ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮಹಾರಾಷ್ಟ್ರದಲ್ಲೊಂದು ಅಮಾನವೀಯ ಕೃತ್ಯ; ಚಿಕಿತ್ಸೆ ನೆಪದಲ್ಲಿ ಅನುಯಾಯಿಗಳಿಗೆ ತನ್ನ ಮೂತ್ರ ಕುಡಿಸುತ್ತಿದ್ದ ಸ್ವಯಂಘೋಷಿತ ಬಾಬಾ!

Crime News: ಮಹಾರಾಷ್ಟ್ರದಲ್ಲಿ ಅಮಾನವೀಯ ಘಟನೆ ನಡೆದಿದ್ದು, ಸ್ವಯಂಘೋಷಿತ ಬಾಬಾ ಆಚರಣೆಯ ಹೆಸರಿನಲ್ಲಿ ಅನುಯಾಯಿಗಳಿಗೆ ಬೆತ್ತದಿಂದ ಹೊಡೆದಿದ್ದಲ್ಲದೆ ತನ್ನ ಮೂತ್ರವನ್ನು ಕುಡಿಸಿದ್ದಾನೆ. ಮುಗ್ಧ ಜನರಿಗೆ ಮೋಸ ಎಸಗಿದ ವ್ಯಕ್ತಿಯನ್ನು ಸಂಜಯ್‌ ಪಗಾರೆ ಎಂದು ಗುರುತಿಸಲಾಗಿದೆ.

ಮುಂಬೈ: ಮಹಾರಾಷ್ಟ್ರದಲ್ಲಿ ಅಮಾನವೀಯ ಘಟನೆ ನಡೆದಿದ್ದು, ಸ್ವಯಂಘೋಷಿತ ಬಾಬಾ ಆಚರಣೆಯ ಹೆಸರಿನಲ್ಲಿ ಅನುಯಾಯಿಗಳಿಗೆ ಬೆತ್ತದಿಂದ ಹೊಡೆದಿದ್ದಲ್ಲದೆ ತನ್ನ ಮೂತ್ರವನ್ನು ಕುಡಿಸಿದ್ದಾನೆ. ಸಂಜಯ್‌ ಪಗಾರೆ (Sanjay Pagare) ಎನ್ನುವ ಈ ವ್ಯಕ್ತಿ ಕಾಯಿಲೆ ವಾಸಿ ಮಾಡುವ ನೆಪದಲ್ಲಿ ಮುಗ್ಧ ಜನರಿಗೆ ಮೋಸ ಎಸಗಿರುವುದು ಬೆಳಕಿಗೆ ಬಂದಿದೆ. ಮಹಾರಾಷ್ಟ್ರದ ಛತ್ರಪತಿ ಸಾಂಭಾಜಿನಗರ್‌ ಜಿಲ್ಲೆಯಲ್ಲಿ ಇಡೀ ದೇಶವೇ ತಲೆ ತಗ್ಗಿಸುವಂತಹ ಈ ಘಟನೆ ನಡೆದಿದೆ (Viral News). ಸದ್ಯ ಆತನ ವರ್ತನೆಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಜತೆಗೆ ಪ್ರಕರಣ ದಾಖಲಿಸಲಾಗಿದೆ.

ಸಂಜಯ್ ಪಗಾರೆ ಆಧ್ಯಾತ್ಮಿಕ ಚಿಕಿತ್ಸೆಯ ನೆಪದಲ್ಲಿ ಗ್ರಾಮಸ್ಥರನ್ನು ನಿರಂತರವಾಗಿ ಶೋಷಣೆಗೆ ಒಳಪಡಿಸಿದ್ದಾನೆ. ವೈಜಾಪುರ ತಹಸಿಲ್‌ನ ಶಿಯೂರ್ ಗ್ರಾಮದ ದೇವಸ್ಥಾನದಲ್ಲಿ ಬಳಿ ಕಾರ್ಯ ನಿರ್ವಹಿಸುತ್ತಿದ್ದ ಈತ, 2 ವರ್ಷಗಳ ಕಾಲ ನಿರಂತವಾಗಿ ಗ್ರಾಮಸ್ಥರನ್ನು ವಂಚಿಸುತ್ತಲೇ ಬಂದಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಸಂಜಯ್ ಪಗಾರೆ ತನಗೆ ಅಲೌಕಿಕ ಶಕ್ತಿಗಳಿವೆ ಎಂದು ಹೇಳಿಕೊಂಡಿದ್ದ. ಈ ಮೂಲಕ ತಾನು ಪ್ರೇತಗಳನ್ನು ಓಡಿಸಬಲ್ಲೆ, ಅವಿವಾಹಿತರಿಗೆ ಮದುವೆಗಳನ್ನು ಮಾಡಿಸಬಲ್ಲೆ ಮತ್ತು ತನ್ನ ಅಘೋರಿ ಆಚರಣೆಗಳ ಮೂಲಕ ಮಕ್ಕಳಾಗದ ದಂಪತಿಗೆ ಸಂತಾನಭಾಗ್ಯ ಕರುಣಿಸಬಲ್ಲೆ ಎಂದು ಘೋಷಿಸಿಕೊಂಡಿದ್ದ. ಈ ಹೆಸರಿನಲ್ಲಿ ಆತ ಅಮಾನವೀಯವಾಗಿ ನಡೆದುಕೊಂಡಿದ್ದ.

