ಮುಂಬೈ: ʼʼರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಕಾರ್ಯವು ನೂರು ವರ್ಷವನ್ನು ಪೂರೈಸುವ ಹೊತ್ತಿನ ಈ ವಿಜಯದಶಮಿ ಉತ್ಸವದಲ್ಲಿ ನಾವೆಲ್ಲರೂ ಇಲ್ಲಿ ಒಟ್ಟು ಸೇರಿದ್ದೇವೆ. ಸಂಯೋಗವೆಂದರೆ ಇದು ಗುರು ತೇಗ್ ಬಹದ್ದೂರ್ ಮಹಾರಾಜರು ದೇಹ ತ್ಯಜಿಸಿದ 350ನೇ ವರ್ಷವೂ ಹೌದು. ಅವರ ತ್ಯಾಗವು ಹಿಂದುತ್ವದ ಗುರಾಣಿಯಾಗುವ ಮೂಲಕ ಹಿಂದೂ ಸಮಾಜವನ್ನು ವಿದೇಶಿ ವಿಧರ್ಮಿಗಳ ದೌರ್ಜನ್ಯಗಳಿಂದ ರಕ್ಷಿಸಿತು. ಆಂಗ್ಲ ದಿನಾಂಕದಂತೆ ಇಂದು ಮಹಾತ್ಮಾ ಗಾಂಧೀಜಿಯವರ ಜನ್ಮದಿನ. ನಮ್ಮ ಸ್ವಾತಂತ್ರ್ಯ ಹೋರಾಟದ ಸೇನಾನಿಗಳಲ್ಲಿ ಅವರು ಅಗ್ರಗಣ್ಯರು ಮಾತ್ರವಲ್ಲದೇ ಸ್ವಾತಂತ್ರ್ಯೋತ್ತರ ಭಾರತವನ್ನು ‘ಸ್ವತ್ವ’ದ ಆಧಾರದಲ್ಲಿ ನಿರ್ಮಿಸಬೇಕೆಂಬ ಸಂಕಲ್ಪ ತೊಟ್ಟ ದಾರ್ಶನಿಕರಲ್ಲಿಯೂ ಅವರು ವಿಶಿಷ್ಟ ಸ್ಥಾನ ಹೊಂದಿದ್ದಾರೆ. ಸರಳತೆ, ವಿನಮ್ರತೆ, ಪ್ರಾಮಾಣಿಕತೆ ಹಾಗೂ ದೃಢತೆಯ ಪ್ರತಿಮೆಯಾಗಿದ್ದ ಹಾಗೂ ದೇಶಹಿತಕ್ಕಾಗಿ ತಮ್ಮ ಪ್ರಾಣವನ್ನೂ ತ್ಯಾಗ ಮಾಡಿದ ದಿವಂಗತ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನವೂ ಇಂದೇ ಆಗಿದೆʼʼ ಎಂದು ನಾಗ್ಪುರದಲ್ಲಿ ಅಕ್ಟೋಬರ್ 2 ಆಯೋಜಿಸಿರುವ ವಿಜಯದಶಮಿ ಉತ್ಸವದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘ ಚಾಲಕ ಡಾ. ಮೋಹನ್ ಭಾಗವತ್ (Mohan Bhagwat) ಹೇಳಿದರು.
ʼʼಭಕ್ತಿ, ಸಮರ್ಪಣೆ ಹಾಗೂ ದೇಶಸೇವೆಯ ಈ ಉತ್ತುಂಗ ಆದರ್ಶಗಳು ನಮಗೆಲ್ಲರಿಗೂ ಅನುಕರಣೀಯ. ಮನುಷ್ಯನು ನಿಜವಾಗಿ ಮನುಷ್ಯ ಆಗುವುದು ಹಾಗೂ ಜೀವನವನ್ನು ಮುನ್ನಡೆಸುವುದು ಹೇಗೆ ಎನ್ನುವುದರ ಶಿಕ್ಷಣವು ಈ ಮಹಾಪುರುಷರಿಂದ ನಮಗೆ ಲಭಿಸುತ್ತದೆ. ಇಂದಿನ ದೇಶ ಮತ್ತು ವಿಶ್ವದ ಪರಿಸ್ಥಿತಿ ಭಾರತೀಯರಿಂದ ಇಂತಹದ್ದೇ ವ್ಯಕ್ತಿಗತ ಮತ್ತು ರಾಷ್ಟ್ರೀಯ ಚಾರಿತ್ರ್ಯಭರಿತ ಜೀವನವನ್ನು ನಿರೀಕ್ಷಿಸುತ್ತಿದೆʼʼ ಎಂದರು.
ನಿರೀಕ್ಷೆ ಮತ್ತು ಸವಾಲುಗಳು
''ಕಳೆದ ವರ್ಷ ಒಂದು ರೀತಿಯಲ್ಲಿ ವಿಶ್ವಾಸ ಹಾಗೂ ನಿರೀಕ್ಷೆಗೆ ಹೆಚ್ಚಿನ ಬಲ ನೀಡಿದೆ. ಇನ್ನೊಂದೆಡೆ, ಈಗಾಗಲೇ ನಮ್ಮೆದುರಿರುವ ಹಳೆಯ ಸವಾಲುಗಳ ಜತೆಗೆ ಹೊಸ ಸವಾಲುಗಳನ್ನು ಮತ್ತಷ್ಟು ಸ್ಪಷ್ಟಪಡಿಸುತ್ತ ಮುಂದಿನ ಕರ್ತವ್ಯದ ಹಾದಿಯತ್ತ ನಡೆಯಲು ಮಾರ್ಗದರ್ಶನ ನೀಡಿದೆ. ಹಿಂದಿನ ವರ್ಷ ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆದ ಮಹಾಕುಂಭಮೇಳದಲ್ಲಿ ಸರ್ವ ಭಾರತೀಯರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರ ಜತೆಗೆ ಆಯೋಜನೆಯಲ್ಲಿ ಐತಿಹಾಸಿಕ ದಾಖಲೆಗಳೆಲ್ಲವನ್ನೂ ಮುರಿದು ಜಾಗತಿಕ ವಿಕ್ರಮವನ್ನು ಸ್ಥಾಪಿಸಿತು. ಈ ಮಹಾಕುಂಭಮೇಳವು ಸಂಪೂರ್ಣ ಭಾರತದಲ್ಲಿ ಶ್ರದ್ಧೆ ಹಾಗೂ ಏಕತೆಯ ಪ್ರಚಂಡ ಅಲೆಯನ್ನು ಜಾಗೃತಗೊಳಿಸಿತುʼʼ ಎಂದು ಹೇಳಿದರು.
ʼʼಇದೇ ವರ್ಷ ಏಪ್ರಿಲ್ 22ರಂದು ಜಮ್ಮು ಕಾಶ್ಮೀರದ ಗಡಿ ಪ್ರದೇಶ ಪಹಲ್ಗಾಮ್‌ನಲ್ಲಿ ದಾಳಿ ನಡೆಸಿದ ಉಗ್ರವಾದಿಗಳು, 26 ಭಾರತೀಯ ನಾಗರಿಕರಾದ ಪ್ರವಾಸಿಗರ ಹಿಂದೂ ಧರ್ಮದ ಹಿನ್ನೆಲೆಯನ್ನು ಖಚಿತಪಡಿಸಿಕೊಂಡು ಅವರನ್ನು ಹತ್ಯೆಗೈದರು. ಇದರಿಂದಾಗಿ ಸಂಪೂರ್ಣ ಭಾರತದ ನಾಗರಿಕರಲ್ಲಿ ದುಃಖ ಹಾಗೂ ಆಕ್ರೋಶದ ಜ್ವಾಲೆ ಭುಗಿಲೆದ್ದಿತು. ಮೇಯಲ್ಲಿ ಭಾರತ ಸರ್ಕಾರವು ಅತ್ಯಂತ ಯೋಜಿತ ರೀತಿಯಲ್ಲಿ ಈ ಕುಕೃತ್ಯಕ್ಕೆ ಸೂಕ್ತ ಉತ್ತರ ನೀಡಿತು. ಈ ಎಲ್ಲ ಸಂದರ್ಭಗಳಲ್ಲಿ ದೇಶದ ನಾಯಕತ್ವದ ದೃಢತೆ ಹಾಗೂ ನಮ್ಮ ಸೇನೆಯ ಪರಾಕ್ರಮ ಮತ್ತು ಯುದ್ಧ ಕೌಶಲದ ಜತೆಗೆ ಸಮಾಜದ ದೃಢತೆ ಮತ್ತು ಏಕತೆಯನ್ನು ಕಾಣಲು ಸಾಧ್ಯವಾಯಿತು. ಎಲ್ಲರ ಜತೆಗೂ ಸದಾಕಾಲವೂ ಮಿತ್ರತ್ವದ ನೀತಿ ಮತ್ತು ಮೈತ್ರಿಭಾವಕ್ಕೆ ತುಡಿಯುತ್ತಲೇ ನಮ್ಮ ಸುರಕ್ಷತೆಯ ವಿಷಯದಲ್ಲಿ ಹೆಚ್ಚು ಹೆಚ್ಚು ಜಾಗೃತರಾಗಿರಬೇಕಾದ ಅವಶ್ಯಕತೆಯನ್ನು ಈ ಸನ್ನಿವೇಶಗಳು ಮನವರಿಕೆ ಮಾಡಿಕೊಟ್ಟವುʼʼ ಎಂದು ವಿವರಿಸಿದರು.
