ಬೆಂಗಳೂರು, ಏ. 17: 2026-27ರ ಭಾರತದ ಜನಗಣತಿಗೆ (India Census 2027) ನಡೆಯುತ್ತಿರುವ ಬೆನ್ನಲ್ಲೇ ಸಾರ್ವಜನಿಕರ ಸುರಕ್ಷತೆ ಬಗ್ಗೆಯೂ ಪ್ರಶ್ನೆಗಳು ಏಳತೊಡಗಿವೆ. ಸಾರ್ವಜನಿಕರ ವೈಯಕ್ತಿಕ ಮತ್ತು ಹಣಕಾಸಿನ ಮಾಹಿತಿಯನ್ನು ಕದಿಯಲು ವಂಚಕರು ʼಜನಗಣತಿʼ ಹೆಸರನ್ನು ಬಳಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಎಚ್ಚರಿಕೆಯಿಂದ ಇರುವುದು ಅತಿ ಅಗತ್ಯ. ಜನಗಣತಿ ಕಾರ್ಯಕರ್ತರಂತೆ ನಟಿಸಿ ಮನೆಗೆ ಬರುವ ಅಥವಾ ನಕಲಿ ಸಂದೇಶಗಳ ಮೂಲಕ ವಂಚಿಸುವ ಸಾಧ್ಯತೆಗಳ ಬಗ್ಗೆ ತಜ್ಞರು ಎಚ್ಚರಿಸಿದ್ದಾರೆ.
ನಿಜವಾದ ಜನಗಣತಿ ಅಧಿಕಾರಿಗಳು ಈ ಕೆಳಗಿನವುಗಳನ್ನು ಕೇಳುವುದಿಲ್ಲ:
ಬ್ಯಾಂಕ್ ವಿವರಗಳು: ಪೂರ್ಣ ಖಾತೆ ಸಂಖ್ಯೆಗಳು, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ (credit or debit card) ಮಾಹಿತಿ, UPI ಪಿನ್ ಅಥವಾ OTP ಗಳನ್ನು ಕೇಳುವುದಿಲ್ಲ. ಇಂತಹ ಬೇಡಿಕೆ ಇಟ್ಟರೆ ಅದನ್ನು ನಂಬಬೇಡಿ.
ಆಧಾರ್ ಮತ್ತು ಪ್ಯಾನ್ ಪ್ರತಿಗಳು: ಜನಗಣತಿ ಪ್ರಕ್ರಿಯೆಯಲ್ಲಿ ನಿಮ್ಮ ಗುರುತಿನ ಚೀಟಿಗಳ ಫೋಟೊ ಕಾಪಿ ಅಥವಾ ಜೆರಾಕ್ಸ್ ಪ್ರತಿಗಳನ್ನು ಸಂಗ್ರಹಿಸುವುದಿಲ್ಲ.
ಹಣ ಅಥವಾ ದೇಣಿಗೆ: ಜನಗಣತಿಯಲ್ಲಿ ಹೆಸರು ನೋಂದಾಯಿಸಲು ಅಥವಾ ಪರಿಶೀಲಿಸಲು ಯಾವುದೇ ಶುಲ್ಕವಿರುವುದಿಲ್ಲ.
ಪಾಸ್‌ವರ್ಡ್‌ಗಳು: ಯಾವುದೇ ಪಾಸ್‌ವರ್ಡ್ ಅಥವಾ OTPಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
ಮನೆಯೊಳಗೆ ಪ್ರವೇಶ: ಜನಗಣತಿ ಕಾರ್ಯಕರ್ತರು ನಿಮ್ಮ ಮನೆಯೊಳಗೆ ಪ್ರವೇಶಿಸಲು ಪಟ್ಟು ಹಿಡಿಯುವುದಿಲ್ಲ.
ಆ್ಯಪ್‌ಗಳ ಡೌನ್‌ಲೋಡ್: ಯಾವುದೇ ಲಿಂಕ್ ಕ್ಲಿಕ್ ಮಾಡಲು ಅಥವಾ ಅಪರಿಚಿತ ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡಲು ಅವರು ಕೇಳುವುದಿಲ್ಲ.
