ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸಲ್ಬೋನಿ ಭೂಕಬಳಿಕೆ ಪ್ರಕರಣ: ಅಭಿಷೇಕ್ ಬ್ಯಾನರ್ಜಿ ಪಿಎ ಸುಮಿತ್ ರಾಯ್ ಬಂಧಿಸಿದ ಸಿಐಡಿ

CID Arrests Sumit Roy: ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಅವರ ಆಪ್ತ ಸಹಾಯಕ ಸುಮಿತ್ ರಾಯ್ ಅವರನ್ನು ಸಲ್ಬೋನಿ ಭೂಕಬಳಿಕೆ ಪ್ರಕರಣದಲ್ಲಿ ಸಿಐಡಿ ಬಂಧಿಸಿದೆ. ರಾಯ್ ಅವರನ್ನು ಕಾಳಿಘಾಟ್ ರಸ್ತೆಯಲ್ಲಿರುವ ಟಿಎಂಸಿ (TMC) ಕಚೇರಿಯಿಂದ ಸಿಐಡಿ ಬಂಧಿಸಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ತಿಳಿಸಿದ್ದಾರೆ.

ಅಭಿಷೇಕ್ ಬ್ಯಾನರ್ಜಿ ಪಿಎ ಸುಮಿತ್ ರಾಯ್

ಕೋಲ್ಕತ್ತಾ, ಸೆ.10: ಸುಪ್ರೀಂ ಕೋರ್ಟ್ (Supreme Court) ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದ ನಂತರ, ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ (Abhishek Banerjee) ಅವರ ಆಪ್ತ ಸಹಾಯಕ ಸುಮಿತ್ ರಾಯ್ ಅವರನ್ನು ಸಲ್ಬೋನಿ ಭೂಕಬಳಿಕೆ ಪ್ರಕರಣದಲ್ಲಿ ಸಿಐಡಿ ಬಂಧಿಸಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ (Suvendu Adhikari) ವಿಧಾನಸಭೆಯಲ್ಲಿ ಮಾತನಾಡಿ, ಸುಪ್ರೀಂ ಕೋರ್ಟ್ ನೀಡಿದ್ದ ರಕ್ಷಣೆಯನ್ನು ಹಿಂಪಡೆದ ನಂತರ ರಾಯ್ ಅವರನ್ನು ಕಾಳಿಘಾಟ್ ರಸ್ತೆಯಲ್ಲಿರುವ ಟಿಎಂಸಿ (TMC) ಕಚೇರಿಯಿಂದ ಸಿಐಡಿ ಬಂಧಿಸಿದೆ ಎಂದು ತಿಳಿಸಿದ್ದಾರೆ. ಅಭಿಷೇಕ್ ಬ್ಯಾನರ್ಜಿ ಪರವಾಗಿ ರಾಯ್, ಹಣ ವಸೂಲಿ ಮಾಡುವಲ್ಲಿ ಭಾಗಿಯಾಗಿದ್ದರು ಎಂದು ಸುವೇಂದು ಅಧಿಕಾರಿ ಆರೋಪಿಸಿದ್ದಾರೆ.

“ಅವರು ತನ್ನ ಸೋದರಳಿಯನ ಪರವಾಗಿ ಹಣ ವಸೂಲಿ ಮಾಡುತ್ತಿದ್ದರು. ಸುಮಿತ್ ರಾಯ್, ಸುಲಿಗೆಕೋರ ಸೋದರಳಿಯನ ಪರವಾಗಿ ಹಣ ವಸೂಲಿ ಮಾಡುವ ನಂಬರ್ ಒನ್ ವ್ಯಕ್ತಿಯಾಗಿದ್ದಾರೆ” ಎಂದು ಸುವೇಂದು ಅಧಿಕಾರಿ ಹೇಳಿದ್ದಾರೆ.

