ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sanchar Saathi App: ಭಾರತದಲ್ಲಿ ಖರೀದಿಸುವ ಎಲ್ಲಾ ಫೋನ್‌ಗಳಿಗೆ ಸಂಚಾರ್ ಸಾಥಿ ಕಡ್ಡಾಯ; ಏನಿದರ ವಿಶೇಷತೆ?

ದೇಶದಲ್ಲಿ ಮಾರಾಟವಾಗುವ ಎಲ್ಲಾ ಹೊಸ ಮೊಬೈಲ್ ಫೋನ್‌ಗಳಲ್ಲಿ ಸಂಚಾರ್ ಸಾಥಿ ಆಪ್‌ ಕಡ್ಡಾಯವಾಗಿ ಇರಬೇಕೆಂದು ದೂರಸಂಪರ್ಕ ಇಲಾಖೆ ಹ್ಯಾಂಡ್‌ಸೆಟ್‌ ತಯಾರಕರಿಗೆ ಸೂಚಿಸಿದೆ. ನವೆಂಬರ್ 28, 2025 ರಂದು ಹೊರಡಿಸಲಾದ ಆದೇಶದ ಪ್ರಕಾರ, ಯಾವುದೇ ಹೊಸ ಹ್ಯಾಂಡ್‌ಸೆಟ್‌ನ ಆರಂಭಿಕ ಸೆಟಪ್ ಸಮಯದಲ್ಲಿ ಅಪ್ಲಿಕೇಶನ್ ಸ್ಪಷ್ಟವಾಗಿ ಗೋಚರಿಸಬೇಕು ಮತ್ತು ಬಳಸಲು ಸುಲಭವಾಗಬೇಕು ಆದೇಶದಲ್ಲಿ ತಿಳಿಸಲಾಗಿದೆ.

ಸಂಚಾರ ಸಾಥಿ (ಸಂಗ್ರಹ ಚಿತ್ರ)

ನವದೆಹಲಿ: ದೇಶದಲ್ಲಿ ಮಾರಾಟವಾಗುವ ಎಲ್ಲಾ ಹೊಸ ಮೊಬೈಲ್ ಫೋನ್‌ಗಳಲ್ಲಿ ಸಂಚಾರ್ ಸಾಥಿ ಆಪ್‌ (Sanchar Saathi) ಕಡ್ಡಾಯವಾಗಿ ಇರಬೇಕೆಂದು ದೂರಸಂಪರ್ಕ ಇಲಾಖೆ ಹ್ಯಾಂಡ್‌ಸೆಟ್‌ ತಯಾರಕರಿಗೆ ಸೂಚಿಸಿದೆ. ಆ್ಯಪ್ ಇನ್‌ಸ್ಟಾಲ್ ಮಾಡಲು 90 ದಿನಗಳ ಗಡುವು ನೀಡಲಾಗಿದ್ದು ಅದನ್ನು ಅನ್‌ ಇನ್‌ಸ್ಟಾಲ್ ಮಾಡಲು ಆಯ್ಕೆ ನೀಡಬಾರದು. ಈಗಾಗಲೇ ಬಳಕೆಯಲ್ಲಿರುವ ಮೊಬೈಲ್‌ಗಳಿಗೆ ಸಾಫ್ಟ್‌ವೇರ್ ಅಪ್‌ಡೇಟ್‌ ನೀಡುವಾಗ ಈ ಆ್ಯಪ್ ಲಭ್ಯವಾಗುವಂತೆ ಮಾಡಬೇಕು ಎಂದು ಕೇಂದ್ರ ಸೂಚನೆ ನೀಡಿದೆ.

