ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಣಿಪುರದಲ್ಲಿ ಉಗ್ರರ ವಿರುದ್ಧ ಭದ್ರತಾ ಪಡೆಗಳ ಕಾರ್ಯಾಚರಣೆ: ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಜಪ್ತಿ

weapons seized in Manipur: ಕಳೆದ ಕೆಲವು ತಿಂಗಳಲ್ಲಿ ಮಣಿಪುರದಲ್ಲಿ ಪತ್ತೆಯಾದ ಅತಿದೊಡ್ಡ ಶಸ್ತ್ರಾಸ್ತ್ರ ಸಂಗ್ರಹಗಳಲ್ಲಿ ಒಂದನ್ನು ಮೇ 20ರಂದು ಭದ್ರತಾ ಪಡೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ವಶಪಡಿಸಿಕೊಳ್ಳಲಾಯಿತು. ಈ ಕಾರ್ಯಾಚರಣೆಯಲ್ಲಿ 60ಕ್ಕೂ ಹೆಚ್ಚು ಶಸ್ತ್ರಾಸ್ತ್ರಗಳು ಹಾಗೂ ಯುದ್ಧಮಟ್ಟದ ಸಾಮಗ್ರಿಗಳನ್ನು ಜಪ್ತಿ ಮಾಡಲಾಗಿದೆ.

ಮಣಿಪುರದಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಜಪ್ತಿ

ಇಂಫಾಲ್, ಮೇ 23: ಕಳೆದ ಕೆಲವು ತಿಂಗಳಲ್ಲಿ ಮಣಿಪುರದಲ್ಲಿ (Manipur) ಪತ್ತೆಯಾದ ಅತಿದೊಡ್ಡ ಶಸ್ತ್ರಾಸ್ತ್ರ ಸಂಗ್ರಹಗಳಲ್ಲಿ ಒಂದನ್ನು ಮೇ 20ರಂದು ಭದ್ರತಾ ಪಡೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ವಶಪಡಿಸಿಕೊಳ್ಳಲಾಯಿತು. ಈ ಕಾರ್ಯಾಚರಣೆಯಲ್ಲಿ 60ಕ್ಕೂ ಹೆಚ್ಚು ಶಸ್ತ್ರಾಸ್ತ್ರಗಳು ಹಾಗೂ ಯುದ್ಧಮಟ್ಟದ ಸಾಮಗ್ರಿಗಳನ್ನು ಜಪ್ತಿ ಮಾಡಲಾಗಿದೆ (weapons seized). ಇದರಲ್ಲಿ ಎಕೆ ಸರಣಿಯ ರೈಫಲ್‌ಗಳು, ಅಮೆರಿಕ ನಿರ್ಮಿತ ಎಂ ಸರಣಿಯ ರೈಫಲ್‌ಗಳು, ಜರ್ಮನ್ ನಿರ್ಮಿತ ಹೆಚ್‌ಕೆ ಸರಣಿಯ ಅಸಾಲ್ಟ್ ರೈಫಲ್‌ಗಳು, ಕಾರ್ಬೈನ್‌ಗಳು, ಶಾಟ್‌ಗನ್‌ಗಳು, ಮಾರ್ಟರ್‌ಗಳು ಹಾಗೂ ಆರ್‌ಪಿಜಿ-7 ಲಾಂಚರ್‌ಗಳು ಸೇರಿವೆ.

ಆದರೆ ಯುಎನ್‌ಎಲ್‌ಎಫ್ (ಪಿ) (ಯುನೈಟೆಡ್ ನ್ಯಾಷನಲ್ ಲಿಬರೇಶನ್ ಫ್ರಂಟ್, ಪಂಬೆ ಬಣ) ದಿಂದ ವಶಪಡಿಸಿಕೊಂಡ ಸಂಗ್ರಹದಲ್ಲಿ ಅಚ್ಚರಿ ಮೂಡಿಸಿದ ಸಂಗತಿ ಎಂದರೆ ಡ್ರೋನ್ ಜಾಮರ್‌ಗಳು ಪತ್ತೆಯಾಗಿರುವುದು. ಇಂತಹ ಸುಧಾರಿತ ಎಲೆಕ್ಟ್ರಾನಿಕ್ ವಾರ್ಫೇರ್ (EW) ಸಾಮರ್ಥ್ಯವು ಇದುವರೆಗೆ ಯಾವುದೇ ಭಾರತೀಯ ಉಗ್ರ ಸಂಘಟನೆಗಳ ಬಳಿ ಕಂಡುಬಂದಿರಲಿಲ್ಲ.

