ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಇಸ್ಲಾಂಗೆ ಮತಾಂತರಗೊಂಡ ನಂತರ ಎಸ್‌ಸಿ/ಎಸ್‌ಟಿ ಕಾಯ್ದೆ ಅನ್ವಯಿಸುವುದಿಲ್ಲ: ಬಾಂಬೆ ಹೈಕೋರ್ಟ್‌ನಿಂದ ಮಹತ್ವದ ತೀರ್ಪು

SC/ST Act: ನ್ಯಾಯಮೂರ್ತಿ ವೃಷಾಲಿ ವಿ. ಜೋಶಿ ಅವರನ್ನೊಳಗೊಂಡ ಬಾಂಬೆ ಹೈಕೋರ್ಟ್‌ ಪೀಠವು ಎಸ್‌ಸಿ/ಎಸ್‌ಟಿ ಕಾಯ್ದೆ ಬಗ್ಗೆ ಮಹತ್ವದ ತೀರ್ಪು ಪ್ರಕಟಿಸಿದೆ. ಸಂತ್ರಸ್ತ ಮಹಿಳೆಯ ಹೇಳಿಕೆಯನ್ನು ಪ್ರಮುಖವಾಗಿ ದಾಖಲಿಸಿಕೊಂಡಿದೆ. ಆಕೆ ತನ್ನ ಹೇಳಿಕೆಯಲ್ಲಿ, ತನ್ನ ಪತಿ ಮುಸ್ಲಿಂ ಧರ್ಮವನ್ನು ಪಾಲಿಸುತ್ತಿದ್ದು, ವಿವಾಹದ ಸಮಯದಲ್ಲಿ ತಾನು ಕೂಡ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿರುವುದಾಗಿ ಹಾಗೂ ಅಂದಿನಿಂದ ಮುಸ್ಲಿಂ ಧರ್ಮದ ಆಚರಣೆಗಳನ್ನೇ ಅನುಸರಿಸುತ್ತಿರುವುದಾಗಿ ಸ್ಪಷ್ಟವಾಗಿ ತಿಳಿಸಿದ್ದಾಳೆ.

ಸಾಂದರ್ಭಿಕ ಚಿತ್ರ

ನವದೆಹಲಿ, ಜೂ. 30: ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ನಂತರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ (SC/ST Act) ನಿಬಂಧನೆಗಳು ಅನ್ವಯಿಸುವುದಿಲ್ಲ ಎಂದು ಬಾಂಬೆ ಹೈಕೋರ್ಟ್‌ನ (Bombay High Court) ಕೊಲ್ಹಾಪುರ ಪೀಠವು ಸ್ಪಷ್ಟಪಡಿಸಿದೆ. ದೌರ್ಜನ್ಯ ಪ್ರಕರಣವೊಂದರಿಂದ ದಂಪತಿಯನ್ನು ಮುಕ್ತಗೊಳಿಸಿ ನ್ಯಾಯಾಲಯವು ಇತ್ತೀಚೆಗೆ ಈ ಮಹತ್ವದ ತೀರ್ಪು ನೀಡಿದೆ.

ನ್ಯಾಯಮೂರ್ತಿ ವೃಷಾಲಿ ವಿ. ಜೋಶಿ ಅವರ ಪೀಠವು ಸಂತ್ರಸ್ತ ಮಹಿಳೆಯ ಹೇಳಿಕೆಯನ್ನು ಪ್ರಮುಖವಾಗಿ ದಾಖಲಿಸಿಕೊಂಡಿದೆ. ಆಕೆ ತನ್ನ ಹೇಳಿಕೆಯಲ್ಲಿ, ತನ್ನ ಪತಿ ಮುಸ್ಲಿಂ ಧರ್ಮವನ್ನು ಪಾಲಿಸುತ್ತಿದ್ದು, ವಿವಾಹದ ಸಮಯದಲ್ಲಿ ತಾನು ಕೂಡ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿರುವುದಾಗಿ ಹಾಗೂ ಅಂದಿನಿಂದ ಮುಸ್ಲಿಂ ಧರ್ಮದ ಆಚರಣೆಗಳನ್ನೇ ಅನುಸರಿಸುತ್ತಿರುವುದಾಗಿ ಸ್ಪಷ್ಟವಾಗಿ ತಿಳಿಸಿದ್ದಾಳೆ. ಅಷ್ಟೇ ಅಲ್ಲದೆ, ಧರ್ಮ ಬದಲಾವಣೆಯ ನಂತರ ತಾನು ತನ್ನ ಹೆಸರನ್ನು ಕೂಡ ಬದಲಾಯಿಸಿಕೊಂಡಿರುವುದಾಗಿ ಎಂದು ಅವರು ಹೇಳಿದ್ದಾಳೆ.

ಪ್ರಕರಣದ ಹಿನ್ನೆಲೆ

ದೂರು ನೀಡಿದ ಮಹಿಳೆ ಮೂಲತಃ ಹಿಂದೂ ಮಹಾರ್ ಸಮುದಾಯಕ್ಕೆ ಸೇರಿದವಳಾಗಿದ್ದು, 2011ರಲ್ಲಿ ಮುಸ್ಲಿಂ ವ್ಯಕ್ತಿಯನ್ನು ವಿವಾಹವಾಗಿದ್ದಳು. ತದನಂತರ, ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಹೆಚ್ಚಾದವು. 2015ರಲ್ಲಿ ತಮ್ಮೊಂದಿಗೆ ಕೆಲವು ದಿನಗಳ ಕಾಲ ಉಳಿದುಕೊಳ್ಳಲು ಬಂದಿದ್ದ ತನ್ನ ಪತಿಯ ಸಹೋದರಿ ಮತ್ತು ಆಕೆಯ ಪತಿಯ ವಿರುದ್ಧ ಈ ಮಹಿಳೆ ದೂರು ದಾಖಲಿಸಿದ್ದಳು.

