ನವದೆಹಲಿ, ಜು. 23: ನೀಟ್-ಯುಜಿ (NEET-UG) ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳನ್ನು ಖಂಡಿಸಿ, ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹಾಗೂ ಸುಧಾರಣೆಗಳಿಗೆ ಆಗ್ರಹಿಸಿ ನವದೆಹಲಿಯ ಜಂತರ್ ಮಂತರ್‌ನಲ್ಲಿ ದೇಶಾದ್ಯಂತದ ವಿದ್ಯಾರ್ಥಿಗಳು, ಪೋಷಕರು ಮತ್ತು ಬೆಂಬಲಿಗರು ನಡೆಸುತ್ತಿರುವ ಬೃಹತ್ ಪ್ರತಿಭಟನೆಯ ನಡುವೆಯೇ, ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ (Sachin Tendulkar) ಆಡಿರುವ ಮಾತು ಗಮನ ಸೆಳೆದಿದೆ. ವಿದ್ಯಾರ್ಥಿಗಳ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವಂತ ವಾತಾವರಣ ನಿರ್ಮಿಸಬೇಕೆಂದು ಕರೆ ನೀಡಿದ್ದಾರೆ.
"ನನ್ನ ತಂದೆ ಒಬ್ಬ ಪ್ರಾಧ್ಯಾಪಕರಾಗಿದ್ದರು. ಅವರು ನನಗೆ ಆರಂಭದಲ್ಲೇ ಕಲಿಸಿದ ಒಂದು ದೊಡ್ಡ ಪಾಠವೆಂದರೆ -ಸೋಲು ಪರವಾಗಿಲ್ಲ, ಆದರೆ ವಂಚನೆ ಸಲ್ಲದು. ಎಂದಿಗೂ ಸುಲಭದ ಹಾರಿದಾರಿಗಳನ್ನು ಆಯ್ಕೆ ಮಾಡಿಕೊಳ್ಳಬೇಡಿ ಎಂಬುದು. ಸಮಾಜದಲ್ಲಿ ಹಿರಿಯರಾದ ನಾವು ಸೂಕ್ತ ವಾತಾವರಣವನ್ನು ರೂಪಿಸುವ ಜವಾಬ್ದಾರಿಯನ್ನು ಹೊರಬೇಕಾಗಿದೆ. ಶ್ರಮಕ್ಕಿಂತ ಹೆಚ್ಚಾಗಿ ಫಲಿತಾಂಶಕ್ಕೆ ಆದ್ಯತೆ ನೀಡುವ ಸಮಾಜವು ಪ್ರತಿಭೆಯ ಬದಲು ಶಾರ್ಟ್‌ಕಟ್‌ಗಳನ್ನು ಹುಡುಕುತ್ತದೆ. ಕಷ್ಟಪಟ್ಟು ಓದಿದ ವಿದ್ಯಾರ್ಥಿಗಳು ತಮ್ಮ ಶ್ರಮಕ್ಕೆ ಸೂಕ್ತ ಫಲ ಸಿಗಲಿಲ್ಲ ಎಂದು ನಿರಾಶೆಗೊಂಡಿರುವುದು ಸಂಪೂರ್ಣವಾಗಿ ಅರ್ಥವಾಗುತ್ತದೆ. ಇಂತಹ ದುಸ್ಥಿತಿ ಮತ್ತೆಂದೂ ನಿರ್ಮಾಣವಾಗದಂತೆ ನಾವೆಲ್ಲರೂ ಒಟ್ಟಾಗಿ ಶ್ರಮಿಸಬೇಕು" ಎಂದು ಸಚಿನ್ ಎಕ್ಸ್‌ನ ದೀರ್ಘ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಸಚಿನ್ ತೆಂಡೂಲ್ಕರ್ ಅವರ ಎಕ್ಸ್ ಪೋಸ್ಟ್:
