ತಿರುವನಂತಪುರಂ, ಸೆ. 24: ಪತ್ತನಂತಿಟ್ಟ ಜಿಲ್ಲೆಯಲ್ಲಿರುವ ಕೇರಳಂನ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಭಂಡಾರದಿಂದ ದೇವರಿಗೆ ಅರ್ಪಿಸಲಾಗಿದ್ದ ಮೌಲ್ಯಯುತ ಬಂಗಾರದ ಕಿರೀಟ ನಾಪತ್ತೆಯಾಗಿದೆ (Sabarimala Crown Row). ಅದರ ಜಾಗದಲ್ಲಿ ತೂಕ ಕಡಿಮೆಯಿರುವ ನಕಲಿ ಕಿರೀಟ ಇಡಲಾಗಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದ್ದು, ಭಾರಿ ಸಂಚಲನ ಮೂಡಿಸಿದೆ. ಸಿಸಿಟಿವಿ ಇಲ್ಲದ ಭಂಡಾರದಿಂದ ಕಿರೀಟ ಕಳವಾಗಿದ್ದು, ಪ್ರಕರಣದ ತನಿಖೆ ತೀವ್ರಗೊಂಡಿದೆ
ಸುಮಾರು 55.72 ಸವರನ್ ಅಂದರೆ ಅಂದಾಜು 445.78 ಗ್ರಾಂ ತೂಕದ ಚಿನ್ನದ ಕಿರೀಟ ಕಳುವಾಗಿದ್ದು, ಅದರ ಜಾಗದಲ್ಲಿ ಕಡಿಮೆ ತೂಕವಿರುವ ನಕಲಿ ಕಿರೀಟ ಪತ್ತೆಯಾಗಿದೆ ಎಂದು ವರದಿಯಾಗಿದೆ. ಕೇರಳಂ ಹೈಕೋರ್ಟ್ ನಿರ್ದೇಶನದಂತೆ ಅಮಿಕಸ್ ಕ್ಯೂರಿ ಜಸ್ಟಿಸ್ ಕೆ.ಟಿ. ಶಂಕರನ್ ಅವರ ನೇತೃತ್ವದಲ್ಲಿ ದೇವಸ್ಥಾನದ ತಿರುವಾಭರಣ ಹಾಗೂ ಅಮೂಲ್ಯ ವಸ್ತುಗಳ ಪರಿಶೋಧನೆ ನಡೆಯುತ್ತಿದ್ದ ವೇಳೆ ಈ ಮಹತ್ವದ ವಿಷಯ ಬೆಳಕಿಗೆ ಬಂದಿದೆ.
ಶಬರಿಮಲೆ ದೇವಸ್ಥಾನದಿಂದ ಕಿರೀಟ ಕಳವು:
ಭಕ್ತರಿಂದ 445.78 ಗ್ರಾಂ ತೂಕದ ಚಿನ್ನದ ಕಿರೀಟ ಅರ್ಪಣೆ
ಈ ಬಂಗಾರದ ಕಿರೀಟವನ್ನು 2012ರಲ್ಲಿ ಅಯ್ಯಪ್ಪ ಸ್ವಾಮಿಗೆ ತಮಿಳುನಾಡಿನ ಚಾರ್ಟರ್ಡ್ ಅಕೌಂಟೆಂಟ್‌ಗಳ ಗುಂಪು ದೇವಸ್ಥಾನಕ್ಕೆ ಉಡುಗೊರೆಯಾಗಿ ನೀಡಿತ್ತು. ದೇವಸ್ಥಾನದ ಆಡಳಿತ ಮಂಡಳಿ ತಿರುವಾಂಕೂರು ದೇವಸ್ವಂ ಬೋರ್ಡ್ ಕಾಣಿಕೆ ನೀಡಿದ ಭಕ್ತರಿಗೆ ಅಧಿಕೃತ ರಸೀದಿಯನ್ನೂ ನೀಡಿತ್ತು. ದಾಖಲೆಗಳ ಪ್ರಕಾರ ಇದರ ಒಟ್ಟು ತೂಕ 445.78 ಗ್ರಾಂ ಇರಬೇಕಿತ್ತು. ಪ್ರಸ್ತುತ ಭಂಡಾರದಲ್ಲಿ ಪರಿಶೀಲಿಸಿದಾಗ ಸಿಕ್ಕಿರುವ ಕೀರಿಟದ ತೂಕ 240 ಗ್ರಾಂ ಮಾತ್ರ ಇದೆ. ಅಂದರೆ ಸುಮಾರು 205.78 ಗ್ರಾಂ ತೂಕದ ವ್ಯತ್ಯಾಸ ಕಂಡುಬಂದಿದೆ. ಮೂಲ ಕೀರಿಟದ ವಿನ್ಯಾಸ ಮತ್ತು ಗಾತ್ರದಲ್ಲೇ ಇರುವ ನಕಲಿ ಕಿರೀಟದಲ್ಲಿ ಅಸಲಿ ವಜ್ರಗಳ ಬದಲಿಗೆ ನಕಲಿ ಬಿಳಿ ಕಲ್ಲುಗಳನ್ನು ಜೋಡಿಸಲಾಗಿದೆ.
11 ತಿಂಗಳ ಬಳಿಕ ಕ್ಲೈಮ್ಯಾಕ್ಸ್‌ನತ್ತ ಶಬರಿಮಲೆ ಚಿನ್ನ ಕಳವು ತನಿಖೆ: ಸೆಪ್ಟೆಂಬರ್ 25ರೊಳಗೆ ಅಂತಿಮ ವರದಿ ಸಲ್ಲಿಕೆ
ಸಿಸಿಟಿವಿ ಇಲ್ಲದ ಭಂಡಾರ, ನಿಯಮ ಉಲ್ಲಂಘನೆ ಶಂಕೆ
ನಿಯಮಗಳ ಪ್ರಕಾರ ಸನ್ನಿಧಾನದ ಭಂಡಾರಕ್ಕೆ ಬರುವ ಇಂತಹ ಬೆಲೆಬಾಳುವ ಕಾಣಿಕೆಗಳನ್ನು ತಾತ್ಕಾಲಿಕವಾಗಿ ಅಲ್ಲಿಟ್ಟು, ನಂತರ ಆರಣ್ಮುಲಾದಲ್ಲಿರುವ ಟ್ರಾವಂಕೂರ್ ದೇವಸ್ವಂ ಮಂಡಳಿಯ (TDB) ಸುರಕ್ಷಿತ ಕೇಂದ್ರೀಯ ಭಂಡಾರಕ್ಕೆ ರವಾನಿಸಬೇಕು. ಆದರೆ 2012ರಲ್ಲಿ ಸ್ವೀಕರಿಸಲಾದ ಈ ಕಿರೀಟವನ್ನು ಆರಣ್ಮುಲಾಗೆ ವರ್ಗಾಯಿಸಲೇ ಇಲ್ಲ ಎನ್ನಲಾಗಿದೆ. ಇದಲ್ಲದೆ, ಸನ್ನಿಧಾನದ ಈ ಭಂಡಾರದಲ್ಲಿ ಸಿಸಿಟಿವಿ ಕಣ್ಗಾವಲು ಇರಲಿಲ್ಲ. ಪ್ರತಿಯೊಬ್ಬ ಆಡಳಿತಾಧಿಕಾರಿಯ ಅಧಿಕಾರಾವಧಿ 1 ವರ್ಷ ಮಾತ್ರ ಇರುವುದರಿಂದ, ವರ್ಷಗಳ ಅವಧಿಯಲ್ಲಿ ಯಾರು ಮತ್ತು ಯಾವಾಗ ಈ ಕಿರೀಟವನ್ನು ಅದಲು-ಬದಲು ಮಾಡಿದರು ಎಂಬುದನ್ನು ಪತ್ತೆಹಚ್ಚುವುದು ತನಿಖಾಧಿಕಾರಿಗಳಿಗೆ ದೊಡ್ಡ ಸವಾಲಾಗಿದೆ
4 ಗ್ರಾಂ ಚಿನ್ನದ ಹಾರವೂ ನಾಪತ್ತೆ
ಇದೇ ಪರಿಶೀಲನೆ ವೇಳೆ ಅರನ್ಮುಲಾ ದೇವಸ್ವಂ ಸ್ಟ್ರಾಂಗ್ ರೂಮ್‌ನಿಂದ್ 4 ಗ್ರಾಂ ತೂಕದ ಚಿನ್ನದ ಹಾರವೂ ಕಾಣೆಯಾಗಿರುವುದು ತಿಳಿದುಬಂದಿದೆ. ಇದರಿಂದ ತನಿಖೆಯನ್ನು ಇನ್ನಷ್ಟು ತೀವ್ರಗೊಳಿಸುವ ಸಾಧ್ಯತೆ ಇದೆ.