ಪಶ್ಚಿಮ ಮೇದಿನಿಪುರ ಜಿಲ್ಲೆಯ ನ್ಯಾಯಾಲಯವೊಂದು ಜೂನ್ 15 ರಂದು ರಾಯ್ ವಿರುದ್ಧ ಬಂಧನ ವಾರಂಟ್ ಹೊರಡಿಸಿತ್ತು. ಇದರ ಬೆನ್ನಲ್ಲೇ ಅವರು ಮುಂಗಡ ಜಾಮೀನಿಗಾಗಿ ಮೊದಲು ಕೊಲ್ಕತ್ತಾ ಹೈಕೋರ್ಟ್ ಮತ್ತು ನಂತರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆಗಸ್ಟ್ 6 ರಂದು, ದೇಶದ ಅತ್ಯುನ್ನತ ನ್ಯಾಯಾಲಯವು ರಾಯ್ ಅವರಿಗೆ ವಿಶೇಷ ಅನುಮತಿ ಅರ್ಜಿ ಸಲ್ಲಿಸಲು ಅನುಮತಿ ನೀಡಿತ್ತು ಮತ್ತು ಮುಂದಿನ ವಿಚಾರಣೆಯವರೆಗೆ ಅವರ ಬಂಧನಕ್ಕೆ ತಡೆಯಾಜ್ಞೆ ನೀಡಿತ್ತು.

ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿಗೆ ಮತ್ತೊಂದು ಶಾಕ್‌; ಎಫ್‌ಐಆರ್ ದಾಖಲು: ಏನಿದು ಪ್ರಕರಣ?

ಸಿಐಡಿ ಅಧಿಕಾರಿಗಳ ಈ ಕ್ರಮವು ಝಾರ್ಗ್ರಾಮ್‌ನಲ್ಲಿ ನಡೆದಿದೆ ಎನ್ನಲಾದ ಭೂ ಹಗರಣದ ಕುರಿತು ಪ್ರಸ್ತುತ ನಡೆಯುತ್ತಿರುವ ತನಿಖೆಯ ಭಾಗವಾಗಿದೆ.

ಜಾಹೀರಾತು ಫಲಕ ತೆರವುಗೊಳಿಸುವ ವಿಚಾರದಲ್ಲಿ ವಾಗ್ವಾದ

ಕೋಲ್ಕತಾ ಮುನ್ಸಿಪಲ್ ಕಾರ್ಪೊರೇಷನ್ (KMC) ಅಧಿಕಾರಿಗಳೊಂದಿಗೆ ಆಗಮಿಸಿದ್ದ ಪೊಲೀಸ್ ಸಿಬ್ಬಂದಿ ತಂಡವು ತೃಣಮೂಲ ಕಾಂಗ್ರೆಸ್ ನಾಯಕ ಅಭಿಷೇಕ್ ಬ್ಯಾನರ್ಜಿ ಅವರ ಕ್ಯಾಮಕ್ ಸ್ಟ್ರೀಟ್ ಕಚೇರಿಯಲ್ಲಿದ್ದ ಟಿಎಂಸಿ ಜಾಹೀರಾತು ಫಲಕಗಳನ್ನು ತೆರವುಗೊಳಿಸಲು ಮುಂದಾಗಿದ್ದ ಘಟನೆ ಆಗಸ್ಟ್ 27ರಂದು ನಡೆದಿತ್ತು. ಈ ವೇಳೆ ಬ್ಯಾನರ್ಜಿ ಮತ್ತು ಕೋಲ್ಕತ್ತಾ ಪೊಲೀಸ್ ಅಧಿಕಾರಿಗಳ ನಡುವೆ ತೀವ್ರ ವಾಗ್ದಾಳಿ ನಡೆದಿತ್ತು.

ಈ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಅಭಿಷೇಕ್‌ ಬ್ಯಾನರ್ಜಿ, ಅಧಿಕೃತ ಆದೇಶದ ಪ್ರತಿ ಮತ್ತು ದೂರು ಪತ್ರವನ್ನು ತೋರಿಸುವಂತೆ ಅಧಿಕಾರಿಗಳ ಬಳಿ ಆಗ್ರಹಿಸಿದ್ದರು. ಪೊಲೀಸ್ ಅಧಿಕಾರಿಗಳು ಕಚೇರಿ ಆವರಣಕ್ಕೆ ಅಕ್ರಮವಾಗಿ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದರು.