ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

20 ರುಪಾಯಿ ಲಂಚ ಪ್ರಕರಣ: 30 ವರ್ಷಗಳ ನಂತರ ನಿರ್ದೋಷಿ ಎಂದ ಕೋರ್ಟ್, ಮರುದಿನವೇ ವ್ಯಕ್ತಿ ಸಾವು

1996ರಲ್ಲಿ ಗುಜರಾತ್‌ನ ಅಹಮದಾಬಾದ್‌ನಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಆಗಿದ್ದ ಬಾಬುಭಾಯಿ ಪ್ರಜಾಪತಿ ಅವರ ಮೇಲೆ 20 ರುಪಾಯಿ ಲಂಚ ಪಡೆದ ಆರೋಪದಡಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಅವರು 30 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದು, ಕೊನೆಗೆ ನ್ಯಾಯಾಲಯವು ಅವರನ್ನು ನಿರ್ದೋಷಿ ಎಂದು ಘೋಷಿಸಿತು. ಆದರೆ ನ್ಯಾಯ ದೊರೆತ ಮರುದಿನವೇ ಅವರು ಮೃತಪಟ್ಟಿದ್ದು, ತಡವಾಗಿ ಬಂದ ನ್ಯಾಯದ ಕ್ರೂರತೆಯನ್ನು ಈ ಘಟನೆ ಬಯಲುಗೊಳಿಸಿದೆ.

ಬಾಬುಭಾಯಿ ಪ್ರಜಾಪತಿ

ಗಾಂಧಿನಗರ, ಫೆ. 8: ಇದೊಂದು ಸಿನಿಮಾ ರೀತಿಯ ಕಥೆ ಎನಿಸಿದರೂ, ಅಂತ್ಯ ಮಾತ್ರ ಅತ್ಯಂತ ನೋವಿನಿಂದ ಕೂಡಿದೆ. ಕೇವಲ 20 ರುಪಾಯಿ ಲಂಚ ಪಡೆದ ಆರೋಪದ ಮೇಲೆ 30 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ ಗುಜರಾತ್‌ನ ವ್ಯಕ್ತಿಯೊಬ್ಬರು, ಕೊನೆಗೂ ತಾವು 'ನಿರ್ದೋಷಿ' ಎಂದು ಸಾಬೀತು ಪಡಿಸಿದ್ದಾರೆ. ಆದರೆ ದುಃಖರ ವಿಷಯವೆಂದರೆ ನ್ಯಾಯಾಲಯದಿಂದ ತೀರ್ಪು ಬಂದ ಮರುದಿನವೇ ಆ ಜೀವ ಇಹಲೋಕ ತ್ಯಜಸಿದೆ.

1996ರಲ್ಲಿ ಅಹಮದಾಬಾದ್‌ನಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಆಗಿದ್ದ ಬಾಬುಭಾಯಿ ಪ್ರಜಾಪತಿ (Babubhai Prajapati ) ಎಂಬವವರ ಮೇಲೆ 20 ರುಪಾಯಿ ಲಂಚ ಪಡೆದ ಆರೋಪ ಕೇಳಿಬಂದಿತ್ತು. ಬಳಿಕ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು.

ನ್ಯಾಯಕ್ಕಾಗಿ ಮೂರು ದಶಕ ಕಾದ ವ್ಯಕ್ತಿ

1997ರಲ್ಲಿ ಬಾಬುಭಾಯಿ ಪ್ರಜಾಪತಿ ವಿರುದ್ಧ ಸೆಷನ್ಸ್ ನ್ಯಾಯಾಲಯದಲ್ಲಿ ಚಾರ್ಜ್‌ಶೀಟ್ ಸಲ್ಲಿಕೆಯಾಯಿತು. 2003ರಲ್ಲಿ ಸಾಕ್ಷಿಗಳ ವಿಚಾರಣೆ ಆರಂಭವಾಗಿ, 2004ರಲ್ಲಿ ಸೆಷನ್ಸ್ ಕೋರ್ಟ್ ಪ್ರಜಾಪತಿಗೆ ನಾಲ್ಕು ವರ್ಷ ಜೈಲು ಶಿಕ್ಷೆ ಹಾಗೂ 3,000 ರುಪಾಯಿ ದಂಡ ವಿಧಿಸಿತು.

