ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪ್ರವಾಹದ ನಡುವೆಯೂ ಪಾಠಕ್ಕೆ ವಿರಾಮವಿಲ್ಲ; ಬಿಹಾರದಲ್ಲಿ ದೋಣಿಯೇ ಮಕ್ಕಳ ತರಗತಿ! ಕಲಿಕಾಸಕ್ತಿಗೆ ದೇಶವೇ ಫಿದಾ

Bihar Flood: ಬಿಹಾರದ ಕತಿಹಾರ್‌ ಜಿಲ್ಲೆಯಲ್ಲಿ ಭಾರಿ ಪ್ರವಾಹದಿಂದ ಶಾಲೆ, ಮನೆ ಹಾಗೂ ಕೋಚಿಂಗ್‌ ಕೇಂದ್ರಗಳು ಜಲಾವೃತವಾಗಿವೆ. ಶಾಲೆಗೆ ತೆರಳಲು ಸಾಧ್ಯವಾಗದ ಪರಿಸ್ಥಿತಿಯಲ್ಲೂ ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗದಂತೆ ಖಾಸಗಿ ಶಿಕ್ಷಕರೊಬ್ಬರು ದೋಣಿಯಲ್ಲೇ ತರಗತಿಗಳನ್ನು ನಡೆಸುತ್ತಿದ್ದಾರೆ. ಪೋಷಕರ ಒಪ್ಪಿಗೆ ಪಡೆದು ಮಕ್ಕಳನ್ನು ಸುರಕ್ಷಿತವಾಗಿ ಕರೆತಂದು ಪಾಠ ಮುಂದುವರಿಸಲಾಗುತ್ತಿದ್ದು, ಪ್ರವಾಹದ ನಡುವೆಯೂ ಶಿಕ್ಷಣದ ಮಹತ್ವವನ್ನು ಮಕ್ಕಳು ಸಾರಿದ್ದಾರೆ.

ಬಿಹಾರದಲ್ಲಿ ದೋಣಿಯಲ್ಲೇ ಪಾಠ

ಪಾಟ್ನಾ, ಸೆ, 15: ಬಿಹಾರದ ಕತಿಹಾರ್‌ ಜಿಲ್ಲೆಯ ಹಲವು ಪ್ರದೇಶಗಳು ಭೀಕರ ಪ್ರವಾಹಕ್ಕೆ (Bihar ತತ್ತರಿಸಿದ್ದು, ಮನೆಗಳು, ರಸ್ತೆಗಳು, ಶಾಲೆಗಳು ಹಾಗೂ ಕೋಚಿಂಗ್‌ ಕೇಂದ್ರಗಳು ಜಲಾವೃತಗೊಂಡಿವೆ. ಶಾಲೆಗೆ ತೆರಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾದರೂ, ಮಕ್ಕಳ ಶಿಕ್ಷಣಕ್ಕೆ ಮಾತ್ರ ಯಾವುದೇ ಅಡ್ಡಿಯಾಗಿಲ್ಲ. ಪ್ರವಾಹದ ನೀರಿನ ಮಧ್ಯೆಯೇ ಮಕ್ಕಳಿಗೆ ತೇಲುವ ದೋಣಿಯಲ್ಲೇ ಪಾಠ ಹೇಳಲಾಗುತ್ತಿದೆ. ಕತಿಹಾರ್‌ನ ರಘುನಾಥ್‌ಪುರ ಪ್ರದೇಶದಲ್ಲಿ ಪ್ರವಾಹ ಮನೆಗಳು, ಕೋಚಿಂಗ್‌ ಕೇಂದ್ರಗಳು ಹಾಗೂ ಶಾಲೆಗಳಿಗೆ ನುಗ್ಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಸ್ಥಳವೇ ಇಲ್ಲದಂತಾಗಿದೆ. ಈ ಸಂದರ್ಭದಲ್ಲಿ ಖಾಸಗಿ ಶಿಕ್ಷಕ ಮೊಹಮ್ಮದ್‌ ಸಾಹಿಬ್‌ ದೋಣಿಯೊಂದನ್ನೇ ತಾತ್ಕಾಲಿಕ ತರಗತಿಯನ್ನಾಗಿ ಪರಿವರ್ತಿಸಿ ಮಕ್ಕಳಿಗೆ ಪಾಠ ಮುಂದುವರಿಸಿದ್ದಾರೆ.

ಕೋಚಿಂಗ್‌ ಕೇಂದ್ರಕ್ಕೆ ನೀರು ನುಗ್ಗಿದ ಬಳಿಕ ಎರಡು-ಮೂರು ದಿನ ತರಗತಿಗಳನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಮಕ್ಕಳ ವಿದ್ಯಾಭ್ಯಾಸಕ್ಕೆ ಇದರಿಂದ ತೊಂದರೆಯಾಗಬಹುದು ಎಂಬ ಕಾರಣಕ್ಕೆ ದೋಣಿಯಲ್ಲೇ ತರಗತಿ ನಡೆಸುವ ನಿರ್ಧಾರ ಕೈಗೊಳ್ಳಲಾಯಿತು ಎಂದು ಸಾಹಿಬ್‌ ತಿಳಿಸಿದ್ದಾರೆ.

ಪ್ರವಾಹದ ನಡುವೆಯೂ ಓದುತ್ತಿರುವ ಮಕ್ಕಳು:



ಮಕ್ಕಳು ಈಗಾಗಲೇ ಕಲಿತಿರುವ ಜ್ಞಾನ ಹಾಗೂ ಕೌಶಲ್ಯಗಳು ಮರೆತುಹೋಗದಂತೆ ನಿರಂತರವಾಗಿ ಶಿಕ್ಷಣ ನೀಡುವುದು ಅಗತ್ಯವಾಗಿದೆ. ಹೀಗಾಗಿ ಪ್ರವಾಹದ ಪರಿಸ್ಥಿತಿಯಲ್ಲೂ ಸಾಧ್ಯವಾದ ರೀತಿಯಲ್ಲಿ ತರಗತಿಗಳನ್ನು ಮುಂದುವರಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ದೋಣಿ ತರಗತಿಗಳನ್ನು ಆರಂಭಿಸುವ ಮುನ್ನ ಶಿಕ್ಷಕರು ಮಕ್ಕಳ ಮನೆಗಳಿಗೆ ತೆರಳಿ ಪೋಷಕರೊಂದಿಗೆ ಮಾತನಾಡಿದ್ದಾರೆ. ಮಕ್ಕಳ ಸುರಕ್ಷತೆಯ ಬಗ್ಗೆ ವಿವರಿಸಿ, ಅವರ ಒಪ್ಪಿಗೆ ಪಡೆದ ಬಳಿಕವೇ ತರಗತಿಗೆ ಕರೆತರಲಾಗುತ್ತಿದೆ. ಶಿಕ್ಷಕರೇ ಮಕ್ಕಳನ್ನು ಮನೆಗಳಿಂದ ದೋಣಿಯ ಬಳಿಗೆ ಕರೆತಂದು, ತರಗತಿ ಮುಗಿದ ಬಳಿಕ ಸುರಕ್ಷಿತವಾಗಿ ಮನೆಗೆ ತಲುಪಿಸುತ್ತಿದ್ದಾರೆ.

