನ ಮೊದಲ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಆಯ್ಕೆ ಮಾಡಲಾಗಿದೆ. ಭಾರತೀಯ ವಾಯುಪಡೆಯಲ್ಲಿ ಹಲವು ಕಮಾಂಡಿಂಗ್ ಹುದ್ದೆಗಳನ್ನು ಅಲಂಕರಿಸಿದ ಅವರು ಆಪರೇಷನ್ ಸಿಂದೂರ್ ಕಾರ್ಯಾಚರಣೆಯಲ್ಲಿ ಪಶ್ಚಿಮ ಕಮಾಂಡ್‌ನ ಮುಖ್ಯಸ್ಥರಾಗಿದ್ದರು ಎಂದು ಮೂಲಗಳು ತಿಳಿಸಿವೆ.
ದೇಣಿಗೆ ಕಳವು ಪ್ರಕರಣದಿಂದ ವಿವಾದಕ್ಕೊಳಗಾದ ರಾಮ ಮಂದಿರದ ಪ್ರತಿಷ್ಠೆಯನ್ನು ಮತ್ತು ಆರ್ಥಿಕ ಹೊಣೆಗಾರಿಕೆಯನ್ನು ಬಲಪಡಿಸುವ ಪ್ರಮುಖ ಜವಾಬ್ದಾರಿ ಇದೀಗ ಜಿತೇಂದ್ರ ಅವರ ಮೇಲಿದೆ.
ಅಯೋಧ್ಯೆ ರಾಮ ಮಂದಿರದ ಸಿಇಒ ಆಗಿ ಜಿತೇಂದ್ರ ಮಿಶ್ರಾ ಆಯ್ಕೆ:
ಯಾರು ಈ ಜಿತೇಂದ್ರ ಮಿಶ್ರಾ?
ಜಿತೇಂದ್ರ ಮಿಶ್ರಾ 1986ರ ಡಿಸೆಂಬರ್‌ನಲ್ಲಿ ಫೈಟರ್ ಪೈಲಟ್ ಆಗಿ ಭಾರತೀಯ ವಾಯುಪಡೆಗೆ ನಿಯೋಜನೆಗೊಂಡರು. 38 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ನಂತರ ಅವರು 2026ರ ಮೇಯಲ್ಲಿ ಭಾರತೀಯ ವಾಯುಪಡೆಯಿಂದ ನಿವೃತ್ತರಾದರು. ಅವರು ಪುಣೆಯ ರಾಷ್ಟ್ರೀಯ ರಕ್ಷಣಾ ಅಕಾಡೆಮಿ, ಬೆಂಗಳೂರಿನ ಏರ್ ಫೋರ್ಸ್ ಟೆಸ್ಟ್ ಪೈಲಟ್ಸ್ ಸ್ಕೂಲ್, ಅಮೆರಿಕದ ಏರ್ ಕಮಾಂಡ್ ಮತ್ತು ಸ್ಟಾಫ್ ಕಾಲೇಜು ಹಾಗೂ ಇಂಗ್ಲೆಂಡ್‌ನ ರಾಯಲ್ ಕಾಲೇಜ್ ಆಫ್ ಡಿಫೆನ್ಸ್ ಸ್ಟಡೀಸ್‌ನ ಹಳೆಯ ವಿದ್ಯಾರ್ಥಿ. ಜತೆಗೆ 3,000 ಗಂಟೆಗಳಿಗೂ ಹೆಚ್ಚು ಹಾರಾಟದ ಅನುಭವ ಹೊಂದಿದ್ದಾರೆ.
