ತಿರುವನಂತಪುರಂ, ಆ. 17: ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಗೈರಾದ ವಿದ್ಯಾರ್ಥಿಗಳಿಗೆ ಪಾಕಿಸ್ತಾನಕ್ಕೆ ಹೋಗಿ ಎಂದು ಹೇಳುವ ಮೂಲಕ ಶಾಲ ಮಾಲಕ ವಿವಾದವನ್ನು ಹುಟ್ಟುಹಾಕಿದ್ದಾರೆ. ಅವರು ಭಾರತದಲ್ಲಿ ವಾಸಿಸಲು ಅರ್ಹರಲ್ಲ ಎಂದೂ ಹೇಳಿದ್ದಾರೆ. ಕೇರಳಂ (Keralam)ನ ತ್ರಿಶೂರ್‌ನಲ್ಲಿ ಘಟನೆ ನಡೆದಿದೆ. ಆಗಸ್ಟ್ 15ರ ಆಚರಣೆಗೆ ಅರ್ಧಕ್ಕಿಂತ ಹೆಚ್ಚು ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲಿಲ್ಲ ಎಂದು ವರದಿಯಾದ ನಂತರ, ತ್ರಿಶೂರ್‌ನ ಮಾಲಾದಲ್ಲಿರುವ ಡಾ. ರಾಜು ಡೇವಿಸ್ ಅಂತಾರಾಷ್ಟ್ರೀಯ ಶಾಲೆಯ ಮಾಲಕ ಡಾ. ರಾಜು ಡೇವಿಸ್ ಈ ಹೇಳಿಕೆ ನೀಡಿದ್ದಾರೆ. ಶಾಲಾ ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಈ ಸಂದೇಶಗಳನ್ನು ಹಂಚಿಕೊಂಡಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕಾಗಿ ವಿದ್ಯಾರ್ಥಿಗಳನ್ನು ಶಾಲೆಗೆ ಕರೆತರಲು ಎಲ್ಲ ಮಾರ್ಗಗಳಲ್ಲಿ ಬಸ್ ವ್ಯವಸ್ಥೆ ಮಾಡಲು ಹೆಚ್ಚುವರಿಯಾಗಿ 1 ಲಕ್ಷ ರುಪಾಯಿ ಖರ್ಚು ಮಾಡಿದ್ದೇನೆ ಎಂದು ಡೇವಿಸ್ ಹೇಳಿದರು. ಆದರೆ ಅನೇಕ ಪೋಷಕರು ತಮ್ಮ ಮಕ್ಕಳನ್ನು ಕಳುಹಿಸಲಿಲ್ಲ ಎಂದು ದೂರಿದರು. “ಅರ್ಧಕ್ಕಿಂತ ಹೆಚ್ಚು ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿಲ್ಲ. ನಾಳೆ ನಾನು ಅವರನ್ನು ತರಗತಿಯ ಒಳಗೆ ಬಿಡುವುದಿಲ್ಲ. ಅವರು ನನ್ನನ್ನು ವೈಯಕ್ತಿಕವಾಗಿ ಭೇಟಿ ಮಾಡಿ ವಿವರಣೆ ನೀಡಬೇಕು. ಇದು ಸರಿಯಲ್ಲ. ಇಂಥವರು ಬೇರೆ ಯಾವುದಾದರೂ ರಾಷ್ಟ್ರಕ್ಕೆ ಅಥವಾ ಪಾಕಿಸ್ತಾನಕ್ಕೆ ಹೋಗಬೇಕು. ಅವರು ಇಲ್ಲಿ ವಾಸಿಸಲು ಅರ್ಹರಲ್ಲ” ಎಂದು ಅವರು ಕಿಡಿಕಾರಿದರು.