ʼʼಈ ವಿಚಾರದಲ್ಲಿ ವಿಶ್ವದ ಇತರ ದೇಶಗಳು ತಳೆದ ನಿಲುವುಗಳು ಹಾಗೂ ಇರಿಸಿದ ಹೆಜ್ಜೆಗಳ ಮೂಲಕ, ನಮ್ಮ ಮಿತ್ರರು ಯಾರು ಹಾಗೂ ಅವರು ಎಲ್ಲಿಯವರೆಗೆ ನಮ್ಮೊಂದಿಗಿರುತ್ತಾರೆ ಎನ್ನುವ ಪರೀಕ್ಷೆಯೂ ನಡೆದುಹೋಯಿತು. ದೇಶದೊಳಗೆ ಉಗ್ರವಾದಿ ನಕ್ಸಲ್ ಕಾರ್ಯಚಟುವಟಿಕೆಗಳ ಮೇಲೆ ಸರ್ಕಾರದ ಕಠಿಣ ಹೆಜ್ಜೆಗಳು ಹಾಗೂ ನಕ್ಸಲರ ವಿಚಾರಗಳ ಪೊಳ್ಳುತನ ಹಾಗೂ ಕ್ರೂರತೆಯ ಕುರಿತು ಜನರಿಗೆ ಮನವರಿಕೆ ಆಗುತ್ತಿರುವ ಕಾರಣದಿಂದ ಈ ಸಮಸ್ಯೆಯು ಸಾಕಷ್ಟು ಪ್ರಮಾಣದಲ್ಲಿ ನಿಯಂತ್ರಣಕ್ಕೆ ಬಂದಿದೆ. ಈ ಪ್ರದೇಶಗಳಲ್ಲಿ ಚಾಲ್ತಿಯಲ್ಲಿದ್ದ ಶೋಷಣೆ ಹಾಗೂ ಅನ್ಯಾಯಗಳು, ಅಭಿವೃದ್ಧಿಯ ಕೊರತೆ ಹಾಗೂ ಈ ವಿಚಾರಗಳ ಕುರಿತು ಆಡಳಿತವು ಹೊಂದಿದ್ದ ಸಂವೇದನಾಹೀನತೆಯೇ ನಕ್ಸಲರ ಪ್ರಭಾವ ಹೆಚ್ಚಲು ಮೂಲ ಕಾರಣವಾಗಿತ್ತು. ಈಗ ನಕ್ಸಲ್ ಸಮಸ್ಯೆಯು ದೂರವಾಗಿರುವ ಬೆನ್ನಿಗೇ ಈ ಪ್ರದೇಶಗಳಲ್ಲಿ ನ್ಯಾಯಪಾಲನೆ, ಅಭಿವೃದ್ಧಿ, ಸದ್ಭಾವನೆ, ಸಂವೇದನೆ ಹಾಗೂ ಸಾಮರಸ್ಯ ಸ್ಥಾಪನೆಯ ನಿಟ್ಟಿನಲ್ಲಿ ಆಡಳಿತವು ವ್ಯಾಪಕ ಯೋಜನೆಗಳನ್ನು ರೂಪಿಸುವ ಅವಶ್ಯಕತೆಯಿದೆʼʼ ಎಂದು ಮೋಹನ್ ಭಾಗವತ್ ತಿಳಿಸಿದರು.
ಈ ಸುದ್ದಿಯನ್ನೂ ಓದಿ: Mohan Bhagwat: ʼʼಯಾವುದೇ ಸಂಘರ್ಷವಿಲ್ಲದಂತೆ ಭಾರತ 3,000 ವರ್ಷ ಜಗತ್ತನ್ನು ಮುನ್ನಡೆಸಿದೆʼʼ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
ʼʼನಮ್ಮ ಆರ್ಥಿಕ ಸ್ಥಿತಿಯು ಪ್ರಗತಿಯಲ್ಲಿದೆ. ವಿಶ್ವದಲ್ಲಿ ನಮ್ಮ ದೇಶವನ್ನು ಅಗ್ರಸ್ಥಾನದಲ್ಲಿ ನಿಲ್ಲಿಸಬೇಕೆಂಬ ಉತ್ಸಾಹವು ವಿಶೇಷವಾಗಿ ಯುವ ಪೀಳಿಗೆಯಲ್ಲಿ ಕಂಡುಬರುತ್ತಿದೆ. ಆದರೆ ಪ್ರಚಲಿತ ಆರ್ಥಿಕ ನೀತಿಯ ಪ್ರಯೋಗದ ಕಾರಣದಿಂದಾಗಿ ಶ್ರೀಮಂತ ಮತ್ತು ಬಡವರ ನಡುವಿನ ಅಂತರದ ಹೆಚ್ಚಳ, ಆರ್ಥಿಕ ಸಾಮರ್ಥ್ಯವು ಕೇಂದ್ರೀಕೃತವಾಗುವುದು, ಶೋಷಣೆ ಮಾಡುತ್ತಿದ್ದವರಿಗೆ ಶೋಷಣೆಯ ಹೊಸ ಮಾರ್ಗಗಳು ಖಚಿತವಾಗುವುದು, ಪರಿಸರ ಹಾನಿ, ಮನುಷ್ಯರ ನಡುವಿನ ವ್ಯವಹಾರಗಳಲ್ಲಿ ಸಂಬಂಧಗಳ ಜಾಗವನ್ನು ವ್ಯಾಪಾರಿ ದೃಷ್ಟಿ ಮತ್ತು ಅಮಾನವೀಯತೆಯು ಆಕ್ರಮಿಸಿಕೊಂಡಿದೆ. ಇಂತಹ ದೋಷಗಳು ಇದೀಗ ವಿಶ್ವದೆಲ್ಲೆಡೆಯೂ ಕಾಣಿಸಿಕೊಂಡಿವೆ. ಈ ಎಲ್ಲ ದೋಷಗಳ ಪರಿಣಾಮ ನಮ್ಮ ಮೇಲೆ ಆಗದಿರಲಿ ಎಂಬ ಕಾರಣಕ್ಕೆ ಹಾಗೂ ಇದೀಗ ಅಮೆರಿಕವು ತನ್ನ ಹಿತ ಕಾಯ್ದುಕೊಳ್ಳುವ ನೆಪದಲ್ಲಿ ಕೈಗೊಂಡಿರುವ ಆಮದು ಶುಲ್ಕ ಹೆಚ್ಚಳದ ಪರಿಣಾಮವನ್ನೂ ಕ್ಷೀಣಗೊಳಿಸಲು ನಾವು ಕೆಲವು ವಿಚಾರಗಳಲ್ಲಿ ಪುನರಾವಲೋಕನ ಮಾಡಿಕೊಳ್ಳಬೇಕಿದೆ. ವಿಶ್ವವು ಪರಸ್ಪರ ನಿರ್ಭರತೆಯ ಮೂಲಕ ಕಾರ್ಯನಿರ್ವಹಿಸುತ್ತಿದೆ. ಆದರೆ ಈ ಪರಸ್ಪರಾವಲಂಬನೆಯು ನಮ್ಮನ್ನು ಒತ್ತಡಕ್ಕೆ ಸಿಲುಕಿಸದಂತೆ ನಾವು ಎಚ್ಚರವಹಿಸಿ ಆತ್ಮ ನಿರ್ಭರವಾಗಬೇಕು ಹಾಗೂ ಅದರ ಆಧಾರದಲ್ಲಿ ವಿಶ್ವದ ಏಕತೆಯನ್ನು ಗಮನದಲ್ಲಿರಿಸಿಕೊಂಡು ನಮ್ಮ ಇಚ್ಛೆಗೆ ಅನುಗುಣವಾಗಿ ಬದುಕಲು ಸಾಧ್ಯವಾಗಬೇಕಿದೆ. ಸ್ವದೇಶಿ ಹಾಗೂ ಸ್ವಾವಲಂಬನೆಗೆ ಯಾವ ಪರ್ಯಾಯವೂ ಇಲ್ಲʼʼ ಎಂದು ಹೇಳಿದರು.
ʼʼಭೌತಿಕವಾದ ಮತ್ತು ಸಂಕುಚಿತ ದೃಷ್ಟಿಯಾಧಾರಿತ ಅಭಿವೃದ್ಧಿಯ ಪರಿಕಲ್ಪನೆಯನ್ನು ಕೇಂದ್ರವಾಗಿರಿಸಿಕೊಂಡ ಭೌತಿಕವಾದ ಮತ್ತು ಉಪಭೋಗವಾದಿ ನೀತಿಯು ವಿಶ್ವದಾದ್ಯಂತ ಪ್ರಚಲಿತವಾಗಿರುವುದರ ದುಷ್ಪರಿಣಾಮಗಳು ಹೆಚ್ಚುತ್ತಿರುವುದು ಈಗ ಎಲ್ಲೆಡೆ ಗೋಚರವಾಗುತ್ತಿವೆ. ಈ ನೀತಿಯ ಕಾರಣದಿಂದಲೇ ಭಾರತದಲ್ಲಿ ಅನಿಯಮಿತ ಮತ್ತು ಅನಿರೀಕ್ಷಿತ ಮಳೆ, ಭೂಕಂಪನ, ಹಿಮನದಿಗಳ ಒಣಗುವಿಕೆ ಮುಂತಾದ ಪರಿಣಾಮಗಳು ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ತೀವ್ರವಾಗಿವೆ. ನೈಋತ್ಯ ಏಷ್ಯಾ ಭೂಭಾಗದ ಸಂಪೂರ್ಣ ಜಲಮೂಲವು ಹಿಮಾಲಯವೇ ಆಗಿದೆ. ಹಿಮಾಲಯ ಪ್ರದೇಶದಲ್ಲಿ ಇತ್ತೀಚೆಗೆ ದುರ್ಘಟನೆಗಳು ಸಂಭವಿಸುತ್ತಿರುವುದು ಭಾರತ ಹಾಗೂ ನೈಋತ್ಯ ಏಷ್ಯಾದ ಇನ್ನಿತರ ದೇಶಗಳಿಗೆ ಎಚ್ಚರಿಕೆಯ ಘಂಟೆ ಎಂದೇ ಭಾವಿಸಬೇಕಾಗಿದೆʼʼ ಎಂದರು.