ಈ ತೀರ್ಪನ್ನು ಪ್ರಶ್ನಿಸಿ ಪ್ರಜಾಪತಿ ಗುಜರಾತ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲಿ ಅವರ ಅರ್ಜಿ ಬರೋಬ್ಬರಿ 22 ವರ್ಷಗಳ ಕಾಲ ಬಾಕಿ ಇತ್ತು. ಕೊನೆಗೆ ಈ ವರ್ಷ ಫೆಬ್ರವರಿ 4ರಂದು ತೀರ್ಪು ನೀಡಿದ ಗುಜರಾತ್ ಹೈಕೋರ್ಟ್, "ಸಾಕ್ಷಿಗಳ ಹೇಳಿಕೆಗಳಲ್ಲಿ ಗಂಭೀರ ವ್ಯತ್ಯಾಸಗಳಿದ್ದು, ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಬೀತುಪಡಿಸಲು ವಿಫಲವಾಗಿದೆ" ಎಂದು ಹೇಳಿ ಬಾಬುಭಾಯಿ ಅವರನ್ನು ನಿರ್ದೋಷಿ ಎಂದು ಘೋಷಿಸಿತು.

ಸಿ.ಜೆ.ರಾಯ್‌ ಆತ್ಮಹತ್ಯೆ ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಿದ ರಾಜ್ಯ ಸರ್ಕಾರ

ನ್ಯಾಯಾಲಯದ ತೀರ್ಪು ಬಂದ ಬಳಿಕ ವಕೀಲರ ಬಳಿ ಭಾವುಕರಾದ ಪ್ರಜಾಪತಿ, "ನನ್ನ ಜೀವನಕ್ಕೆ ಅಂಟಿದ್ದ ಕಪ್ಪುಚುಕ್ಕೆ ಈಗ ಅಳಿಸಿಹೋಗಿದೆ. ಈಗ ದೇವರು ನನ್ನನ್ನು ಕರೆದರೂ ನನಗೆ ಯಾವುದೇ ದುಃಖವಿಲ್ಲ" ಎಂದು ಹೇಳಿದ್ದರು. ತೀರ್ಪು ಬಂದ ದಿನ ಅತ್ಯಂತ ಸಂತೋಷದಿಂದ ಮನೆಗೆ ಮರಳಿದ್ದ ಬಾಬುಭಾಯಿ, ಮರುದಿನವೇ ಹೃದಯಾಘಾತದಿಂದ ನಿಧನರಾದರು.

ಅವರ ಪರ ವಾದ ಮಂಡಿಸಿದ್ದ ವಕೀಲ ನಿತಿನ್ ಗಾಂಧಿ ಮಾತನಾಡಿ, "ನ್ಯಾಯಾಲಯದ ತೀರ್ಪು ಬಂದ ಬಳಿಕ ಅವರು ಬಹಳ ಸಂತೋಷವಾಗಿದ್ದರು. ಅವರಿಗೆ ಬರಬೇಕಾದ ಸರ್ಕಾರದ ಸೌಲಭ್ಯಗಳ ಬಗ್ಗೆ ಚರ್ಚಿಸಲು ನಾನು ಮರುದಿನ ಕರೆ ಮಾಡಿದಾಗ, ಅವರು ಮೃತಪಟ್ಟಿರುವ ಸುದ್ದಿ ತಿಳಿಯಿತು" ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

30 ವರ್ಷಗಳ ಕಾಲ ತಮ್ಮ ಮೇಲಿದ್ದ ಭ್ರಷ್ಟಾಚಾರದ ಕಳಂಕವನ್ನು ತೊಳೆದುಕೊಳ್ಳಲು ಹೋರಾಡಿದ ಈ ವ್ಯಕ್ತಿ, ಗೌರವಯುತವಾಗಿ ಬದುಕಲು ಕಾಲಾವಕಾಶ ಸಿಗುವ ಮೊದಲೇ ಜೀವ ಕಳೆದುಕೊಂಡಿದ್ದಾರೆ.