ಉಕ್ಕಿ ಹರಿಯುವ ನದಿಯ ಮಧ್ಯೆ ಜೀವ ಪಣಕ್ಕಿಟ್ಟು ಶಾಲೆಗೆ ತೆರಳುವ ಮಕ್ಕಳು; ವೈರಲ್ ವಿಡಿಯೊ ಇಲ್ಲಿದೆ
ನಂತರ ಡೇವಿಸ್ ಒಂದು ಆಡಿಯೊ ಸಂದೇಶವನ್ನು ಶೇರ್ ಮಾಡಿದ್ದಾರೆ. ಅವರ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಪಾಕಿಸ್ತಾನವನ್ನು ನಿರ್ದಿಷ್ಟವಾಗಿ ಏಕೆ ಉಲ್ಲೇಖಿಸಿದ್ದಾರೆಂದು ಅವರು ವಿವರಿಸಲು ಪ್ರಯತ್ನಿಸಿದ್ದಾರೆ. “ಒಂದು ನಿರ್ದಿಷ್ಟ ಧರ್ಮದ ದೇಶಕ್ಕೆ ಹೋಗಬೇಕೆಂದು ನಾನು ಹೇಳಿಲ್ಲ. ಸುಡಾನ್, ಬಾಂಗ್ಲಾದೇಶ ಅಥವಾ ಅರಬ್ ದೇಶಗಳಿಗೆ ಹೋಗಲು ನಾನು ಹೇಳಿಲ್ಲ. 1947ರಿಂದ ಪಾಕಿಸ್ತಾನ ನಮ್ಮ ದೇಶದ ಶತ್ರು ರಾಷ್ಟ್ರವಾಗಿರುವುದರಿಂದ ನಾನು ಪಾಕಿಸ್ತಾನ ಎಂದು ಹೇಳಿದೆ” ಎಂದು ಅವರು ಹೇಳಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸುವುದು ಪ್ರತಿಯೊಬ್ಬರ ಜವಾಬ್ದಾರಿ. ಅದರಲ್ಲೂ ಮಕ್ಕಳನ್ನು ಈ ಕಾರ್ಯಕ್ರಮಕ್ಕೆ ಕಳುಹಿಸುವ ಕರ್ತವ್ಯ ಪೋಷಕರದ್ದು ಎಂದು ಹೇಳಿದ್ದಾರೆ. “ನಾನು ಬಹಳ ಸ್ಪಷ್ಟವಾಗಿ ಹೇಳಿದ್ದೇನೆ. ಆದರೆ ಕೆಲವರು ಅದನ್ನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ನಾನು ಹೇಳಿದ್ದೆ. ಪೋಷಕರು ತಮ್ಮ ಮಕ್ಕಳನ್ನು ಕಾರ್ಯಕ್ರಮಕ್ಕೆ ಕಳುಹಿಸುವ ಜವಾಬ್ದಾರಿಯನ್ನು ಹೊಂದಿದ್ದಾರೆ. ಹಾಜರಾಗದವರು ಪಾಕಿಸ್ತಾನಕ್ಕೆ ಹೋಗಬೇಕು ಎಂದು ನಾನು ಹೇಳಿದೆ ಅಷ್ಟೇ” ಎಂದು ಡೇವಿಸ್ ಆಡಿಯೋದಲ್ಲಿ ವಿವರಿಸಿದ್ದಾರೆ.
ಇನ್ನು ಡೇವಿಸ್ ನೀಡಿದ ಈ ಹೇಳಿಕೆಗಳು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಅವರ ವಿರುದ್ಧ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಎಸ್‌ಎಫ್‌ಐ ಮತ್ತು ಕೇರಳ ವಿದ್ಯಾರ್ಥಿ ಸಂಘ ಆಕ್ರೋಸ ವ್ಯಕ್ತಪಡಿಸಿದೆ. ಡಾ.ರಾಜು ಡೇವಿಸ್ ಅವರ ನಿವಾಸದ ಮುಂದೆ ಕೆಎಸ್‌ಯು ಕಾರ್ಯಕರ್ತರು ಸೇರಿ ಘೋಷಣೆ ಕೂಗಿದರು. ರಸ್ತೆ ತಡೆ ನಡೆಸಿದ ಕೆಎಸ್‌ಯು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು. ನಂತರ ಡೇವಿಸ್ ತಮ್ಮ ಹೇಳಿಕೆಗಳಿಗೆ ಕ್ಷಮೆಯಾಚಿಸುತ್ತಾ ಮತ್ತೊಂದು ಆಡಿಯೊ ಸಂದೇಶ ಹಂಚಿಕೊಂಡಿದ್ದಾರೆ.