ʼʼಕಳೆದ ವರ್ಷಗಳಲ್ಲಿ ನಮ್ಮ ನೆರೆಹೊರೆ ದೇಶಗಳಲ್ಲಿ ಅನೇಕ ಏರಿಳಿತಗಳು ಸಂಭವಿಸಿವೆ. ಶ್ರೀಲಂಕಾದಲ್ಲಿ, ಬಾಂಗ್ಲಾದೇಶದಲ್ಲಿ ಹಾಗೂ ಇತ್ತೀಚೆಗಷ್ಟೇ ನೇಪಾಳದಲ್ಲಿ ನಡೆದ ಜನಾಕ್ರೋಶದ ಹಿಂಸಾತ್ಮಕ ರೂಪ ಮತ್ತು ಆಡಳಿತ ಪರಿವರ್ತನೆ ನಡೆದ ರೀತಿಯು ನಾವು ಚಿಂತಿಸಬೇಕಾದ ವಿಚಾರಗಳಾಗಿವೆ. ಭಾರತದಲ್ಲಿಯೂ ಇಂತಹ ಘಟನೆಗಳು ನಡೆಯಬೇಕು ಎಂಬ ಶಕ್ತಿಗಳು ನಮ್ಮ ದೇಶದೊಳಗೆ ಹಾಗೂ ವಿದೇಶಗಳಲ್ಲಿಯೂ ಸಕ್ರಿಯವಾಗಿವೆ. ಸಮಾಜದೊಂದಿಗೆ ಆಡಳಿತವು ಸಂಬಂಧವನ್ನು ಕಡಿದುಕೊಂಡಿರುವುದು, ಚುರುಕು ಮತ್ತು ಲೋಕಹಿತದ ಆಡಳಿತ ಕಾರ್ಯಗಳ ಕೊರತೆಯು ಈ ರೀತಿಯ ಅಸಂತೋಷಗಳ ಉಲ್ಬಣಕ್ಕೆ ಸ್ವಾಭಾವಿಕ ಹಾಗೂ ತತ್ಕಾಲೀನ ಕಾರಣಗಳಾಗಿರುತ್ತವೆ. ಆದರೆ ಹಿಂಸಾತ್ಮಕ ಅಭಿವ್ಯಕ್ತಿಯು ನಿರೀಕ್ಷಿತ ಪರಿವರ್ತನೆ ಉಂಟು ಮಾಡುವ ಸಾಮರ್ಥ್ಯವನ್ನು ಹೊಂದಿರುವುದಿಲ್ಲ. ಪ್ರಜಾತಾಂತ್ರಿಕ ಮಾರ್ಗಗಳ ಮೂಲಕವಷ್ಟೇ ಸಮಾಜವು ಆಮೂಲಾಗ್ರ ಪರಿವರ್ತನೆಯನ್ನು ತರಬಲ್ಲದು. ಇಲ್ಲದಿದ್ದರೆ ಇಂತಹ ಹಿಂಸಾತ್ಮಕ ಸಂದರ್ಭಗಳಲ್ಲಿ ವಿಶ್ವದ ಪ್ರಭಾವಿ ಶಕ್ತಿಗಳು ಸ್ವಹಿತವನ್ನು ಸಾಧಿಸಿಕೊಳ್ಳುವ ಅವಕಾಶವನ್ನು ನೀಡಿದಂತಾಗುತ್ತದೆ. ಈ ನೆರೆಯ ದೇಶಗಳು ಸಾಂಸ್ಕೃತಿಕ ದೃಷ್ಟಿಯಿಂದ ಹಾಗೂ ನಾಗರಿಕರ ದಿನನಿತ್ಯದ ಸಂಬಂಧಗಳ ದೃಷ್ಟಿಯಿಂದಲೂ ಭಾರತದೊಂದಿಗೆ ಬೆಸೆದುಕೊಂಡಿವೆ. ಒಂದು ರೀತಿಯಲ್ಲಿ ಈ ನೆರೆಯ ದೇಶಗಳು ನಮ್ಮದೇ ಪರಿವಾರ. ಅಲ್ಲೆಲ್ಲ ಶಾಂತಿ ನೆಲೆಸಲಿ, ಸ್ಥಿರತೆ ಬರಲಿ ಹಾಗೂ ಅಭಿವೃದ್ಧಿಯಾಗಲಿ, ಸುಖ ಮತ್ತು ಸಮೃದ್ಧಿಯಾಗಲಿ ಎನ್ನುವುದು ನಮ್ಮ ಹಿತದೃಷ್ಟಿಯನ್ನೂ ಮೀರಿ ಎಲ್ಲರಲ್ಲೂ ಆತ್ಮೀಯತೆಯನ್ನು ಕಾಣುವ ನಮ್ಮ ಸ್ವಾಭಾವಿಕ ಅವಶ್ಯಕತೆಯಾಗಿದೆʼʼ ಎಂದು ಹೇಳಿದರು.
ಸಕಾರಾತ್ಮಕ ಚಿತ್ರಣ
ʼʼಜಗತ್ತಿನಾದ್ಯಂತ ಜ್ಞಾನ-ವಿಜ್ಞಾನದ ಪ್ರಗತಿ, ಮಾನವ ಜೀವನದ ಹಲವು ಅಂಶಗಳನ್ನು ಹೆಚ್ಚು ಅನುಕೂಲವಾಗಿಸುವ ತಂತ್ರಜ್ಞಾನದ ಸಾಮರ್ಥ್ಯ ಹಾಗೂ ಸಂವಹನ ಮತ್ತು ಜಾಗತಿಕ ವ್ಯಾಪಾರದಿಂದಾಗಿ ದೇಶಗಳ ನಡುವೆ ಹೆಚ್ಚುತ್ತಿರುವ ಸಂಬಂಧವು ಸಕಾರಾತ್ಮಕ ಚಿತ್ರಣವನ್ನು ನೀಡುತ್ತಿದೆ. ಆದರೂ ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿಯ ವೇಗ ಮತ್ತು ಮಾನವ ಇವುಗಳಿಗೆ ಹೊಂದಿಕೊಳ್ಳುವ ವೇಗದ ನಡುವೆ ಗಣನೀಯ ವ್ಯತ್ಯಾಸವಿದೆ. ಇದರಿಂದಾಗಿ, ಸಾಮಾನ್ಯ ಜನರ ಜೀವನದಲ್ಲಿ ಹಲವು ಸಮಸ್ಯೆಗಳು ಉತ್ಪತ್ತಿಯಾಗುವುದು ಗೋಚರಿಸುತ್ತಿದೆ. ಅದೇ ರೀತಿ, ಜಗತ್ತಿನಾದ್ಯಂತ ನಡೆಯುತ್ತಿರುವ ಯುದ್ಧಗಳ ಸಹಿತ ಇತರ ದೊಡ್ಡ ಮತ್ತು ಸಣ್ಣ ಸಂಘರ್ಷಗಳು, ಪರಿಸರ ಹಾನಿಯಿಂದಾಗಿ ಪ್ರಕೃತಿಯ ವಿಕೋಪ, ಸಾಮಾಜಿಕ ಮತ್ತು ಕೌಟುಂಬಿಕ ಸಂಬಂಧಗಳು ದುರ್ಬಲಗೊಳ್ಳುತ್ತಿರುವುದು ಮತ್ತು ನಾಗರಿಕ ಜೀವನದಲ್ಲಿ ಹೆಚ್ಚಾಗುತ್ತಿರುವ ಅನಾಚಾರ ಮತ್ತು ಅತ್ಯಾಚಾರದಂತಹ ಸಮಸ್ಯೆಗಳೂ ಜತೆಗೆ ಹೆಚ್ಚಾಗುವುದು ಕಂಡುಬರುತ್ತಿವೆ. ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಗಳನ್ನು ಮಾಡಲಾಗಿದೆಯಾದರೂ ಪರಿಸ್ಥಿತಿಯು ಹದಗೆಡುವುದನ್ನು ತಡೆಯಲು ಅಥವಾ ಸಮಗ್ರ ಪರಿಹಾರವನ್ನು ಒದಗಿಸಲು ಅವು ವಿಫಲವಾಗಿವೆ. ಸಂಸ್ಕೃತಿ, ಶ್ರದ್ಧೆ, ಪರಂಪರೆಗಳ ಸಂಪೂರ್ಣ ವಿನಾಶವೇ ಈ ಸಮಸ್ಯೆಗಳನ್ನು ಪರಿಹರಿಸಲು ಅಗತ್ಯವೆಂದು ನಂಬುವ ವಿಕೃತ ಮತ್ತು ವಿಪರೀತ ವಿಚಾರ ಹೊಂದಿದ ಶಕ್ತಿಗಳಿಂದಾಗಿ ಎಲ್ಲ ದೇಶಗಳೂ ಅಪಾಯವನ್ನು ಎದುರಿಸುತ್ತಿವೆ. ಮಾನವೀಯತೆಯ ಮೇಲೆ ಪರಿಣಾಮ ಬೀರುವ ಸಾಮಾಜಿಕ ಅನಿಷ್ಟಗಳು, ಸಂಘರ್ಷ ಮತ್ತು ಹಿಂಸೆಯನ್ನು ಈ ಶಕ್ತಿಗಳು ಉಲ್ಬಣಗೊಳಿಸುತ್ತವೆ. ಭಾರತದಲ್ಲಿಯೂ ಈ ಎಲ್ಲಾ ಸನ್ನಿವೇಶಗಳನ್ನು ನಾವು ವಿವಿಧ ರೀತಿಯಲ್ಲಿ ಅನುಭವಿಸುತ್ತಿದ್ದೇವೆ. ಈ ಸಮಸ್ಯೆಗಳ ಪರಿಹಾರಕ್ಕಾಗಿ ಭಾರತೀಯ ದೃಷ್ಟಿಕೋನದ ಚಿಂತನೆಗಳ ಕುರಿತು ಇದೀಗ ಜಗತ್ತು ಕುತೂಹಲದಿಂದ ನಮ್ಮತ್ತ ನೋಡುತ್ತಿದೆʼʼ ಎಂದು ತಿಳಿಸಿದರು.
ʼʼದೇಶಾದ್ಯಂತ, ವಿಶೇಷವಾಗಿ ಯುವ ಪೀಳಿಗೆಯಲ್ಲಿ, ದೇಶಭಕ್ತಿಯ ಭಾವನೆ ಹಾಗೂ ಸಂಸ್ಕೃತಿ ಕುರಿತ ನಂಬಿಕೆ ಮತ್ತು ವಿಶ್ವಾಸ ನಿರಂತರವಾಗಿ ಹೆಚ್ಚುತ್ತಿದೆ ಎಂಬುದು ನಮ್ಮ ಭರವಸೆಯನ್ನು ಬಲಪಡಿಸುವ ಸಂಗತಿ. ಸಂಘದ ಸ್ವಯಂಸೇವಕರ ಜತೆಗೆ, ಸಮಾಜದ ವಿವಿಧ ಧಾರ್ಮಿಕ ಮತ್ತು ಸಾಮಾಜಿಕ ಸಂಸ್ಥೆಗಳು, ಹಾಗೆಯೇ ವ್ಯಕ್ತಿಗಳು, ಸಮಾಜದ ಅಭಾವಗ್ರಸ್ತ ವರ್ಗಗಳಿಗೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸಲು ಮುಂದೆ ಬರುತ್ತಿದ್ದಾರೆ. ಇದರ ಫಲ ಸ್ವರೂಪವಾಗಿ ಸಮಾಜವು ಸಕ್ಷಮಗೊಂಡು, ತನ್ನದೇ ಉಪಕ್ರಮಗಳ ಮೂಲಕ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯ ಮತ್ತು ಅಗತ್ಯತೆಗಳನ್ನು ಪೂರೈಸುವ ಸಮಾಜದ ಚೈತನ್ಯ ಹೆಚ್ಚಾಗಿದೆ. ಸಂಘದ ಚಟುವಟಿಕೆಗಳು ಮತ್ತು ಸಾಮಾಜಿಕ ಕಾರ್ಯಗಳಲ್ಲಿ ನೇರವಾಗಿ ತೊಡಗಿಸಿಕೊಳ್ಳುವ ಬಯಕೆಯು ಸಮಾಜದಲ್ಲಿ ಹೆಚ್ಚುತ್ತಿರುವುದು ಸ್ವಯಂಸೇವಕರ ಗಮನಕ್ಕೆ ಬರುತ್ತಿದೆ. ಪ್ರಸಕ್ತ ಜಾಗತಿಕ ಮಾದರಿಗಳಿಗಿಂತಲೂ ನಮ್ಮ ದೇಶದ ವೈಶ್ವಿಕ ಜೀವನದೃಷ್ಟಿ ಹಾಗೂ ಪ್ರಕೃತಿಕೇಂದ್ರಿತ ಅಭಿವೃದ್ಧಿ ಮತ್ತು ಸಾರ್ವಜನಿಕ ಆಡಳಿತದ ಕುರಿತು ನಮ್ಮ ಸ್ವತಂತ್ರವಾದ ಅಥವಾ ಇತರ ರೀತಿಯ ಮಾದರಿಗಳನ್ನು ಅನ್ವೇಷಿಸುವ ಬಗ್ಗೆ ಬುದ್ಧಿಜೀವಿಗಳ ವಲಯದಲ್ಲಿ ಚಿಂತನೆಗಳು ಹೆಚ್ಚುತ್ತಿವೆʼʼ ಎಂದರು.