ನವೆಂಬರ್ 28, 2025 ರಂದು ಹೊರಡಿಸಲಾದ ಆದೇಶದ ಪ್ರಕಾರ, ಯಾವುದೇ ಹೊಸ ಹ್ಯಾಂಡ್‌ಸೆಟ್‌ನ ಆರಂಭಿಕ ಸೆಟಪ್ ಸಮಯದಲ್ಲಿ ಅಪ್ಲಿಕೇಶನ್ ಸ್ಪಷ್ಟವಾಗಿ ಗೋಚರಿಸಬೇಕು ಮತ್ತು ಬಳಸಲು ಸುಲಭವಾಗಬೇಕು. ತಯಾರಕರು ಅದರ ಯಾವುದೇ ವೈಶಿಷ್ಟ್ಯಗಳನ್ನು ಮರೆಮಾಡಲು, ನಿಷ್ಕ್ರಿಯಗೊಳಿಸಲು ಅಥವಾ ನಿರ್ಬಂಧಿಸಲು ಅನುಮತಿಸಲಾಗುವುದಿಲ್ಲ ಎಂದು ತಿಳಿಸಲಾಗಿದೆ.ಅಪ್ಲಿಕೇಶನ್‌ಗಳನ್ನು ಬಳಕೆದಾರರು ಆಂಡ್ರಾಯ್ಡ್‌ ಅಥವಾ ಆಪಲ್‌ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್‌ ಮಾಡಬಹುದು. ಆದರೆ ಪ್ರಿಲೋಡೆಡ್‌ ಅಪ್ಲಿಕೇಶನ್‌ಗಳು ಫೋನಿನ ಜೊತೆಗೆ ಬರುತ್ತವೆ.

ಐಫೋನ್‌ ಅಥವಾ ಆಂಡ್ರಾಯ್ಡ್‌ ಫೋನ್‌ ಖರೀದಿಸುವಾಗ ಆಪಲ್‌ ಕಂಪನಿ ಅಥವಾ ಗೂಗಲ್‌ ಕಂಪನಿಯ ಕೆಲವು ಅಪ್ಲಿಕೇಶನ್‌ಗಳು ಪ್ರಿಲೋಡೆಡ್‌ ಆಗಿ ಬರುತ್ತವೆ. ಇದರ ಜೊತೆ ಫೋನ್‌ ತಯಾರಕ ಕಂಪನಿಯ ಕೆಲ ಅಪ್ಲಿಕೇಶನ್‌ಗಳು ಇರುತ್ತವೆ. ಈ ಅಪ್ಲಿಕೇಶನ್‌ಗಳನ್ನು ಯಾವುದೇ ಕಾರಣಕ್ಕೂ ಅನ್‌ ಇನ್‌ಸ್ಟಾಲ್ ಮಾಡಲು ಸಾಧ್ಯವಾಗುವುದಿಲ್ಲ.

ಸಂಚಾರ್ ಸಾಥಿ ಪ್ರಯೋಜನವೇನು?

ಸಂಚಾರ್ ಸಾಥಿ ಎಂಬುದು ಸೈಬರ್ ವಂಚನೆಯನ್ನು ಎದುರಿಸಲು ಮತ್ತು ದೂರಸಂಪರ್ಕ ಭದ್ರತೆಯನ್ನು ಬಲಪಡಿಸಲು ವಿನ್ಯಾಸಗೊಳಿಸಲಾದ ನಾಗರಿಕ ಕೇಂದ್ರಿತ ಉಪಕ್ರಮವಾಗಿದೆ. ಅದರ ಪೋರ್ಟಲ್ ಮತ್ತು ಅಪ್ಲಿಕೇಶನ್ ಮೂಲಕ ಬಳಕೆದಾರರು ಉಪಯೋಗ ಪಡೆದುಕೊಳ್ಳಬಹುದು. ಈ ಆ್ಯಪ್‌ ಅನ್ನು ಇನ್‌ಸ್ಟಾಲ್‌ ಮಾಡಿದ ಬಳಿಕ ಮೊಬೈಲ್‌ ಕಳ್ಳತನವಾದರೆ ಅಥವಾ ಕಳೆದುಹೋದರೆ ಬ್ಲಾಕ್‌ ಮಾಡಬಹುದು. ಅಷ್ಟೇ ಅಲ್ಲದೇ ಈ ಫೋನ್‌ ದೇಶದ ಬೇರೆ ಕಡೆ ಬಳಕೆಯಾಗುತ್ತಿದ್ದರೂ ಕಾನೂನು ಸಂಸ್ಥೆಗಳಿಗೆ ಎಲ್ಲಿ ಈ ಫೋನ್‌ ಸಕ್ರಿಯವಾಗಿದೆ ಎಂಬ ಮಾಹಿತಿ ಸುಲಭವಾಗಿ ಲಭ್ಯವಾಗುತ್ತದೆ.