ಹಿಂದಿಗೆ ಗ್ರೇಡ್ ಬೇಡ, ಅಂಕ ಕೊಡಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ
ವಂಚಕರು ಕಾರ್ಯನಿರ್ವಹಿಸುವ ರೀತಿ:
ನಕಲಿ ಮನೆ ಭೇಟಿ: ಸರ್ಕಾರಿ ಅಧಿಕಾರಿಗಳಂತೆ ನಟಿಸಿ ದಾಖಲೆಗಳನ್ನು ಅಥವಾ ಪರಿಶೀಲನಾ ಶುಲ್ಕ ಕೇಳಬಹುದು.
ಫಿಶಿಂಗ್ ವೆಬ್‌ಸೈಟ್: ಅಧಿಕೃತ ವೆಬ್‌ಸೈಟ್‌ನಂತೆ ಕಾಣುವ ನಕಲಿ ಡೊಮೇನ್‌ಗಳ ಮೂಲಕ ಮಾಹಿತಿ ಕದಿಯಬಹುದು.
SMS ಮತ್ತು ಕರೆಗಳು: ಅಧಿಕೃತವಾಗಿ ನೀವು ವಿನಂತಿಸದ ಹೊರತು ಯಾವುದೇ ಭದ್ರತಾ ಕೋಡ್ ಅಥವಾ ಲಾಗಿನ್ ವಿವರಗಳನ್ನು ಕೇಳುವ ಸಂದೇಶಗಳು ಬರುವುದಿಲ್ಲ.
ಸ್ವಯಂ-ಗಣತಿ (Self-Enumeration) ಪ್ರಕ್ರಿಯೆ:
ಮೊದಲ ಬಾರಿಗೆ ಸಾರ್ವಜನಿಕರಿಗೆ ಆನ್‌ಲೈನ್ ಮೂಲಕ ವಿವರಗಳನ್ನು ತುಂಬಲು ಅವಕಾಶ ನೀಡಲಾಗಿದೆ.
ಸಾರ್ವಜನಿಕರು se.census.gov.in ಪೋರ್ಟಲ್‌ಗೆ ಭೇಟಿ ನೀಡಿ ತಮ್ಮ ಮೊಬೈಲ್ ಸಂಖ್ಯೆ ಬಳಸಿ ಲಾಗಿನ್ ಆಗಬಹುದು. ಮಾಹಿತಿ ಸಲ್ಲಿಕೆಯಾದ ನಂತರ ಯುನಿಕ್ ಸೆಲ್ಫ್-ಎನ್ಯೂಮರೇಶನ್ ಐಡಿ (SE ID) ಜನರೇಟ್ ಆಗುತ್ತದೆ. ಈ ಐಡಿಯನ್ನು ನಂತರ ಮನೆಗೆ ಭೇಟಿ ನೀಡುವ ಗಣತಿದಾರರಿಗೆ ತೋರಿಸಿ ಧೃಡೀಕರಿಸಬಹುದು.
ಜನಗಣತಿಯ ಮೊದಲ ಹಂತವಾದ 'ಮನೆ ಪಟ್ಟಿ ಮತ್ತು ವಸತಿ ಗಣತಿ' (HLO) ಪ್ರಕ್ರಿಯೆಯು 2026ರ ಏಪ್ರಿಲ್ 1ರಿಂದ ಸೆಪ್ಟೆಂಬರ್ 30ರವರೆಗೆ ನಡೆಯಲಿದೆ. ಈ ಬಗ್ಗೆ ನಿಮ್ಮ ಕುಟುಂಬದ ಸದಸ್ಯರಿಗೆ, ವಿಶೇಷವಾಗಿ ಹಿರಿಯರಿಗೆ ಅರಿವು ಮೂಡಿಸಿ. ಯಾವುದೇ ಸಂಶಯಾಸ್ಪದ ಕರೆ ಅಥವಾ ಸಂದೇಶ ಬಂದಲ್ಲಿ ತಕ್ಷಣ ಸ್ಥಳೀಯ ಅಧಿಕಾರಿಗಳಿಗೆ ವರದಿ ಮಾಡಿ.