ಭಾರತೀಯ ಚಿಂತನದೃಷ್ಟಿ
ʼʼಸ್ವಾಮಿ ವಿವೇಕಾನಂದರಿಂದ ಹಿಡಿದು ಮಹಾತ್ಮಾ ಗಾಂಧಿ, ದೀನದಯಾಳ್ ಉಪಾಧ್ಯಾಯ, ರಾಮ ಮನೋಹರ್ ಲೋಹಿಯಾವರೆಗೆ ಭಾರತ ಮತ್ತು ಜಗತ್ತನ್ನು ಭಾರತೀಯ ದೃಷ್ಟಿಕೋನ ಆಧರಿಸಿ ನಮ್ಮ ಎಲ್ಲ ಆಧುನಿಕ ಚಿಂತಕರು ಮತ್ತು ನಮ್ಮ ಸಮಾಜವನ್ನು ಮುನ್ನಡೆಸಿದ ಎಲ್ಲ ಮಹಾಪುರುಷರು ಮೇಲಿನ ಸಮಸ್ಯೆಗಳ ಕುರಿತು ಪರಾಮರ್ಶೆ ಮಾಡುತ್ತ ಒಂದು ಸಮಾನ ದಿಶಾದರ್ಶನ ಮಾಡಿದ್ದರು. ಆಧುನಿಕ ಜಗತ್ತಿನ ಜೀವನದ ದೃಷ್ಟಿಕೋನವು ಸಂಪೂರ್ಣವಾಗಿ ತಪ್ಪಲ್ಲ. ಆದರೆ ಅದು ಅಪೂರ್ಣವಾದದ್ದು. ಆದ್ದರಿಂದ ಮಾನವನ ಭೌತಿಕ ಅಭಿವೃದ್ಧಿಯು ಕೆಲವು ದೇಶಗಳು ಮತ್ತು ವರ್ಗಗಳಿಗೆ ಉಪಕಾರಿಯಾಗಿದೆ ಎನ್ನುವಂತೆ ತೋರುತ್ತದೆ. ಆದರೆ ಎಲ್ಲರಿಗೂ ಅಲ್ಲ. ಕೆಲವು ಸಂಶೋಧಕರು ಹೇಳುವಂತೆ ಭಾರತವು ಅಮೆರಿಕದಂತ ಸಮೃದ್ಧ ಮತ್ತು ಸಂಪೂರ್ಣ ಭೌತಿಕ ಜೀವನವನ್ನು ನಡೆಸಬೇಕಾದರೆ, ಇನ್ನೂ ಐದು ಭೂಮಿಗಳಷ್ಟು ಸಂಪನ್ಮೂಲಗಳು ಬೇಕಾಗುತ್ತವೆ. ಪ್ರಸ್ತುತ ನೀತಿಯಿಂದಾಗಿ ಭೌತಿಕ ಅಭಿವೃದ್ಧಿಯ ಜತೆಜತೆಗೆ ಮಾನವನ ಮಾನಸಿಕ ಮತ್ತು ನೈತಿಕ ಬೆಳವಣಿಗೆಗಳು ಆಗಿಲ್ಲ. ಆದ್ದರಿಂದ, ಅಭಿವೃದ್ಧಿಯ ಜೊತೆಜೊತೆಗೇ ಹೊಸಹೊಸ ಸಮಸ್ಯೆಗಳು ಹೊರಹೊಮ್ಮುತ್ತಿವೆ, ಇದು ಮಾನವೀಯತೆ ಮತ್ತು ವಿಶ್ವಕ್ಕೆ ಮಾರಣಾಂತಿಕ ಅಪಾಯಗಳನ್ನು ಒಡ್ಡುತ್ತಿದೆ. ಇದಕ್ಕೆ ಕಾರಣವೇ ದೃಷ್ಟಿಯ ಅಪೂರ್ಣತೆʼʼ ಎಂದು ಹೇಳಿದರು.
ʼʼನಮ್ಮ ಸನಾತನ, ಆಧ್ಯಾತ್ಮಿಕ, ಸಮಗ್ರ ಮತ್ತು ಏಕಾತ್ಮ ದೃಷ್ಟಿಕೋನವು ಮಾನವನ ಭೌತಿಕ ಬೆಳವಣಿಗೆಯ ಜತೆಜತೆಗೆ ಮನಸ್ಸು, ಬುದ್ಧಿ ಮತ್ತು ಆಧ್ಯಾತ್ಮಿಕತೆಯ ವಿಕಾಸವನ್ನು, ವ್ಯಕ್ತಿಯ ಜತೆಜತೆಗೆ ಮಾನವ ಸಮೂಹ ಮತ್ತು ಸೃಷ್ಟಿಯ ವಿಕಾಸ, ಮನುಷ್ಯನ ಅಗತ್ಯಗಳು ಮತ್ತು ಆಸೆಗಳಿಗೆ ಅನುಗುಣವಾಗಿ ಆರ್ಥಿಕ ಸ್ಥಿತಿಯ ಜತೆಗೆ ಸಮಾಜ ಮತ್ತು ಸೃಷ್ಟಿಯ ಕುರಿತು ಕರ್ತವ್ಯಪ್ರಜ್ಞೆಯ ಜಾಗೃತಿ, ಎಲ್ಲದರಲ್ಲೂ ನಮ್ಮತನದ ಭಾವನೆಯನ್ನು ಅನುಭವಿಸುವ ಸ್ವಭಾವವನ್ನು ವಿಕಸಿತಗೊಳಿಸುವ ಶಕ್ತಿಯನ್ನು ಹೊಂದಿದೆ. ಏಕೆಂದರೆ ಎಲ್ಲರನ್ನೂ ಜೋಡಿಸುವ ತತ್ತ್ವವನ್ನು ಅರಿತುಕೊಂಡಿದ್ದೇವೆ. ಇದರ ಆಧಾರದ ಮೇಲೆಯೇ ಸಾವಿರಾರು ವರ್ಷಗಳಿಂದ ಈ ಜಗತ್ತಿನಲ್ಲಿ ಸುಂದರವಾದ, ಪರಸ್ಪರ ಸಂಬಂಧಗಳನ್ನು ಗೌರವಿಸುವ, ಮನುಷ್ಯ ಹಾಗೂ ಸೃಷ್ಟಿಯ ಸಹಯೋಗಿ ಜೀವನವನ್ನು ನಡೆಸುವ ಸಮೃದ್ಧ ಮತ್ತು ಶಾಂತಿಯುತ ಜೀವನವನ್ನು ಸ್ಥಾಪಿಸಿದ ಅನುಭವವನ್ನು ಹೊಂದಿದ್ದೇವೆ. ಈ ಸಮಗ್ರ ಮತ್ತು ಏಕಾತ್ಮ ದೃಷ್ಟಿಕೋನದ ಆಧಾರದ ಮೇಲೆ, ವಿಶ್ವದ ಇಂದಿನ ಅಗತ್ಯಗಳನ್ನು ಪೂರೈಸುವ ಜತೆಜತೆಗೇ ಇಂದು ಜಗತ್ತು ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರಗಳನ್ನು ಒದಗಿಸುವ ಹೊಸ ವ್ಯವಸ್ಥೆಯ ಅಗತ್ಯವಿದೆ. ನಮ್ಮ ಉದಾಹರಣೆಗಳ ಮೂಲಕ ವಿಶ್ವಕ್ಕೆ ಆ ಹೊಸ ವ್ಯವಸ್ಥೆಯ ಅನುಕರಣೀಯ ಮಾದರಿಯನ್ನು ಒದಗಿಸುವ ಕಾರ್ಯವನ್ನು ಭಾರತೀಯರು ಮಾಡಬೇಕೆಂಬುದು ವಿಧಿಯ ಅಪೇಕ್ಷೆಯಾಗಿದೆʼʼ ಎಂದು ಮೋಹನ್ ಭಾಗವತ್ ಹೇಳಿದರು.
ಸಂಘದ ಚಿಂತನೆ
ʼʼರಾಷ್ಟ್ರೀಯ ಸ್ವಯಂಸೇವಕ ಸಂಘವು ತನ್ನ ಕಾರ್ಯದ 100 ವರ್ಷಗಳನ್ನು ಪೂರೈಸಿದೆ. ಸಂಘದಲ್ಲಿ ವಿಚಾರ ಮತ್ತು ಸಂಸ್ಕಾರಗಳನ್ನು ಮೈಗೂಡಿಸಿಕೊಂಡ ಸ್ವಯಂಸೇವಕರು ಸಾಮಾಜಿಕ ಜೀವನದ ವಿಭಿನ್ನ ಆಯಾಮಗಳಲ್ಲಿ, ವಿವಿಧ ಸಂಘಟನೆಗಳಲ್ಲಿ, ಸಂಸ್ಥೆಗಳಲ್ಲಿ ಹಾಗೂ ಸ್ಥಳೀಯ ಮಟ್ಟದಿಂದ ರಾಷ್ಟ್ರೀಯ ಮಟ್ಟದವರೆಗೆ ಸಕ್ರಿಯರಾಗಿದ್ದಾರೆ. ಸಾಮಾಜಿಕ ಜೀವನದಲ್ಲಿ ಸಕ್ರಿಯವಾಗಿರುವ ಅನೇಕ ಸಜ್ಜನರ ಜೊತೆಗೆ ಸ್ವಯಂಸೇವಕರ ಸಹಕಾರ ಮತ್ತು ಮಾತುಕತೆ ನಡೆಯುತ್ತಿರುತ್ತವೆ. ಅವುಗಳ ಸಂಕಲಿತ ಅನುಭವಗಳ ಆಧಾರದಲ್ಲಿ ಸಂಘವು ಕೆಲವು ಅವಲೋಕನ ಮತ್ತು ನಿಷ್ಕರ್ಷೆಗಳನ್ನು ಹೊಂದಿದೆʼʼ ಎಂದು ಒತ್ತಿ ಹೇಳಿದರು.
