ನವದೆಹಲಿ: ಇಂಗ್ಲೆಂಡ್ ಮೂಲದ ಪ್ರಸಿದ್ಧ ಹಿಂದಿ ವಿದ್ವಾಂಸ ಪ್ರೊಫೆಸರ್ ಫ್ರಾನ್ಸೆಸ್ಕಾ ಓರ್ಸಿನಿ (Professor Francesca Orsini) ಅವರಿಗೆ ಭಾರತ ಪ್ರವೇಶ ನಿರಾಕರಿಸಿರುವುದಕ್ಕೆ ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ನಾಯಕ ಶಶಿ ತರೂರ್ (Congress leader Shashi Tharoor) ತರಾಟೆಗೆ ತೆಗೆದುಕೊಂಡಿದ್ದಾರೆ. ಇಂತಹ ಕ್ರಮಗಳು ಭಾರತದ ಪ್ರತಿಷ್ಠೆಗೆ ವಿಮರ್ಶಾತ್ಮಕ ಲೇಖನಕ್ಕಿಂತ ಹೆಚ್ಚಿನ ಹಾನಿಯನ್ನು ಉಂಟು ಮಾಡುತ್ತದೆ ಎಂದು ಎಚ್ಚರಿಸಿರುವ ಅವರು, ಭಾರತವು ದಪ್ಪ ಚರ್ಮ, ವಿಶಾಲ ಮನಸ್ಸು ಮತ್ತು ದೊಡ್ಡ ಹೃದಯವನ್ನು ಬೆಳೆಸಿಕೊಳ್ಳಬೇಕಾಗಿದೆ ಎಂದು ಸಲಹೆ ನೀಡಿದ್ದಾರೆ. ಪ್ರೊಫೆಸರ್ ಫ್ರಾನ್ಸೆಸ್ಕಾ ಓರ್ಸಿನಿ ಅವರ ಭಾರತ ಪ್ರವೇಶ ನಿರಾಕರಿಸಿದ ಕೇಂದ್ರ ಸರ್ಕಾರದ ನಡೆಯನ್ನು ಬಿಜೆಪಿ ನಾಯಕ ಮತ್ತು ಹಿರಿಯ ಪತ್ರಕರ್ತ ಸ್ವಪನ್ ದಾಸ್‌ಗುಪ್ತಾ (Swapan Dasgupta) ಟೀಕಿಸಿದ್ದು, ಇದನ್ನು ತರೂರ್ ಬೆಂಬಲಿಸಿದ್ದಾರೆ.
ಹಿರಿಯ ಪತ್ರಕರ್ತ ಸ್ವಪನ್ ದಾಸ್‌ಗುಪ್ತಾ ಇತ್ತೀಚೆಗೆ ಪತ್ರಿಕೆಯೊಂದರಲ್ಲಿ ಬರೆದಿದ್ದ ಅಂಕಣಕ್ಕೆ ಭಾನುವಾರ ಕಾಂಗ್ರೆಸ್ ನಾಯಕ ಶಶಿ ತರೂರ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಅಂಕಣದಲ್ಲಿ ಸ್ವಪನ್ ದೇಶವು ವೀಸಾ ನಿಯಮಗಳ ಪಾಲನೆಯಾಗುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಸಂದರ್ಶಕ ಪ್ರಾಧ್ಯಾಪಕರ ಶೈಕ್ಷಣಿಕ ರುಜುವಾತುಗಳು ಅಥವಾ ಪಾಂಡಿತ್ಯವನ್ನು ಪ್ರಶ್ನಿಸುವ ಹಕ್ಕು ಅದಕ್ಕೆ ಇಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಿಂತಿದ್ದ ಟ್ರಕ್‌ಗೆ ಬಸ್ ಡಿಕ್ಕಿ ಹೊಡೆದು 18 ಮಂದಿ ಸಾವು; ರಾಜಸ್ಥಾನದಲ್ಲಿ ಘೋರ ಅವಘಡ
ಶಿಕ್ಷಣ ತಜ್ಞರನ್ನು ದೂರವಿಡುವ ನಿರ್ಧಾರವನ್ನು ಟೀಕಿಸಿರುವ ತರೂರ್, ಇಂತಹ ಕ್ರಮಗಳು ಭಾರತದ ಪ್ರತಿಷ್ಠೆಗೆ ವಿದೇಶಿ ಶೈಕ್ಷಣಿಕ ನಿಯತಕಾಲಿಕೆಗಳಲ್ಲಿ ಪ್ರಕಟವಾಗುವ ವಿಮರ್ಶಾತ್ಮಕ ಲೇಖನಕ್ಕಿಂತ ಹೆಚ್ಚಿನ ಹಾನಿಯನ್ನುಂಟು ಮಾಡುತ್ತವೆ ಎಂದು ಎಚ್ಚರಿಸಿದರು.