ಮಾಧ್ಯಮ ವರದಿಗಳ ಪ್ರಕಾರ, ವಶಪಡಿಸಿಕೊಂಡ ಸಿಂಗಲ್ ಬ್ಯಾಕ್-ಪ್ಯಾಕ್ ಡ್ರೋನ್ ಜಾಮರ್ ಅನ್ನು ತೈವಾನ್‌ನಲ್ಲಿ ತಯಾರಿಸಲಾಗಿದೆ. ಅಸ್ಸಾಂ ರೈಫಲ್ಸ್, ಸಿಆರ್‌ಪಿಎಫ್ ಮತ್ತು ಮಣಿಪುರ ಪೊಲೀಸರು ಜಂಟಿಯಾಗಿ ಇಂಫಾಲ್ ಪಶ್ಚಿಮದ ಲ್ಯಾಮ್‌ಡೆಂಗ್‌ನಲ್ಲಿ ದಾಳಿ ನಡೆಸಿದ್ದರು. ಈ ವೇಳೆ ಕನಿಷ್ಠ ಎರಡು ಸಣ್ಣ ವಾಕಿ-ಟಾಕಿ ಗಾತ್ರದ ಜಾಮರ್‌ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.

ಮತ್ತೆ ಹೊತ್ತಿ ಉರಿದ ಮಣಿಪುರ; 21 ಮಂದಿಗೆ ಗಾಯ, ಎರಡು ವಾಹನಗಳಿಗೆ ಬೆಂಕಿ

ಡ್ರೋನ್ ಜಾಮರ್‌ಗಳು ಡ್ರೋನ್ ಮತ್ತು ಅದನ್ನು ನಿಯಂತ್ರಿಸುವ ಆಪರೇಟರ್ ನಡುವಿನ ರೇಡಿಯೋ ಸಿಗ್ನಲ್‌ಗಳನ್ನು ಅಡ್ಡಿಪಡಿಸುತ್ತವೆ. ಡ್ರೋನ್ ಕಾರ್ಯನಿರ್ವಹಿಸುವ ಅದೇ ಫ್ರೀಕ್ವೆನ್ಸಿಗಳಲ್ಲಿ ಇವು ವಿದ್ಯುತ್ಕಾಂತೀಯ ಸಿಗ್ನಲ್‌ಗಳನ್ನು ಹೊರಸೂಸುತ್ತವೆ. ಇದರಿಂದ ಮುಖ್ಯ ಸಿಗ್ನಲ್ ಅನ್ನು ನಿರ್ಬಂಧಿಸುತ್ತವೆ. ಹೀಗಾಗಿ ಡ್ರೋನ್‌ನ ವಿಡಿಯೊ ಫೀಡ್ ಸಂಪರ್ಕ ಕಡಿತಗೊಳ್ಳುತ್ತದೆ, ರಿಮೋಟ್ ಕಂಟ್ರೋಲ್ ಜಾಮ್ ಆಗುತ್ತದೆ ಹಾಗೂ ಡ್ರೋನ್ ನಿಯಂತ್ರಣ ಕಳೆದುಕೊಳ್ಳುತ್ತದೆ. ಪರಿಣಾಮವಾಗಿ ಡ್ರೋನ್ ತುರ್ತು ಲ್ಯಾಂಡಿಂಗ್ ಮಾಡಬಹುದು ಅಥವಾ ‘ರಿಟರ್ನ್-ಟು-ಹೋಮ್’ ಪ್ರೋಟೋಕಾಲ್ ಸಕ್ರಿಯಗೊಂಡು ತಾನೇ ಆರಂಭಿಕ ಸ್ಥಳಕ್ಕೆ ಹಿಂತಿರುಗಲು ಪ್ರಯತ್ನಿಸಬಹುದು.