ʼʼಭಾರತದ ಪ್ರಗತಿಯ ಪ್ರಕ್ರಿಯೆಯು ವೇಗವನ್ನು ಪಡೆಯುತ್ತಿದೆ. ಆದರೂ ನಾವು ಇನ್ನೂ ಅದೇ ಅಪೂರ್ಣ ನೀತಿಗಳು ಮತ್ತು ವ್ಯವಸ್ಥೆಗಳ ಮಿತಿಯೊಳಗೆ ಯೋಚಿಸುತ್ತಿದ್ದೇವೆ, ಅದರ ಅಪೂರ್ಣತೆಯು ಇಂದು ನಾವು ನೋಡುತ್ತಿರುವ ಫಲಿತಾಂಶಗಳಿಂದ ಬಟಾಬಯಲಾಗಿದೆ. ಈಗಾಗಲೇ ಅದೇ ನೀತಿಗಳ ಆಧಾರದಲ್ಲಿ ವಿಶ್ವದೊಂದಿಗೆ ನಾವು ಸಾಕಷ್ಟು ಮುಂದೆ ಬಂದುಬಿಟ್ಟಿದ್ದೇವೆ, ದಿಢೀರನೆ ಅದನ್ನು ಬದಲಿಸಲು ಸಾಧ್ಯವಿಲ್ಲ. ನಾವು ಒಂದು ದೀರ್ಘವೃತ್ತದ ಮೂಲಕ ನಿಧಾನವಾಗಿ ತಿರುಗಬೇಕಾಗುತ್ತದೆ. ನಮ್ಮದೂ ಸೇರಿದಂತೆ ಜಗತ್ತು ಎದುರಿಸುತ್ತಿರುವ ಸಮಸ್ಯೆಗಳನ್ನು ಮತ್ತು ಭವಿಷ್ಯದ ಅಪಾಯಗಳನ್ನು ತಪ್ಪಿಸಲು ಇದನ್ನು ಹೊರತುಪಡಿಸಿ ಅನ್ಯ ಮಾರ್ಗವಿಲ್ಲ. ನಮ್ಮ ಸಮಗ್ರ ಮತ್ತು ಏಕಾತ್ಮ ದೃಷ್ಟಿಕೋನವನ್ನು ಆಧರಿಸಿ ನಮ್ಮದೇ ಆದ ಅಭಿವೃದ್ಧಿಯ ಮಾರ್ಗವನ್ನು ರೂಪಿಸುವ ಮೂಲಕ ಜಗತ್ತಿಗೆ ಉತ್ತಮ ಮಾದರಿಯನ್ನು ಪ್ರಸ್ತುತಪಡಿಸಬೇಕು. ಅರ್ಥ ಮತ್ತು ಕಾಮದ ಅಂಧಾನುಕರಣೆ ಮಾಡುತ್ತಿರುವ ಜಗತ್ತಿಗೆ ಪೂಜಾ ಪದ್ಧತಿಗಳನ್ನು ಮೀರಿದ, ಎಲ್ಲರನ್ನೂ ಒಂದುಗೂಡಿಸುವ, ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಮತ್ತು ಎಲ್ಲರ ಪ್ರಗತಿಯನ್ನು ಏಕಕಾಲದಲ್ಲಿ ಸಾಧ್ಯವಾಗಿಸುವ ಧರ್ಮದ ಮಾರ್ಗವನ್ನು ತೋರಿಸಬೇಕಿದೆʼʼ ಎಂದರು.
ʼʼಸಂಪೂರ್ಣ ದೇಶವು ಅಂತಹ ಆದರ್ಶ ಚಿತ್ರಣವನ್ನು ಜಗತ್ತಿಗೆ ಪ್ರಸ್ತುತಪಡಿಸುವ ಕಾರ್ಯವು ಕೇವಲ ದೇಶದ ಆಡಳಿತ ವ್ಯವಸ್ಥೆಗೆ ಮಾತ್ರ ಸೀಮಿತವಾಗಿಲ್ಲ, ಏಕೆಂದರೆ ಆಡಳಿತ ವ್ಯವಸ್ಥೆಗಳು ಪರಿವರ್ತನೆ ಕುರಿತು ಸೀಮಿತ ಇಚ್ಛೆ ಮತ್ತು ಸಾಮರ್ಥ್ಯವನ್ನು ಹೊಂದಿರುತ್ತವೆ. ಈ ಪರಿವರ್ತನೆಗೆ ಪ್ರೇರಣೆ ಮತ್ತು ನಿಯಂತ್ರಣವು ಸಮಾಜದ ಬಲವಾದ ಇಚ್ಛಾಶಕ್ತಿಯನ್ನು ಆಧರಿಸಿದೆ. ಆದ್ದರಿಂದ ವ್ಯವಸ್ಥೆಯ ಪರಿವರ್ತನೆಗಾಗಿ ಸಮಾಜದ ಜಾಗೃತಿ ಮತ್ತು ಅದರ ನಡವಳಿಕೆಯ ಬದಲಾವಣೆಯು ವ್ಯವಸ್ಥಾಪರಿವರ್ತನೆಯ ಪೂರ್ವಷರತ್ತುಗಳಾಗಿವೆ. ಸಾಮಾಜಿಕ ನಡವಳಿಕೆಯಲ್ಲಿ ಬದಲಾವಣೆಯು ಭಾಷಣಗಳು ಅಥವಾ ಪುಸ್ತಕಗಳಿಂದ ಮಾತ್ರ ಬರಲು ಸಾಧ್ಯವಿಲ್ಲ. ಸಮಾಜಕ್ಕೆ ವ್ಯಾಪಕ ಜಾಗೃತಿಯ ಅಗತ್ಯವಿದೆ ಮತ್ತು ಆ ಜಾಗೃತಿಯನ್ನು ಉಂಟುಮಾಡುವವರು ಸ್ವತಃ ಬದಲಾವಣೆಯ ಮಾದರಿಗಳಾಗಬೇಕು. ತಮ್ಮ ಜೀವನದಲ್ಲಿ ಪಾರದರ್ಶಕತೆ ಮತ್ತು ನಿಸ್ವಾರ್ಥತೆಯನ್ನು ಅನುಭಾವಿಸಿಕೊಂಡಿರುವ ಮತ್ತು ಸಮಾಜದೊಂದಿಗಿನ ದೈನಂದಿನ ಸಂವಹನದಲ್ಲಿ ಇಡೀ ಸಮಾಜವನ್ನು ತಮ್ಮದೇ ಎಂದು ಭಾವಿಸುವ, ತನ್ನದೇ ಆದ ಅನುಕರಣೀಯ ವ್ಯಕ್ತಿಗಳನ್ನು ಸಮಾಜವು ಎಲ್ಲಾ ಸ್ಥಾನಗಳಲ್ಲಿ ಹೊಂದಿರಬೇಕು. ಸಮಾಜದಲ್ಲಿ ಪ್ರತಿಯೊಬ್ಬರ ಜೊತೆಗಿರುತ್ತಾ ತಮ್ಮ ಮಾದರಿಯಿಂದ ಸಮಾಜಕ್ಕೆ ಪ್ರೇರಣೆ ನೀಡುವ ಸ್ಥಾನೀಯ ಸಾಮಾಜಿಕ ನಾಯಕತ್ವ ನಮಗೆ ಬೇಕು. ಆದ್ದರಿಂದ, ವ್ಯಕ್ತಿ ನಿರ್ಮಾಣದಿಂದ ಸಾಮಾಜಿಕ ಪರಿವರ್ತನೆ ಮತ್ತು ಸಾಮಾಜಿಕ ಪರಿವರ್ತನೆಯ ಮೂಲಕ ವ್ಯವಸ್ಥಾ ಪರಿವರ್ತನೆಯು ದೇಶ ಮತ್ತು ವಿಶ್ವದಲ್ಲಿ ಬದಲಾವಣೆಯನ್ನು ತರುವ ನಿಜವಾದ ಮಾರ್ಗಗಳು ಎನ್ನುವುದು ಸ್ವಯಂಸೇವಕರ ಅನುಭವವಾಗಿದೆʼʼ ಎಂದು ತಿಳಿಸಿದರು.