ಶಬರಿಮಲೆ ಚಿನ್ನ ಕಳವು ಪ್ರಕರಣ: ನಟ ಜಯರಾಮ್‌ಗೆ ಇ.ಡಿ ನೋಟಿಸ್
ದೇವಸ್ವಂ ಮಂಡಳಿಯ ಸ್ಪಷ್ಟನೆ
ಈ ಆಘಾತಕಾರಿ ಸುದ್ದಿ ಹೊರಬೀಳುತ್ತಿದ್ದಂತೆ ಪ್ರತಿಕ್ರಿಯಿಸಿರುವ ಟ್ರಾವಂಕೂರ್ ದೇವಸ್ವಂ ಮಂಡಳಿ (TDB) ಅಧ್ಯಕ್ಷ ಕೆ. ಜಯಕುಮಾರ್, ʼʼಮಾಧ್ಯಮಗಳ ಮೂಲಕ ಈ ವಿಷಯ ನನ್ನ ಗಮನಕ್ಕೆ ಬಂದಿದೆ. ಸನ್ನಿಧಾನದಿಂದ ಆರಣ್ಮುಲಾಗೆ ವಸ್ತುಗಳನ್ನು ಸ್ಥಳಾಂತರಿಸುವ ವ್ಯವಸ್ಥೆಯಲ್ಲಿ ಲೋಪಗಳಾಗಿವೆಯೇ ಎಂಬುದರ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದುʼʼ ಎಂದಿದ್ದಾರೆ. ಅತ್ತ, ತಿರುವಾಭರಣ ಕಮಿಷನರ್ ಮಂಡಳಿಗೆ ನೀಡಿರುವ ಪ್ರಾಥಮಿಕ ಮಾಹಿತಿಯಲ್ಲಿ ʼʼಅಸಲಿ ಕಿರೀಟ ಸುರಕ್ಷಿತವಾಗಿದೆ, ಭಕ್ತರು ನೀಡುವ ಹಲವು ಮಾದರಿಯ ಆಭರಣಗಳು ಅಲ್ಲಿವೆʼʼ ಎಂದು ಹೇಳಿದ್ದಾರೆ. ಅದಾಗ್ಯೂ ತೂಕದಲ್ಲಿ ಕಂಡುಬಂದ ಭಾರಿ ವ್ಯತ್ಯಾಸ ಮತ್ತು ಅಸಲಿ ಕಿರೀಟದ ಪತ್ತೆ ವಿಚಾರದಲ್ಲಿ ಹೈಕೋರ್ಟ್‌ಗೆ ಸಲ್ಲಿಕೆಯಾಗಲಿರುವ ಅಂತಿಮ ವರದಿಯಿಂದಷ್ಟೇ ಸಂಪೂರ್ಣ ಸತ್ಯಾಂಶ ಹೊರಬರಲಿದೆ.
ದೇಶದ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.