ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಹಸೀನಾರನ್ನೂ ವಾಪಸ್ ಕಳುಹಿಸಿ: ಬಾಂಗ್ಲಾದೇಶ ಕ್ರಿಕೆಟರ್ ವಿರುದ್ಧದ ಬಿಸಿಸಿಐ ಕ್ರಮಕ್ಕೆ ಅಸಾದುದ್ದೀನ್ ಓವೈಸಿ ಕಿಡಿ

AIMIM chief Asaduddin Owaisi: ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಬಾಂಗ್ಲಾದೇಶ ವೇಗದ ಬೌಲರ್ ಮುಸ್ತಫಿಜುರ್ ರೆಹಮಾನ್ ಅವರನ್ನು ಐಪಿಎಲ್‌ನಿಂದ ಹೊರ ಹಾಕಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕ್ರಮವನ್ನು ಖಂಡಿಸಿದ್ದಾರೆ. ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಸಹ ಕಳುಹಿಸಬೇಕು ಎಂದು ಆಗ್ರಹಿಸಿದ್ದಾರೆ.

ಅಸಾದುದ್ದೀನ್ ಓವೈಸಿ (ಸಂಗ್ರಹ ಚಿತ್ರ)

ನವದೆಹಲಿ, ಜ. 5: ಬಾಂಗ್ಲಾದೇಶದ ಕ್ರಿಕೆಟರ್ ಮುಸ್ತಾಫಿಜುರ್ ರೆಹಮಾನ್ (Muztafizur Rahman) ಮತ್ತು ಮಾಜಿ ಪ್ರಧಾನಿ ಶೇಖ್ ಹಸೀನಾ (Sheikh Hasina) ಅವರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ಭಾರತದ ದ್ವಂದ್ವ ನೀತಿ ಎದುರಿಸುತ್ತಿದೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ (Asaduddin Owaisi) ಆರೋಪಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕರು ಪ್ರವಾಸಿಗರನ್ನು ಹತ್ಯೆ ಮಾಡಿದ ನಂತರವೂ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಪಂದ್ಯ ಆಡಿದವು. ಹೀಗಾಗಿ ಐಪಿಎಲ್‌ನಿಂದ ಬಾಂಗ್ಲಾದೇಶ ಕ್ರಿಕೆಟರ್ ಅನ್ನು ಹೊರಗಿಟ್ಟಿರುವ ಕ್ರಮವನ್ನು ಅವರು ಪ್ರಶ್ನಿಸಿದ್ದಾರೆ.

ಬಾಂಗ್ಲಾ ದೇಶದಲ್ಲಿ ಹಿಂದೂಗಳ ವಿರುದ್ಧ ನಡೆಯುತ್ತಿರುವ ಹಿಂಸಾಚಾರದ ಮಧ್ಯೆ, ಬಾಲಿವುಡ್ ನಟ ಶಾರುಖ್ ಖಾನ್ ಒಡೆತನದ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್)ಗೆ ರೆಹಮಾನ್ ಅವರನ್ನು ಕೈಬಿಡುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಳೆದ ವಾರ ಆದೇಶಿಸಿತ್ತು.

"ಅವನನ್ನು ಜೀವಂತವಾಗಿ ಸುಟ್ಟು ಹಾಕಿದೆವು': ಹಿಂದೂ ಪೊಲೀಸ್ ಅಧಿಕಾರಿಯನ್ನು ಕೊಂದಿದ್ದು ನಾನೇ ಎಂದ ಬಾಂಗ್ಲಾ ಯುವಕ!

ಕಾಂಗ್ರೆಸ್ ಸಂಸದ ಶಶಿ ತರೂರ್ ಸೇರಿದಂತೆ ಕೆಲವು ನಾಯಕರು ಕ್ರೀಡೆ ಮತ್ತು ರಾಜಕೀಯವನ್ನು ಬೆರೆಸುವುದನ್ನು ವಿರೋಧಿಸಿದ್ದರು. ಈಗ ಬಾಂಗ್ಲಾದೇಶದ ವೇಗಿಯನ್ನು ವಾಪಸ್ ಕಳುಹಿಸಬಹುದೆ? ಎಂದು ಓವೈಸಿ ಪ್ರಶ್ನಿಸಿದ್ದಾರೆ. ಪ್ರತಿಭಟನೆಗಳ ನಡುವೆ ತನ್ನ ದೇಶವನ್ನು ತೊರೆದಾಗಿನಿಂದ ಭಾರತದಲ್ಲಿ ವಾಸಿಸುತ್ತಿರುವ ಹಸೀನಾ ಅವರೊಂದಿಗೆ ಭಾರತ ಏಕೆ ಅದೇ ರೀತಿ ಮಾಡಲಿಲ್ಲ? ಎಂದು ಪ್ರಶ್ನಿಸಿದ್ದಾರೆ.

