ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

11 ತಿಂಗಳ ಬಳಿಕ ಕ್ಲೈಮ್ಯಾಕ್ಸ್‌ನತ್ತ ಶಬರಿಮಲೆ ಚಿನ್ನ ಕಳವು ತನಿಖೆ: ಸೆಪ್ಟೆಂಬರ್‌ 25ರೊಳಗೆ ಅಂತಿಮ ವರದಿ ಸಲ್ಲಿಕೆ

Sabarimala Gold Theft Probe: ಶಬರಿಮಲೆ ಚಿನ್ನ ಕಳವು ಪ್ರಕರಣದ ತನಿಖೆ ಅಂತಿಮ ಹಂತ ತಲುಪಿದ್ದು, ಸೆಪ್ಟೆಂಬರ್ 25ರೊಳಗೆ ಅಂತಿಮ ವರದಿ ಸಲ್ಲಿಸುವುದಾಗಿ SIT ಕೇರಳಂ ಹೈಕೋರ್ಟ್‌ಗೆ ತಿಳಿಸಿದೆ. ಕಟ್ಟಿಲಪ್ಪಳಿ ಪ್ರಕರಣದ ತನಿಖೆ ಪೂರ್ಣಗೊಂಡಿದ್ದು, ದ್ವಾರಪಾಲಕ ವಿಗ್ರಹ ಪ್ರಕರಣದ ತನಿಖೆ ಅಂತಿಮ ಹಂತದಲ್ಲಿದೆ. ಈತನ್ಮಧ್ಯೆ, ತಿರುವಾಂಕೂರು ದೇವಸ್ವಂ ಮಂಡಳಿ ಮಾಜಿ ಅಧ್ಯಕ್ಷ ಪಿ.ಎಸ್. ಪ್ರಶಾಂತ್‌ಗೆ ವೈದ್ಯಕೀಯ ಕಾರಣಗಳ ಆಧಾರದ ಮೇಲೆ ಜಾಮೀನು ಮಂಜೂರಾಗಿದೆ.

ಶಬರಿಮಲೆ ಚಿನ್ನ ಕಳವು ಕೇಸ್‌ಗೆ ಶೀಘ್ರ ತೆರೆ

ಸಾಂದರ್ಭಿಕ ಚಿತ್ರ -

Profile
Sushmitha Jain Sep 3, 2026 10:57 PM

ತಿರುವನಂತಪುರಂ, ಸೆ. 3: ಶಬರಿಮಲೆ ಚಿನ್ನ ಕಳವು ಪ್ರಕರಣದ ತನಿಖೆ ಆರಂಭವಾಗಿ ಸುಮಾರು 11 ತಿಂಗಳ ಬಳಿಕ, ವಿಶೇಷ ತನಿಖಾ ತಂಡ (SIT) ತನಿಖೆಯನ್ನು ಅಂತಿಮ ಹಂತಕ್ಕೆ ತಲುಪಿಸಿದೆ (Sabarimala Gold Theft Probe). ಸೆಪ್ಟೆಂಬರ್ 25ರೊಳಗೆ ಅಂತಿಮ ವರದಿ ಸಲ್ಲಿಸಲಾಗುವುದು ಎಂದು ಕೇರಳಂ ಹೈಕೋರ್ಟ್‌ಗೆ ಎಸ್‌ಐಟಿ ತಿಳಿಸಿದೆ. ಎಸ್‌ಐಟಿ ಮುಖ್ಯಸ್ಥ ಎಸ್. ಸದಾಶಿವನ್ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದು, ಕಟ್ಟಿಲಪ್ಪಳಿ (ಚಿನ್ನದ ಹೊದಿಕೆ ಹೊಂದಿರುವ ಬಾಗಿಲಿನ ಚೌಕಟ್ಟು) ಪ್ರಕರಣದ ತನಿಖೆ ಪೂರ್ಣಗೊಂಡಿದೆ. ದ್ವಾರಪಾಲಕ ವಿಗ್ರಹಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆ ಅಂತಿಮ ಹಂತದಲ್ಲಿದ್ದು, ಬಾಕಿ ಇರುವ ವೈಜ್ಞಾನಿಕ ಪರೀಕ್ಷೆಗಳ ವರದಿಗಳನ್ನು ಅಂತಿಮ ವರದಿಯಲ್ಲಿ ಸೇರಿಸಲಾಗುವುದು ಎಂದು ತಿಳಿಸಿದ್ದಾರೆ.

ತನಿಖೆಯ ಪ್ರಗತಿ ಕುರಿತು ಕೇರಳಂ ಹೈಕೋರ್ಟ್‌ನ ದೇವಸ್ವಂ ಪೀಠ ತೃಪ್ತಿ ವ್ಯಕ್ತಪಡಿಸಿದರೂ, ಸುಮಾರು 11 ತಿಂಗಳಿನಿಂದ ತನಿಖೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇನ್ನು ಯಾವುದೇ ವಿಳಂಬ ಮಾಡದೆ ಅಂತಿಮ ವರದಿ ಸಲ್ಲಿಸಬೇಕು ಎಂದು ಸ್ಪಷ್ಟಪಡಿಸಿದೆ.

ಪತ್ನಿ ಎಲ್ಲ ಕಡೆ ಪತಿಯನ್ನು ಹಿಂಬಾಲಿಸಲು ಸಾಧ್ಯವಿಲ್ಲ: ಮದ್ರಾಸ್ ಹೈಕೋರ್ಟ್

ಇದರ ನಡುವೆ, ದ್ವಾರಪಾಲಕ ವಿಗ್ರಹ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ಮಾಜಿ ತಿರುವಾಂಕೂರು ದೇವಸ್ವಂ ಮಂಡಳಿ ಅಧ್ಯಕ್ಷ ಪಿ.ಎಸ್. ಪ್ರಶಾಂತ್‌ಗೆ ವೈದ್ಯಕೀಯ ಕಾರಣಗಳ ಆಧಾರದ ಮೇಲೆ ಜಾಮೀನು ಮಂಜೂರಾಗಿದೆ. ಬಂಧನವಾಗಿ 43 ದಿನಗಳ ಬಳಿಕ ಅವರು ಜೈಲಿನಿಂದ ಹೊರಬರಲಿದ್ದಾರೆ.

2025ರಲ್ಲಿ ನ್ಯಾಯಾಲಯದ ಅನುಮತಿ ಪಡೆಯದೆ ದ್ವಾರಪಾಲಕ ವಿಗ್ರಹವನ್ನು ಚೆನ್ನೈಗೆ ಕೊಂಡೊಯ್ದ ಪ್ರಕರಣ ಇದಾಗಿದೆ. SIT ಪ್ರಕಾರ, 2019ರಲ್ಲಿ ನಡೆದಿದ್ದ ಎನ್ನಲಾದ ಚಿನ್ನ ಕಳವು ಪ್ರಕರಣವನ್ನು ಮುಚ್ಚಿಹಾಕಲು 2025ರಲ್ಲಿ ಪ್ರಶಾಂತ್ ನೇತೃತ್ವದಲ್ಲಿ ಉದ್ದೇಶಪೂರ್ವಕ ಪ್ರಯತ್ನ ನಡೆದಿತ್ತು.

ಪ್ರಕರಣ ಬಯಲಿಗೆ ಬಂದಿದ್ದು ಹೇಗೆ?

2025ರ ಸೆಪ್ಟಂಬರ್ ಸುಮಾರಿಗೆ ಚಿನ್ನದ ಲೇಪನಕ್ಕೆಂದು ದೇವರ ಚಿನ್ನವನ್ನು ಚೆನ್ನೈಗೆ ಕೊಂಡೊಯ್ಯಲು ಅನುಮತಿಯನ್ನು ಪಡೆಯಲಾಗಲಿಲ್ಲ ಎನ್ನುವ ದೇವಸ್ವಂ ಬೋರ್ಡಿನ ವಿಶೇಷ ಆಯುಕ್ತರು ಹೈಕೋರ್ಟಿಗೆ ತಿಳಿಸಿದಾಗ, ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿತು. 2018ರಿಂದ ಇದುವರೆಗೆ, ಎಲ್ಲ ದಾಖಲೆಗಳನ್ನು ಸಲ್ಲಿಸುವಂತೆ ಕೇರಳಂ ಹೈಕೋರ್ಟ್, ದೇವಸ್ವಂ ಮಂಡಳಿಗೆ ನಿರ್ದೇಶನ ನೀಡಿತು. ಕೋರ್ಟ್ ಸೂಚನೆಯಂತೆ, ದೇವಸ್ವಂ ಬೋರ್ಡ್ ದಾಖಲೆ ಪರಿಶೀಲನೆ ವೇಳೆ ಲೇಪನಗಳ ತೂಕದಲ್ಲಿ ವ್ಯತ್ಯಾಸವಾಗಿರುವುದು ಕಂಡುಬಂತು. ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ, ತನಿಖೆ ಮಾಡಲು ವಿಶೇಷ ತನಿಖಾ ತಂಡವನ್ನು (SIT) ನೇಮಿಸಿತು.