ಮಣಿಪುರದಲ್ಲಿ ವಶಪಡಿಸಿಕೊಂಡಿರುವ ಈ ರೀತಿಯ ಪೋರ್ಟಬಲ್ ಇಡಬ್ಲ್ಯೂ ಸಾಮರ್ಥ್ಯಗಳನ್ನು ಪ್ರಸ್ತುತ ಭಾರತೀಯ ಸೇನೆಯ ವಿಶೇಷ ಸಿಗ್ನಲ್ ಘಟಕಗಳು ಮಾತ್ರ ಬಳಸುತ್ತಿವೆ. ಡ್ರೋನ್ ಹಾಗೂ ಐಇಡಿ ಬೆದರಿಕೆಗಳು ಹೆಚ್ಚಿರುವ ಉದಂಪುರ ಆಧಾರಿತ ಉತ್ತರ ಕಮಾಂಡ್ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಭಾರತೀಯ ಸೇನೆ ಮತ್ತು ರಾಷ್ತ್ರೀಯ ರೈಫಲ್ಸ್ ಪಡೆಯ ಸಿಗ್ನಲ್ ಘಟಕಗಳಿಗೆ ಡ್ರೋನ್ ವಿರೋಧಿ ಬ್ಯಾಕ್‌ಪ್ಯಾಕ್‌ಗಳನ್ನು ನೀಡಲಾಗುತ್ತದೆ.

ಪ್ರತಿ ಬ್ಯಾಕ್‌ಪ್ಯಾಕ್ ಜಾಮರ್‌ನ ಬೆಲೆ ಅದರ ವಿನ್ಯಾಸ ಮತ್ತು ಸಿಗ್ನಲ್ ಸಾಮರ್ಥ್ಯವನ್ನು ಅವಲಂಬಿಸಿ ಸುಮಾರು 5 ಲಕ್ಷದಿಂದ 10 ಲಕ್ಷ ರೂಪಾಯಿವರೆಗೆ ಇರುತ್ತದೆ. ಸಣ್ಣ ಗಾತ್ರದ ಜಾಮರ್ ಘಟಕಗಳು ಸುಮಾರು 1 ಕಿಲೋಮೀಟರ್ ವ್ಯಾಪ್ತಿಯಲ್ಲಿ ಸಿಗ್ನಲ್ ಜಾಮ್ ಮಾಡುವ ಸಾಮರ್ಥ್ಯ ಹೊಂದಿದ್ದರೆ, ಬ್ಯಾಕ್‌ಪ್ಯಾಕ್ ಮಾದರಿಯ ಡ್ರೋನ್ ವಿರೋಧಿ ಜಾಮರ್‌ಗಳು ಸುಮಾರು 5 ಕಿ.ಮೀವರೆಗೆ ಪರಿಣಾಮಕಾರಿ ವ್ಯಾಪ್ತಿಯನ್ನು ಹೊಂದಿರುತ್ತವೆ.

ಸುಧಾರಿತ ಎಲೆಕ್ಟ್ರಾನಿಕ್ ವಾರ್ಫೇರ್ ತಂತ್ರಜ್ಞಾನದ ವಶಪಡಿಸಿಕೊಂಡಿರುವುದು ಮತ್ತೊಮ್ಮೆ ಭಾರತ-ಮ್ಯಾನ್ಮಾರ್ ಗಡಿಯ ಸೋರಿಕೆಯಾಗಿರುವ ಭದ್ರತಾ ದುರ್ಬಲತೆಯನ್ನು ಬೆಳಕಿಗೆ ತಂದಿದೆ. ಮೇ 20ರಂದು ಭದ್ರತಾ ಪಡೆಗಳು ವಶಪಡಿಸಿಕೊಂಡ ಬಹುತೇಕ ಸಣ್ಣ ಶಸ್ತ್ರಾಸ್ತ್ರಗಳು ಮ್ಯಾನ್ಮಾರ್‌ನಿಂದ ಬಂದಿರಬಹುದು ಎಂದು ಶಂಕಿಸಲಾಗಿದೆ.