ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

‘'ಎನ್‌ಟಿಎ ಪಾಠ ಕಲಿಯದಿರುವುದು ನೋವಿನ ಸಂಗತಿʼʼ: 2026ರ ನೀಟ್ ಪತ್ರಿಕೆ ಸೋರಿಕೆ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದಿಷ್ಟು

NEET Paper Leak: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಎನ್‌ಟಿಎ ಪಾಠ ಕಲಿಯದಿರುವುದು ಬೇಸರದ ಸಂಗತಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ನಡೆಸಲು ಬಲಿಷ್ಠ ಹಾಗೂ ಸ್ವಾಯತ್ತ ಸಂಸ್ಥೆಯನ್ನು ನೇಮಿಸುವಂತೆ ಸಲ್ಲಿಸಲಾದ ಅರ್ಜಿಗಳ ಕುರಿತು ಕೇಂದ್ರ ಸರ್ಕಾರ, ಎನ್‌ಟಿಎ ಮತ್ತು ಸಿಬಿಐಗೆ ಪ್ರತಿಕ್ರಿಯೆ ಸಲ್ಲಿಸಲು ನ್ಯಾಯಾಲಯ ಆದೇಶಿಸಿದೆ.

ಸಾಂದರ್ಭಿಕ ಚಿತ್ರ

ನವದೆಹಲಿ, ಮೇ 25: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ (NEET paper leak) ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ಪಾಠ ಕಲಿಯದಿರುವುದು ಬೇಸರದ ಸಂಗತಿ ಎಂದು ಸುಪ್ರೀಂ ಕೋರ್ಟ್ (Supreme Court) ಹೇಳಿದೆ. ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ನಡೆಸಲು ಬಲಿಷ್ಠ ಹಾಗೂ ಸ್ವಾಯತ್ತ ಸಂಸ್ಥೆಯನ್ನು ನೇಮಿಸುವಂತೆ ಸಲ್ಲಿಸಲಾದ ಅರ್ಜಿಗಳ ಕುರಿತು ಕೇಂದ್ರ ಸರ್ಕಾರ (Central Government), ಎನ್‌ಟಿಎ ಮತ್ತು ಸಿಬಿಐಗೆ ಪ್ರತಿಕ್ರಿಯೆ ಸಲ್ಲಿಸಲು ನ್ಯಾಯಾಲಯ ಆದೇಶಿಸಿದೆ.

ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಆರಾಧೆ ಅವರ ಪೀಠವು ಅರ್ಜಿಗಳ ಪ್ರತಿಯನ್ನು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಇತರ ಪಕ್ಷಗಳಿಗೆ ನೀಡಬೇಕೆಂದು ನಿರ್ದೇಶಿಸಿತು. ಜತೆಗೆ ನೀಟ್ ನಡೆಸುವ ಜವಾಬ್ದಾರಿ ಹೊಂದಿರುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ, 2024ರಲ್ಲಿ ನ್ಯಾಯಾಲಯ ನೀಡಿದ್ದ ನಿರ್ದೇಶನಗಳ ಅನುಸರಣೆ ಕುರಿತು ಮೇ 28ರೊಳಗೆ ಪ್ರಮಾಣಪತ್ರ ಸಲ್ಲಿಸುವಂತೆ ಆದೇಶಿಸಿತು.

ಎನ್‌ಟಿಎ ಪಾಠ ಕಲಿಯದಿರುವುದು ಬೇಸರದ ಸಂಗತಿ. ಈ ವಿಚಾರ ಹಿಂದೆಯೂ ಕೂಡ ನ್ಯಾಯಾಲಯದ ಮುಂದೆ ಬಂದಿತ್ತು. ಮೇಲ್ವಿಚಾರಣಾ ಸಮಿತಿ ರಚಿಸಲಾಗಿತ್ತು. ಆ ಸಮಿತಿ ಕೆಲವು ಶಿಫಾರಸುಗಳನ್ನು ಮಾಡಿತ್ತು, ಅವುಗಳನ್ನು ಅಂಗೀಕರಿಸಲಾಗಿತ್ತು. ಸಮಿತಿ ಸೂಚಿಸಿದ ಶಿಫಾರಸುಗಳ ಅನುಸರಣೆಗೆ ತೆಗೆದುಕೊಂಡ ಕ್ರಮಗಳ ಕುರಿತು ಎನ್‌ಟಿಎ ಅಫಿಡವಿಟ್ ಸಲ್ಲಿಸಬೇಕೆಂದು ಪೀಠ ಹೇಳಿದೆ.

