ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ (Gyanesh Kumar) ಅವರು ಏಕಪಕ್ಷೀಯವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಮತ್ತು ಮತದಾರರ ನೋಂದಣಿ ಪ್ರಕ್ರಿಯೆಯಲ್ಲಿ ಅಕ್ರಮ ಎಸಗಲಾಗಿದೆ ಎಂದು ಆರೋಪಿಸಿ ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್ (Supreme Court) ಮಂಗಳವಾರ ಭಾರತೀಯ ಚುನಾವಣಾ ಆಯೋಗಕ್ಕೆ (Election Commission) ಅಧಿಕೃತ ನೋಟಿಸ್ ಜಾರಿ ಮಾಡಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಈ ಆದೇಶ ನೀಡಿದೆ. ಚುನಾವಣಾ ಆಯೋಗ ಸಲ್ಲಿಸಿರುವ ಅಫಿಡವಿಟ್‌ಗೆ ಮರುಪ್ರತ್ಯಾರೋಪ ಸಲ್ಲಿಸಲು ಅರ್ಜಿದಾರರಿಗೆ ನ್ಯಾಯಾಲಯವು 2 ವಾರಗಳ ಕಾಲಾವಕಾಶ ನೀಡಿದ್ದು, ಮುಂದಿನ ವಿಚಾರಣೆಯನ್ನು ನವೆಂಬರ್ 17ಕ್ಕೆ ನಿಗದಿಪಡಿಸಿದೆ.
ತೃಣಮೂಲ ಕಾಂಗ್ರೆಸ್ ಸಂಸದೆ ಡೋಲಾ ಸೇನ್ ಅವರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲೆ ಡಾ. ಮೇನಕಾ ಗುರುಸ್ವಾಮಿ, "ಹೊಸ ಮತದಾರರ ನೋಂದಣಿಗೆ ಬಳಸುವ ಆನ್‌ಲೈನ್ 'ಫಾರ್ಮ್ 6' ಅನ್ನು ಅಕ್ರಮವಾಗಿ ತಿದ್ದುಪಡಿ ಮಾಡಲಾಗಿದೆ. ಇಷ್ಟೇ ಅಲ್ಲದೆ, ಈ ತಿದ್ದುಪಡಿಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ ಎಂದು ಚುನಾವಣಾ ಆಯೋಗವು ಸುಳ್ಳು ಪತ್ರಿಕಾ ಪ್ರಕಟಣೆ ಹೊರಡಿಸಿದೆ" ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಮತದಾರರ ಪಟ್ಟಿ ಡೇಟಾಬೇಸ್ (ERONET) ಕೇಂದ್ರೀಕರಣ ಮತ್ತು ಮತದಾರರ ಹೆಸರುಗಳನ್ನು ಕೈಬಿಟ್ಟಿರುವುದರ ಹಿಂದೆ ಸಿಇಸಿ ಅವರ ಏಕಪಕ್ಷೀಯ ತೀರ್ಮಾನಗಳಿವೆ ಎಂದು ಅರ್ಜಿಯಲ್ಲಿ ದೂರಲಾಗಿದೆ.
ಜ್ಞಾನೇಶ್ ಕುಮಾರ್ ವಜಾ ಬಗ್ಗೆ ಸ್ಪೀಕರ್ ಓಂ ಬಿರ್ಲಾ ಮಹತ್ವದ ಹೇಳಿಕೆ
ಚುನಾವಣಾ ಆಯೋಗದ ಪರ ವಕೀಲ ಮಣಿಂದರ್ ಸಿಂಗ್ ಈ ಆರೋಪಗಳನ್ನು ಬಲವಾಗಿ ನಿರಾಕರಿಸಿದರು. ಆಯೋಗವು ಸಲ್ಲಿಸಿರುವ ಪ್ರತಿ-ಅಫಿಡವಿಟ್‌ನಲ್ಲಿ, "2025ರ ಜೂನ್, ಅಕ್ಟೋಬರ್ ಮತ್ತು 2026ರ ಮೇ ತಿಂಗಳಲ್ಲಿ ಹೊರಡಿಸಲಾದ ಮೂರೂ ವಿಶೇಷ ತೀವ್ರ ಪರಿಷ್ಕರಣೆ ಆದೇಶಗಳನ್ನು ಆಯೋಗದ ಎಲ್ಲಾ ಸದಸ್ಯರ ಒಪ್ಪಿಗೆಯೊಂದಿಗೆ ಸರ್ವಾನುಮತದಿಂದ ತೆಗೆದುಕೊಳ್ಳಲಾಗಿದೆ. ಸಿಇಸಿ ಏಕಪಕ್ಷೀಯವಾಗಿ ಕಾರ್ಯನಿರ್ವಹಿಸಿಲ್ಲ ಮತ್ತು ಫಾರ್ಮ್ 6 ರಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ" ಎಂದು ಸ್ಪಷ್ಟಪಡಿಸಿದೆ.