ರಾಮ ಮಂದಿರದ ಮೊದಲ CEO ಆಯ್ಕೆ: ಮೂವರು ಅಧಿಕಾರಿಗಳ ನಡುವೆ ಪೈಪೋಟಿ
ವೃತ್ತಿ ಜೀವನದ ಅವಧಿಯಲ್ಲಿ ಜಿತೇಂದ್ರ ಮಿಶ್ರಾ ಫೈಟರ್ ಸ್ಕ್ವಾಡ್ರನ್‌ನ ಕಮಾಂಡಿಂಗ್ ಆಫೀಸರ್, ಏರ್ ಕ್ರಾಫ್ಟ್ & ಸಿಸ್ಟಮ್ಸ್ ಟೆಸ್ಟಿಂಗ್ ಎಸ್ಟಾಬ್ಲಿಷ್‌ಮೆಂಟ್ (ASTE)ನಲ್ಲಿ ಮುಖ್ಯ ಪರೀಕ್ಷಾ ಪೈಲಟ್ ಮತ್ತು ಎರಡು ಮುಂಚೂಣಿ ವಾಯುನೆಲೆಗಳ ಏರ್ ಆಫೀಸರ್ ಕಮಾಂಡಿಂಗ್ ಸೇರಿ ಹಲವು ಪ್ರಮುಖ ಕಮಾಂಡ್ ಹುದ್ದೆಗಳನ್ನು ಅಲಂಕರಿಸಿದ್ದರು.
ಸಿಇಒ ಜವಾಬ್ದಾರಿಗಳೇನು?
ಅಯೋಧ್ಯೆ ರಾಮ ಮಂದಿರಕ್ಕೆ ಭಕ್ತರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿರುವ ಸಂದರ್ಭದಲ್ಲಿ ಅದರ ಆಡಳಿತ ವ್ಯವಸ್ಥೆಯನ್ನು ಬಲಪಡಿಸಬೇಕಿದೆ. ಜತೆಗೆ ಜನಸಂದಣಿ ನಿಯಂತ್ರಣ, ಭದ್ರತೆ, ಹಣಕಾಸು, ಮೂಲ ಸೌಕರ್ಯ, ಸಿಬ್ಬಂದಿ ನಿರ್ವಹಣೆ ಹಾಗೂ ಸರ್ಕಾರಿ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸುವುದು ಸೇರಿ ಹಲವು ಜವಾಬ್ದಾರಿಗಳಿ ಸಿಇಒ ಮೇಲಿದೆ. ರಾಮ ಮಂದಿರದ ದೇಣಿಗೆ ನಿರ್ವಹಣೆಯಲ್ಲಿ ಪಾರದರ್ಶಕತೆ ತರುವುದು, ಹಣಕಾಸಿನ ಹೊಣೆಗಾರಿಕೆ ಮತ್ತು ಬಲವಾದ ಆಡಳಿತಾತ್ಮಕ ವ್ಯವಸ್ಥೆ ರೂಪಿಸುವ ಹೊಣೆಗಾರಿಕೆಯೂ ಇದೆ.
ದೇಣಿಗೆ ಕಳ್ಳತನ ಬಳಿಕ ಕಣ್ಗಾವಲು ಬಿಗಿಗೊಳಿಸಿದ ಅಯೋಧ್ಯೆ ರಾಮ ಮಂದಿರ ಟ್ರಸ್ಟ್
ಮೂವರು ಹೊಸ ಸದಸ್ಯರು
ದೇವಾಲಯ ಟ್ರಸ್ಟ್ ಇನ್ನಷ್ಟು ಬಲಿಷ್ಠಗೊಳಿಸಲು ಮೂವರು ಹೊಸ ಸದಸ್ಯರನ್ನೂ ನೇಮಿಸಲಾಗಿದೆ. ಅಯೋಧ್ಯೆಯ ಮದನ್ ಮೋಹನ್ ಪಾಂಡೆ, ದೆಹಲಿಯ ಮಹೇಶ್ ಭಾಗಚಂದ್ಕ ಮತ್ತು ಶಿಕೋಹಾಬಾದ್‌ನ ನಿರ್ಮಲಾ ಯಾದವ್ ಹೊಸದಾಗಿ ಸೇರ್ಪಡೆಗೊಂಡ ಸದಸ್ಯರು.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.