ʼʼಅಂತಹ ವ್ಯಕ್ತಿಗಳನ್ನು ರೂಪಿಸುವ ವ್ಯವಸ್ಥೆಗಳು ಅನೇಕ ಸಮಾಜಗಳಲ್ಲಿ ಸಕ್ರಿಯವಾಗಿರುತ್ತವೆ. ಆದರೆ ದೀರ್ಘಕಾಲದ ಆಕ್ರಮಣದ ಸಮಯದಲ್ಲಿ ನಮ್ಮ ಸಮಾಜದಲ್ಲಿ ಈ ವ್ಯವಸ್ಥೆಗಳು ನಾಶಹೊಂದಿದವು. ಆದ್ದರಿಂದ ಮನೆ, ಶಿಕ್ಷಣ ವ್ಯವಸ್ಥೆ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಯುಗಾನುಕೂಲ ವ್ಯವಸ್ಥೆಯನ್ನು ಪುನಃಸ್ಥಾಪಿಸಬೇಕಾಗುತ್ತದೆ. ಈ ಕೆಲಸವನ್ನು ಮಾಡಬಲ್ಲ ವ್ಯಕ್ತಿಗಳನ್ನು ಸಿದ್ಧಗೊಳಿಸಬೇಕಾಗಿದೆ. ಈ ಕಲ್ಪನೆಯನ್ನು ಮನಸ್ಸು ಮತ್ತು ಬುದ್ಧಿಯಲ್ಲಿ ಸ್ವೀಕರಿಸಿದ ನಂತರವೂ, ಅವುಗಳನ್ನು ಆಚರಣೆಗೆ ತರಲು ಮನಸ್ಸು, ಮಾತು ಮತ್ತು ಕ್ರಿಯೆಗಳಲ್ಲಿನ ಅಭ್ಯಾಸಗಳನ್ನು ಬದಲಾಯಿಸಬೇಕು; ಇದಕ್ಕಾಗಿ ಒಂದು ವ್ಯವಸ್ಥೆಯ ಅಗತ್ಯವಿರುತ್ತದೆ. ಸಂಘದ ಶಾಖೆಯು ಅಂತಹದ್ದೇ ಒಂದು ವ್ಯವಸ್ಥೆ. ನೂರು ವರ್ಷಗಳಿಂದ ಈ ವ್ಯವಸ್ಥೆಯನ್ನು ಎಲ್ಲಾ ರೀತಿಯ ಪರಿಸ್ಥಿತಿಗಳ ನಡುವೆಯೂ ಸಂಘದ ಸ್ವಯಂಸೇವಕರು ಆಗ್ರಹಪೂರ್ವಕವಾಗಿ ನಿರ್ವಹಿಸಿದ್ದಾರೆ ಮತ್ತು ಮುಂದೆಯೂ ಇದೇ ರೀತಿ ಅದನ್ನು ಮುಂದುವರಿಸಬೇಕಾಗಿದೆ. ಆದ್ದರಿಂದ, ಸ್ವಯಂಸೇವಕರು ದೈನಂದಿನ ಶಾಖೆಯ ಕಾರ್ಯಕ್ರಮಗಳಲ್ಲಿ ಶ್ರದ್ಧೆಯಿಂದ ಭಾಗವಹಿಸುತ್ತಾ ಅವರ ಸ್ವಭಾವಗಳನ್ನು ಬದಲಾಯಿಸುವ ಸಾಧನೆಯನ್ನು ಮಾಡಬೇಕಾಗುತ್ತದೆ. ವೈಯಕ್ತಿಕ ಸದ್ಗುಣಗಳು ಮತ್ತು ಸಾಮೂಹಿಕತೆಯನ್ನು ವೃದ್ಧಿಸುತ್ತಲೇ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಮತ್ತು ಸಹಕರಿಸುವ ಮೂಲಕ ಸಮಾಜದಲ್ಲಿ ಸದ್ಗುಣಗಳ ಮತ್ತು ಸಾಮೂಹಿಕತೆಯ ವಾತಾವರಣವನ್ನು ನಿರ್ಮಿಸುವ ಸಲುವಾಗಿಯೇ ಸಂಘದ ಶಾಖೆಯು ಅಸ್ತಿತ್ವದಲ್ಲಿದೆʼʼ ಎಂದು ವಿವರಿಸಿದರು.
ʼʼಯಾವುದೇ ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಅಂಶವೆಂದರೆ ಅಲ್ಲಿನ ಸಮಾಜದ ಏಕತೆ. ನಮ್ಮ ದೇಶವು ವಿವಿಧತೆಯ ದೇಶವಾಗಿದೆ. ಹಲವು ಭಾಷೆಗಳು, ಹಲವು ಪಂಥಗಳು ಮತ್ತು ಜೀವನಶೈಲಿಗಳು, ವಿಭಿನ್ನ ರೀತಿಯ ಆಹಾರ-ವಿಹಾರ, ಜಾತಿಗಳು ಮತ್ತು ಉಪಜಾತಿಗಳು ಮೊದಲಾದ ವಿವಿಧತೆಗಳು ಈಗಾಗಲೇ ಇವೆ. ಕಳೆದ ಸಾವಿರ ವರ್ಷಗಳಲ್ಲಿ, ಕೆಲವು ವಿದೇಶಿ ಪಂಥಗಳು ಭಾರತಕ್ಕೆ ಗಡಿಯ ಹೊರಗಿನ ದೇಶಗಳಿಂದ ಬಂದಿವೆ. ವಿದೇಶಿಯರು ಈಗ ನಿರ್ಗಮಿಸಿದ್ದರೂ, ಆ ಪಂಥಗಳನ್ನು ಸ್ವೀಕರಿಸಿ ವಿವಿಧ ಕಾರಣಗಳಿಗಾಗಿ ಅವುಗಳನ್ನು ಅನುಸರಿಸುತ್ತಿರುವ ನಮ್ಮ ಬಂಧುಗಳು ಭಾರತದಲ್ಲಿ ಅಸ್ತಿತ್ವದಲ್ಲಿದ್ದಾರೆ. ಭಾರತೀಯ ಪರಂಪರೆಯು ಇವರೆಲ್ಲರನ್ನೂ ಸ್ವಾಗತಿಸಿದೆ ಮತ್ತು ಸ್ವೀಕರಿಸಿದೆ. ನಾವು ಅವುಗಳನ್ನು ಪ್ರತ್ಯೇಕ ಎನ್ನುವ ದೃಷ್ಟಿಯಿಂದ ನೋಡುವುದಿಲ್ಲ. ನಮ್ಮ ವಿವಿಧತೆಯನ್ನು ನಮ್ಮದೇ ಆದ ಅನನ್ಯತೆ ಎಂದು ಗುರುತಿಸುತ್ತೇವೆ ಮತ್ತು ನಮ್ಮ ವಿಶಿಷ್ಟತೆಯನ್ನು ಗೌರವಿಸುವ ಸ್ವಭಾವವನ್ನೂ ಅರಿತಿದ್ದೇವೆ. ಆದಾಗ್ಯೂ, ಈ ವಿಶಿಷ್ಟತೆಗಳು ವಿಭಜನೆಯ ಕಾರಣವಾಗಬಾರದು. ನಮ್ಮ ಎಲ್ಲ ವಿಶಿಷ್ಟತೆಯ ಹೊರತಾಗಿಯೂ, ನಾವೆಲ್ಲರೂ ಒಂದು ಬೃಹತ್ ಸಮಾಜದ ಭಾಗವಾಗಿದ್ದೇವೆ. ಸಮಾಜ, ದೇಶ, ಸಂಸ್ಕೃತಿ ಮತ್ತು ರಾಷ್ಟ್ರವಾಗಿ ನಾವೆಲ್ಲರೂ ಒಂದಾಗಿದ್ದೇವೆ. ಈ ದೊಡ್ಡ ಗುರುತು ನಮಗೆ ಎಲ್ಲಕ್ಕಿಂತಲೂ ಉನ್ನತವಾದದ್ದು ಎನ್ನುವುದನ್ನು ನಾವು ಯಾವಾಗಲೂ ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಇದರ ಪರಿಣಾಮವಾಗಿ ಸಮಾಜದಲ್ಲಿ ಪರಸ್ಪರರೊಂದಿಗಿನ ಸಂವಹನವು ಸದ್ಭಾವನಾಪೂರ್ಣ ಮತ್ತು ಸಂಯಮಪೂರ್ಣವಾಗಿರಬೇಕು. ಪ್ರತಿಯೊಬ್ಬರಿಗೂ ತಮ್ಮದೇ ಆದ ನಂಬಿಕೆಗಳು, ಮಹಾಪುರುಷರು ಮತ್ತು ಪೂಜಾಸ್ಥಾನಗಳಿವೆ. ಮನಸ್ಸು, ಮಾತು ಅಥವಾ ಕ್ರಿಯೆಯಲ್ಲಿ ಇವುಗಳನ್ನು ಅಗೌರವಿಸದಂತೆ ಎಚ್ಚರವಹಿಸಬೇಕು. ಈ ನಿಟ್ಟಿನಲ್ಲಿ ಜಾಗೃತಿಯ ಅವಶ್ಯಕತೆಯಿದೆ. ಆದ್ದರಿಂದ, ನಿಯಮಗಳನ್ನು ಪಾಲಿಸುವುದು, ವ್ಯವಸ್ಥಾ ಪಾಲನೆ ಮತ್ತು ಸದ್ಭಾವದಿಂದ ವರ್ತಿಸುವುದು ನಮ್ಮ ಸ್ವಭಾವವಾಗಬೇಕು. ಸಣ್ಣ ಅಥವಾ ದೊಡ್ಡ ವಿಷಯಗಳಲ್ಲಿ ಅಥವಾ ನಮ್ಮ ಮನಸ್ಸಿನಲ್ಲಿರುವ ಅನುಮಾನಗಳಿಂದಾಗಿ ಕಾನೂನನ್ನು ನಮ್ಮ ಕೈಗೆತ್ತಿಕೊಳ್ಳುವುದು, ಗೂಂಡಾಗಿರಿ ಮತ್ತು ಹಿಂಸಾಚಾರಕ್ಕೆ ಇಳಿಯುವುದು ಒಳ್ಳೆಯ ಪ್ರವೃತ್ತಿಯಲ್ಲ. ಪೂರ್ವಗ್ರಹಗಳೊಂದಿಗೆ ಅಥವಾ ನಿರ್ದಿಷ್ಟ ಸಮುದಾಯವನ್ನು ಪ್ರಚೋದಿಸುವ ಉದ್ದೇಶದೊಂದಿಗೆ ಇಂತಹ ಕಾರ್ಯಗಳನ್ನು ಯೋಜಿತವಾಗಿ ಕೆಲವರು ಮಾಡಿಸುತ್ತಿದ್ದಾರೆ. ಅಂಥವರ ಬಲೆಗೆ ಬೀಳುವುದು ತಕ್ಷಣದ ಮತ್ತು ದೀರ್ಘಾವಧಿಯ – ಎರಡೂ ದೃಷ್ಟಿಯಿಂದ ಒಳ್ಳೆಯದಲ್ಲ. ಈ ಪ್ರವೃತ್ತಿಗಳನ್ನು ನಿಗ್ರಹಿಸುವುದು ಅತ್ಯಗತ್ಯ. ಸರ್ಕಾರ ಮತ್ತು ಆಡಳಿತವು ತಮ್ಮ ಕೆಲಸವನ್ನು ಪಕ್ಷಪಾತವಿಲ್ಲದೆ ಮತ್ತು ಒತ್ತಡಕ್ಕೆ ಮಣಿಯದೆ, ನಿಯಮಗಳಿಗೆ ಅನುಸಾರವಾಗಿ ನಿರ್ವಹಿಸಬೇಕು. ಆದಾಗ್ಯೂ, ಸಮಾಜದ ಸಜ್ಜನಶಕ್ತಿ ಮತ್ತು ಯುವಪೀಳಿಗೆಯು ಸಹ ಜಾಗರೂಕರಾಗಿರಬೇಕು ಮತ್ತು ಸಂಘಟಿತರಾಗಿರಬೇಕು. ಅಗತ್ಯವಿರುವೆಡೆಯಲ್ಲಿ ಸಮಸ್ಯೆ ಬಗೆಹರಿಸಲು ಮಧ್ಯಪ್ರವೇಶಿಸಬೇಕುʼʼ ಎಂದು ಕರೆ ನೀಡಿದರು.
ʼʼಡಾ. ಬಿ.ಆರ್. ಅಂಬೇಡ್ಕರ್ ಈ ಏಕತೆಯ ಆಧಾರವನ್ನು “Inherent cultural unity” (ಅಂತರ್ಗತ ಸಾಂಸ್ಕೃತಿಕ ಏಕತೆ) ಎಂದು ಹೇಳಿದ್ದಾರೆ. ಭಾರತೀಯ ಸಂಸ್ಕೃತಿಯು ಪ್ರಾಚೀನ ಕಾಲದಿಂದಲೂ ಹರಿದು ಬಂದಿರುವ ಭಾರತದ ವಿಶೇಷತೆಯಾಗಿದೆ. ಇದು ಸರ್ವಸಮಾವೇಶಕವಾಗಿದೆ. ಎಲ್ಲಾ ವಿವಿಧತೆಯನ್ನು ಗೌರವಿಸಲು ಮತ್ತು ಸ್ವೀಕರಿಸಲು ನಮಗೆ ಕಲಿಸುತ್ತಿದೆ. ಏಕೆಂದರೆ ಅದು ಭಾರತದ ಆಧ್ಯಾತ್ಮಿಕ ಸತ್ಯ ಮತ್ತು ಕರುಣೆ, ಶುದ್ಧತೆ ಮತ್ತು ತಪಸ್ಸಿನ ಸದ್ಗುಣಗಳ ಅಂದರೆ ಧರ್ಮದ ಮೇಲೆ ಆಧಾರಿತವಾಗಿದೆ. ಈ ರಾಷ್ಟ್ರದ ಪುತ್ರರೂಪಿ ಹಿಂದೂ ಸಮಾಜವು ಅನಾದಿಕಾಲದಿಂದಲೂ ಈ ಸಂಸ್ಕೃತಿಯನ್ನು ತಮ್ಮ ನಡವಳಿಕೆಯಲ್ಲಿ ಹೊಂದಿಸಿಕೊಂಡಿದೆ, ಆದ್ದರಿಂದಲೇ ಇದನ್ನು ಹಿಂದೂ ಸಂಸ್ಕೃತಿ ಎಂದೂ ಕರೆಯುತ್ತಾರೆ. ಪ್ರಾಚೀನ ಭಾರತದಲ್ಲಿ ಋಷಿಮುನಿಗಳು ತಮ್ಮ ತಪೋಬಲದಿಂದ ಹಿಂದೂ ಸಂಸ್ಕೃತಿಯನ್ನು ಬೆಳೆಸಿದರು. ಭಾರತದ ಸಮೃದ್ಧ ಮತ್ತು ಸುರಕ್ಷಿತ ವಾತಾವರಣವು ಇದನ್ನು ಸಾಧಿಸಲು ಅವರಿಗೆ ಅನುವು ಮಾಡಿಕೊಟ್ಟಿತು. ನಮ್ಮ ಪೂರ್ವಜರ ಕಠಿಣ ಪರಿಶ್ರಮ, ತ್ಯಾಗ ಮತ್ತು ಸಮರ್ಪಣೆಯಿಂದಾಗಿ ಈ ಸಂಸ್ಕೃತಿಯು ಅರಳಿ ಉಳಿದಿದೆ ಹಾಗೂ ಇಂದಿನವರೆಗೂ ತಲುಪಿದೆ. ಆ ನಮ್ಮ ಸಂಸ್ಕೃತಿಯ ಆಚರಣೆ, ಅದನ್ನು ಆದರ್ಶವನ್ನಾಗಿರಿಸಿಕೊಂಡ ನಮ್ಮ ಪೂರ್ವಜರ ಕುರಿತು ಮನಸ್ಸಿನಲ್ಲಿ ಗೌರವ ಮತ್ತು ಅವರ ವಿವೇಕಪೂರ್ಣ ಅನುಕರಣೆ ಹಾಗೂ ಇದೆಲ್ಲವನ್ನೂ ಸಾಧ್ಯವಾಗಿಸಿದ ನಮ್ಮ ಪವಿತ್ರ ಮಾತೃಭೂಮಿಯ ಮೇಲಿನ ಭಕ್ತಿ - ಇವೆಲ್ಲವೂ ಒಟ್ಟಾಗಿ ನಮ್ಮ ರಾಷ್ಟ್ರೀಯತೆಯನ್ನು ರೂಪಿಸಿವೆ. ವಿವಿಧತೆಯನ್ನು ಸಂಪೂರ್ಣವಾಗಿ ಸ್ವೀಕರಿಸಿ ಮತ್ತು ಗೌರವದೊಂದಿಗೆ ನಮ್ಮೆಲ್ಲರನ್ನೂ ಒಂದು ಸೂತ್ರದಲ್ಲಿ ಪೋಣಿಸುವ ಈ ಹಿಂದೂ ರಾಷ್ಟ್ರೀಯತೆಯು ನಮ್ಮನ್ನು ಒಟ್ಟಾಗಿರಿಸಿಕೊಂಡು ಬಂದಿದೆ. ನಮ್ಮದು ‘Nation State' ಪರಿಕಲ್ಪನೆ ಅಲ್ಲ. ಆಡಳಿತಗಳು ಹೊಸದಾಗಿ ಬರುತ್ತವೆ ಹೋಗುತ್ತವೆ, ಆದರೆ ರಾಷ್ಟ್ರ ಶಾಶ್ವತವಾಗಿ ಅಸ್ತಿತ್ವದಲ್ಲಿರುತ್ತದೆ. ನಮ್ಮೆಲ್ಲರ ಏಕತೆಯ ಈ ಆಧಾರವನ್ನು ನಾವು ಎಂದಿಗೂ ಮರೆಯಬಾರದುʼʼ ಎಂದು ಹೇಳಿದರು.
ʼʼಸಂಪೂರ್ಣ ಹಿಂದೂ ಸಮಾಮಾಜದ ಬಲಸಂಪನ್ನ, ಶೀಲಸಂಪನ್ನ ಮತ್ತು ಸಂಘಟಿತ ಸ್ವರೂಪವು ಈ ದೇಶದ ಏಕತೆ, ಏಕಾತ್ಮತೆ, ಅಭಿವೃದ್ಧಿ ಮತ್ತು ಸುರಕ್ಷತೆಯ ಗ್ಯಾರಂಟಿಯಾಗಿದೆ. ಹಿಂದೂ ಸಮಾಜವು ಈ ದೇಶದ ಜವಾಬ್ದಾರಿಯುತ ಸಮಾಜವಾಗಿದೆ ಮತ್ತು ಹಿಂದೂ ಸಮಾಜವು ಸರ್ವಸಮಾವೇಶಕವಾಗಿದೆ. ಮೇಲ್ನೋಟದಲ್ಲಿ ಕಾಣಸಿಗುವ ವಿವಿಧ ಹೆಸರುಗಳು ಮತ್ತು ರೂಪಗಳ ಆಧಾರದಲ್ಲಿ "ನಾವು ಮತ್ತು ಅವರು" ಎಂಬ ಪ್ರತ್ಯೇಕತಾಭಾವದಿಂದ ಮಾನವರಲ್ಲಿ ವಿಭಜನೆ ಮತ್ತು ಪ್ರತ್ಯೇಕತೆಯನ್ನು ಸೃಷ್ಟಿಸುವ ಮಾನಸಿಕತೆಯಿಂದ ಹಿಂದೂ ಸಮಾಜವು ಮುಕ್ತವಾಗಿದೆ ಹಾಗೂ ಮುಕ್ತವಾಗಿರಲಿದೆ. ಹಿಂದೂ ಸಮಾಜವು "ವಸುಧೈವ ಕುಟುಂಬಕಂ" ಎಂಬ ಉದಾರ ನೀತಿಯ ಪ್ರವರ್ತಕ ಮತ್ತು ಸಂರಕ್ಷಕ. ಆದ್ದರಿಂದ, ಭಾರತವನ್ನು ವೈಭವಸಂಪನ್ನ ಹಾಗೂ ಸಂಪೂರ್ಣ ವಿಶ್ವದಲ್ಲಿ ತನ್ನ ಅಪೇಕ್ಷಿತ ಹಾಗೂ ಯಥೋಚಿತ ಕೊಡುಗೆ ನೀಡುವ ದೇಶವಾಗುವುದು – ಇದು ಹಿಂದೂ ಸಮಾಜದ ಕರ್ತವ್ಯವಾಗಿದೆ. ತನ್ನ ಸಂಘಟಿತ ಕಾರ್ಯಶಕ್ತಿಯ ಮೂಲಕ ವಿಶ್ವಕ್ಕೆ ಹೊಸ ದಾರಿ ನೀಡಬಲ್ಲ, ಧರ್ಮವನ್ನು ಸಂರಕ್ಷಿಸುತ್ತಾ ಭಾರತವನ್ನು ವೈಭವಸಂಪನ್ನವಾಗಿ ಮಾಡುವುದು – ಈ ಸಂಕಲ್ಪದೊಂದಿಗೆ ಸಂಘವು ಇಡೀ ಹಿಂದೂ ಸಮಾಜವನ್ನು ಸಂಘಟಿಸುವ ಕೆಲಸ ಮಾಡುತ್ತಿದೆ. ಸಂಘಟಿತ ಸಮಾಜವು ತನ್ನ ಎಲ್ಲಾ ಕರ್ತವ್ಯಗಳನ್ನು ತನ್ನದೇ ಆದ ಶಕ್ತಿಯ ಮೇಲೆ ನಿರ್ಧರಿಸುತ್ತದೆ. ಅದಕ್ಕಾಗಿ ಬೇರೆಯವರಾರೂ ಪ್ರತ್ಯೇಕವಾಗಿ ಏನನ್ನೂ ಮಾಡುವ ಅಗತ್ಯವೇ ಇರುವುದಿಲ್ಲʼʼ ಎಂದು ಮೋಹನ್ ಭಾಗವತ್ ಹೇಳಿದರು.