ಕ್ಷುಲ್ಲಕ ಕಾರಣಕ್ಕಾಗಿ ವೀಸಾ ಉಲ್ಲಂಘನೆಯಾಗಿದೆ ಎಂದು ಹೇಳಿ ವಿದೇಶಿ ವಿದ್ವಾಂಸರು ಮತ್ತು ಶಿಕ್ಷಣ ತಜ್ಞರನ್ನು ಗಡೀಪಾರು ಮಾಡಲು ನಮ್ಮ ವಿಮಾನ ನಿಲ್ದಾಣದ ವಲಸೆ ಕೌಂಟರ್ ಕಾರ್ಯ ನಿರ್ವಹಿಸುವುದು ಸರಿಯಲ್ಲ. ಅಧಿಕೃತ ಭಾರತವು ದಪ್ಪ ಚರ್ಮ, ವಿಶಾಲ ಮನಸ್ಸು ಮತ್ತು ದೊಡ್ಡ ಹೃದಯವನ್ನು ಬೆಳೆಸಿಕೊಳ್ಳಬೇಕಾಗಿದೆ ಎಂದು ಅವರು ಹೇಳಿದ್ದಾರೆ.
ಸ್ವಪನ್ ದಾಸ್‌ಗುಪ್ತ ತಮ್ಮ ಲೇಖನದಲ್ಲಿ ಓರ್ಸಿನಿ ಅವರನ್ನು ಭಾರತದಿಂದ ಗಡೀಪಾರು ಮಾಡಿದ ಕ್ರಮವನ್ನು ಟೀಕಿಸಿದ್ದರು. ಕಳೆದ ತಿಂಗಳು ಹಾಂಗ್ ಕಾಂಗ್‌ನಿಂದ ಭಾರತಕ್ಕೆ ಆಗಮಿಸಿದ ಇಂಗ್ಲೆಂಡ್ ಮೂಲದ ಪ್ರೊಫೆಸರ್ ಫ್ರಾನ್ಸೆಸ್ಕಾ ಓರ್ಸಿನಿ ಅವರಿಗೆ ಭಾರತಕ್ಕೆ ಪ್ರವೇಶ ನಿರಾಕರಿಸಲಾಯಿತು.
ಲಂಡನ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಓರಿಯಂಟಲ್ ಮತ್ತು ಆಫ್ರಿಕನ್ ಸ್ಟಡೀಸ್ (SOAS) ನೊಂದಿಗೆ ಸಂಯೋಜಿತವಾಗಿರುವ ಪ್ರಾಧ್ಯಾಪಕ ಫ್ರಾನ್ಸೆಸ್ಕಾ ಓರ್ಸಿನಿ ವಿರುದ್ಧ ವೀಸಾ ಉಲ್ಲಂಘನೆ ಆರೋಪ ಕೇಳಿ ಬಂದಿದ್ದು, ಅವರನ್ನು ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಾಪಸ್ ಕಳುಹಿಸಲಾಗಿದೆ.
ಇದನ್ನು ಓರ್ಸಿನಿ ಟೀಕಿಸಿದ್ದು, ಇದಕ್ಕೆ ಪ್ರತಿಕ್ರಿಯೆಯಾಗಿ ಲೇಖನದಲ್ಲಿ ದಾಸ್‌ಗುಪ್ತಾ, ಈ ಕ್ರಮವು ಜಾಗತಿಕ ಜ್ಞಾನ ಮತ್ತು ಸಹಯೋಗಕ್ಕೆ ಬಾಗಿಲು ಮುಚ್ಚುವ ಕ್ರಮವಾಗಿದೆ. ಇದರಿಂದ ಅಪಾಯವಿದೆ ಎಂದು ಹೇಳಿದ್ದರು.
ಇದನ್ನೂ ಓದಿ: Reliance Jio: ಜಿಯೋ ಬಳಕೆದಾರರಿಗೆ 18 ತಿಂಗಳು ಉಚಿತವಾಗಿ ಸಿಗಲಿದೆ ಗೂಗಲ್ ಎಐ ಪ್ರೊ
ಯಾರು ಫ್ರಾನ್ಸೆಸ್ಕಾ ಓರ್ಸಿನಿ?
ಪ್ರಸಿದ್ಧ ಇತಿಹಾಸಕಾರ, ಹಿಂದಿ ಮತ್ತು ಉರ್ದು ಸಾಹಿತ್ಯದ ಪ್ರಮುಖ ವಿದ್ವಾಂಸರಾಗಿರುವ ಫ್ರಾನ್ಸೆಸ್ಕಾ ಓರ್ಸಿನಿ ವೆನಿಸ್‌ನಿಂದ ಕಲಾ ಪದವಿ ಮತ್ತು ಲಂಡನ್‌ನಿಂದ ಪಿಎಚ್‌ಡಿ ಪಡೆದಿದ್ದಾರೆ. ಪ್ರಸ್ತುತ ಇವರು ಭಾಷೆ, ಸಂಸ್ಕೃತಿ ಮತ್ತು ಭಾಷಾಶಾಸ್ತ್ರ ಶಾಲೆಯಲ್ಲಿ ಹಿಂದಿ ಮತ್ತು ದಕ್ಷಿಣ ಏಷ್ಯಾ ಸಾಹಿತ್ಯದ ಪ್ರೊಫೆಸರ್ ಎಮೆರಿಟಾ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಇವರು ಕೊನೆಯ ಬಾರಿಗೆ 2024ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು.