ಕೋಲ್ಕತ್ತಾ, ಏ. 16: ಪಶ್ಚಿಮ ಬಂಗಾಳದ (West Bengal) ಕೋಲ್ಕತ್ತಾ ವೈದ್ಯರೊಬ್ಬರು ಜೈ ಶ್ರೀ ರಾಮ್ (Jai Shri Ram) ಎಂದು ಹೇಳುವ ರೋಗಿಗಳಿಗೆ ರಿಯಾಯಿತಿಯನ್ನು ನೀಡುವ ವಿಶಿಷ್ಟ ಕ್ರಮವನ್ನು ಜಾರಿಗೆ ತಂದಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ ಡಾ. ಪಿ.ಕೆ. ಹಜ್ರಾ, ʼʼಸಮಾಲೋಚನೆಗಾಗಿ ತಮ್ಮನ್ನು ಭೇಟಿ ಮಾಡಿ ಜೈ ಶ್ರೀ ರಾಮ್ ಎಂದು ಹೇಳುವ ಯಾವುದೇ ರೋಗಿಗೆ 500 ರುಪಾಯಿ ರಿಯಾಯಿತಿ ನೀಡಲಾಗುವುದುʼʼ ಎಂದು ಹೇಳಿದ್ದಾರೆ. ವೈದ್ಯಕೀಯ ಸಂಘವು ಇದನ್ನು ವಿರೋಧಿಸಿದ್ದು, ವೈದ್ಯಕೀಯ ನೀತಿಗೆ ವಿರುದ್ಧವಾಗಿದೆ ಎಂದು ಹೇಳಿದೆ.
ರಿಯಾಯಿತಿಯ ಉದ್ದೇಶವನ್ನು ವಿವರಿಸುತ್ತ, ಡಾ. ಪಿ.ಕೆ. ಹಜ್ರಾ, ಬಿಜೆಪಿಯನ್ನು ಮಾನಸಿಕವಾಗಿ ಬೆಂಬಲಿಸುವುದು ತಮ್ಮ ಉದ್ದೇಶ ಎಂದು ಹೇಳಿದ್ದಾರೆ. ʼʼನಾನು ಅವರನ್ನು ಬೆಂಬಲಿಸುವುದರಲ್ಲಿ ನಂಬಿಕೆ ಇಡುತ್ತೇನೆʼʼ ಎಂದು ಅವರು ತಿಳಿಸಿದ್ದಾರೆ. ಈ ಪೋಸ್ಟ್ ಅನ್ನು ಹಜ್ರಾ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅದರಲ್ಲಿ ಅವರು ಬಿಜೆಪಿ ಚಿಹ್ನೆ ಇರುವ ಕ್ಯಾಪ್ ಮತ್ತು ಸ್ಕಾರ್ಫ್ ಧರಿಸಿರುವುದು ಕಂಡು ಬಂದಿದೆ. ಫೋಟೊ ಜತೆಗೆ ಕ್ಯುಆರ್ ಕೋಡ್ ಇದ್ದು, ಅದರ ಜತೆಗೆ ಅವರು ಜೈ ಶ್ರೀ ರಾಮ್ ಡಿಸ್ಕೌಂಟ್ ಕೋಡ್ ಎಂದು ಬರೆದಿದ್ದಾರೆ.
ಇಲ್ಲಿದೆ ಪೋಸ್ಟ್:
ಡಾ. ಹಜ್ರಾ ಹೇಳಿದ್ದೇನು?
ಹಜ್ರಾ ಅವರ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಅನೇಕರಿಂದ ತೀವ್ರ ಪ್ರತಿಕ್ರಿಯೆ ಹುಟ್ಟುಹಾಕಿದೆ. ಈ ರಿಯಾಯಿತಿಯನ್ನು ಸಂಪೂರ್ಣವಾಗಿ ಸೇವಾ ಉಪಕ್ರಮ ಎಂದು ಅವರು ಕರೆದಿದ್ದಾರೆ. ತಮ್ಮ ಚಿಕಿತ್ಸಾಲಯದಲ್ಲಿ ಸಮಾಲೋಚನಾ ಶುಲ್ಕವು ಮೊದಲು 2,000 ರುಪಾಯಿಯಷ್ಟಿತ್ತು. ಅದನ್ನು ಚುನಾವಣೆಗೆ ಮೊದಲು ಜನರಿಗೆ ಸಹಾಯ ಮಾಡುವ ಉದ್ದೇಶದಿಂದ 1,500 ರುಪಾಯಿಗೆ ಇಳಿಸಲಾಯಿತು. ನಂತರ ಅದನ್ನು ಮತ್ತಷ್ಟು ಕಡಿಮೆ ಮಾಡಲು ನಿರ್ಧರಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಬಂಗಾಳದ ಗದ್ದುಗೆ ಯಾರಿಗೆ? ಪಶ್ಚಿಮ ಬಂಗಾಳ ಚುನಾವಣಾ ಪೂರ್ವ ಸಮೀಕ್ಷೆ ಹೇಳಿದ್ದೇನು?
ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಬಯಸಿದ್ದಾಗಿಯೂ ಅವರು ಹೇಳಿದ್ದಾರೆ. ʼʼನಾನು ರಾಷ್ಟ್ರೀಯವಾದಿ ಪರʼʼ ಎಂದು ಅವರು ತಿಳಿಸಿದ್ದಾರೆ. ʼʼರಿಯಾಯಿತಿಯು ಯಾವುದೇ ಧರ್ಮದ ನಡುವೆ ತಾರತಮ್ಯ ಮಾಡುವುದಿಲ್ಲ. ಅಗತ್ಯವಿರುವ ಜನರಿಗೆ ರಿಯಾಯಿತಿಗಳನ್ನು ನೀಡುವುದು ನನ್ನ ಮೊದಲ ಉದ್ದೇಶ. ಜನರನ್ನು ಸಜ್ಜುಗೊಳಿಸಿ ಅವರ ಮತವನ್ನು ಬಿಜೆಪಿ ದೊರೆಯುವಂತೆ ಮಾಡುವುದು ಎರಡನೇ ಉದ್ದೇಶʼʼ ಎಂದು ಹಜ್ರಾ ಸ್ಪಷ್ಟಪಡಿಸಿದ್ದಾರೆ.
ಭಾರತೀಯ ವೈದ್ಯಕೀಯ ಸಂಘವು ಹಜ್ರಾ ಅವರ ಈ ನಡೆಯನ್ನು ಪ್ರಶ್ನಿಸಿ, ಸ್ವತಃ ವಿವರಣೆ ನೀಡುವಂತೆ ಕೇಳಿದೆ. ಹಜ್ರಾ ಅವರ ರಿಯಾಯಿತಿಯನ್ನು ವೈದ್ಯಕೀಯ ನೀತಿ ಮತ್ತು ವೃತ್ತಿಪರ ನಡವಳಿಕೆಗೆ ವಿರುದ್ಧ ಎಂದು ಕರೆದಿದೆ.
ಹಜ್ರಾ ಅವರಿಗೆ ಬರೆದ ಪತ್ರದಲ್ಲಿ, ಐಎಂಎ ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸುವ ಹಕ್ಕನ್ನು ಹೊಂದಿದ್ದರೂ, ರೋಗಿಯ ಧರ್ಮ ಅಥವಾ ರಾಜಕೀಯ ಸಂಬಂಧದ ಆಧಾರದ ಮೇಲೆ ಅವರ ಸಮಾಲೋಚನಾ ಶುಲ್ಕವನ್ನು ತಾರತಮ್ಯ ಮಾಡುವುದು ವೈದ್ಯಕೀಯ ನೀತಿಗೆ ವಿರುದ್ಧ ಎಂದು ಬರೆದಿದೆ.