ಪಹಲ್ಗಾಮ್ ದಾಳಿಯ ನಂತರ, ನಾವು ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನದೊಂದಿಗೆ ಆಡಿದ್ದೇವೆ ಎಂದು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಓವೈಸಿ ಹೇಳಿದರು. ಬಾಂಗ್ಲಾ ದೇಶದ ಮಹಿಳೆಯೊಬ್ಬರು ಭಾರತದಲ್ಲಿ ವಾಸಿಸುತ್ತಿದ್ದಾರೆ. ಆದ್ದರಿಂದ ಅವರನ್ನೂ ಕಳುಹಿಸಿ. ಅವರಿಗೆ ದೇಶದಲ್ಲಿ ಏಕೆ ಆಶ್ರಯ ನೀಡಲಾಗುತ್ತದೆ? ಬಾಂಗ್ಲಾ ದೇಶದಲ್ಲಿ ಸ್ಥಿರತೆ ಭಾರತಕ್ಕೆ ಮುಖ್ಯ. ಚೀನಾ ಮತ್ತು ಪಾಕಿಸ್ತಾನ ಬಾಂಗ್ಲಾ ದೇಶದಲ್ಲಿ ಸಕ್ರಿಯವಾಗಿವೆ. ನಾವು ಅದನ್ನೂ ಪರಿಶೀಲಿಸಬೇಕು ಎಂದು ಅವರು ಹೇಳಿದರು.

ಬಾಂಗ್ಲಾ ದೇಶದ ವೇಗಿ ಬಗ್ಗೆ ಹೇಳುವುದಾದರೆ, ಐಪಿಎಲ್ 2026ರ ಸೀಸನ್‌ಗಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಿಂದ ಮುಸ್ತಾಫಿಜುರ್ ರೆಹಮಾನ್ ಅವರನ್ನು ಕೈ ಬಿಡುವಂತೆ ಬಿಸಿಸಿಐ ಸೂಚಿಸಿದ್ದು, ಅಗತ್ಯವಿದ್ದರೆ ಫ್ರಾಂಚೈಸಿಗೆ ಬದಲಿ ಆಟಗಾರನನ್ನು ಹುಡುಕಲು ಅವಕಾಶ ನೀಡುತ್ತದೆ ಎಂದು ಹೇಳಿದೆ.

ಅಂದಹಾಗೆ, ಮಾನವ ಹಕ್ಕುಗಳ ಉಲ್ಲಂಘನೆ ಸೇರಿ ಹಲವು ಆರೋಪಗಳನ್ನು ಎದುರಿಸುತ್ತಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಶಿಕ್ಷೆ ಕುರಿತು ನವೆಂಬರ್ 17ರಂದು ಮಹತ್ವದ ತೀರ್ಪು ನೀಡಲಾಗಿದೆ. ಬಾಂಗ್ಲಾ ದೇಶದಲ್ಲಿ ಬಹುದೊಡ್ಡ ಮಟ್ಟದಲ್ಲಿ ನಡೆದ ದಂಗೆಗೆ ಶೇಖ್‌ ಹಸೀನಾ ಅವರ ಪ್ರಚೋದನಕಾರಿ ಹೇಳಿಕೆಯೇ ಕಾರಣ ಎಂದಿದೆ. ಆಕೆ ಬಾಂಗ್ಲಾದಲ್ಲಿ ನಡೆದ ಹತ್ಯಾಕಾಂಡದ ರೂವಾರಿ ಎಂದು ಹೇಳಿದೆ.

ಕಳೆದ ವರ್ಷ ದೇಶದಲ್ಲಿ ಭುಗಿಲೆದ್ದಿದ್ದ ವಿದ್ಯಾರ್ಥಿಗಳ ದಂಗೆಯನ್ನು ಹತ್ತಿಕ್ಕಲು ಮಾರಣಾಂತಿಕ ದಾಳಿ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಶೇಖ್‌ ಹಸೀನಾ, ಮಾಜಿ ಗೃಹ ಸಚಿವ ಅಸಾದುಜ್ಜಾಮಾನ್‌ ಖಾನ್‌ ಕಮಲ್‌ ಹಾಗೂ ಮಾಜಿ ಐಜಿ‍‍‍‍ಪಿ ಚೌಧರಿ ಅಬ್ದುಲ್ಲಾ ಅಲ್‌–ಮುಮುನ್‌ ಅವರ ವಿರುದ್ಧ ಪ್ರಕರಣಗಳು ದಾಖಲಾಗಿವೆ. ನ್ಯಾಯಮಂಡಳಿಯು 54 ಸಾಕ್ಷ್ಯಗಳನ್ನು ಪರಿಶೀಲಿಸಿ ಈ ತೀರ್ಪು ಪ್ರಕಟಿಸಿತ್ತು.

ಈ ನಡುವೆ ಬಾಂಗ್ಲಾದೇಶ ಹೊತ್ತಿ ಉರಿಯುತ್ತಿದ್ದು, ಹಿಂಸಾಚಾರ ನಡೆಸಲಾಗುತ್ತಿದೆ. ಹಿಂದೂಗಳನ್ನು ಗುರಿಯಾಗಿಸಿ ದಾಳಿ ಮಾಡಲಾಗುತ್ತಿದ್ದು, ನರಮೇಧ, ದೌರ್ಜನ್ಯ ಮಿತಿ ಮೀರಿದೆ.