ಸಂಚಾರ್ ಸಾಥಿ ವೆಬ್‌ಸೈಟ್ ಪ್ರಕಾರ ಇಲ್ಲಿಯವರೆಗೆ 42.14 ಲಕ್ಷಕ್ಕೂ ಹೆಚ್ಚು ಮೊಬೈಲ್‌ಗಳನ್ನು ನಿರ್ಬಂಧಿಸಲಾಗಿದೆ ಮತ್ತು 26.11 ಲಕ್ಷಕ್ಕೂ ಹೆಚ್ಚು ಕಳೆದುಹೋದ ಮೊಬೈಗಳನ್ನು ಪತ್ತೆ ಹಚ್ಚಲಾಗಿದೆ. ಸಂಚಾರ್ ಸಾಥಿ ಬಳಕೆದಾರರು ಫೋನ್ ಖರೀದಿಸುವ ಮೊದಲು IMEI ಅನ್ನು ನಿರ್ಬಂಧಿಸಲಾಗಿದೆಯೇ ಅಥವಾ ಕಪ್ಪುಪಟ್ಟಿಗೆ ಸೇರಿಸಲಾಗಿದೆಯೇ ಎಂದು ಪರಿಶೀಲಿಸಲು ಸಹಾಯ ಮಾಡುತ್ತದೆ. ಮೊಬೈಲ್ ಫೋನ್‌ಗಳ 15-ಅಂಕಿಯ IMEI ಸಂಖ್ಯೆ ಸೇರಿದಂತೆ ಟೆಲಿಕಾಂ ಐಡೆಂಟಿಫೈಯರ್‌ಗಳನ್ನು ತಿರುಚುವುದು ಜಾಮೀನು ರಹಿತ ಅಪರಾಧಗಳಾಗಿವೆ ಮತ್ತು ದೂರಸಂಪರ್ಕ ಕಾಯ್ದೆ 2023 ರ ಅಡಿಯಲ್ಲಿ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ, 50 ಲಕ್ಷ ರೂ.ಗಳವರೆಗೆ ದಂಡ ಅಥವಾ ಎರಡನ್ನೂ ವಿಧಿಸಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಈ ನಿರ್ದೇಶನವು ಆಪಲ್, ಸ್ಯಾಮ್‌ಸಂಗ್, ಗೂಗಲ್, ವಿವೋ, ಒಪ್ಪೊ ಮತ್ತು ಶಿಯೋಮಿ ಸೇರಿದಂತೆ ಎಲ್ಲಾ ಪ್ರಮುಖ ಮೊಬೈಲ್ ಫೋನ್ ತಯಾರಕರಿಗೆ ಅನ್ವಯಿಸುತ್ತದೆ, ಅವರಲ್ಲಿ ಹೆಚ್ಚಿನವರು ಈಗಾಗಲೇ ಭಾರತದಲ್ಲಿ ತಮ್ಮ ಸಾಧನಗಳನ್ನು ತಯಾರಿಸುತ್ತಿದ್ದಾರೆ. ಈ ಅಪ್ಲಿಕೇಶನ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡಲು ಸಹ ಲಭ್ಯವಿದೆ.