ಬಲಪಂಥೀಯ ಇನ್‌ಫ್ಲುಯೆನ್ಸರ್‌ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ಮುಳುಗಿರುವ ಶಾಲೆಯ ಸಮೀಪದಲ್ಲೇ ನೀರು ಕಡಿಮೆ ಇರುವ ಹಾಗೂ ತುಸು ಶಾಂತವಾಗಿರುವ ಸ್ಥಳವನ್ನು ತರಗತಿಗೆ ಆಯ್ಕೆ ಮಾಡಲಾಗಿದೆ. ಸ್ಥಳದ ಸುರಕ್ಷತೆಯನ್ನು ಪರಿಶೀಲಿಸಿದ ನಂತರವೇ ತರಗತಿಗಳನ್ನು ಆರಂಭಿಸಲಾಗಿದೆ. “ಇದು ಬಿಹಾರ. ಇಲ್ಲಿನ ಮಕ್ಕಳು ಸವಾಲುಗಳನ್ನು ಎದುರಿಸಲು ಕಲಿತಿದ್ದಾರೆ. ಶಿಕ್ಷಣಕ್ಕಾಗಿ ಏನು ಬೇಕಾದರೂ ಮಾಡಬಹುದು. ದೋಣಿಯಲ್ಲಿ ಓದಬೇಕಾದರೂ ನಮಗೆ ಯಾವುದೇ ಸಮಸ್ಯೆಯಿಲ್ಲ” ಎಂದು ಶಿಕ್ಷಕರು ತಿಳಿಸಿದ್ದಾರೆ.

ವಿದ್ಯಾರ್ಥಿಗಳು ಹೇಳಿದ್ದೇನು?

ಐದನೇ ತರಗತಿಯ ವಿದ್ಯಾರ್ಥಿ ಸತ್ಯಂ ಕುಮಾರ್‌ ಕೂಡ ದೋಣಿಯಲ್ಲಿ ಓದಲು ಯಾವುದೇ ಭಯವಿಲ್ಲ ಎಂದು ಹೇಳಿದ್ದಾರೆ. ಗ್ರಾಮದೆಲ್ಲೆಡೆ ನೀರು ತುಂಬಿದ್ದು, ಮನೆಗಳು, ರಸ್ತೆಗಳು ಹಾಗೂ ಕೋಚಿಂಗ್‌ ಕೇಂದ್ರಗಳಲ್ಲೂ ನೀರು ನಿಂತಿರುವುದರಿಂದ ಕಡಿಮೆ ನೀರಿರುವ ಈ ಸ್ಥಳಕ್ಕೆ ಬಂದು ಓದುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಆರನೇ ತರಗತಿಯ ವಿದ್ಯಾರ್ಥಿನಿ ಅನು ಕುಮಾರಿ ಕೂಡ ನೀರು ಕಡಿಮೆ ಇರುವ ಕಾರಣ ದೋಣಿಯಲ್ಲಿ ಓದಲು ಭಯವಾಗುವುದಿಲ್ಲ ಎಂದು ಹೇಳಿದ್ದಾರೆ. ಸಾಮಾನ್ಯವಾಗಿ ದೋಣಿ ತರಗತಿಗಳು ಸುಮಾರು ಒಂದು ಗಂಟೆಯಿಂದ ಒಂದೂವರೆ ಗಂಟೆಯವರೆಗೆ ನಡೆಯುತ್ತವೆ. ಪ್ರವಾಹದಿಂದ ಮನೆಗಳಲ್ಲೂ ನೀರು ನುಗ್ಗಿದ್ದರೂ ಶಿಕ್ಷಣವನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂಬುದು ಮಕ್ಕಳ ಅಭಿಪ್ರಾಯ.

ಪ್ರತಿ ವರ್ಷ ಪ್ರವಾಹವನ್ನು ಎದುರಿಸುವ ಈ ಪ್ರದೇಶದಲ್ಲಿ ಈ ಬಾರಿ ಮನೆಗಳು, ರಸ್ತೆಗಳು ಹಾಗೂ ಶಿಕ್ಷಣ ಸಂಸ್ಥೆಗಳು ನೀರಿನಲ್ಲಿ ಸಿಲುಕಿವೆ. ಇಂತಹ ಕಠಿಣ ಪರಿಸ್ಥಿತಿಯಲ್ಲೂ ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗದಂತೆ ದೋಣಿಯನ್ನೇ ತರಗತಿಯನ್ನಾಗಿ ಮಾಡಿಕೊಂಡಿರುವ ಶಿಕ್ಷಕರ ಪ್ರಯತ್ನ ಇದೀಗ ಗಮನ ಸೆಳೆಯುತ್ತಿದೆ.