ಮಗಳಿಗಾಗಿ ನೀಟ್ ಪತ್ರಿಕೆ ಖರೀದಿಸಿದ ವ್ಯಕ್ತಿ ಮನೆಗೆ ಸಿಬಿಐ ದಾಳಿ

ವಕೀಲರಾದ ತನ್ವಿ ದುಬೆ ಅವರ ಮೂಲಕ ಫೆಡರೇಷನ್ ಆಫ್ ಆಲ್ ಇಂಡಿಯಾ ಮೆಡಿಕಲ್ ಅಸೋಸಿಯೇಷನ್ (FAIMA) ಸಲ್ಲಿಸಿದ ಅರ್ಜಿಯ ಕುರಿತು ನೋಟಿಸ್ ಜಾರಿ ಮಾಡಿದ ಸುಪ್ರೀಂ ಕೋರ್ಟ್, ಇದೇ ವಿಷಯಕ್ಕೆ ಸಂಬಂಧಿಸಿದ ಇತರ ಎಲ್ಲ ಅರ್ಜಿಗಳನ್ನು ಕೂಡ ಒಟ್ಟಿಗೆ ವಿಚಾರಣೆಗೆ ಸೇರಿಸಲಾಗುತ್ತಿದೆ ಎಂದು ತಿಳಿಸಿದೆ.

ಎನ್‌ಟಿಎ ಕಾರ್ಯವೈಖರಿಯನ್ನು ಸಂಪೂರ್ಣವಾಗಿ ಸುಧಾರಿಸಲು ಹಾಗೂ ನ್ಯಾಯಾಲಯ ನೀಡಿದ ನಿರ್ದೇಶನಗಳ ಅನುಷ್ಠಾನಕ್ಕಾಗಿ ಕೈಗೊಂಡ ಕ್ರಮಗಳ ವಿವರ ನೀಡುವಂತೆ ಇಸ್ರೋ ಮಾಜಿ ಮುಖ್ಯಸ್ಥ ಕೆ. ರಾಧಾಕೃಷ್ಣನ್ ನೇತೃತ್ವದ ಕೇಂದ್ರ ಸರ್ಕಾರ ನೇಮಿಸಿದ್ದ ಸಮಿತಿಗೆ ಆದೇಶಿಸಿದೆ.

ಪುನರಾವರ್ತಿತ ಪ್ರಶ್ನೆಪತ್ರಿಕೆ ಸೋರಿಕೆಗಳು 22.7 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೂಲಭೂತ ಹಕ್ಕುಗಳ ಮೇಲಿನ ನೇರ ದಾಳಿ ಎಂದು ಉಲ್ಲೇಖಿಸಿರುವ ವೈದ್ಯಕೀಯ ಸಂಸ್ಥೆಯು, ನೀಟ್-ಯುಜಿ (NEET-UG) ಪರೀಕ್ಷೆಯನ್ನು ನಡೆಸಲು ಎನ್‌ಟಿಎ (NTA) ಅನ್ನು ಪುನರ್ರಚಿಸುವಂತೆ ಅಥವಾ ಅದರ ಬದಲಿಗೆ ಒಂದು ಬಲಿಷ್ಠ ಹಾಗೂ ಸ್ವಾಯತ್ತ ವ್ಯವಸ್ಥೆಯನ್ನು ತರುವಂತೆ ನಿರ್ದೇಶನ ನೀಡಲು ಸುಪ್ರೀಂ ಕೋರ್ಟ್ ಅನ್ನು ಒತ್ತಾಯಿಸಿದೆ.

ಮರು ಪರೀಕ್ಷೆಯ ಮೇಲ್ವಿಚಾರಣೆಗಾಗಿ ಹೊಸ ಸಂಸ್ಥೆಯನ್ನು ಔಪಚಾರಿಕವಾಗಿ ರಚಿಸುವವರೆಗೆ ಉನ್ನತಾಧಿಕಾರದ ಮೇಲ್ವಿಚಾರಣಾ ಸಮಿತಿಯನ್ನು ನೇಮಿಸಲು ನಿರ್ದೇಶನವನ್ನು ಕೋರಿದೆ. ಮತ್ತಷ್ಟು ಪ್ರಶ್ನೆಪತ್ರಿಕೆ ಸೋರಿಕೆಗಳು ಸಂಭವಿಸದಂತೆ ನೋಡಿಕೊಳ್ಳಲು ಸಮಿತಿಯು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ಜತೆಗೆ ಸೈಬರ್ ತಜ್ಞರು ಮತ್ತು ವಿಧಿವಿಜ್ಞಾನಿಗಳನ್ನು ಒಳಗೊಂಡಿರಬೇಕು ಎಂದು ಅದು ಹೇಳಿದೆ.

ವೈದ್ಯಕೀಯ ಶಿಕ್ಷಣ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ಎನ್‌ಟಿಎ, ಮೇ 3ರಂದು ನಡೆಸಿದ್ದ ಪದವಿ ಪೂರ್ವ ಮಟ್ಟದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳ ಹಿನ್ನೆಲೆ ಮೇ 12ರಂದು ರದ್ದುಗೊಂಡಿತು. ಈ ಪ್ರಕರಣವನ್ನು ಇದೀಗ ಸಿಬಿಐ ತನಿಖೆ ನಡೆಸುತ್ತಿದೆ.