ಈ ಸುದ್ದಿಯನ್ನೂ ಓದಿ: Black Magic: ಮಾಟ ಮಂತ್ರ ಮಾಡುವುದಾಗಿ ಜನರಿಗೆ ಮೋಸ; ಸ್ವಯಂ ಘೋಷಿತ ದೇವಮಾನವ ಅರೆಸ್ಟ್‌

ಗ್ರಾಮಸ್ಥರ ಶೋಷಣೆ

ಚಿಕಿತ್ಸೆಗಾಗಿ ತನ್ನ ಬಳಿಗೆ ಬರುವವರ ಬಳಿ ಸಂಜಯ್ ಅಮಾನವೀಯವಾಗಿ ನಡೆದುಕೊಳ್ಳುತ್ತಿದ್ದ. ಸಂತ್ರಸ್ತ ಪುರುಷರು ಮತ್ತು ಮಹಿಳೆಯರಿಗೆ ಕೋಲುಗಳಿಂದ ಹೊಡೆಯುತ್ತಿದ್ದ. ಅವರದ್ದೇ ಪಾದರಕ್ಷೆಗಳನ್ನು ಬಾಯಿಗೆ ತುರುಕಿಸಲಾಗುತ್ತಿತ್ತು ಮತ್ತು ದೇವಾಲಯದ ಸುತ್ತಲೂ ವೃತ್ತಾಕಾರವಾಗಿ ಓಡಿಸಲಾಗುತ್ತಿತ್ತು. ಹಲವಾರು ಸಂದರ್ಭಗಳಲ್ಲಿ ಚಿಕಿತ್ಸೆಯ ನೆಪದಲ್ಲಿ ಮರದ ಎಲೆಗಳನ್ನು ತಿನ್ನಿಸಲಾಗುತ್ತಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಅಸಹ್ಯ ಎಂದರೆ ಆಧ್ಯಾತ್ಮ ಚಿಕಿತ್ಸೆಯ ನೆಪದಲ್ಲಿ ಆತ ಕೆಲವೊಮ್ಮೆ ಅನುಯಾಯಿಗಳಿಗೆ ತನ್ನ ಮೂತ್ರವನ್ನು ಕುಡಿಸುತ್ತಿದ್ದ ಎನ್ನುವ ಆಘಾತಕಾರಿ ಅಂಶವೂ ತಿಳಿದು ಬಂದಿದೆ.

ಬೆಳಕಿಗೆ ಬಂದಿದ್ದು ಹೇಗೆ?

ಕೆಲವು ಸಮಯಗಳಿಂದ ಹೀಗೆ ಅಮಾನುಷವಾಗಿ ನಡೆದುಕೊಂಡಿದ್ದ ಆತನ ಈ ಕೃತ್ಯ ಇತ್ತೀಚೆಗೆ ಒಂದೊಂದಾಗಿ ಬಯಲಾಗಿದೆ. ಮೂಢನಂಬಿಕೆ ವಿರೋಧಿ ಸಂಸ್ಥೆಯೊಂದು ಗುಪ್ತ ಕ್ಯಾಮೆರಾಗಳನ್ನು ಉಪಯೋಗಿಸಿ ನಡೆಸಿದ ಸ್ಟಿಂಗ್‌ ಆಪರೇಷನ್‌ನಲ್ಲಿ ಬಾಬಾನ ಕಾರ್ಯ ವೈಖರಿ ಬೆಳಕಿಗೆ ಬಂದಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ವೈರಲ್‌ ಆದ ವಿಡಿಯೊದಲ್ಲಿ ಬಾಬಾ ನೆಲದ ಮೇಲೆ ಮಲಗಿದ್ದ ವ್ಯಕ್ತಿಯ ಮುಖದ ಮೇಲೆ ಹೆಜ್ಜೆ ಊರುತ್ತಿರುವುದು ಕಂಡು ಬಂದಿದೆ. ಬಳಿಕ ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಅದೇ ವ್ಯಕ್ತಿ ಬಾಬಾ ಮುಂದೆ ಕುಳಿತಿದ್ದಾನೆ. ಬಾಬಾ ಅವನ ಮೇಲೆ ಹಳದಿ ಪುಡಿಯನ್ನು ಎಸೆದು, ಅವನ ಮೂಗಿನ ಮುಂದೆ ಶೂ ಹಿಡಿದಿದ್ದಾನೆ. ಜತೆಗೆ ಆತನ ಮುಂದೆ ಡ್ರಮ್ ಬಾರಿಸಿದ್ದಾನೆ. ನಿಲ್ಲಲೂ ಕಷ್ಟಪಡುವ ವ್ಯಕ್ತಿಯನ್ನು ಇತರರು ಹಿಡಿದುಕೊಂಡಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಕೆಲವು ದೃಶ್ಯಗಳಲ್ಲಿ ಬಾಬಾ ಪುರುಷರು ಮತ್ತು ಮಹಿಳೆಯರಿಗೆ ಉದ್ದನೆಯ ಕೋಲಿನಿಂದ ಹೊಡೆಯುವುದು ಸೆರೆಯಾಗಿದೆ. ಇದನ್ನು ಆತ ಆಧ್ಯಾತ್ಮಿಕ ಶುದ್ಧೀಕರಣ ಎಂದು ಕರೆದಿದ್ದಾನೆ.

ದೂರು ದಾಖಲು

ದೂರಿನ ಮೇರೆಗೆ ಸಂಜಯ್‌ ವಿರುದ್ಧ ಭಾರತೀಯ ದಂಡ ಸಂಹಿತೆಯಡಿ ಪ್ರಕರಣ ದಾಖಲಿಸಲಾಗಿದೆ. ವಂಚನೆ, ಹಲ್ಲೆ ಮತ್ತು ಮೂಢನಂಬಿಕೆ ಪ್ರಚಾರ ಸೇರಿದಂತೆ ಸಂಜಯ್ ಪಗಾರೆ ವಿರುದ್ಧ ಅಧಿಕಾರಿಗಳು ಹಲವು ವಿಭಾಗಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.