ಚೆನ್ನೈ: ತಮಿಳುನಾಡಿನ ಮಧುರೈ ಬಳಿಯ ತಿರುಪ್ಪರಂಕುಂದ್ರಂ ಬೆಟ್ಟದ ತುದಿಯಲ್ಲಿರುವ ದೀಪತ್ತೂಣ್ (ಕಲ್ಲಿನ ಸ್ತಂಭ) ಮೇಲೆ ನವೆಂಬರ್ 24, ರಂದು ಒಂದು ಬಾರಿಗೆ ಮಾತ್ರ ಸಾಂಪ್ರದಾಯಿಕ (Thiruparankundram hilltop) ಕಾರ್ತಿಕ ದೀಪ ಬೆಳಗಲು ಸುಪ್ರೀಂ ಕೋರ್ಟ್ (Supreme Court) ಷರತ್ತುಬದ್ಧ ಅನುಮತಿ ನೀಡಿದೆ. ಇದನ್ನು ಯಾವುದೇ ಶಾಶ್ವತ ಹಕ್ಕು ಅಂತ ಭಾವಿಸಬಾರದು ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಆದೇಶದ ಪ್ರಕಾರ ದೇವಾಲಯ ಆಡಳಿತದ ಅಧಿಕೃತ ವ್ಯಕ್ತಿಗಳು ಮತ್ತು ಸರ್ಕಾರಿ ಅಧಿಕಾರಿಗಳಿಗೆ ಮಾತ್ರ ದೀಪ ಹಚ್ಚಲು ಬೆಟ್ಟವನ್ನು ಪ್ರವೇಶಿಸಲು ಅವಕಾಶವಿರುತ್ತದೆ.
ದೀಪತ್ತೂಣ್ನಲ್ಲಿ ದೀಪ ಬೆಳಗಲು ಅವಕಾಶ ನೀಡಿದ್ದ ಮದ್ರಾಸ್ ಹೈಕೋರ್ಟ್ನ ಜನವರಿ 6, 2026ರ ತೀರ್ಪನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ವಿಪುಲ್ ಎಂ. ಪಾಂಚೋಲಿ ಅವರನ್ನೊಳಗೊಂಡ ಪೀಠವು ಈ ಮಹತ್ವದ ಆದೇಶ ಹೊರಡಿಸಿದೆ. ಹೈಕೋರ್ಟ್ ತೀರ್ಪಿನ ಪ್ರಮುಖ ಅಂಶಗಳಿಗೆ ತಡೆಯಾಜ್ಞೆ ನೀಡಿರುವ ಪೀಠವು, ಕಾರ್ತಿಕ ದೀಪೋತ್ಸವ ಸಮೀಪಿಸಿರುವ ಹಿನ್ನೆಲೆಯಲ್ಲಿ ಹಬ್ಬದ ಆಚರಣೆಗೆ ಅಡ್ಡಿಯಾಗದಂತೆ ಈ ಸೀಮಿತ ಮಧ್ಯಂತರ ವ್ಯವಸ್ಥೆ ಮಾಡಿದೆ.
ನ್ಯಾಯಾಲಯ ವಿಧಿಸಿರುವ ಷರತ್ತಿನ ಪ್ರಕಾರ ದೀಪ ಬೆಳಗುವ ಸ್ಥಳದಲ್ಲಿ ಸಾರ್ವಜನಿಕರು ಗುಂಪು ಸೇರುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅರುಳ್ಮಿಗು ಸುಬ್ರಮಣ್ಯ ಸ್ವಾಮಿ ದೇವಸ್ಥಾನದ ಸೀಮಿತ ಅಧಿಕೃತ ಪ್ರತಿನಿಧಿಗಳು ಮತ್ತು ಸರ್ಕಾರಿ ಅಧಿಕಾರಿಗಳಿಗೆ ಮಾತ್ರ ದೀಪ ಬೆಳಗಿಸಲು ಅವಕಾಶ ನೀಡಲಾಗಿದೆ. ಮಧುರೈ ಜಿಲ್ಲಾಧಿಕಾರಿಗಳನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದ್ದು, ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮತ್ತು ಮಧುರೈ ಪೊಲೀಸ್ ಆಯುಕ್ತರೊಂದಿಗೆ ಸಮಾಲೋಚಿಸಿ ದೀಪ ಬೆಳಗಲು ತೆರಳುವ ತಂಡದ ಗಾತ್ರ ಮತ್ತು ಸದಸ್ಯರನ್ನು ಜಿಲ್ಲಾಧಿಕಾರಿಗಳೇ ನಿರ್ಧರಿಸಬೇಕು ಎಂದು ಪೀಠ ಸೂಚಿಸಿದೆ.