ಎಸ್‌ಸಿ/ಎಸ್‌ಟಿ ನೌಕರರ ಮೇಲಿನ ದೌರ್ಜನ್ಯ ಮುಂದುವರಿದರೆ ತಾಲೂಕು ಕಚೇರಿ ಮುಂದೆ ಪ್ರತಿಭಟನೆ: ಎಸ್‌ ಪ್ರದೀಪ್‌ ಎಚ್ಚರಿಕೆ

ದೂರಿನ ಪ್ರಕಾರ, ಮಹಿಳೆ ಸಂಬಂಧಿಕರನ್ನು ಸ್ವಚ್ಛತೆ ಕಾಪಾಡಿಕೊಳ್ಳಲು, ಅತಿಯಾದ ನೀರನ್ನು ಬಳಸದಂತೆ ಮತ್ತು ಶೌಚಾಲಯವನ್ನು ಸ್ವಚ್ಛವಾಗಿಡಲು ಹೇಳಿದಾಗ ವಾಗ್ವಾದ ಭುಗಿಲೆದ್ದಿತು. ಸಂಬಂಧಿಕರು ತನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ತಾನು ಪರಿಶಿಷ್ಟ ಜಾತಿಗೆ ಸೇರಿದವಳು ಎಂದು ತನ್ನ ಜಾತಿ ಆಧಾರಿತ ಹೆಸರನ್ನು ಕರೆದು ನಿಂದಿಸಿದ್ದಾರೆ ಎಂದು ಅವರು ಆರೋಪಿಸಿದ್ದಳು.

ಮಹಿಳೆಯ ಸಂಬಂಧಿಕರ ಪರವಾಗಿ ಹಾಜರಾದ ವಕೀಲ ಸತ್ಯವ್ರತ ಜೋಶಿ, ಅವರು ಒಂದೇ ಕುಟುಂಬದವರು. ಅರ್ಜಿದಾರರ ಪರವಾಗಿ ಯಥಾಸ್ಥಿತಿ ಆದೇಶ ಹೊರಡಿಸಿರುವುದರಿಂದ, ಮಹಿಳೆ ಸುಳ್ಳು ಎಫ್‌ಐಆರ್ ದಾಖಲಿಸಿದ್ದಾಳೆ. ದೌರ್ಜನ್ಯ ಕಾಯ್ದೆಯಡಿ ಅರ್ಜಿದಾರರ ವಿರುದ್ಧ ಯಾವುದೇ ಅಪರಾಧವನ್ನು ಹೊರಿಸಲಾಗಿಲ್ಲ ಎಂದು ವಾದಿಸಿದರು.

ಕಾನೂನು ಏನು ಹೇಳುತ್ತದೆ?

ಹೆಚ್ಚುವರಿ ಸರ್ಕಾರಿ ಅಭಿಯೋಜಕ ಎಸ್.ವಿ. ಗಾವಂಡ್ ಸುಪ್ರೀಂ ಕೋರ್ಟ್‌ನ 'ಚಿಂತಾಡ ಆನಂದ್' ತೀರ್ಪನ್ನು ಉಲ್ಲೇಖಿಸಿ, ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಮಹಿಳೆಯೊಬ್ಬರಿಗೆ ಅಟ್ರಾಸಿಟಿ ಕಾಯ್ದೆಯಡಿ ರಕ್ಷಣೆ ಅನ್ವಯಿಸುವುದಿಲ್ಲ ಎಂದು ಹೇಳಿದರು. ಮತಾಂತರಕ್ಕೂ ಮುನ್ನ ಆಕೆ ಪರಿಶಿಷ್ಟ ಜಾತಿಗೆ ಸೇರಿದ್ದರೂ, ಪ್ರಸ್ತುತ ಇಸ್ಲಾಂ ಧರ್ಮವನ್ನು ಪಾಲಿಸುತ್ತಿರುವುದರಿಂದ ಈ ಕಾಯ್ದೆಯ ಪ್ರಯೋಜನ ಪಡೆಯಲು ಅರ್ಹಳಲ್ಲ ಎಂದು ಅವರು ತಿಳಿಸಿದರು.

ವಾದ-ಪ್ರತಿವಾದ ಆಲಿಸಿದ ಪೀಠವು ಆರೋಪಿ ದಂಪತಿ ವಿರುದ್ಧ ದೌರ್ಜನ್ಯ ಕಾಯ್ದೆಯಡಿಯ ಆರೋಪಗಳನ್ನು ಖುಲಾಸೆಗೊಳಿಸಿತು. ಲಭ್ಯವಿರುವ ದಾಖಲೆಗಳು ಮೇಲ್ನೋಟಕ್ಕೆ ಪ್ರಕರಣದ ಸತ್ಯಾಸತ್ಯತೆಯನ್ನು ಎತ್ತಿ ತೋರಿಸುತ್ತಿರುವುದರಿಂದ ಆ ಆರೋಪಗಳ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರಿಯಲಿದೆ ಎಂದು ಹೈಕೋರ್ಟ್ ತಿಳಿಸಿದೆ.