ʼʼಯುವ ಭಾರತವು ಅಪಾರ ಕನಸುಗಳು ಮತ್ತು ಉತ್ಸಾಹದಿಂದ ತುಂಬಿದೆ. ಯುವ ಜನರು ನಮ್ಮ ಯಶಸ್ಸಿನ ಇಂಧನವಾಗಿದ್ದಾರೆ. ಪೋಷಕರು, ಶಿಕ್ಷಕರು, ಸ್ನೇಹಿತರು, ಸಂಬಂಧಿಕರು, ಶಾಲೆಗಳು ಮತ್ತು ಆಡಳಿತಗಾರರು ಸೇರಿ ಪ್ರತಿಯೊಬ್ಬರೂ ನಮ್ಮ ಯುವಜನತೆಯನ್ನು ನಿರಂತರವಾಗಿ ಪ್ರೋತ್ಸಾಹಿಸುವ ಹಾಗೂ ಸಶಕ್ತಗೊಳಿಸುವ ವಿಭಿನ್ನ ಮತ್ತು ಮಹತ್ತರ ಜವಾಬ್ದಾರಿಯನ್ನು ಹೊಂದಿದ್ದಾರೆ. ಪ್ರಾಮಾಣಿಕತೆ ಹಾಗೂ ಪ್ರತಿಭೆಗೆ ಮಾತ್ರ ಆದ್ಯತೆ ನೀಡಿ, ಕಠಿಣ ಶ್ರಮಕ್ಕೆ ತಕ್ಕ ಗೌರವ ಸಿಗುವ ಸಂಸ್ಕೃತಿಯನ್ನು ನಾವು ಉತ್ತೇಜಿಸಬೇಕು. ದೇಶದ ಮಕ್ಕಳ ಭವಿಷ್ಯವನ್ನು ಬಲಪಡಿಸುವ ಮತ್ತು ಅವರ ಆಕಾಂಕ್ಷೆಗಳನ್ನು ಕಾಯುವ ಸೂಕ್ತ ಪರಿಹಾರಗಳು ಶೀಘ್ರದಲ್ಲೇ ಸಿಗಲಿವೆ ಎಂಬ ಸಂಪೂರ್ಣ ನಂಬಿಕೆ ನನಗಿದೆʼʼ ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿಗಳ ಪ್ರತಿಭಟನೆ ರಾಜಕೀಯಗೊಳಿಸಬೇಡಿ; ಸಲ್ಮಾನ್ ಖಾನ್ ಬೆಂಬಲ
ಅಭಿನವ್ ಬಿಂದ್ರಾ ಹೇಳಿದ್ದೇನು?
ಇದೇ ವಿಚಾರವಾಗಿ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಅಭಿನವ್ ಬಿಂದ್ರಾ ಕೂಡ ಧ್ವನಿ ಎತ್ತಿದ್ದು, "ನಾನು ರಾಜಕೀಯ ವ್ಯಕ್ತಿಯಲ್ಲ. ಆದರೆ ಶಿಕ್ಷಣವು ಪ್ರತಿಯೊಬ್ಬರಿಗೂ ಸೇರಿದ ವಿಷಯವಾಗಿದೆ. ದೇಶದ ಪ್ರಗತಿಯು ಕೇವಲ ಆರ್ಥಿಕತೆಯಿಂದಲ್ಲ, ಬದಲಿಗೆ ಯುವಜನರಿಗೆ ಕಲ್ಪಿಸುವ ಅವಕಾಶಗಳು ಹಾಗೂ ನಂಬಿಕೆ ಮೂಡಿಸುವ ಶಿಕ್ಷಣದ ಬಲವನ್ನು ಆಧರಿಸಿದೆ" ಎಂದಿದ್ದಾರೆ. ಈ ನಡುವೆ, ಪರೀಕ್ಷಾ ಅಕ್ರಮ ತಡೆಗೆ ಮತ್ತು ಪತ್ರಿಕೆ ಸೋರಿಕೆಯ ಆರೋಪಿಗಳ ವಿರುದ್ಧ ಶೀಘ್ರ ವಿಚಾರಣೆ ನಡೆಸಿ ಕಠಿಣ ಶಿಕ್ಷೆ ವಿಧಿಸಲು ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳನ್ನು ಸ್ಥಾಪಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.