ಬೆಟ್ಟದ ತುದಿಯಲ್ಲಿ ಯಾವುದೇ ಹೊಸ ನಿರ್ಮಾಣ, ಅಗೆತ ಅಥವಾ ಭೌತಿಕ ಬದಲಾವಣೆಗಳನ್ನು ಮಾಡುವಂತಿಲ್ಲ. ಅಲ್ಲದೆ, ಸಮೀಪದಲ್ಲಿರುವ ಹಜರತ್ ಸುಲ್ತಾನ್ ಸಿಕಂದರ್ ಬಾದುಶಾ ಔಲಿಯಾ ದರ್ಗಾ ಮತ್ತು ಮಸೀದಿಯ ಚಟುವಟಿಕೆಗಳಿಗೆ ಯಾವುದೇ ರೀತಿಯ ಅಡಚಣೆಯಾಗದಂತೆ ಎಚ್ಚರವಹಿಸಬೇಕು ಎಂದು ನಿರ್ದೇಶಿಸಲಾಗಿದೆ.
ಏನಿದು ವಿವಾದ?
ತಿರುಪ್ಪರಂಕುಂದ್ರಂ ಬೆಟ್ಟದ ಕೆಳಭಾಗದಲ್ಲಿರುವ ಉಚ್ಚಿ ಪಿಳ್ಳೈಯಾರ್ ದೇವಸ್ಥಾನದ ಬಳಿಯ 'ದೀಪ ಮಂಟಪ'ದಲ್ಲಿ ದಶಕಗಳಿಂದ ಕಾರ್ತಿಕ ದೀಪ ಬೆಳಗುವುದು ವಾಡಿಕೆಯಾಗಿತ್ತು. ಆದರೆ, ಬೆಟ್ಟದ ಮೇಲ್ಭಾಗದಲ್ಲಿ ದರ್ಗಾದ ಸಮೀಪವಿರುವ ಕಲ್ಲಿನ ಸ್ತಂಭವಾದ 'ದೀಪತ್ತೂಣ್' ಮೇಲೆ ಸಾಂಪ್ರದಾಯಿಕ ದೀಪ ಬೆಳಗಬೇಕು ಎಂಬ ಬೇಡಿಕೆ ಕೇಳಿಬಂದಿತ್ತು. 2025ರ ಡಿಸೆಂಬರ್ನಲ್ಲಿ ಮದ್ರಾಸ್ ಹೈಕೋರ್ಟ್ನ ಏಕಸದಸ್ಯ ಪೀಠವು ದೀಪತ್ತೂಣ್ನಲ್ಲಿ ದೀಪ ಬೆಳಗಲು ಅನುಮತಿ ನೀಡಿತ್ತು ಹಾಗೂ 2026ರ ಜನವರಿ 6ರಂದು ವಿಭಾಗೀಯ ಪೀಠವು ಅದನ್ನು ಎತ್ತಿಹಿಡಿದಿತ್ತು. ಕಾನೂನು ಸುವ್ಯವಸ್ಥೆ ಮತ್ತು ಧಾರ್ಮಿಕ ಸೂಕ್ಷ್ಮತೆಯ ಕಾರಣ ನೀಡಿ ತಮಿಳುನಾಡು ಸರ್ಕಾರ ಇದನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿತ್ತು.
ಸಂವಿಧಾನದ 25 ಮತ್ತು 26ನೇ ವಿಧಿಯ ಅಡಿಯಲ್ಲಿ ಬರುವ ಧಾರ್ಮಿಕ ಹಕ್ಕುಗಳು ಹಾಗೂ ಸ್ಥಳದ ಮಾಲೀಕತ್ವದ ಕುರಿತ ಮೂಲ ಅರ್ಜಿಗಳ ಅಂತಿಮ ವಿಚಾರಣೆಯನ್ನು ಸುಪ್ರೀಂ ಕೋರ್ಟ್ 2027ರ ಜನವರಿ ಎರಡನೇ ವಾರಕ್ಕೆ ಮುಂದೂಡಿದೆ. ತೀರ್ಪಿನ ಹಿನ್ನೆಲೆಯಲ್ಲಿ ಮಧುರೈನ ತಿರುಪ್ಪರಂಕುಂದ್ರಂ ಬೆಟ್ಟದ ಸುತ್ತಮುತ್ತ ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.