ʼʼಈ ರೀತಿಯ ಸಮಾಜದ ಚಿತ್ರಣವು ವಾಸ್ತವವಾಗಬೇಕಾದರೆ ವ್ಯಕ್ತಿಗಳು ಮತ್ತು ಸಮುದಾಯಗಳಲ್ಲಿ ವೈಯಕ್ತಿಕ ಚಾರಿತ್ರ್ಯಮತ್ತು ರಾಷ್ಟ್ರೀಯ ಚಾರಿತ್ರ್ಯಗಳನ್ನು ಸದೃಢಗೊಳಿಸಬೇಕಾದ ಅವಶ್ಯಕತೆಯಿದೆ. ನಮ್ಮ ರಾಷ್ಟ್ರ ಸ್ವರೂಪದ ಸ್ಪಷ್ಟ ಕಲ್ಪನೆ ಹಾಗೂ ಗೌರವ ಭಾವನೆಯು ಸಂಘದ ಶಾಖೆಯಲ್ಲಿ ಲಭಿಸುತ್ತದೆ. ನಿತ್ಯಶಾಖೆಯಲ್ಲಿ ನಡೆಯುವ ದೈನಂದಿನ ಚಟುವಟಿಕೆಗಳು ಸ್ವಯಂಸೇವಕರಲ್ಲಿ ವ್ಯಕ್ತಿತ್ವ, ಕರ್ತೃತ್ವ, ನೇತೃತ್ವ, ಭಕ್ತಿ ಮತ್ತು ತಿಳುವಳಿಕೆಯನ್ನು ಬೆಳೆಸುತ್ತವೆʼʼ ಎಂದರು.
ʼʼಇದೆಲ್ಲದರ ಹಿನ್ನೆಲೆಯಲ್ಲಿ ಶತಾಬ್ದಿ ವರ್ಷದಲ್ಲಿ ವ್ಯಕ್ತಿನಿರ್ಮಾಣದ ಕಾರ್ಯವು ದೇಶದಲ್ಲಿ ಭೌಗೋಳಿಕವಾಗಿ ಸರ್ವವ್ಯಾಪಿಯಾಗಬೇಕು ಹಾಗೂ ಸಾಮಾಜಿಕ ನಡವಳಿಕೆಯಲ್ಲಿ ಸಹಜ ಬದಲಾವಣೆಗಳನ್ನು ತರುವ ಪಂಚಪರಿವರ್ತನೆಯ ಕಾರ್ಯಕ್ರಮಗಳನ್ನು ಸ್ವಯಂಸೇವಕರ ಉದಾಹರಣೆಯ ಮೂಲಕ ಸಮಾಜವ್ಯಾಪಿಯಾಗಿಸಲು ಪ್ರಯತ್ನಿಸಬೇಕು. ವ್ಯಕ್ತಿಗಳು ಮತ್ತು ಕುಟುಂಬಗಳು ಸಾಮಾಜಿಕ ಸಾಮರಸ್ಯ, ಕುಟುಂಬ ಪ್ರಬೋಧನ, ಪರಿಸರ ಸಂರಕ್ಷಣೆ, ಸ್ವಬೋಧ ಅಥವಾ ಸ್ವದೇಶಿ ಜೀವನಶೈಲಿ ಮತ್ತು ನಾಗರಿಕ ಶಿಷ್ಟಾಚಾರ ಹಾಗೂ ಸಂವಿಧಾನದ ಪಾಲನೆ ಎಂಬ ಐದು ವಿಷಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಉದಾಹರಣೆಗಳ ಮೂಲಕ ಅನುಕರಣೀಯವಾಗಲಿ. ಈ ಕಾರ್ಯಕ್ರಮದಲ್ಲಿ ಅಳವಡಿಸಿಕೊಳ್ಳಲಾಗಿರುವ ಚಟುವಟಿಕೆಗಳು ಸರಳ ಮತ್ತು ಅನುಷ್ಠಾನಕ್ಕೆ ಸುಲಭವಾಗಿವೆ. ಈ ಕುರಿತು ಸಂಘದ ಕಾರ್ಯಕ್ರಮಗಳಲ್ಲಿ ಕಾಲಕಾಲಕ್ಕೆ ವಿವರವಾಗಿ ಚರ್ಚಿಸಲಾಗಿದೆ. ಸಂಘದ ಸ್ವಯಂಸೇವಕರ ಜೊತೆಗೆ ಸಮಾಜದಲ್ಲಿನ ಇತರೆ ಅನೇಕ ಸಂಘಸಂಸ್ಥೆಗಳು ಮತ್ತು ವ್ಯಕ್ತಿಗಳು ಸಹ ಇದೇ ರೀತಿಯ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಸಂಘದ ಸ್ವಯಂಸೇವಕರು ಅವರೊಂದಿಗೆ ಸಹಯೋಗ ಮತ್ತು ಸಮನ್ವಯ ಸಾಧಿಸುತ್ತಿದ್ದಾರೆʼʼ ಎಂದು ಹೇಳಿದರು.
ʼʼಕಾಲಕಾಲಕ್ಕೆ ಪ್ರಪಂಚದಲ್ಲಿ ಸಂಭವಿಸುವ ಅಸಮತೋಲನವನ್ನು ಸರಿಪಡಿಸುವ ಮತ್ತು ವಿಶ್ವ ಜೀವನದಲ್ಲಿ ಸಂಯಮ ಮತ್ತು ಘನತೆಯ ಪ್ರಜ್ಞೆಯನ್ನು ರೂಪಿಸುವ ವಿಶ್ವಧರ್ಮವನ್ನು ಒದಗಿಸುವುದೇ ಜಗತ್ತಿನ ಇತಿಹಾಸಕ್ಕೆ ಭಾರತದ ಮಹತ್ವದ ಕೊಡುಗೆ. ಭಾರತದಲ್ಲಿ ವಾಸಿಸುವ ವೈವಿಧ್ಯಮಯ ಸಮಾಜವನ್ನು ಸಂಘಟಿಸಿದ ನಮ್ಮ ಪೂರ್ವಜರು, ಒಂದು ರಾಷ್ಟ್ರವಾಗಿ ಈ ಕರ್ತವ್ಯವನ್ನು ಪದೇಪದೇ ನಿರ್ವಹಿಸುವ ಸಾಧನವಾಗಿ ಇಲ್ಲಿನ ಸಮಾಜವನ್ನು ರೂಪಿಸಿದರು. ನಮ್ಮ ಸ್ವಾತಂತ್ರ್ಯ ಹೋರಾಟ ಮತ್ತು ರಾಷ್ಟ್ರೀಯ ನವೋತ್ಥಾನದ ನಾಯಕರ ಮುಂದೆಯೂ ಸ್ವತಂತ್ರ ಭಾರತದ ಸಮೃದ್ಧಿ ಮತ್ತು ಸಾಮರ್ಥ್ಯವೃದ್ಧಿಯ ಈ ಮಂಗಲಮಯ ಪರಿಣಾಮದ ಚಿತ್ರಣವಿತ್ತು. ಬಂಗಾಳ ಪ್ರಾಂತದ ನಮ್ಮ ಪೂರ್ವ ಸಂಘಚಾಲಕರಾಗಿದ್ದ ದಿವಂಗತ ಕೇಶವ ಚಂದ್ರ ಚಕ್ರವರ್ತಿ ಇದನ್ನು ಸುಂದರವಾದ ಕಾವ್ಯಾತ್ಮಕ ಸಾಲುಗಳಲ್ಲಿ ಹೀಗೆ ವಿವರಿಸಿದ್ದಾರೆ:
ಬಾಲೀ ಸಿಂಘಲ ಜಬದ್ವೀಪೆ
ಪ್ರಾಂತರ್ ಮಾಝೆ ಉಠೆ |
ಕೋತೋ ಮಠ್ ಕೋತೋ ಮಂದಿರ್
ಕೋತೋ ಪ್ರಸ್ತರೆ ಫೂಲ್ ಫೋಟೆ |
ತಾದೇರ್ ಮುಖೇರ್ ಮಧುಮಯ್ ಬಾನೀ
ಸುನೆ ಥೇಮೇ ಜಾಯ್ ಸಬ್ ಹಾನಾಹಾನೀ |
ಅಭ್ಯುದಯೇರ್ ಸಭ್ಯತಾ ಜಾಗೇ
ವಿಶ್ವೇರ್ ಘರೇ-ಘರೇ |
(ಭಾರತೀಯ ಸಂಸ್ಕೃತಿಯ ಪ್ರಭಾವ ಸಿಂಹಳ ಮತ್ತು ಜಾವಾ ದ್ವೀಪವನ್ನೂ ಮೀರಿ ವ್ಯಾಪಿಸಿತ್ತು. ಎಲ್ಲೆಡೆ ಮಠಮಂದಿರಗಳಿದ್ದವು, ಅಲ್ಲಿ ಜೀವನದ ಸುಗಂಧವು ಹೂವುಗಳಂತೆ ಪಸರಿಸಿತ್ತು. ಭಾರತದ ಮಧುರ ಮತ್ತು ಜ್ಞಾನಮಯೀ ಧ್ವನಿಯಿಂದಾಗಿ ಅನ್ಯ ದೇಶಗಳಲ್ಲಿನ ದ್ವೇಷ ಮತ್ತು ಅಶಾಂತಿಯೂ ದೂರವಾಗುತ್ತಿತ್ತು).
ಬನ್ನಿ, ಇಂದಿನ ದೇಶ-ಕಾಲ-ಪರಿಸ್ಥಿತಿಗೆ ಅನುಗುಣವಾಗಿ ಈ ಭಾರತದ ಆತ್ಮಸ್ವರೂಪವನ್ನು ಜಗತ್ತಿನಲ್ಲಿ ಪುನಃಸ್ಥಾಪಿಸೋಣ. ನಮ್ಮ ಪೂರ್ವಜರು ನಮಗೆ ವಹಿಸಿಕೊಟ್ಟ ಈ ಕರ್ತವ್ಯವನ್ನು ಪೂರೈಸಲು, ವಿಶ್ವದ ಪ್ರಸ್ತುತ ಅಗತ್ಯಗಳನ್ನು ಪೂರೈಸಲು, ನಾವೆಲ್ಲರೂ ಜೊತೆಗೂಡೋಣ. ಒಟ್ಟಿಗೆ ಸಾಗೋಣ. ವಿಜಯದಶಮಿಯ ಈ ಶುಭ ಸಂದರ್ಭದಲ್ಲಿ ಸೀಮೋಲ್ಲಂಘನದ ಮೂಲಕ ನಮ್ಮ ಕರ್ತವ್ಯದ ಹಾದಿಯಲ್ಲಿ ಮುನ್ನಡೆಯೋಣʼʼ ಎಂದು ಮೋಹನ್ ಭಾಗವತ್ ಸಲಹೆ ನೀಡಿದರು.