ನವದೆಹಲಿ, ಜೂ. 22: ಜಮ್ಮು-ಕಾಶ್ಮೀರ (Jammu & Kashmir)ದಲ್ಲಿ ಪರಿಸ್ಥಿತಿ ನಿಧಾನವಾಗಿ ಸಾಮಾನ್ಯ ಸ್ಥಿತಿಯತ್ತ ಸಾಗುತ್ತಿದೆ ಎಂದು ಹೇಳಿಕೆ ನೀಡಿದ ಹಿರಿಯ ಕಾಂಗ್ರೆಸ್ (Congress) ಸಂಸದ ಶಶಿ ತರೂರ್ (MP Shashi Tharoor) ಪಕ್ಷದೊಳಗೇ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಶ್ರೀನಗರ ಪ್ರವಾಸದಲ್ಲಿದ್ದ ತರೂರ್ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರನ್ನು ಲೋಕಭವನದಲ್ಲಿ ಭೇಟಿಯಾಗಿ ಜಮ್ಮು-ಕಾಶ್ಮೀರದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಚರ್ಚಿಸಿದರು. ಬಳಿಕ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಅವರು, "ಜಮ್ಮು-ಕಾಶ್ಮೀರದಲ್ಲಿ ಸಾಮಾನ್ಯ ಸ್ಥಿತಿಯತ್ತ ಉತ್ತೇಜನಕಾರಿ ಪ್ರಗತಿ ಕಂಡುಬರುತ್ತಿದೆ. ಇನ್ನೂ ಸಾಕಷ್ಟು ಸವಾಲುಗಳಿದ್ದರೂ, ಈ ಭೇಟಿಯ ನಂತರ ನನಗೆ ಬಹಳ ದಿನಗಳ ಬಳಿಕ ಹೆಚ್ಚು ಸಕಾರಾತ್ಮಕ ಭಾವನೆ ಮೂಡಿದೆ" ಎಂದು ಬರೆದುಕೊಂಡಿದ್ದರು.
ತರೂರ್ ಅವರ ಈ ಹೇಳಿಕೆ ಕಾಂಗ್ರೆಸ್‌ನ ಅಧಿಕೃತ ನಿಲುವಿಗೆ ವಿರುದ್ಧವಾಗಿದೆ ಎಂಬ ಟೀಕೆಗಳು ವ್ಯಕ್ತವಾಗಿವೆ. ಏಕೆಂದರೆ, 2019ರಲ್ಲಿ 370ನೇ ವಿಧಿ ರದ್ದುಪಡಿಸಿ ಜಮ್ಮು-ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಕೇಂದ್ರ ಸರ್ಕಾರ ಕಿತ್ತುಕೊಂಡ ಬಳಿಕ ಪರಿಸ್ಥಿತಿ ಹದಗೆಟ್ಟಿದೆ ಎಂದು ಕಾಂಗ್ರೆಸ್ ನಿರಂತರವಾಗಿ ಆರೋಪಿಸುತ್ತಲೇ ಬಂದಿದೆ.
ಶಶಿ ತರೂರ್ ಅವರ ಎಕ್ಸ್ ಪೋಸ್ಟ್:
ತರೂರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಜಮ್ಮು-ಕಾಶ್ಮೀರ ಕಾಂಗ್ರೆಸ್ ಮುಖ್ಯ ವಕ್ತಾರ ರವೀಂದರ್ ಶರ್ಮಾ, "ತರೂರ್ ಕೇವಲ ರಾಜಭವನಕ್ಕೆ ಭೇಟಿ ನೀಡುವುದಕ್ಕಿಂತ ಕಣಿವೆಯ ಸಾಮಾನ್ಯ ಜನರನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸಬೇಕಿತ್ತು. ಆಗ ನೆಲದ ವಾಸ್ತವ ಚಿತ್ರಣ ತಿಳಿಯುತ್ತಿತ್ತು" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬೆಳವಣಿಗೆಯು ಕಾಂಗ್ರೆಸ್ ಒಳಗೆ ಮತ್ತೊಮ್ಮೆ ಭಿನ್ನಾಭಿಪ್ರಾಯಗಳ ಚರ್ಚೆಗೆ ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ಹಲವು ರಾಷ್ಟ್ರೀಯ ವಿಷಯಗಳಲ್ಲಿ ತರೂರ್ ಅವರ ನಿಲುವು ಪಕ್ಷದ ಅಧಿಕೃತ ಅಭಿಪ್ರಾಯಕ್ಕಿಂತ ಭಿನ್ನವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಬಿಜೆಪಿಗೆ ಸಿಕ್ತು ಪ್ರಬಲ ಅಸ್ತ್ರ
ಇದನ್ನೇ ಅಸ್ತ್ರವನ್ನಾಗಿಸಿಕೊಂಡಿರುವ ಬಿಜೆಪಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ. ಬಿಜೆಪಿ ವಕ್ತಾರ ಅಭಿಜಿತ್ ಜಸ್ರೋಟಿಯಾ ಮಾತನಾಡಿ, "370ನೇ ವಿಧಿ ರದ್ದಾದ ನಂತರ ಕಾಶ್ಮೀರದಲ್ಲಿ ಕಲ್ಲು ತೂರಾಟದ ಘಟನೆಗಳು ಬಹುತೇಕ ಅಂತ್ಯಗೊಂಡಿವೆ. 18 ತಿಂಗಳಲ್ಲಿ ಒಬ್ಬ ಸ್ಥಳೀಯ ಯುವಕ ಉಗ್ರ ಸಂಘಟನೆಗಳಿಗೆ ಸೇರಿಲ್ಲ. ಅಭಿವೃದ್ಧಿ ಮತ್ತು ಶಾಂತಿಯತ್ತ ಜಮ್ಮು-ಕಾಶ್ಮೀರ ಸಾಗುತ್ತಿದೆ ಎಂಬುದನ್ನು ತರೂರ್ ಅವರ ಹೇಳಿಕೆ ಕೂಡ ಒಪ್ಪಿಕೊಂಡಂತಾಗಿದೆ" ಎಂದು ಹೇಳಿದ್ದಾರೆ.
ತರೂರ್ ಅವರ ಹೇಳಿಕೆ ಈಗ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ರಾಜಕೀಯ ವಾಕ್ಸಮರಕ್ಕೆ ಹೊಸ ವೇದಿಕೆ ಕಲ್ಪಿಸಿದ್ದು, ಜಮ್ಮು-ಕಾಶ್ಮೀರದ ರಾಜಕೀಯ ಪರಿಸ್ಥಿತಿಯ ಕುರಿತು ಮತ್ತೊಮ್ಮೆ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.